ಎತ್ತರದ ಜಿಗಿತದಲ್ಲಿ ಎರಡು ಪದಕ: ತಂಗವೇಲುಗೆ ಬೆಳ್ಳಿ-ಶರದ್‌ಕುಮಾರ್‌ಗೆ ಕಂಚು

ಟೋಕಿಯೊ: ಪ್ಯಾರಾಲಿಂಪಿಕ್ಸ್  ಕ್ರೀಡಾಕೂಟದಲ್ಲಿ ಭಾರತ ಇಂದು ಮೂರು ಪದಕಗಳನ್ನು ಗಳಿಸಿದ್ದು, ಎತ್ತರ ಜಿಗಿತದ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ  ಮತ್ತು ಶರದ್ ಕುಮಾರ್ ಕಂಚಿನ ಪದಕ ಗೆಲ್ಲುವುದರೊಂದಿಗೆ ಇದುವರೆಗೆ ಭಾರತಕ್ಕೆ ಒಟ್ಟು ಪದಕಗಳ ಸಂಖ್ಯೆ 10ಕ್ಕೆ ಏರಿಕೆ ಕಂಡಿದೆ.

ಎತ್ತರದ ಜಿಗಿತದ ಟಿ63 ಸ್ಪರ್ಧೆಯಲ್ಲಿ ಮರಿಯಪ್ಪನ್‌ ತಂಗವೇಲು ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ರಿಯೋ ಪ್ಯಾರಾಲಿಂಪಿಕ್ಸ್ ಪಂದ್ಯದಲ್ಲಿ ಅವರು ಚಿನ್ನದ ಪದಕ ಗೆದ್ದುದ್ದರು. ಈ ಬಾರಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಇದನ್ನು ಓದಿ: ಪ್ಯಾರಾಲಿಂಪಿಕ್ಸ್‌: ಜಾವಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್

ಮರಿಯಪ್ಪನ್ ಮತ್ತು ಶರದ್ ಇಬ್ಬರೂ ತಮ್ಮ ಮೊದಲ ಪ್ರಯತ್ನದಲ್ಲಿಯೇ ಕ್ರಮವಾಗಿ 1.73 ಮೀಟರ್‌ ಮತ್ತು 1.77 ಮೀಟರ್ ಯಶಸ್ವಿಯಾಗಿ ಜಿಗಿದಿದ್ದರು. ಈ ವೇಳೆ ಶರದ್ ಕುಮಾರ್ ಮುಂಚೂಣಿಯಲ್ಲಿದ್ದರು. ಆದಾಗ್ಯೂ, 1.86 ಮೀಟರ್‌ನಲ್ಲಿ ಮೂರು ಪ್ರಯತ್ನಗಳ ನಂತರವೂ ಶರದ್​ಗೆ ಯಶಸ್ವಿಯಾಗಿ ಜಿಗಿಯಲು ಸಾಧ್ಯವಾಗಲಿಲ್ಲ. ಹಾಗಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಯಾಗಬೇಕಿದ್ದ ಮರಿಯಪ್ಪನ್‌ ತಂಗವೇಲು, ಕೋವಿಡ್‌ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಉದ್ಘಾಟನಾ ಸಮಾರಂಭದಿಂದ ದೂರ ಉಳಿದಿದ್ದರು. ಸರಿಯಾದ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಿದ್ದೂ, ಎತ್ತರದ ಜಿಗಿತದಲ್ಲಿ ಮರಿಯಪ್ಪನ್‌ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಶರದ್‌ ಕುಮಾರ್‌ ನಂತರ ಅಮೆರಿಕದ ಗ್ರೇವ್ ಸ್ಯಾಮ್ ಮತ್ತು ಮರಿಯಪ್ಪನ್ ಮಾತ್ರ ಸ್ಪರ್ಧೆಯಲ್ಲಿದ್ದರು. ಇಬ್ಬರೂ 1.86 ಅಂಕದಲ್ಲಿ ಯಶಸ್ವಿ ಜಿಗಿತ ಪೂರೈಸಿದ್ದರು. ನಂತರ ನಡೆದ ಮೂರು ಪ್ರಯತ್ನಗಳಲ್ಲಿ ಮರಿಯಪ್ಪನ್ ತಂಗವೇಲು ವಿಫಲರಾದರು. ಮತ್ತೊಂದೆಡೆ, ಗ್ರೇವ್ ಎತ್ತರದ ಜಿಗಿತದೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಇದನ್ನು ಓದಿ: ಪ್ಯಾರಾಲಿಂಪಿಕ್ಸ್‌: ಶೂಟರ್‌ ಸಿಂಗ್‌ರಾಜ್‌ಗೆ ಒಲಿದ ಕಂಚಿನ ಪದಕ

ಕಳೆದ ಬಾರಿಯ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವು ಎತ್ತರ ಜಿಗಿತದಲ್ಲಿ ಎರಡು ಪದಕ ಗಳಿಸಿತ್ತು. ಆಗ ಮರಿಯಪ್ಪನ್ ತಂಗವೇಲು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಜೊತೆಗೆ ವರುಣ್ ಸಿಂಗ್ ಭಾಟಿ ಕಂಚಿನ ಪದಕ ಗೆದಿದ್ದರು. ಈ ಬಾರಿ ಮರಿಯಪ್ಪನ್ ಬೆಳ್ಳಿ ಪದಕ ಗೆದ್ದರೂ ವರುಣ್ 7ನೇ ಸ್ಥಾನ ಪಡೆದು ಪದಕ ತಪ್ಪಿಸಿಕೊಂಡರು.

ಇಂದು ಬೆಳಿಗ್ಗೆ ನಡೆದ ಸ್ಪರ್ಧೆಯಲ್ಲಿ, ಶೂಟರ್ ಸಿಂಗರಾಜ್ ಅಧಾನ ಅವರು ಕಂಚಿನ ಪದಕ ಗೆದಿದ್ದರು. ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಎರಡು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಭಾರತ 10 ಪದಕ ಗೆಲ್ಲುವುದರ ಮೂಲಕ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದ್ದು, ಮತ್ತಷ್ಟು ಪದಕ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.

Donate Janashakthi Media

Leave a Reply

Your email address will not be published. Required fields are marked *