ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ, ಹಲ್ಲೆ, ಕೊಲೆ, ಅನುಮಾನಸ್ಪದ ಸಾವುಗಳು ಹೆಚ್ಚುತ್ತಲೇ ಇವೆ. ಇಂತಹ ಪ್ರಕರಣಗಳಿಂದಾಗಿ ಯುವತಿಯರು ಭಯಭೀತಿಯಿಲ್ಲದೆ, ಸುರಕ್ಷಿತವಾಗಿ ಇರುವುದೇ ಕಷ್ಟ ಎಂಬಂತಹ ಸಂಕಷ್ಟ ಎದುರಾಗಿದೆ. ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವತಿಯಿಂದ ರಾಜ್ಯ ವಿವಿದೆಡೆ ಪ್ರತಿಭಟನೆಗಳನ್ನು ನಡೆಸಿದೆ.
ಇತ್ತೀಚಿನ ವರ್ಷಗಳಲ್ಲಿ ಸಾಮೂಹಿಕ ಅತ್ಯಾಚಾರ, ಅನುಮಾನಸ್ಪದ ಸಾವು, ಕೊಲೆ ಇತ್ಯಾದಿಗೆ ಬಲಿ ಪಶುಗಳಾಗಿದ್ದಾರೆ. ರಕ್ಷಿತಾ, ದಾನಮ್ಮ, ಕಾವ್ಯ, ಕವಿತಾ, ರೇಣುಕಾ ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಪ್ರಕರಣಗಳು ನಡೆದಿವೆ. ಇಷ್ಟಾದರೂ ಈ ಅಪರಾಧ ಪ್ರಕರಣ ಸಂಖ್ಯೆ ನಿಲ್ಲುತ್ತಿಲ್ಲ. ದಿನೇ ದಿನೇ ಹೆಚ್ಚುತ್ತಲೇ ಇದೆ. ಇವುಗಳನ್ನು ತಡೆಯುವಲ್ಲಿ ರಾಜ್ಯದ ಪೋಲಿಸ್ ಇಲಾಖೆ, ಸರ್ಕಾರ ಮತ್ತು ಸಂಬಧಿಸಿದ ಆಯೋಗಗಳು ವಿಫಲವಾಗಿವೆ ಎಂದು ಸಂಘಟನೆಯು ಆರೋಪಿಸಿದೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಜೀವಂತ ಸಾಕ್ಷಿಯಾಗಿದೆ. ಅಲ್ಲದೆ, ಮೈಸೂರಿನ ಚಾಮುಂಡಿ ಬೆಟ್ಟ ಪ್ರದೇಶವು ಪ್ರವಾಸಿ ತಾಣಗಳ ಪ್ರದೇಶವಾಗಿದ್ದು, ವಿಶ್ವಖ್ಯಾತಿ ಪಡೆದ ಅರಮನೆ ನಗರ ಹೊಂದಿದ ಹಾಗೂ ಅನೇಕ ರಮಣಿಯ ಸ್ಥಳಗಳನ್ನು ಹೊಂದಿರುವ ಪ್ರದೇಶವಾಗಿದೆ. ಹೀಗಾಗಿ ಈ ಪ್ರದೇಶಕ್ಕೆ ವಿವಿಧ ರಾಜ್ಯಗಳಿಂದ, ಜಿಲ್ಲೆಗಳಿಂದ ಪ್ರವಾಸಿಗರು ವಿದ್ಯಾರ್ಥಿಗಳು ಬರುತ್ತಿರುತ್ತಾರೆ, ಅವರೆಲ್ಲರಿಗೂ ಸುರಕ್ಷತೆಯನ್ನು ಕೊಡಬೇಕಾಗಿದ್ದು ಸರ್ಕಾರದ ಮೊದಲ ಆದ್ಯತೆ.
ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಹಾಗೂ ನಿಷ್ಪಕ್ಷಪಾತ, ಪಾರದರ್ಶಕ, ರಾಜಕೀಯ ಒತ್ತಡ ರಹಿತವಾದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಭದ್ರತೆ ಅಗತ್ಯ ನೆರವು ನೀಡಬೇಕು. ಅಲ್ಲದೆ, ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಮತ್ತು ರಾಜ್ಯದಲ್ಲಿ ಉಗ್ರಪ್ಪ ಸಮಿತಿಯು ನೀಡಿದ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೆ ಮಾಡಲು ಮುಂದಾಬೇಕೆಂದು ಎಸ್ಎಫ್ಐ, ರಾಜ್ಯ ಸಮಿತಿಯು ಪ್ರತಿಭಟನೆ ಮೂಲಕ ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದೆ.
ರಾಜ್ಯದ ಗೃಹ ಖಾತೆ ಸಚಿವರಾದ ಅರಗ ಜ್ಞಾನೇಂದ್ರ ಅವರು ಒಂದು ಉನ್ನತ ಹುದ್ದೆಯಲ್ಲಿದ್ದು ಅವರು ನೀಡಿದ ಹೇಳಿಕೆ ರಾಜ್ಯ ಸರ್ಕಾರ ತಲೆತಗ್ಗಿಸುವಂತಹ ಹೇಳಿಕೆ ಅಷ್ಟೇ ಅಲ್ಲ, ಅವರು ಬೆಳೆದು ಬಂದ ಸಂಘವು ಮಹಿಳೆಯರ ಬಗ್ಗೆ ಹೊಂದಿರುವ ನಿಲುವನ್ನು ಪ್ರತಿಪಾದಿಸುತ್ತಿದ್ದಾರೆ. ಗೃಹ ಸಚಿವರೇ ವಿದ್ಯಾರ್ಥಿನಿಯರ ಬಗ್ಗೆ, ಮಹಿಳೆಯರ ಬಗ್ಗೆ ಈ ರೀತಿಯ ನಿಲುವು ಹೊಂದಿದ್ದರೆ ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತದೆ ಎಂದು ಎಸ್ಎಫ್ಐ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ತಕ್ಷಣ ನಿಪಕ್ಷಪಾತ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಬೇಕೆಂದು ಪ್ರತಿಭಟನೆಯ ಮೂಲಕ ಒತ್ತಾಯಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ನವಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಪ್ರಮುಖರಾದ ಗ್ಯಾನೇಶ ಕಡಗದ, ಹನುಮಂತ ಮುಕ್ಕುಂಪಿ, ಬಾಳಪ್ಪ ಹುಲಿಹೈದರ,ಮಂಜುನಾಥ ಡಗ್ಗಿ,ವಿರೇಶ ಹಿರೇಮಠ, ಶಿವುಕುಮಾರ, ಸೋಮನಾಥ ಇತರರು ಭಾಗವಹಿಸಿದ್ದರು.