ಕೋಲಾರ: ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ನಿಗದಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನಾ ಕಾರ್ಯಕ್ರಮಗಳು ಸಿದ್ದಗೊಂಡಿದ್ದರೂ, ಸರಕಾರದ ಪರವಾಗಿ ಯಾರು ಭಾಗವಹಿಸಿದ್ದೆ ಇದ್ದು, ಉದ್ಘಾಟನಾ ಕಾರ್ಯವನ್ನು ಮಾಜಿ ಸ್ವೀಕರ್ ಹಾಗೂ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್.ರಮೇಶ್ ಕುಮಾರ್ ನೆರವೇರಿಸಿದರು.
ಶ್ರೀನಿವಾಸಪುರ ಕ್ಷೇತ್ರದ ಮುದುವಾಡಿ, ಲಕ್ಷ್ಮೀಸಾಗರ ಹಾಗೂ ಬೈರಗಾನಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನಾ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದ್ದವು. ಎಲ್ಲ ಸಿದ್ದತೆಗಳು ನಡೆದು ಆಹ್ವಾನ ಪತ್ರಗಳನ್ನು ಸಹ ಹಂಚಿಕೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಶಾಸಕ ರಮೇಶ್ಕುಮಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಆಡಳಿತ ವರ್ಗದವರಿಂದ ಯಾರೂ ಭಾಗವಹಿಸಿದೆ ಕಾರ್ಯಕ್ರಮ ನಡೆದಿದೆ.
ನಿಗದಿತ ಕಾರ್ಯಕ್ರಮದ ಉದ್ಘಾಟನೆ ಪ್ರತಿಷ್ಠೆಯಾಗಿ ಮಾರ್ಪಟ್ಟಿತು. ಅದರಂತೆ ಆರೋಗ್ಯ ಸಚಿವ ಉದ್ಘಾಟನೆ ಮಾಡಲು ಪಟ್ಟು ಹಿಡಿದರು ಎಂದಿದ್ದಾರೆ ಎನ್ನಲಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ನಿಗದಿಯಂತೆ ಕಾರ್ಯಕ್ರಮ ನಡೆಸಿ ಎಂದು ಸೂಚನೆ ನೀಡಿದ್ದರು. ಆದರೂ ಪಟ್ಟು ಬಿಡದ ಡಾ. ಸುಧಾಕರ್ ಒತ್ತಡದಿಂದಾಗಿ ಅಧಿಕಾರಿಗಳು ಬುಧವಾರ ರಾತ್ರಿ ಏಕಾಏಕಿಯಾಗಿ ಕಾರ್ಯಕ್ರಮವನ್ನು ಮುಂದೂಡಿದರು ಎಂಬ ಮಾಹಿತಿ ಇದೆ.
ಇದನ್ನು ಓದಿ: ವೇತನ ಕೇಳಿದ 16 ಮಂದಿ ಸಿಬ್ಬಂದಿಗಳ ವಜಾ ಮಾಡಿದ ಬಿ.ಆರ್.ಶೆಟ್ಟಿ ಆಸ್ಪತ್ರೆ
ನಿಗದಿತ ಕಾರ್ಯಕ್ರಮದಲ್ಲಿ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ ʻʻಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದ್ದು ಸಾರ್ವಜನಿಕರು ಇಂತಹ ಆರೋಗ್ಯ ಕೇಂದ್ರಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕುʼ ಎಂದು ತಿಳಿಸಿದರು.
ತಾಲ್ಲೂಕಿನ ಮುದುವಾಡಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಆರೋಗ್ಯ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಸುಸಜ್ಜಿತವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯಸೇವೆ ಒದಗಿಸಿದರೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಜನ ಆರೋಗ್ಯ ದೃಷ್ಟಿಯಿಂದ ಅಲೆದಾಡುವುದು ತಪ್ಪುತ್ತದೆ ಎಂದರು.
ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವು ಗ್ರಾಮಾಂತರ, ಪಟ್ಟಣ, ನಗರ ಪ್ರದೇಶಗಳನ್ನು ತಲ್ಲಣಗೊಳಿಸಿತ್ತು ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮುದಾಯ ಆಧಾರಿತ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೇವೆಯನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಕೊರೊನಾ ರೋಗವನ್ನು ಹೋಗಲಾಡಿಸಬೇಕು. ಜೊತೆಗೆ ಉತ್ತಮ ಆರೋಗ್ಯ ಹಾಗೂ ಸಮಾಜವನ್ನು ನಿರ್ಮಾಣ ಕಾರ್ಯದಲ್ಲಿ ನಾವು ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
ಸ್ಥಳೀಯ ಮುಖಂಡ ಮುದುವಾಡಿ ವೇಣು ಮಾತನಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುದುವಾಡಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹಾಗೂ ಸಂಸದ ಎಸ್ ಮುನಿಸ್ವಾಮಿ ಸೇರಿದಂತ ಸರಕಾರದ ಪ್ರೋಟೋ ಕಾಲ್ ನಿಯಮಗಳ ಪ್ರಕಾರ ಆಹ್ವಾನ ಪತ್ರಿಕೆಯನ್ನು ಪ್ರಕಟಸಿದ್ದರು. ಆದರೆ ಇದೇ ರಸ್ತೆಯಲ್ಲಿ ಬೇರೆ ಒಂದು ಸರಕಾರಿ ಕಾರ್ಯಕ್ರಮಕ್ಕೆ ಹೋದರು ಸಹ ಇತ್ತ ಮುಖ ಮಾಡದ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಸಂಸದರು ನಡೆ ಜಿಲ್ಲೆಯ ಅಭಿವೃದ್ಧಿಗೆ ಸರಿಯಾದ ಬೆಳವಣಿಗೆ ಅಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಅಧಿಕಾರಿ ಡಾ.ವಿ.ಮೇಘನಾ, ಗಾಯತ್ರಿ, ಸ್ಥಳೀಯ ಮುಖಂಡರಾದ ಮಂಜುನಾಥ್, ನಾರಾಯಣಸ್ವಾಮಿ, ಶ್ರೀನಿವಾಸ್, ವೆಂಕಟೇಶ್, ಮುನಿರಾಜು, ಎಂ ಎಸ್ ಶ್ರೀನಿವಾಸ್ ಮುನಿಸ್ವಾಮಿ, ಗುತ್ತಿಗೆದಾರ ಎಂ.ಎಸ್ ನವೀನ್ ಮತ್ತಿತರರು ಇದ್ದರು.
ಆಸ್ಪತ್ರೆಗಳ ಉದ್ಘಾಟನಾ ಸಮಾರಂಭ ಮುಂದೂಡದಿದ್ದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಅವರನ್ನು ಸೇವೆಯಿಂದ ಅಮಾನತು ಮಾಡುವುದಾಗಿ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ ಎಂಬ ಸುದ್ದಿಮೂಲಗಳಿಂದ ತಿಳಿದು ಬಂದಿವೆ.