ಸಾಂಗ್ಲಿ : ಖ್ಯಾತ ಸಂಶೋಧಕಿ, ಅಂಬೇಡ್ಕರ್ವಾದ ಮತ್ತು ದಲಿತ ಚಳವಳಿಯ ಲೇಖಕಿ ಡಾ.ಗೆಲ್ ಓಮ್ವೆಡ್ತ್ ಬುಧವಾರ ಕಾಸೆಗಾಂವ್ನಲ್ಲಿ ಅನಾರೋಗ್ಯದಿಂದ ನಿಧನರಾದರು. ಆವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ದೇಶದ ಅನೇಕ ಚಿಂತಕರು, ಜನಪರ ಸಂಘಟನೆಗಳು, ದಲಿತ ಸಂಘಟನೆಗಳು ಕಂಬನಿ ಮಿಡಿದಿವೆ.
ಅಮೆರಿಕದ ಮಿನ್ನೇಸೋಟ ರಾಜ್ಯದ ಮಿನ್ನಿಯಾಪೋಲಿಸ್ ನಲ್ಲಿ ಜನಿಸಿದ ಡಾ. ಓಮ್ವೆಡ್ ತನ್ನ ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದರು ಮತ್ತು ದಲಿತರು, ಬಡವರು ಮತ್ತು ದೀನರು, ರೈತರು, ಮಹಿಳೆಯರು ಸೇರಿದಂತೆ ವಿವಿಧ ಸಾಮಾಜಿಕ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು.
ಒಮ್ವೆಡ್-ಪಟಂಕರ್ ದಂಪತಿಗಳು 1980 ರ ದಶಕದ ಆರಂಭದಲ್ಲಿ ಶ್ರಮಿಕ್ ಮುಕ್ತಿ ದಳವನ್ನು ಸ್ಥಾಪಿಸಿದರು, ಅವರು 1983 ರ ಸುಮಾರಿಗೆ ಭಾರತೀಯ ಪ್ರಜೆಯಾದರು. ಅವರು ವಿವಿಧ ಸಾಮಾಜಿಕ ವಿಷಯಗಳ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ, ಆಕ್ಸ್ಫ್ಯಾಮ್ ನೋವಿಬ್ ಮತ್ತು ಇತರ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದರು. ಡಾ.ಓಂವೆಡ್ತ್ ಅವರ ಅಂತಿಮ ಸಂಸ್ಕಾರವನ್ನು ಗುರುವಾರ ಬೆಳಿಗ್ಗೆ ಸಾಂಗ್ಲಿಯ ಕ್ರಾಂತಿವೀರ್ ಬಾಪೂಜಿ ಪತಂಕರ್ ಸಂಸ್ಥೆ ಕ್ಯಾಂಪಸ್ನಲ್ಲಿ ನೆರವೇರಿಸಲಾಗುತ್ತದೆ ಎಂದು ಅವರ ಸಹಾಯಕ ತಿಳಿಸಿದ್ದಾರೆ.
ಇದನ್ನೂ ಓದಿ : ದಲಿತ ಕುಟುಂಬವನ್ನು ಕಂಬಕ್ಕೆ ಕಟ್ಟಿ ಹಾಕಿ, ಕ್ರೂರವಾಗಿ ಥಳಿಸಿದ ಗ್ರಾಮಸ್ಥರು
ಗೆಲ್ ಒಮ್ವೆಡ್ತ್ ನಿಧನಕ್ಕೆ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ. “ಗಣ್ಯ ಕ್ರಿಯಾಶೀಲ ವಿದ್ವಾಂಸರು, ಎಂದೂ ರಾಜಿಗಿಳಿಯದ ಬದ್ಧತೆಯಿದ್ದವರು. ಅವರು ನಮ್ಮ ಸಾಮಾಜಿಕ ಪರಿಸ್ಥಿತಿಗಳನ್ನು ಅರಿತುಕೊಳ್ಳುವಲ್ಲಿ ಆಳವಾದ ಹೊಳಹುಗಳನ್ನು ಒದಗಿಸಿದ್ದರು ಎಂದು ಯೆಚೂರಿ ಟ್ವಿಟ್ ಮಾಡಿದ್ದಾರೆ.
Deepest condolences.
Gail Omvedt was a distinguished scholar activist with an uncompromising commitment.
She provided deep insights in understanding our social conditions.https://t.co/j59YxGDJl7— Sitaram Yechury (@SitaramYechury) August 25, 2021
ಓಂವೆಡ್ತ್ ನಿಧನಕ್ಕೆ ಕಂಬನಿ ಮಿಡಿದರುವ ಚಿಂತಕ ಡಾ. ವಡ್ಡಗೆರೆ ನಾಗರಾಜಯ್ಯರವರು ಫೆಸ್ಬುಕ್ ನಲ್ಲಿ ಅವರ ಬಗ್ಗೆ ಈ ಕೆಳಗಿನಂತೆ ಬರೆದು ಕೊಂಡಿದ್ದಾರೆ. “ ನಮ್ಮ ಕಾಲದ ಶ್ರೇಷ್ಠ ಸಮಾಜಶಾಸ್ತ್ರಜ್ಞೆ, ಸ್ತ್ರೀವಾದಿ ಚಿಂತಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ, ಜಾತಿ ವಿನಾಶ ಚಳವಳಿಯ ಬಹು ಮುಖ್ಯ ಧ್ವನಿ, ಬಹುಜನ ಚಳವಳಿಯ ಮೇರು ಚಿಂತಕರಲ್ಲಿ ಒಬ್ಬರಾಗಿದ್ದ ಗೇಲ್ ಓಂವೆಡ್ತ್ ನಿಧನರಾಗಿದ್ದಾರೆ.
ಅಮೆರಿಕಾದಲ್ಲಿ ಜನಿಸಿದ ಗೇಲ್ ತಮ್ಮ ಪಿಎಚ್ಡಿ ಅಧ್ಯಯನಕ್ಕೆಂದು ಭಾರತಕ್ಕೆ ಬಂದವರು. ‘ಅಂಬೇಡ್ಕರ್ ಚಿಂತನೆ ಮತ್ತು ಹೋರಾಟ’ದ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದು ಭಾರತದಲ್ಲಿಯೇ ನೆಲೆಸಿ ತಮ್ಮ ಇಡೀ ಬದುಕನ್ನು ದಮನಿತ ಸಮುದಾಯಗಳ ಅಧ್ಯಯನಕ್ಕೆ ತೆತ್ತುಕೊಂಡವರು. ತಮ್ಮ ಪ್ರಖರ ಬೌದ್ಧಿಕತೆಯ ಮೂಲಕ ಅಂಬೇಡ್ಕರ್ ಚಿಂತನೆ ಮತ್ತು ದಲಿತ ಅಧ್ಯಯನವನ್ನು ವಿಶ್ವಮಟ್ಟಕ್ಕೆ ಬೆಳೆಸಿದ ಈ ಮೇರು ಚಿಂತಕಿಯಾಗಿದ್ದಾರೆ.
“ಗೇಲ್ ಓಂವೆಡ್ತ್ ಅವರು ಬುದ್ಧಪೂರ್ವ ಯುಗದಲ್ಲಿ ಜೀವಿಸಿದ್ದು ಬೌದ್ಧಧಮ್ಮವನ್ನು ಮೊದಲಿಗೆ ಪ್ರತಿಪಾದಿಸುವ ಮೂಲಕ ಆದಿಬುದ್ಧ ಎನ್ನಿಸಿದ ಕಸ್ಸಪ ಮಾತಂಗನನ್ನು ಕುರಿತು, The Dalit ಎಂಬ ಇಂಗ್ಲಿಷ್ ಮ್ಯಾಗಜೀನ್ ನಲ್ಲಿ ಪ್ರಕಟಿಸಿದ್ದ Reclaiming Matanga ಎಂಬ ಸಂಶೋಧನಾ ಲೇಖನವನ್ನು ನಾನು ಕನ್ನಡಕ್ಕೆ ಅನುವಾದಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ನಾನು ರೂಪಿಸಿದ “ಕರ್ನಾಟಕದ ಆದಿಜಾಂಬವ ಮಾತಂಗ ಪರಂಪರೆ” ಎಂಬ ನನ್ನ ಪಿಎಚ್.ಡಿ ಮಹಾಪ್ರಬಂಧದಲ್ಲಿಯೂ ಓಂವೆಡ್ತ್ ಅವರ ಚಿಂತನೆಗಳನ್ನು ದಾಖಲಿಸಿರುತ್ತೇನೆ ಎಂದು ಡಾ. ವಡ್ಡಗೆರೆ ನಾಗರಾಜಯ್ಯ ಅಂತಿಮ ನಮನಗಳನ್ನು ಸಲ್ಲಿಸಿದ್ದಾರೆ.