ಗದಗ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಜನಾಶೀರ್ವಾದ ಕಾರ್ಯಕ್ರಮದ ಅಂಗವಾಗಿ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಸೇವೆಯಲ್ಲಿರುವ ಸೈನಿಕನ ಮನೆಗೆ ತೆರಳಿ ಕುಟುಂಬದವರಿಗೆ ‘ಸಾಂತ್ವನ’ ಹೇಳಿರುವ ಘಟನೆ ಗದಗ ತಾಲ್ಲೂಕಿನಲ್ಲಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಇತ್ತೀಚಿಗೆ ಹಲವು ಮಂದಿ ಸಚಿವರಾಗಿ ನೇಮಕಗೊಂಡಿದ್ದರು. ಅದರಲ್ಲಿ ಕರ್ನಾಟಕದಿಂದಲೂ ನಾಲ್ವರು ಸಚಿವರಾಗಿದ್ದಾರೆ. ಅವರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ.ನಾರಾಯಣಸ್ವಾಮಿ ಸಹ ಒಬ್ಬರು. ನೂತನ ಸಚಿವರು ಪಾರ್ಲಿಮೆಂಟಿನ ಮುಂಗಾರು ಅಧಿವೇಶನ ನಂತರ ರಾಜ್ಯಕ್ಕೆ ಆಗಮಿಸಿದ ನಾಲ್ಕು ಮಂದಿ ಸಚಿವರು ರಾಜ್ಯದಲ್ಲಿ ಹಲವು ಭಾಗಗಳಲ್ಲಿ ಜನಾಶೀರ್ವಾದ ಸಭೆಗಳನ್ನು ನಡೆಸುತ್ತಿದ್ದಾರೆ.
ಗದಗ ತಾಲೂಕಿನ ಮುಳಗುಂದ ಪಟ್ಟಣದ ಮೃತ ಯೋಧನ ಕುಟುಂಬಕ್ಕೆ ಭೇಟಿ ನೀಡಿದ ಸಚಿವ ಎ.ನಾರಾಯಣಸ್ವಾಮಿ, ಕರ್ತವ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರೊಬ್ಬರ ಕುಟುಂಬದವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಯೋಧ ಹುತಾತ್ಮವನೆಂದು ತಿಳಿದು ಸಾಂತ್ವನ ಹೇಳಿದ್ದಾರೆ.
ಇದನ್ನು ಓದಿ: ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವರಿಗೆ ಗುಂಡಿನ ಸ್ವಾಗತ: ಪೊಲೀಸ್ ಸಿಬ್ಬಂದಿ ಅಮಾನತು
ಕಳೆದ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದ ಯೋಧ ಬಸವರಾಜ ಕುಟುಂಬಕ್ಕೆ ತೆರಳಿ ಸಾಂತ್ವಾನ ಹೇಳಬೇಕಿದ್ದ ಸಚಿವರು ಪ್ರಸ್ತುತ ಜಮ್ಮುಕಾಶ್ಮೀರದಲ್ಲಿ ಕರ್ತವ್ಯದಲ್ಲಿರೋ ಯೋಧ ರವಿಕುಮಾರ ಕಟ್ಟಿಮನಿ ಮನೆಗೆ ಭೇಟಿ ನೀಡಿಬಂದಿದ್ದಾರೆ. ಯೋಧ ಬಸವರಾಜ ಹಿರೇಮಠ ಅವರು ಒಂದೂವರೆ ವರ್ಷದ ಹಿಂದೆ ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯನಿರತನಾಗಿದ್ದ ವೇಳೆ ಮೃತಪಟ್ಟಿದ್ದರು. ಯೋಧ ಬಸವರಾಜ ಮೂಲತಃ ಗದಗ ತಾಲೂಕಿನ ಮುಳಗುಂದ ಪಟ್ಟಣದವರು.
ರವಿಕುಮಾರ ಕಟ್ಟಿಮನಿ ಅವರ ಮನೆಗೆ ತೆರಳಿ ಸೈನಿಕ ರವಿಕುಮಾರ ಪತ್ನಿ ಅವರೊಂದಿಗೆ ಮಾತನಾಡುತ್ತಾ, ಯೋಗಕ್ಷೇಮ ವಿಚಾರಿಸಿದ್ದಾರೆ. ಆ ವೇಳೆ, ಸರ್ಕಾರಿ ನೌಕರಿ ಹಾಗೂ ಜಮೀನು ಕೊಡುವ ಭರವಸೆ ನೀಡಿದ್ದಾರೆ. ಸಚಿವರ ತರಾತುರಿ ಹೇಳಿಕೆಯಿಂದ ಹಾಲಿ ಯೋಧನ ಕುಟುಂಬಸ್ಥರು ತಬ್ಬಿಬ್ಬು ಆಗಿದ್ದಾರೆ.
ಸ್ಥಳೀಯ ಬಿಜೆಪಿ ಪಕ್ಷದ ಮುಖಂಡರ ಮಾಹಿತಿ ಕೊರತೆಯಿಂದ ಕೇಂದ್ರ ಸಚಿವರಿಂದ ಎಡವಟ್ಟು ಮಾಡಿಕೊಂಡಿರುವ ವಿಲಕ್ಷಣ ಘಟನೆ ನಡೆದಿದೆ.
ಬಿಜೆಪಿ ಪಕ್ಷದ ಜನಾಶೀರ್ವಾದ ಕಾರ್ಯಕ್ರಮಗಳು ಸಾಕಷ್ಟು ಗೊಂದಲಗಳು ಮತ್ತು ಎಡವಟ್ಟುಗಳನ್ನು ಸೃಷ್ಠಿಸುತ್ತಿದೆ. ಇತ್ತೀಚಿಗೆ ಕೋವಿಡ್ ನಿಯಮಗಳನ್ನು ಮೀರಿ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಅಲ್ಲದೆ, ಕೆಲ ದಿನಗಳ ಹಿಂದೆ ಯಾದಗಿರಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಭೇಟಿ ನೀಡಿದ ಸಂದರ್ಭದಲ್ಲಿಯೂ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಕೋರಿರುವ ಘಟನೆಯೂ ನಡೆದಿತ್ತು.