ನವದೆಹಲಿ: ಪೆಗಾಸಸ್ ಬೇಹುಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರಕಾರ ಸಮಿತಿ ರಚಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮತ್ತು ಪಶ್ಚಿಮ ಬಂಗಾಳ ಸರಕಾರಗಳಿಗೆ ನ್ಯಾಯಪೀಠ ನೋಟಿಸ್ ನೀಡಿದೆ.
ಪಶ್ಚಿಮ ಬಂಗಾಳ ಸರ್ಕಾರವು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮದನ್ ಲೋಕೂರ್ ಹಾಗೂ ಕೊಲ್ಕತ್ತಾ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಜ್ಯೋತಿರ್ಮಯ್ ಭಟ್ಟಾಚಾರ್ಯ ಅವರನ್ನೊಳಗೊಂಡ ಸಮಿತಿಯೊಂದನ್ನು ಜುಲೈ 26ರಂದು ರಚಿಸಿತು. ಆ ಸಮಿತಿಯು ಆಗಸ್ಟ್ 5ರಂದು ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟಿಸಿ ಪೆಗಾಸಸ್ ಆರೋಪಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕೋರಿತ್ತು.
ಇದನ್ನು ಓದಿ: ಪೆಗಾಸಸ್ ಬಗೆಗಿನ ಆರೋಪ ಆಧಾರರಹಿತ-ತನಿಖೆಗೆ ತಜ್ಞರ ಸಮಿತಿ ರಚನೆ: ಸುಪ್ರೀಂಗೆ ಕೇಂದ್ರದ ಮಾಹಿತಿ
ಸಮಿತಿ ರಚಿಸಿ ಹೊರಡಿಸಲಾದ ಅಧಿಸೂಚನೆಗೆ ತಡೆ ಹೇರಲು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ನಿರಾಕರಿಸಿದೆ. ಇದೇ ಸಂದರ್ಭದಲ್ಲಿ ನ್ಯಾಯಾಲಯವು, ಕೇಂದ್ರ ಸರಕಾರ, ಮಾಹಿತಿ ಮತ್ತು ಪ್ರಸಾರ, ಐಟಿ ಸಚಿವಾಲಯ ಹಾಗೂ ಪಶ್ಚಿಮ ಬಂಗಾಳ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.
ರಾಜ್ಯ ಸರಕಾರವೊಂದು ಇಂತಹ ಒಂದು ಸಮಿತಿ ರಚನೆ ಮಾಡಲು ಯಾವುದೇ ಅಧಿಕಾರವಿಲ್ಲವೆಂದು ಅರ್ಜಿದಾರ ಸಂಸ್ಥೆ ಗ್ಲೋಬಲ್ ವಿಲೇಜ್ ಫೌಂಡೇಶನ್ ಪಬ್ಲಿಕ್ ಟ್ರಸ್ಟ್ ನ್ಯಾಯಾಲಯದಲ್ಲಿ ವಾದ ಮಂಡಿಸಿದೆ.
ಇದೇ ಸಂದರ್ಭದಲ್ಲಿ ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಹ ಇಂತಹ ಸಮಿತಿ ರಚನೆ ಅಸಂವಿಧಾನಿಕ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.
ಪೆಗಾಸಸ್‍ಗೆ ಸಂಬಂಧಿಸಿದ ಇತರ ಅರ್ಜಿಗಳೊಂದಿಗೆ ಈ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.