ಕಲ್ಲುಗಣಿಗಾರಿಕೆ ರದ್ದತಿ ಬಗ್ಗೆ ಸರ್ಕಾರದೊಂದಿಗೆ ಚರ್ಚೆ: ಇಂಚರ ಗೋವಿಂದರಾಜು

ಕೋಲಾರ: ತಾಲೂಕಿನ ದೊಡ್ಡ ಅಯ್ಯೂರು ಗ್ರಾಮದ ಸರ್ವೇ ನಂ.76ರಲ್ಲಿ 11 ಎಕರೆ 20 ಕುಂಟೆ ಜಾಗವನ್ನು ಕಲ್ಲುಗಣಿಗಾರಿಕೆಗೆ 20 ವರ್ಷಗಳ ಕಾಲ ಕೊಟ್ಟಿರುವ ಅನುಮತಿಯನ್ನು ರದ್ದುಪಡಿಸಲು ಸರಕಾರದ ಮಟ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು.

ಗಣಿಗಾರಿಕೆಗೆ ಅನುಮೋದನೆ ನೀಡಿರುವ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು ʻಈ ಪ್ರದೇಶವು ಧಾರ್ಮಿಕ ಕ್ಷೇತ್ರದಿಂದ ಕೂಡಿದ್ದು ಪ್ರತಿ ವರ್ಷ ಜಾತ್ರೆ ನಡೆಯುವ ಪ್ರದೇಶವಾಗಿದೆ. ಈ ಜಾಗವು ಗಣಿಗಾರಿಕೆಗೆ ಸೂಕ್ತವಲ್ಲ, ಇದರಿಂದ ವಾಯುಮಾಲಿನ್ಯ ಉಂಟಾಗಿ ಅಪಾಯಕಾರಿ ಸಮಸ್ಯೆಗಳು ಪ್ರಕೃತಿಯ ಮೇಲೆ ಬೀರುತ್ತದೆ. ಇಂತಹ ಜಾಗವನ್ನು ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮುಖ್ಯಮಂತ್ರಿಗೆ ಹಾಗೂ ಗಣಿ ಸಚಿವರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲಾಗುತ್ತದೆʼ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಇದನ್ನು ಓದಿ: ʻಸುಮಲತಾ – ಕುಮಾರಸ್ವಾಮಿʻ ರಾಜಕೀಯ ಕೆಸರೆರಚಾಟದಲ್ಲಿ ಸ್ಪೋಟಗೊಂಡಿದ್ದು “ಅಕ್ರಮ ಗಣಿಗಾರಿಕೆ”

ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಚರ್ಚಿಸುವ ಮೊದಲು ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ಗಣಿಗಾರಿಕೆ ಅನುಮೋದನೆ ನೀಡಿರುವುದನ್ನು ರದ್ದುಪಡಿಸಬೇಕು ಎಂದು ಕೋರ್ಟಿನಲ್ಲಿ ತಡೆಯಾಜ್ಞೆ ಸಲ್ಲಿಸಬೇಕು. ಈ ಬೆಟ್ಟದಲ್ಲಿ ಪ್ರಾಣಿಗಳು ಹೆಚ್ಚಾಗಿದ್ದು ಅವುಗಳಿಗೆ ತೊಂದರೆಯಾಗುತ್ತದೆ ಸುತ್ತಲಿನ ಹಳ್ಳಿಗಳಿಗೆ ತೊಂದರೆಯ ವಾಸ್ತವಾಂಶವನ್ನು ತಂದಾಗ ಮಾತ್ರ ರದ್ದು ಮಾಡಲು ಸಾಧ್ಯವಾಗುತ್ತದೆ. ಈ ಕೂಡಲೇ ಗ್ರಾಮಸ್ಥರು ಹಾಗೂ ಸಂಘಸಂಸ್ಥೆಗಳ ಹೆಸರಿನಲ್ಲಿ ತಡೆಯಾಜ್ಞೆ ತರಬೇಕು ಎಂದು ತಿಳಿಸಿದರು.

ಈ ಬೆಟ್ಟದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ಪದ್ದತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ  ಈ ಜಾಗವನ್ನು ಗಣಿಗಾರಿಕೆಗೆ ಅವಕಾಶ ನೀಡದೇ ಇರುವ ಜಾಗವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಮಾಡುವ  ಜೊತೆಗೆ ಮಳೆಗಾಲದಲ್ಲಿ ನೀರನ್ನು ಶೇಖರಣೆ ಮಾಡುವ ಮೂಲಕ ಕುಡಿಯುವ ನೀರಿನ ಸಮಸ್ಯೆಗಳನ್ನು ನೀಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ತಿಳಿಸಿದರು.

ಇದನ್ನು ಓದಿ: ಅಕ್ರಮ ಗಣಿಗಾರಿಕೆ : ವಿಧಿಸಿದ ದಂಡ 320 ಕೋಟಿ ರೂ, ವಸೂಲಾದದ್ದು ಕೇವಲ 1.60 ಕೋಟಿ ರೂ

ಅರಾಭಿಕೊತ್ತನೂರು ಗ್ರಾಮ ಪಂಚಾಯತಿ ಸದಸ್ಯ ನಂಜುಂಡಗೌಡ ಮಾತನಾಡಿ ʻಈ ಜಾಗದಲ್ಲಿ ಗಣಿಗಾರಿಕೆ ನಡೆಸಿದರೆ ಗಾಳಿಯಲ್ಲಿ ಬರುವ ಕಲ್ಲಿನ ಪುಡಿ ರೈತರು ಬೆಳೆದ ಬೆಳೆಗಳು ಮತ್ತು ಜಾನುವಾರುಗಳು ತಿನ್ನುವ ಹುಲ್ಲಿನ ಮೇಲೆ ಪರಿಣಾಮ ಬಿದ್ದು  ಜಾನುವಾರುಗಳು ಸಾವನ್ನಪ್ಪುತ್ತವೆ ರೈತರು ಬೆಳೆದ ಬೆಳೆಗಳು ಕೈಗೆ ಸಿಗದೆ ಬೀದಿಪಾಲಾಗುವ ಸಂದರ್ಭ ಒದಗುತ್ತದೆ ಇನ್ನು ಪಕ್ಕದಲ್ಲಿರುವ ಅರಣ್ಯ ಭೂಮಿ ಮತ್ತು ಬೆಟ್ಟದಲ್ಲಿ ವಾಸಿಸುವ ಕಾಡುಪ್ರಾಣಿಗಳು ಸಾಯುತ್ತವೆ ಕ್ರಷರ್ ಸ್ಥಾಪನೆಗೆ ಅನುಮೋದನೆ ನೀಡಿರುವ ಜಾಗದಿಂದ ಎಂಟು ಕೆರೆಗಳಿಗೆ ನೀರು ಬರುತ್ತವೆ ಅಂತಹ ಜಾಗವನ್ನು ನಾಶ ಮಾಡಲು ಹೊರಟಿದ್ದಾರೆ ಸಾರ್ವಜನಿಕರ ಹಿತದೃಷ್ಟಿಯಿಂದ ಕಲ್ಲುಗಣಿಕಾರಿಕೆಗೆ ಕೊಟ್ಟಿರುವ ಅನುಮೋದನೆಯನ್ನು ರದ್ದುಪಡಿಸಬೇಕುʼ ಎಂದು ಗ್ರಾಮಸ್ಥರ ಪರವಾಗಿ ಇಂಚರ ಗೋವಿಂದರಾಜು ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ವಕ್ಕಲೇರಿ ರಾಮು, ಬಣಕನಹಳ್ಳಿ ನಟರಾಜ್ ಎಪಿಎಂಸಿ ಮಾಜಿ ಸದಸ್ಯ ಈರಣ್ಣ, ಖಾಜಿಕಲ್ಲಹಳ್ಳಿ ಹರೀಷ್ ಗೌಡ, ರಾಮಸಂದ್ರ ತಿರುಮಲೇಶ್, ದೊಡ್ಡ ಅಯ್ಯೂರು ಗ್ರಾಮ ಪಂಚಾಯತಿ ಸದಸ್ಯ ಎಸ್. ಗೋಪಾಲಕೃಷ್ಣ ಸೇರಿದಂತೆ ದೊಡ್ಡ ಅಯ್ಯೂರು, ವೆಂಕಟಾಪುರ, ಚಿಕ್ಕಾಯ್ಯೂರು, ಅರಭಿಕೊತ್ತನೂರು, ಗುಡ್ನಾಪುರ, ಖಾಜಿಕಲ್ಲಳ್ಳಿ, ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

Donate Janashakthi Media

Leave a Reply

Your email address will not be published. Required fields are marked *