ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಡಿಎಂಕೆ ಪಕ್ಷದ ನೇತೃತ್ವದ ಸರಕಾರವು ಇದೇ ಮೊದಲ ಸಲ ಕೃಷಿ ಬಜೆಟ್ ಮಂಡನೆ ಮಾಡಿದೆ. ಇದರೊಂದಿಗೆ ಈ ಬಜೆಟ್ ಅನ್ನು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಮೂರು ಹೊಸ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅರ್ಪಿಸಿದೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂಪುಟದ ಕೃಷಿ ಸಚಿವ ಎಂಆರ್ಕೆ ಪನ್ನಿರಸೇಲ್ವಂ ಬಜೆಟ್ ಮಂಡನೆ ಮಾಡಿದರು. ಈ ಸಂದರ್ಭದಲ್ಲಿ ಅನ್ನದಾತರ ಹಿತರಕ್ಷಣೆ ಹಾಗೂ ಕೃಷಿ ವಲಯದಲ್ಲಿ ಮತ್ತಷ್ಟು ಅಭಿವೃದ್ಧಿ ತರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ.
ತಮಿಳುನಾಡು 2021-22ನೇ ಸಾಲಿನ ಬಜೆಟ್ನಲ್ಲಿ ಕೃಷಿಗಾಗಿ ರೂ.34,220.65 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದೆ. ಈ ಬಾರಿ ಪ್ರಮುಖವಾಗಿ ಪಶುಸಂಗೋಪನೆ, ಮೀನುಗಾರಿಕೆ, ಹೈನುಗಾರಿಕೆ ಅಭಿವೃದ್ಧಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ರೇಷ್ಮೆ ಕೃಷಿ ಮತ್ತು ಅರಣ್ಯ ವಲಯಗಳಿಗೆ ಹೆಚ್ಚಿನ ಆದ್ಯತೆಗೆ ಅವಕಾಶ ಕಲ್ಪಿಸಲಾಗಿದೆ.
4,508.23 ಕೋಟಿ ರೂ. ರೈತರ ವಿದ್ಯುತ್ ಗಾಗಿ ಮೀಸಲಿರಿಸಲಾಗಿದೆ ಎಂದು ತಿಳಿಸಿರುವ ಸಚಿವರು, ರೈತರು ಬಳಕೆ ಮಾಡುವ ಪಂಪ್ಸೆಟ್ಗಳಿಗೆ ಉಚಿತವಾಗಿ ವಿದ್ಯುತ್ ನೀಡಲು ನಿರ್ಧರಿಸಿದ್ದು, 1,245.45 ಕೋಟಿ ರೂಪಾಯಿ ಕೃಷಿ ಇಲಾಖೆ ಅಭಿವೃದ್ಧಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸರಕಾರವು ಕೇಂದ್ರ ಸರ್ಕಾರದ ಮೂರು ಕೃಷಿ ಯೋಜನೆಗಳಿಗೆ ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು, ಇಂದಿನ ಬಜೆಟ್ ಕೂಡ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರಿಗೆ ಅರ್ಪಿಸಲಾಗಿದೆ.
ಕೃಷಿ ಬಜೆಟ್ನಲ್ಲಿ ಪ್ರಮುಖವಾಗಿ 16 ಅಂಶಗಳನ್ನು ಒಳಗೊಂಡ ಯೋಜನೆಗಳನ್ನು ರೂಪಿಸಲಾಗಿದ್ದು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾಗಿರುವುದಾಗಿ ತಿಳಿಸಿದರು. ಯುವಕರನ್ನು ಕೃಷಿ ಉದ್ಯಮಿಗಳಾಗಿ ಪ್ರೋತ್ಸಾಹಿಸುವುದು. ಸಾವಯವ ಕೃಷಿಗಾಗಿ ಹೊಸ ಯೋಜನೆ ಹಾಗೂ ಸಾವಯವ ಕೃಷಿಗಾಗಿ ಪ್ರತ್ಯೇಕ ಇಲಾಖೆಯನ್ನು ರಚಿಸಲಾಗುವುದು. ತಮಿಳುನಾಡಿನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ರೈತರಿಗೆ ನೀಡಲು ಸಬ್ಸಿಡಿಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವರು ಘೋಷಿಸಿದ್ದಾರೆ.
ನಿನ್ನೆ ಬಜೆಟ್ ಮಂಡನೆ ಮಾಡಿದ್ದ ಸ್ಟಾಲಿನ್ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 3 ರೂಪಾಯಿ ಕಡಿತಗೊಳಿಸಿದೆ.