ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಸರಕು ಸಾಗಣೆ ಘಟಕ ಸ್ಥಾಪನೆ

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸರಕುಗಳ ಸಾಗಣೆಕೆಗಾಗಿಯೇ ಪ್ರತ್ಯೇಕ ಘಟಕ ಸ್ಥಾಪನೆಯ ಯೋಜನೆಯೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂಬ ಪ್ರಮುಖ ಸುದ್ದಿ ಹೊರಬಿದ್ದಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ನೀಡಿರುವ ಮಾಹಿತಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮರು ಟ್ವೀಟ್ ಸಹ ಮಾಡಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸರಕು ಸಾಗಣೆಗಾಗಿ ಈಗಿರುವ ಪ್ರಯಾಣಿಕರ ವಿಭಾಗದ ವ್ಯವಸ್ಥೆಗಳನ್ನೇ ಬಳಸಿಕೊಳ್ಳಲಾಗುತ್ತಿತ್ತು. ಆದರೇ, ಈಗ ವಿಮಾನ ನಿಲ್ದಾಣದ ಆವರಣದಲ್ಲೇ ಸರಕು ಸಾಗಣೆ ವಿಮಾನಗಳ ನಿರ್ವಹಣೆಗೆ ಪ್ರತ್ಯೇಕ ಟರ್ಮಿನಲ್ ರೂಪುಗೊಂಡಿದ್ದು, ಕೊನೆ ಹಂತದ ಪರಿಶೀಲನೆಯ ಕಾರ್ಯದಲ್ಲಿದ್ದೂ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ.

ಪ್ರತ್ಯೇಕ ಸರಕು ಸಾಗಣೆ ಘಟಕ ಉತ್ತರ ಕರ್ನಾಟಕದ ಏರ್ ಕಾರ್ಗೊ ಕೇಂದ್ರವಾಗಲಿದೆ. ಹುಬ್ಬಳ್ಳಿಯ ಸುತ್ತಮುತ್ತ ಅನೇಕ ಉದ್ದಿಮೆಗಳು ಆರಂಭವಾಗುತ್ತಿದ್ದು, ಈ ಮೊದಲು ಗೋವಾ ವಿಮಾನ ನಿಲ್ದಾಣದಲ್ಲಿ ಸರಕುಗಳನ್ನು ತರಿಸಿಕೊಂಡು ಅಲ್ಲಿಂದ ತಮ್ಮ ಸ್ಥಾನ ತಲುಪಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.

ಆದರೆ ಈಗ ಹುಬ್ಬಳ್ಳಿಯಲ್ಲೇ ಸರಕು ಸಾಗಣೆಯ ವಿಮಾನ ವ್ಯವಸ್ಥೆ ರೂಪುಗೊಳ್ಳುತ್ತಿರುವುದು ಉತ್ತರ ಕರ್ನಾಟಕ ಭಾಗದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಭಾರಿ ಅನುಕೂಲವಾಗಲಿದೆ.

ಸುರಕ್ಷಿತ ಲ್ಯಾಂಡಿಂಗ್‌ಗಾಗಿ ಐಎಲ್‌ಎಸ್‌ ಸ್ಥಾಪನೆ

ಹವಾಮಾನ ವೈಪರಿತ್ಯದ ಸಂದರ್ಭದಲ್ಲೂ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್‌ಗೆ ಅನುಕೂಲವಾಗುವ ಐಎಲ್‍ಎಸ್ (ಇನ್‍ಸ್ಟ್ರೂಮೆಂಟಲ್ ಲ್ಯಾಂಡಿಂಗ್ ಸಿಸ್ಟಂ) ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಯ ಆರಂಭಿಸಿದೆ. ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾ (ಎಎಐ) ಒಂದನೇ ಕೆಟಗರಿಯ ಐಎಲ್‍ಎಸ್‌ನ್ನು ಅಳವಡಿಸಿದೆ. ವಿಶ್ವದರ್ಜೆಯ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ರೂಪಸಿದ ಐಎಲ್‍ಎಸ್ ಇದಾಗಿದ್ದು, ಏರ್ ನ್ಯಾವಿಗೇಶನ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಒಟ್ಟಾರೆ 6.50 ಕೋಟಿ ರೂ. ವೆಚ್ಚದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲೇ ಐಎಲ್‍ಎಸ್ ಸಂಪೂರ್ಣವಾಗಿ ಅಳವಡಿಕೆಯಾಗಿತ್ತು.

ಈವರೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಡಿವಿಒಆರ್ ವ್ಯವಸ್ಥೆ ಬಳಸಿ ವಿಮಾನ ಲ್ಯಾಂಡಿಂಗ್ ಮಾಡಲಾಗುತ್ತಿತ್ತು. ಇದೀಗ ಖಚಿತವಾಗಿ ಎಟಿಸಿ ಮೂಲಕ ಐಎಲ್ಎಸ್ ರೇಡಿಯೋ ಸಿಗ್ನಲ್‌ಗಳನ್ನು ಪೈಲಟ್‌ಗಳಿಗೆ ರವಾನಿಸುತ್ತದೆ. ಹವಾಮಾನ ವೈಪರಿತ್ಯದ ನಡುವೆ ಐಎಲ್ಎಸ್ ಸಿಗ್ನಲ್ ಟವರ್ ರನ್‌ವೇ ಸನಿಹದ ಆ್ಯಂಟೆನ್ನಾಗಳಿಗೆ ರವಾನಿಸುವ ಸಂದೇಶದಿಂದ ರನ್‌ವೇ ಉದ್ದಕ್ಕೂ ಇರುವ ಲೈಟ್‍ಗಳು ಬೆಳಗುತ್ತವೆ. ಇದು ವಿಮಾನ ಲ್ಯಾಂಡಿಂಗ್‌ಗೆ ಅನುಕೂಲವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *