ಎಸ್‌ಬಿಐ ಬಜಾಲ್‌ ಶಾಖೆಯಲ್ಲಿ ಕರ್ತವ್ಯಲೋಪ: ಮೇಲಾಧಿಕಾರಿಗಳಿಗೆ ಡಿವೈಎಫ್‌ಐ ದೂರು

ಮಂಗಳೂರು: ನಗರ ಹೊರವಲಯ ಬಜಾಲ್ ಪ್ರದೇಶದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಶಾಖೆಯು ತಮ್ಮ ಗ್ರಾಹಕರಿಗೆ ಅಗತ್ಯ ಸೇವೆಗಳನ್ನು ನೀಡುವಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯತನ ಹಾಗೂ ವಿಳಂಬ ನೀತಿಯಿಂದಾಗಿ ಸ್ಥಳೀಯ ಜನಸಾಮಾನ್ಯರು , ವಿದ್ಯಾರ್ಥಿ, ಯುವಜನರು ಉಳಿತಾಯ ಖಾತೆ ತೆರೆಯುವಲ್ಲಿ ಬಹಳಷ್ಟು ಸಮಸ್ಯೆ ಎದುರಿಸಬೇಕಾಗಿ ಬಂದಿದೆ ಎಂದು ಡಿವೈಎಫ್‌ಐ ಸಂಘಟನೆಯು ಆರೋಪಿಸಿದೆ.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ಸಂಘಟನೆಯ ಪಕ್ಕಲಡ್ಕ ಘಟಕವು ಬ್ಯಾಂಕಿನಲ್ಲಿ ಗ್ರಾಹಕರು ಅನುಭವಿಸುತ್ತಿರುವ ದೂರುಗಳು ಕೇಳಿ ಬರುತ್ತಿದ್ದು ಇಂತಹ ಹಲವು ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಯಾವುದೇ ಬ್ಯಾಂಕಾಗಲಿ, ಅದರ ಪ್ರಮುಖ ಗುರಿ ಗ್ರಾಹಕನಿಗೆ ಸೇವೆ ಸಲ್ಲಿಸುವುದೇ ಆಗಿದೆ. ಗ್ರಾಹಕನೇ ಬ್ಯಾಂಕಿನ ಬಂಡವಾಳ ಆದರೆ ಬಜಾಲ್ ಪ್ರದೇಶದ ಭಾರತೀಯ ಸ್ಟೇಟ್ ಬ್ಯಾಂಕ್ ಈ ಭಾಗದ ಸುತ್ತಮುತ್ತಲಿನ ಗ್ರಾಹಕರಿಗೆ ಸರಿಯಾದ ಸೇವೆಯನ್ನು ನೀಡದೆ ವಿನಾ ಕಾರಣ ಸತಾಯಿಸುವಂತಹ ಘಟನೆಗಳು ದಿನ ನಿತ್ಯ ನಡೆಯುತ್ತಿದೆ. ಕನಿಷ್ಟ ಹೊಸ ಖಾತೆ ತೆರೆಯುವ ಕೆಲಸಗಳಿಗೂ ತಿಂಗಳುಗಳ ಕಾಲ ವಿಳಂಬಿಸುವಂತಹ ದೂರುಗಳು ಜನ ಸಾಮಾನ್ಯರಿಂದ ಕೇಳಿಬರುತ್ತಿದೆ ಎಂದು ಡಿವೈಎಫ್‌ಐ ಸಂಘಟನೆ ಅಧ್ಯಕ್ಷ ನೂರುದ್ದೀನ್ ಪಕ್ಕಲಡ್ಕ ತಿಳಿಸಿದರು.

ಇತ್ತೀಚೆಗೆ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಯೋಜನೆಗಳಿಗೆ ಸಂಬಂಧಿಸಿದಂತೆ ಹೊಸ ಉಳಿತಾಯ ಖಾತೆ ತೆರೆಯಲು ಮತ್ತು ಇತರೆ ಸಣ್ಣ ಪುಟ್ಟ ಕೆಲಸಗಳಿಗೆ ಸ್ಥಳೀಯ ಬ್ಯಾಂಕ್ ಮೊರೆ ಹೋದರೆ ಅಂತಹ ವಿದ್ಯಾರ್ಥಿಗಳನ್ನು ಮತ್ತವರ ಪೋಷಕರನ್ನು ವಿನಾಕಾರಣ ಸತಾಯಿಸುವುದು ಕಂಡು ಬರುತ್ತಿದೆ. ಅಲ್ಲದೆ, ಖಾತೆ ತೆರೆಯುವ ಕೆಲಸದಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯತನ ಹಾಗೂ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ.

ಒಂದೇ ದಿನದಲ್ಲಿ ಆಗುವ ಕೆಲಸಕ್ಕೆ ಸುಮಾರು ನಾಲ್ಕು ತಿಂಗಳಿಗೂ ಹೆಚ್ಚಿನ ಸಮಯದವರೆಗೆ ಸತಾಯಿಸುತ್ತಿರುವುದು ಖಂಡನೀಯ. ಈ ಬಗ್ಗೆ ಡಿವೈಎಫ್ಐ ಸಂಘಟನೆ ಈಗಾಗಲೇ ಭಾರತೀಯ ಸ್ಟೇಟ್ ಬ್ಯಾಂಕಿನ ಮೇಲಾಧಿಕಾರಿಯವರ ಗಮನಕ್ಕೆ ತಂದಿದೆ. ಇಂತಹ ಹಲವು ಗಂಭೀರ ಸಮಸ್ಯೆಗಳನ್ನು ಸರಿಪಡಿಸಲು ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರಲ್ಲಿ ಸೇವಾ ಮನೋಭಾವದಿಂದ ವರ್ತಿಸುವಂತೆ ಮತ್ತು ಗ್ರಾಹಕರ ಕೆಲಸಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಗೊಳಿಸುವಂತೆ  ಅಧಿಕಾರಿಗಳಲ್ಲಿ ಮನವಿ ಮಾಡಿದೆ ಎಂದು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಕಾರ್ಯದರ್ಶಿ ಧೀರಾಜ್ ಬಜಾಲ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *