ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣದಿಂದಾಗಿ ಮಳಿಯಾಳಂ ನಟ ಮುಮ್ಮುಟಿ ಸೇರಿದಂತೆ 300 ಮಂದಿ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸರ್ಕಾರ ಜಾರಿಗೊಳಿಸಿದ್ದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಮವೊಂದು ನಡೆದಿತ್ತು. ಆ ಸಂದರ್ಭದಲ್ಲಿ ನಿಯಮಕ್ಕಿಂದ ಹೆಚ್ಚಿನ ಜನರು ಭಾಗವಹಿಸಿದ್ದರು. ಆ ಕಾರಣದಿಂದಾಗಿ ಸಾಂಕ್ರಾಮಿಕ ರೋಗ ಕಾಯ್ದೆ ಅನ್ವಯ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರ್ಯಕ್ರಮದ ವಿಡಿಯೋ ಹಾಗೂ ಫೋಟೋವನ್ನು ಪರಿಶೀಲಿಸಿ, ಕಾರ್ಯಕ್ರಮ ಆಯೋಜಿಸಿದ್ದವರ ಮೇಲೆಯೂ ಪ್ರಕರಣ ದಾಖಲಾಗಿದೆ.
ಕಳೆದ ಮಂಗಳವಾರದಂದು ಕೋಯಿಕ್ಕೋಡ್ನಲ್ಲಿರುವ ಮೈತ್ರಾ ಆಸ್ಪತ್ರೆಯಲ್ಲಿ ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆ ಸೇವೆಯ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಮಲಯಾಳಂ ನಟ ಮುಮ್ಮುಟಿ ಭಾಗವಹಿಸಿ ಸೇವಾಕಾರ್ಯವನ್ನು ಉದ್ಘಾಟಿಸಿದರು. ನಂತರ ಆಸ್ಪತ್ರೆಯಲ್ಲಿ ಮುಮ್ಮುಟಿ ಬಳಿ ಸುಮಾರು 300 ಮಂದಿ ಜನಸಂದಣಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ತಡೆಯುವ ನಿಟ್ಟಿನಲ್ಲಿ ಸರಕಾರ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಬಿಗಿಗೊಳಿಸಲಾಗಿದ್ದರೂ, ಕಾರ್ಯಕ್ರಮವ ಆಯೋಜಿಸಿದರು. ಅಲ್ಲದೆ, ಹೆಚ್ಚು ಜನ ಸೇರಿದ್ದ ಕಾರಣ ಸಾಂಕ್ರಾಮಿಕ ರೋಗ ಕಾಯ್ದೆ ಅನ್ವಯ ಕೇರಳ ಪೊಲೀಸರು ಕ್ರಮಕೈಗೊಂಡಿದ್ದಾರೆ.
‘ಕಾರ್ಯಕ್ರಮ ಆರಂಭದ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದ್ದ ಆಯೋಜಕರು ಕೆಲ ಕಾಲದ ನಂತರ ಸಮಾರಂಭದಲ್ಲಿ ಭಾಗವಹಿಸಿದವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ. ಆಗಮಿಸಿದ ಅತಿಥಿಗಳು ಬೇಜವಾಬ್ದಾರಿಯಿಂದ ನಡೆದುಕೊಂಡರು,’ ಎಂದು ಪೊಲೀಸರು ತಿಳಿಸಿದ್ದಾರೆ.
ಸಮಾರಂಭಕ್ಕೆ ಸೆಲೆಬ್ರಿಟಿಗಳು ಬಂದಿದ್ದರಿಂದ ಕೆಲ ಅನಿರೀಕ್ಷಿತ ಸನ್ನಿವೇಶಗಳು ಎದುರಾಯ್ತು ಎಂದು ಮೈತ್ರಾ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.