ಉದ್ಯೋಗವಿಲ್ಲದೆ ಸಾವಿಗೆ ಶರಣಾದವರ ಸಂಖ್ಯೆ ಹೆಚ್ಚಳ

  • ನಿರುದ್ಯೋಗದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿರುವವರ ಸಂಖ್ಯೆಯಲ್ಲಿ ಶೇ.24ರಷ್ಟು ಹೆಚ್ಚಳ
  • ಕರ್ನಾಟಕದಲ್ಲಿ 553 ಮಂದಿ ಆತ್ಮಹತ್ಯೆ; ದೇಶದಲ್ಲೇ ಗರಿಷ್ಠ

ಬೆಂಗಳೂರು: ಉದ್ಯೋಗವಿಲ್ಲದೆ ನೊಂದು ಸಾವಿಗೆ ಶರಣಾದವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿದೆ. ರಾಜ್ಯದಲ್ಲಿ ಮೊದಲೇ ಉದ್ಯೋಗ ಕೊರತೆ ಇತ್ತು ಆದರೆ ಕೊರೊನಾ ಸೋಂಕಿನಿಂದಾಗಿ ಉದ್ಯೋಗವಿದ್ದವರೂ ಕೂಡ ನಿರುದ್ಯೋಗಿಗಳಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.2016ರಿಂದ 2019ರವರೆಗಿನ ಅವಧಿಯಲ್ಲಿ ಭಾರತದಲ್ಲಿ ನಿರುದ್ಯೋಗದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿರುವವರ ಸಂಖ್ಯೆಯಲ್ಲಿ ಶೇ.24ರಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ದತ್ತಾಂಶಗಳು ಬಹಿರಂಗಪಡಿಸಿವೆ.

2019ರಲ್ಲಿ ದೇಶದಲ್ಲಿ ನಿರುದ್ಯೋಗದಿಂದ ಬೇಸತ್ತು 2851 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2016ರಲ್ಲಿ ಇದೇ ಕಾರಣಕ್ಕಾಗಿ ಸಾವಿಗೆ ಶರಣಾದವರ ಸಂಖ್ಯೆ 2298 ಆಗಿತ್ತು.2019ನೇ ಸಾಲಿನಲ್ಲಿ ನಿರುದ್ಯೋಗದ ಕಾರಣದಿಂದ ಕರ್ನಾಟಕದಲ್ಲಿ 553 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. ಮಹಾರಾಷ್ಟ್ರ (452) ಹಾಗೂ ತಮಿಳುನಾಡು (251) ತದನಂತರದ ಸ್ಥಾನಗಳಲ್ಲಿವೆ.ದೇಶದಲ್ಲಿ ಕೋವಿಡ್ ಅಪ್ಪಳಿಸುವ ಮುಂಚಿನ ದತ್ತಾಂಶಗಳು ಇದಾಗಿದೆ. ಆದರೆ ಕೊರೊನಾ ಸೋಂಕಿನ ಆನಂತರದ ತಿಂಗಳುಗಳಲ್ಲಿ ಭಾರಿ ಸಂಖ್ಯೆಯ ಉದ್ಯೋಗಗಳು ನಷ್ಟವಾಗಿರುವುದರಿಂದ 2020ರಲ್ಲಿಯೂ ಆತ್ಮಹತ್ಯೆಯ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಭಾರತದಲ್ಲಿ 1 ಕೋಟಿಗೂ ಅಧಿಕ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಸುಮಾರು ಶೇ.97ರಷ್ಟು ಕುಟುಂಬಗಳ ಆದಾಯದಲ್ಲಿ ಕುಸಿತವಾಗಿದೆ ಎಂದು ಭಾರತೀಯ ಆರ್ಥಿಕತೆಯ ಕಣ್ಗಾವಲು ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ತಿಳಿಸಿದ್ದಾರೆ.

2017-18ನೇ ಸಾಲಿನಲ್ಲಿ ದೇಶದ ಸುಮಾರು 12 ಸಾವಿರ ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದರು.ಈ ಆತ್ಮಹತ್ಯೆಯ ಸಂಖ್ಯೆ ರೈತರ ಆತ್ಮಹತ್ಯೆಗಿಂತಲೂ ಅಧಿಕವಾಗಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ಭಾರತದಲ್ಲಿ ಆತ್ಮಹತ್ಯೆ ಎಂಬ ವರದಿಯಲ್ಲಿ ಅಂಕಿ-ಅಂಶ ಸಹಿತ ವಿವರವಾಗಿ ಉಲ್ಲೇಖಿಸಲಾಗಿದೆ.

ದೇಶದಲ್ಲಿ 12,936 ಮಂದಿ ಆತ್ಮಹತ್ಯೆ: ಈ ಪೈಕಿ 12,936 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಸಂಭವಿಸಿರುವ ಒಟ್ಟು ನಿರುದ್ಯೋಗಿಗಳ ಆತ್ಮಹತ್ಯೆ ಪ್ರಮಾಣ ಶೇ.9.6ರಷ್ಟಿತ್ತು.

 ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ಪ್ರತಿ 1 ಗಂಟೆಗೆ ಓರ್ವ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಸುಮಾರು 10 ಸಾವಿರ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದರು: ಆತ್ಮಹತ್ಯೆಗೆ ಶರಣಾಗಿರುವ ನಿರುದ್ಯೋಗಿಗಳಲ್ಲಿ ಪುರುಷರ ಸಂಖ್ಯೆ ಅಧಿಕವಾಗಿದೆ. ಒಟ್ಟು 10,687 ನಿರುದ್ಯೋಗಿ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದರು. 2249 ನಿರುದ್ಯೋಗಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರು.

2018ರಲ್ಲಿ ನಿರುದ್ಯೋಗಿಗಳು ಹಾಗೂ ಸ್ವಯಂ ಉದ್ಯೋಗಿಗಳ ಆತ್ಮಹತ್ಯೆ ಪ್ರಮಾಣ ಎಷ್ಟಿತ್ತು ಗೊತ್ತೇ? ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿನಿತ್ಯ (ಸರಾಸರಿ) ಆತ್ಮಹತ್ಯೆ ಮಾಡಿಕೊಳ್ಳುವ ನಿರುದ್ಯೋಗಿಗಳ ಸಂಖ್ಯೆ 35 ಹಾಗು ಸ್ವಯಂ ಉದ್ಯೋಗಿಗಳ ಸಂಖ್ಯೆ 36 ಎಂಬ ಆತಂಕಕಾರಿ ವಿಚಾರ ಬಯಲಾಗಿದೆ!

ನಿರುದ್ಯೋಗದ ಹಿನ್ನೆಲೆ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ವರ್ಷಕ್ಕೆ 1,094 ಜನ ಉದ್ಯೋಗವಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ ದೇಶಾದ್ಯಂತ 1,34,516 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 2017ಕ್ಕೆ ಹೋಲಿಸಿದರೆ ಶೇ 3.6ರಷ್ಟು ಪ್ರಕರಣಗಳು ಹೆಚ್ಚಳವಾಗಿವೆ. ಗೃಹಿಣಿಯರು ಒಟ್ಟು ಮಹಿಳಾ ಸಂತ್ರಸ್ತರಲ್ಲಿ ಶೇ 54.1ರಷ್ಟಿದ್ದಾರೆ (42,391ರಲ್ಲಿ 22,937). 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಟ್ಟು ಜನರಲ್ಲಿ ಶೇ 17.1ರಷ್ಟು ಗೃಹಿಣಿಯರಿದ್ದಾರೆ ಎಂದು ಎನ್ ಆರ್ ಸಿಬಿ ವರದಿಯಲ್ಲಿ ತಿಳಿಸಿದೆ.

ಈ ಮಟ್ಟದ ನಿರುದ್ಯೋಗದ ಪ್ರಮಾಣ ದೇಶ ಯಾವತ್ತೂ ಕಂಡಿಲ್ಲ. ಕೋವಿಡ್ ಸಾಂಕ್ರಾಮಿಕ ಒಂದು ನೆಪ ಮಾತ್ರ. ಸರಕಾರಗಳು ಅನುಸರಿಸುತ್ತಿರುವ ನೀತಿಗಳು, ಆಡಳಿತದ ವೈಫಲ್ಯ ಈ ಸ್ಥಿತಿಗೆ ಕಾರಣ. ತಮ್ಮ ಶಿಕ್ಷಣ, ಕೌಶಲ್ಯಕ್ಕೆ ತಕ್ಕುದಾದ ಉದ್ಯೋಗ, ಜೀವನ ನಿರ್ವಹಣೆಗೆ ತಕ್ಕುದಾದ ವೇತನ ಇಲ್ಲದೆ ಯುವಜನತೆ ಹತಾಶರಾಗುತ್ತಿದ್ದಾರೆ. ಅದು ಸಮಾಜದಲ್ಲಿ ಕ್ಷೋಭೆಗೆ ಕಾರಣವಾಗುತ್ತಿದೆ. ಮಾನಸಿಕ ಖಿನ್ನತೆ, ಆತ್ಮಹತ್ಯೆಗಳೂ ಹೆಚ್ಚುತ್ತಿರುವುದು ನಿರುದ್ಯೋಗದ ಕರಾಳತೆಗೆ ಕನ್ನಡಿ. ಕರ್ನಾಟಕ ರಾಜ್ಯದಲ್ಲಂತೂ ನಿರುದ್ಯೋಗ ಭೀಕರವಾಗಿ ಹಬ್ಬುತ್ತಿದೆ. ನಿರುದ್ಯೋಗದ ವಿರುದ್ದ, ಉದ್ಯೋಗ ಸೃಷ್ಟಿಗಾಗಿ ಯುವಜನತೆ ಒಗ್ಗಟ್ಟಾಗಿ ಬೀದಿಗಿಳಿಯಬೇಕಿದೆ ಎಂದು DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕರೆ ನೀಡಿದ್ದಾರೆ.

ಮಕ್ಕಳ ಆತ್ಮಹತ್ಯೆ: 2017-19ರ ಅವಧಿಯಲ್ಲಿ ದೇಶದಲ್ಲಿ 14-18 ವಯೋಮಾನದ 24 ಸಾವಿರಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 4000ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರದ ಸರ್ಕಾರದ ವರದಿ ಹೇಳಿದೆ.

ಮಕ್ಕಳ ಸಾವಿನ ಕುರಿತಾಗಿ ಎನ್ ಸಿಆರ್ ಬಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಈ ಪ್ರಕಾರ 2017-19ರ ಅವಧಿಯಲ್ಲಿ 24,568 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 13,325 ಮಂದಿ ಬಾಲಕಿಯರು ಎಂದು ತಿಳಿಸಲಾಗಿದೆ.

2017ರಲ್ಲಿ 8029, 2018ರಲ್ಲಿ 8168 ಮತ್ತು 2019ರಲ್ಲಿ 8377 ಮಕ್ಕಳು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಇನ್ನು ಅತಿ ಹೆಚ್ಚು ಮಕ್ಕಳು ಆತ್ಮಹತ್ಯೆಗೆ ಶರಣಾದ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ (3115) ಅತಿಹೆಚ್ಚು, ಪಶ್ಚಿಮ ಬಂಗಾಳ (2802), ಮಹಾರಾಷ್ಟ್ರ (2527) ಹಾಗೂ ತಮಿಳುನಾಡಿನಲ್ಲಿ 2035 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪ್ರೀತಿ-ಪ್ರೇಮ ವೈಫಲ್ಯ, ಆತ್ಮೀಯರು ಅಗಲಿದ ಕಾರಣ, ಮಾದಕ ದ್ರವ್ಯ, ಮದ್ಯದ ವ್ಯಸನಿ, ಅವಧಿಗೂ ಮುನ್ನವೇ ಗರ್ಭಿಣಿ, ನಿರುದ್ಯೋಗ, ಬಡತನ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *