ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಈ ವರ್ಷ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅಲ್ಲದೆ, ಶೇಕಡಾ 99.37 ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.
ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಸ್ವಲ್ಪ ನಿಧಾನವಾಗಿದ್ದು, 13,04,561 ವಿದ್ಯಾರ್ಥಿಗಳ ಪರೀಕ್ಷೆ ಘೋಷಣೆಯಾಗಿದೆ. ಒಟ್ಟು 14,30,188 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 10 ಹಾಗೂ 11ನೇ ತರಗತಿಯ ಅಂತಿಮ ಫಲಿತಾಂಶಗಳನ್ನು ಪರಿಗಣಿಸಿ 12ನೇ ತರಗತಿಯ ಫಲಿತಾಂಶ ನೀಡಲಾಗುತ್ತದೆ. ಸಿಬಿಎಸ್ಇ 12ನೇ ತರಗತಿ ಫಲಿತಾಂಶ 30:30:40 ಸೂತ್ರದಡಿ ತಯಾರಿಸಲಾಗಿದೆ. 10 ಮತ್ತು 11ನೇ ತರಗತಿ ಅಂತಿಮ ಪರೀಕ್ಷೆ ಅಂಕ ಮತ್ತು 12ನೇ ತರಗತಿಯಲ್ಲಿ ಈಗಾಗಲೇ ನಡೆಸಿರುವ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕ ಆಧರಿಸಿ 30:30:40 ಅನುಪಾತ ಆಧರಿಸಿ ಫಲಿತಾಂಶ ಪ್ರಕಟಿಸಲಾಗಿದೆ.
ಇದನ್ನು ಓದಿ: ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳು ರದ್ದು
ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಈ ವರ್ಷ ಸಿಬಿಎಸ್ಇ ಪರೀಕ್ಷೆಗಳು ರದ್ದುಗೊಂಡಿದ್ದವು. ಮಂಡಳಿಯು ಪರ್ಯಾಯ ಮೌಲ್ಯಮಾಪನ ಅನುಸರಿಸಿ ಅದರ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಿದೆ.
65,184 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವುದು ಬಾಕಿಯಿದೆ. ಅವರ ಫಲಿತಾಂಶವನ್ನು ಆಗಸ್ಟ್ 5ರಂದು ಒಳಗಾಗಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಾರಿ ಅರ್ಹತಾ ಪಟ್ಟಿಯನ್ನು ಘೋಷಿಸಿಲ್ಲ ಎಂದೂ ಅವರು ಹೇಳಿದ್ದಾರೆ. ಎಲ್ಲಾ ಕೇಂದ್ರೀಯ ವಿದ್ಯಾಲಯಗಳು ಶೇ.100ರಷ್ಟು ಫಲಿತಾಂಶವನ್ನು ಪಡೆದಿವೆ.
ದೆಹಲಿ ವಿದ್ಯಾರ್ಥಿಗಳು ಶೇ.99.84ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಸುಮಾರು 1,50,152 ಮಂದಿ ವಿದ್ಯಾರ್ಥಿಗಳು ಶೇ.90ರಷ್ಟು ಅಂಗಳನ್ನು ಗಳಿಸಿದ್ದಾರೆ, 70,004 ವಿದ್ಯಾರ್ಥಿಗಳು ಶೇ.95ರಷ್ಟು ಫಲಿತಾಂಶ ಗಳಿಸಿದ್ದಾರೆ. ಶೇಕಡಾ 0.54ರ ಅಂತರದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದರು.
ಇದನ್ನು ಓದಿ: ಅಕ್ಟೋಬರ್ 1ರಿಂದ ಶೈಕ್ಷಣಿಕ ವರ್ಷಾರಂಭ: ಯುಜಿಸಿ
ಫಲಿತಾಂಶವು ಮಂಡಳಿಯ ಅಧಿಕೃತ ವೆಬ್ಸೈಟ್ cbseresults.nic.in ನಲ್ಲಿ ಲಭ್ಯವಾಗಲಿದೆ. ಜೊತೆಗೆ, digilocker.gov.in ಮತ್ತು ಮೊಬೈಲ್ನಲ್ಲಿರುವ ಡಿಜಿಲಾಕರ್ ಅಪ್ಲಿಕೇಷನ್ನಲ್ಲೂ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ನಮೂದಿಸಿದರೆ ವಿವರಗಳು ಲಭ್ಯವಾಗಲಿವೆ.
ಈ ವರ್ಷ ಯಾವುದೇ ಪರೀಕ್ಷೆಗಳು ನಡೆದಿಲ್ಲವಾದ್ದರಿಂದ ವಿದ್ಯಾರ್ಥಿಗಳಿಗೆ ಮರುಪರಿಶೀಲಿಸುವ ಯಾವುದೇ ಆಯ್ಕೆಗಳಿಲ್ಲ. ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಒಂದೊಮ್ಮೆ ನೀಡಲಾಗಿರುವ ಅಂಕಗಳಿಂದ ವಿದ್ಯಾರ್ಥಿಗಳು ಅತೃಪ್ತರಾಗಿದ್ದರೆ ಅವರು ಆಫ್ಲೈನ್ ಪರೀಕ್ಷೆಗೆ ಹಾಜರಾಗಬಹುದು.