‘ಜನಪೀಡಕ ಸರ್ಕಾರ” ಎಂಬ ತಲೆಬರಹದ ಸಣ್ಣ ಪುಸ್ತಕ ಬಿಡುಗಡೆ
ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಸರ್ಕಾರ ದುರಾಡಳಿತ ಮತ್ತು ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಆಡಳಿತ ಕೊಟ್ಟಿದ್ದು, ಬಿಟ್ಟರೆ ಶೂನ್ಯ ಸಾಧನೆ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜನರನ್ನು ಕೊಂದ ಸರ್ಕಾರ : ಆಕ್ಸಿಜನ್ ಇಲ್ಲದೆ ಚಾಮರಾಜನಗರ, ಬೆಂಗಳೂರು, ಕಲ್ಬುರ್ಗಿ, ಕೋಲಾರ ಮುಂತಾದ ಕಡೆ ಜನ ಮರಣ ಹೊಂದಿದರು. ಆದರೆ ಕೇಂದ್ರ ಸರ್ಕಾರ “ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೊಬ್ಬರೂ ಮರಣ ಹೊಂದಿಲ್ಲ” ಎಂದು ಹೇಳುತ್ತಿದೆ. ಚಾಮರಾಜನಗರ ದುರಂತದ ಬಗ್ಗೆ, ಆಕ್ಸಿಜನ್ ಇಲ್ಲದೆ ಜನರು ಮರಣ ಹೊಂದುತ್ತಿರುವ ಬಗ್ಗೆ ದೇಶದ ನ್ಯಾಯಾಲಯಗಳು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ತಜ್ಞರುಗಳು 2020ರ ನವೆಂಬರ್ 30 ರಂದೆ ಎರಡನೆ ಅಲೆಯ ಕುರಿತು ವರದಿ ನೀಡಿದ್ದರು. ಆದರೆ ಸರ್ಕಾರ ಯಾವುದೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿಲ್ಲ. ಕ್ರಮ ಕೈಗೊಳ್ಳಲು ಕನಿಷ್ಠ 5 ತಿಂಗಳು ಕಾಲಾವಕಾಶವಿತ್ತು.
ವೆಂಟಿಲೇಟರುಗಳ ಖರೀದಿಯಲ್ಲೂ ಭ್ರಷ್ಟಾಚಾರ ನಡೆದು ವೆಂಟಿಲೇಟರುಗಳಲ್ಲಿ ಬಹುತೇಕ ಕಳಪೆಯಾಗಿದ್ದಕ್ಕೆ ಆಸ್ಪತ್ರೆಗೆ ವಿತರಿಸದೆ ಕರ್ನಾಟಕದಲ್ಲಿ 909 ವೆಂಟಿಲೇಟರುಗಳು ಗೋದಾಮುಗಳಲ್ಲೆ ಧೂಳಿಡಿಯುವಂತೆ ಮಾಡಿ ಅಸಂಖ್ಯಾತ ಜನ ವೆಂಟಿಲೇಟರುಗಳಿಲ್ಲದೆ ಸಾಯುವಂತಾಯಿತು. ರಾಜ್ಯದ ರೋಗಿಗಳು ಆಕ್ಸಿಜನ್‌ಗಾಗಿ ಬೀದಿ ಬೀದಿಗಳಲ್ಲಿ ಪರಿತಪಿಸುತ್ತಿದ್ದಾಗ, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರವು ಕಿತ್ತುಕೊಂಡು ಬೇರೆ ಕಡೆ ಕೊಂಡು ಹೋದರು. ನಂತರ ರಾಜ್ಯದ ಗೌರವಾನ್ವಿತ ಉಚ್ಛನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಛೀಮಾರಿ ಹಾಕಿದ ಮೇಲೆ 12 ನೂರು ಟನ್ ಆಕ್ಸಿಜನ್ ಅನ್ನು ರಾಜ್ಯಕ್ಕೆ ನೀಡಲಾಯಿತು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.
ಬೆಂಗಳೂರು ನಿರ್ಲಕ್ಷ್ಯ : ಬೆಂಗಳೂರಿನ ಅಭಿವೃದ್ಧಿಗೆಂದು ತೆರಿಗೆ ವಸೂಲಿ, ತೆರಿಗೆ ಏರಿಕೆ ಪ್ರಕ್ರಿಯೆಗಳು ನಡೆಯುತ್ತಲೆ ಇವೆ. ಮೆಟ್ರೋ ಹೆಸರಲ್ಲಿ ಸಾವಿರಾರು ಮರಗಳನ್ನು ಕಡಿದುರುಳಿಸಲಾಗುತ್ತಿದೆ. ತುರಹಳ್ಳಿ ಅರಣ್ಯಕ್ಕೂ ಗರಗಸ ಹಾಕಿದ್ದಾರೆ. ಆದರೂ ನಮ್ಮ ಸರ್ಕಾರದ ಅವಧಿಯಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಅನೇಕರು ಮೌನವಾಗಿದ್ದಾರೆ. ಸಬರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರವು ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿತು. ಇದಕ್ಕೆ ರಾಜ್ಯದ ಬಿಜೆಪಿ ಶೂರರೆಲ್ಲ ಸಂಭ್ರಮಿಸಿದ್ದು ಬಿಟ್ಟರೆ ಕೇಂದ್ರ ಸರ್ಕಾರ ಒಂದು ರೂಪಾಯಿ ಕೊಟ್ಟಿದ್ದನ್ನೂ ಕಾಣೆವು. ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳಿಗೆ ಬೇಕಾದ ಭೂಮಿಯ ಸ್ವಾಧೀನ ಕೆಲಸಗಳು ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿವೆ. ಒಟ್ಟಾರೆ ಕೇಂದ್ರ-ರಾಜ್ಯಗಳ ಬಿಜೆಪಿ ಸರ್ಕಾರಗಳು ರಾಹು-ಕೇತುಗಳಂತೆ ರಾಜ್ಯವನ್ನು ಬಾಧಿಸುತ್ತಿವೆ ಎಂದು ಸಿದ್ದರಾಮಯ್ಯ ಅವರು ಬೆಂಗಳೂರು ಅಭಿವೃದ್ಧಿ ಕುರಿತು ವಿವರಿಸಿದ್ದಾರೆ.