ಆಗಸ್ಟ್ 10ರಂದು ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದಿದ್ದು ಆಗಸ್ಟ್ 10ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದರು.

ಈ ಬಾರಿ ಎರಡು ದಿನಕ್ಕೆ ಮಾತ್ರ ಸೀಮಿತಗೊಳಿಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರಾಜ್ಯದಲ್ಲಿ ಉತ್ತಮವಾಗಿ ನಡೆದಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ʻʻಕೋವಿಡ್​ ಆತಂಕದ ನಡುವೆ ಪರೀಕ್ಷೆ ನಡೆಸುವ ಹಿಂದೆ ಯಾವುದೇ ದುರುದ್ದೇಶ ನಮಗಿರಲಿಲ್ಲ. ಸರಕಾರವು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮದೊಂದಿಗೆ ಪರೀಕ್ಷೆ ನಡೆಸಿದೆ. ಇದರಿಂದ ಯಶಸ್ವಿಯಾಗಿ ಪರೀಕ್ಷೆ ಮುಗಿದಿದ್ದು, ಇದಕ್ಕಾಗಿ ಶ್ರಮಿಸಿದ ನಾಡಿನ ಎಲ್ಲಾ ಶಿಕ್ಷಕ ವೃಂದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಲವು ಸಂಘ ಸಂಸ್ಥೆಗಳು ನಮ್ಮ ಜೊತೆ ಕೈ ಜೋಡಿಸಿದವು. ಎಲ್ಲಾ‌ ಶಾಸಕರು ಶಿಕ್ಷಣ ಇಲಾಖೆ ಜೊತೆ ಸಹಕಾರದ ಜೊತೆ ಬೆಂಬಲ ನೀಡಿದ್ದು, ಅವರಿಗೆ ಧನ್ಯವಾದಗಳು ತಿಳಿಸುತ್ತೇನೆʼʼ ಎಂದರು.

ಇದನ್ನು ಓದಿ: ಪರೀಕ್ಷೆಯ ನಿರಾಕರಣೆಯೋ? ಶಿಕ್ಷಣದ ನಿರಾಕರಣೆಯೋ??

ಎಸ್​ಎಸ್​ಎಲ್​ಸಿ ಪರೀಕ್ಷೆ ಮುಕ್ತಾಯವಾಗಿದ್ದು, ಒಎಂಆರ್ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಸ್ಕ್ಯಾನಿಂಗ್‍ಗೆ ಕಳುಹಿಸಿ ನಂತರ ಮೌಲ್ಯಮಾಪನ ಮಾಡಿ ಆಗಸ್ಟ್ 10ರೊಳಗೆ ಫಲಿತಾಂಶ ಪ್ರಕಟಪಡಿಸಲಿದ್ದೇವೆ ಎಂದರು.

ಮಳೆ ಅಬ್ಬರದ ನಡುವೆಯೂ ಮಕ್ಕಳು ಗೈರು ಆಗದೇ ಶೇ 99.65ರಷ್ಟು ಹಾಜರಿದ್ದು, ಪರೀಕ್ಷೆ ಬರೆದಿದ್ದಾರೆ. ಅಬ್ಬರದ ಮಳೆಯ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ನಡೆದಿದೆ, ಕಳೆದ ಬಾರಿಗಿಂತ ಈ ಬಾರಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಿ ಇದ್ದವು. ಮಕ್ಕಳು ಕೂಡ ಸಂತೋಷ ಮತ್ತು ನಿರಾಳತೆಯೊಂದಿಗೆ ಪರೀಕ್ಷೆ ಬರೆದಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 152 ವಿದ್ಯಾರ್ಥಿಗಳು ಭಾಷಾ ವಿಷಯಗಳ ಪರೀಕ್ಷೆ ಬರೆದರು. 10,693 ವಲಸೆ ವಿದ್ಯಾರ್ಥಿಗಳು ತಮಗೆ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾದರು. 2,870 ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿದ್ದು ಪರೀಕ್ಷೆಯನ್ನು ಎದುರಿಸಿದರು. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಕೇರಳ ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ಒಟ್ಟು 706 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ನಾಲ್ಕು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು ಎಂದು ಸಚಿವರು ವಿವರಿಸಿದರು.

ಇದನ್ನು ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈ ಬಾರಿ 8.76 ಲಕ್ಷ ವಿದ್ಯಾರ್ಥಿಗಳು

ಮೂಳೆ ಸವೆತ ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿನ ಕಾವೇರಿಪುರದ ಆರ್‌.ಎ.ಎಸ್ ಕಾನ್ವೆಂಟ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾಳೆ. ಮೊದಲ ಪರೀಕ್ಷೆ ಬರೆದು ಕಡಿಮೆ ಅಂಕಗಳು ಬರಬಹುದೆಂಬ ಭೀತಿಯಿಂದ ಅಜ್ಜಿಗೆ ತಂದಿದ್ದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಕೆಂಚನಾಲಾ ಗ್ರಾಮದ ವಿದ್ಯಾರ್ಥಿನಿ ಗುರುವಾರದ ಪರೀಕ್ಷೆಗೆ ಹಾಜರಾಗಿದ್ದಾಳೆ ಎಂದು ಮಾಹಿತಿ ನೀಡಿದರು.

ದ್ವಿಚಕ್ರ ವಾಹನದಲ್ಲಿ ಅಥಣಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾದರು. ಇಬ್ಬರು ವಿದ್ಯಾರ್ಥಿಗಳಲ್ಲಿ ಮಲ್ಲಿಕಾರ್ಜುನ್ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ, ಮತ್ತೊಬ್ಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದಾನೆ.

Donate Janashakthi Media

Leave a Reply

Your email address will not be published. Required fields are marked *