ಮುಂಬೈ: ಅಶ್ಲೀಲ ಚಿತ್ರಗಳನ್ನು ತಯಾರಿಸಿ ಅವುಗಳನ್ನು ಕೆಲವು ಆ್ಯಪ್ಗಳ ಮೂಲಕ ಬಿತ್ತರಿಸುತ್ತಿದ್ದ ಆರೋಪದ ಮೇಲೆ ನೆನ್ನೆ ಬಂಧಿಸಲಾಗಿದ್ದ ಉದ್ಯಮಿ ರಾಜ್ ಕುಂದ್ರಾ ಅವರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯವು ಜುಲೈ 23ರವರೆಗೆ ಪೊಲೀಸರ ವಶಕ್ಕೆ ನೀಡಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಹಾಗೂ ಮತ್ತೊಬ್ಬ ಆರೋಪಿ ರಿಯಾನ್ ಜಾನ್ನನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದರು. ನ್ಯಾಯಾಲಯ ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿದೆ. ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರೇ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಹೆಚ್ಚಿನ ವಿವರಗಳನ್ನು ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದರು.
ಕಂಪೆನಿಯ ಖಾತೆಯಲ್ಲಿ ಪೊಲೀಸರಿಗೆ ಸಾಕಷ್ಟು ವಿದೇಶಿ ಹಣ ಇರುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ. ಕುಂದ್ರಾ ಅವರ ಮೊಬೈಲ್ ಫೋನ್ನಲ್ಲಿ ಇರುವ ಕಂಟೆಂಟ್ ಮತ್ತು ಪ್ರಕರಣದ ಸಹ ಆರೋಪಿಗಳು ನೀಡಿದ ಹೇಳಿಕೆಗಳ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಲು ಬಯಸಿದ್ದಾರೆ. ಈ ಆಧಾರದ ಮೇಲೆ ಕುಂದ್ರಾರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಒಪ್ಪಿಸಬೇಕು ಎಂದು ಹೇಳಿದರು.
ಕೆಂಡ್ರಿಂಗ್ ಹೆಸರಿನ ಇಂಗ್ಲೆಂಡ್ ಮೂಲದ ಕಂಪನಿ ಮೇಲೆ ರಾಜ್ 10 ಕೋಟಿ ಹೂಡಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ. ಕುಂದ್ರಾ ಹಾಗೂ ಉಮೇಶ್ ನಡುವೆ ಒಪ್ಪಂದ ಇತ್ತು ಎನ್ನಲಾಗಿದೆ. ಈಗ ಪೊಲೀಸರು ಸೂಕ್ತ ದಾಖಲೆಗಳನ್ನು ನ್ಯಾಯಾಲಯದ ಎದುರು ಒದಗಿಸಿದ್ದಾರೆ. ಹೀಗಾಗಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
2021ರ ಫೆಬ್ರವರಿಯಲ್ಲಿ ಅಶ್ಲೀಲ ಚಿತ್ರಗಳ ತಯಾರಿ ಮತ್ತು ಅವುಗಳನ್ನು ಕೆಲವು ಅಪ್ಲಿಕೇಶನ್ಗಳ ಮೂಲಕ ಬಿತ್ತರಿಸುತ್ತಿರುವ ಬಗ್ಗೆ ಮುಂಬೈನ ಅಪರಾಧ ವಿಭಾಗದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣಗೆ ಒಳಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ರಾಜ್ ಕುಂದ್ರಾ ಅವರನ್ನು ನಾವು ಬಂಧಿಸಿದ್ದೇವೆ. ಅವರು ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಈ ಬಗ್ಗೆ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ’ ಎಂದು ಮುಂಬೈ ಪೊಲೀಸ್ ಆಯುಕ್ತರು ಪ್ರಕಟಣೆ ನೀಡಿದ್ದರು.
ಸಿನಿಮಾಗಳು, ವೆಬ್ ಸರಣಿಗಳಲ್ಲಿ ಅವಕಾಶ ನೀಡುವ ಹೆಸರಿನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿ, ಬಲವಂತದಿಂದ ಅಶ್ಲೀಲ ಸಿನಿಮಾಗಳನ್ನು ತೆಗೆದಿದ್ದಾನೆ ಎಂದು ಅವರ ವಿರುದ್ದ ಆರೋಪಗಳು ಕೇಳಿಬರುತ್ತಿವೆ. ರಾಜ್ ಕುಂದ್ರಾ ಕಚೇರಿಯಿಂದ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಹಿಂದಿನ ಸೂತ್ರಧಾರಿ ಉಮೇಶ್ ಎಂದು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದು, ಈ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಹಾಗೂ ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.