ಬಕ್ರೀದ್‌ ಆಚರಣೆ: ಮಸೀದಿಗಳಲ್ಲಿ 50 ಜನರ ಮಾತ್ರ ಪ್ರಾರ್ಥನೆಗೆ ಅವಕಾಶ

ಬೆಂಗಳೂರು: ಜುಲೈ 21ರಂದು ನಡೆಯಲಿರುವ ಬಕ್ರೀದ್‌ ಹಬ್ಬದ ಆಚರಣೆ ಅಂಗವಾಗಿ ಮಸೀದಿಗಳಲ್ಲಿ ಗರಿಷ್ಠ 50 ಜನರು ಮಾತ್ರ ಪ್ರಾರ್ಥನೆ ಮಾಡಲು ಅವಕಾಶವಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಆದೇಶ ಹೊರಡಿಸಿದೆ.

ಕೋವಿಡ್-19 ನಿರ್ಬಂಧಗಳು ಸಡಿಲಿಕೆಯಿಂದಾಗಿ ಸೋಂಕು ಹರಡುವಿಕೆ ತಡೆಗಟ್ಟಲು ಜಾಗರೂಕತೆ ವಹಿಸಬೇಕಾದ ಕಾರಣದಿಂದಾಗಿ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಟ್ಟು ಗೂಡುವುದನ್ನು ನಿರ್ಬಂಧಿಸಲಾಗಿದೆ.

ಇದನ್ನು ಓದಿ: ಕೋವಿಡ್‌ ಪರಿಸ್ಥಿತಿ: ಆರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ

ಬಕ್ರೀದ್ ದಿನದಂದು ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಗೆ ನಿರ್ಬಂಧ ಹೇರಲಾಗಿದೆ. ಜನರು ಸಾಮೂಹಿಕ ಪ್ರಾರ್ಥನೆ ಮಾಡಬಾರದು. ಒಂದು ವೇಳೆ ಅಧಿಕ ಮಂದಿ ಮಸೀದಿಗೆ ಆಗಮಿಸಿದರೆ ಹಂತ ಹಂತವಾಗಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಬಹುದಾಗಿದೆ.

ಪ್ರಾರ್ಥನಾ ಮಂದಿರಗಳಲ್ಲಿ ಎಲ್ಲರೂ ಮಾಸ್ಕ್‌ ಧರಿಸಬೇಕು. ನಮಾಜ್‌ ಮಾಡುವಾಗ ಕನಿಷ್ಠ ಆರು ಅಡಿಗಳ ಅಂತರದಲ್ಲಿ ಇರಬೇಕು. 65 ವರ್ಷ ಮೇಲ್ಪಟ್ಟ ವಯೋಮಾನದವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಮಸೀದಿ ಪ್ರವೇಶಿಸುವ ಮುನ್ನ ದೇಹದ ತಾಪಮಾನ ಪರೀಕ್ಷಿಸಿಕೊಳ್ಳಬೇಕು. ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಪ್ರಾಣಿ ವಧೆಗೆ ನಿರ್ಬಂಧ: ಬಕ್ರೀದ್‌ ಹಬ್ಬದಲ್ಲಿ ಪ್ರಾಣಿ ವಧೆ ಮಾಡುವ ಸಂಪ್ರದಾಯ ಇದ್ದು, ಇದಕ್ಕೆ ನಿರ್ಬಂಧವಿದೆ.  ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡುವುದನ್ನು ನಿಷೇಧಿಸಲಾಗಿದೆ.

ರಸ್ತೆಗಳು, ಪಾದಚಾರಿ ಮಾರ್ಗಗಳು, ಆಸ್ಪತ್ರೆಗಳ ಆವರಣಗಳು, ನರ್ಸಿಂಗ್‌ ಹೋಂಗಳ ಒಳ ಮತ್ತು ಹೊರಾಂಗಣಗಳು, ಶಾಲಾ, ಕಾಲೇಜುಗಳ ಒಳಾಂಗಣ ಮತ್ತು ಹೊರಾಂಗಣ, ಆಟದ ಮೈದಾನ, ಮಸೀದಿ ಮತ್ತು ಇತರೆ ಧಾರ್ಮಿಕ ಸ್ಥಳಗಳು, ಉದ್ಯಾನದ ಒಳಗೆ, ಹೊರಗೆ ಸೇರಿದಂತೆ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿವಧೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *