ಏಂಗೆಲ್ಸ್ 200 ಮಾಲಿಕೆಯ ಅನಾವರಣ – ಎರಡು ಪುಸ್ತಕಗಳ ಬಿಡುಗಡೆ

ಜರ್ಮನ್ ತತ್ವಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ – ಈ ಎಲ್ಲವೂ ಆಗಿದ್ದ ಫ್ರೆಡೆರಿಕ್ ಏಂಗೆಲ್ಸ್ ಹುಟ್ಟಿದ್ದು, ನವೆಂಬರ್ 28, 1820ರಂದು. 2020ರ ನವೆಂಬರ್ 28ಕ್ಕೆ ಅವರಿಗೆ 200 ವರ್ಷ. ನವೆಂಬರ್ 2020 ರಿಂದ ನವೆಂಬರ್ 2021ರ ಅವಧಿಯನ್ನು ಏಂಗೆಲ್ಸ್ ಜನ್ಮ ದ್ವಿಶತಮಾನೋತ್ಸವವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.  ಮಾರ್ಕ್ಸ್‌ವಾದ ಎಂದು ಕರೆಯಲಾಗುತ್ತಿರುವ ವಿಶಿಷ್ಟ ಲೋಕದೃಷ್ಟಿಯನ್ನು ಬೆಳೆಸುವಲ್ಲಿ ಮಾರ್ಕ್ಸ್‌ರ ಜತೆ ಏಂಗೆಲ್ಸ್ ಅವರ ಪಾತ್ರ ಹೆಚ್ಚು ಕಡಿಮೆ ಸಮಾನವಾಗಿತ್ತು.

ಏಂಗೆಲ್ಸ್ ಅವರ ಜನ್ಮ ದ್ವಿಶತಮಾನೋತ್ಸವವನ್ನು ಮಾರ್ಕ್ಸ್‌ವಾದದ ಲೋಕದೃಷ್ಟಿಯ ಆಧಾರಸ್ತಂಭಗಳು ಎನಿಸಿಕೊಂಡಿರುವ ಅವರ ಪ್ರಮುಖ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಾಡಿನ ಪ್ರಗತಿಪರ ಪುಸ್ತಕಗಳ ಪ್ರಕಾಶನ ಸಂಸ್ಥೆಗಳಾದ (ಈ ಹಿಂದೆ ಮಾರ್ಕ್ಸ್200–ಕ್ಯಾಪಿಟಲ್ 150 ಯೋಜನೆಯನ್ನು ಸಫಲವಾಗಿ ಪೂರ್ಣಗೊಳಿಸಿದ) ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮಗಳು ಜಂಟಿಯಾಗಿ ಯೋಜಿಸಿವೆ.

ಈ ಮಾಲಿಕೆಯಲ್ಲಿ ಮೊದಲ ಎರಡು ಪುಸ್ತಕಗಳು ಸಿದ್ಧವಾಗಿದ್ದು, ಜುಲೈ 20 ಮತ್ತು 21ರಂದು ಆನ್‌ಲೈನ್ (ಝೂಮ್) ನಲ್ಲಿ ಬಿಡುಗಡೆಯಾಗುತ್ತಿವೆ.  ಈ ಎರಡು ಕಾರ್ಯಕ್ರಮಗಳು ಜನಶಕ್ತಿ ಮೀಡಿಯಾ ಫೇಸ್‌ಬುಕ್ ಮತ್ತು ಯೂಟ್ಯೂಬ್ ತಾಣಗಳಲ್ಲಿ ಲೈವ್ ಆಗಿ ಪ್ರಸಾರವಾಗಲಿವೆ.

ಜುಲೈ 20ರಂದು ಹಿರಿಯ ಮಾರ್ಕ್ಸ್‌ವಾದಿ ವಿದ್ವಾಂಸರಾದ ಪ್ರೊ. ಕೆ.ಕೆ.ತೆಕ್ಕೆಡೆತ್, ‘ಫ್ರೆಡೆರಿಕ್ ಎಂಗೆಲ್ಸ್’ ಪುಸ್ತಕ ಬಿಡುಗಡೆ ಮಾಡಿ “ವೈಜ್ಞಾನಿಕ ಸಮಾಜವಾದಕ್ಕೆ ಏಂಗೆಲ್ಸ್ ಕೊಡುಗೆ”  ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಡಾ.ಎಚ್.ಜಿ.ಜಯಲಕ್ಷ್ಮಿ ಅವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಡಾ.ಜಿ.ರಾಮಕೃಷ್ಣ ಅವರು ಲೇಖಕರ ಮಾತುಗಳನ್ನು ಆಡಲಿದ್ದಾರೆ.

ಜುಲೈ 21ರಂದು “ಜರ್ಮನ್ ಸಿದ್ಧಾಂತ’ದ ಪುಸ್ತಕ ಬಿಡುಗಡೆ ಮಾಡಿ ಪ್ರೊ.ರಾಜೇಂದ್ರ ಚೆನ್ನಿ ಅವರು ‘ಕರ್ನಾಟಕದ ಬೌದ್ಧಿಕ ಪರಂಪರೆ ಮತ್ತು ಸಂಕಥನಗಳಲ್ಲಿ ಭಾವನಾವಾದದ ಪ್ರಭಾವ’ ದ ಕುರಿತು ಸಂವಾದದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂವಾದದಲ್ಲಿ ಡಾ.ಮೀನಾಕ್ಷಿ ಬಾಳಿ ಮತ್ತು ಡಾ.ಪ್ರಕಾಶ್ ಕೆ. ಭಾಗವಹಿಸಲಿದ್ದಾರೆ. ಬಿ ಪೀರ್ ಬಾಷ ಅವರು ಪುಸ್ತಕ ಪರಿಚಯ ಮಾಡಲಿದ್ದಾರೆ. ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ ಅವರು ಅನುವಾದಕರ ಮಾತುಗಳನ್ನು ಆಡಲಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ವಿವರವಾದ ಆಹ್ವಾನ ಪತ್ರಿಕೆ ಇಲ್ಲಿದೆ.

ಜೊತೆಗೆ ರೂ. 1800 ಬೆಲೆಯ 6 ಪುಸ್ತಕಗಳ ಸೆಟ್  ಖರೀದಿಗೆ  ರೂ.1200 ವಿಶೇಷ ಪ್ರಕಟಣಾ-ಪೂರ್ವ ರಿಯಾಯಿತಿ ಕೂಪನು ಖರೀದಿಸುವ ಮೂಲಕ ಪಡೆಯಬಹುದು. ಈ ರಿಯಾಯಿತಿ ಕೂಪನುಗಳೂ ಪುಸ್ತಕಗಳೊಂದಿಗೆ ಬಿಡುಗಡೆಯಾಗಲಿವೆ. ಇವನ್ನು ಮಾಲಿಕೆಯ ಕೊನೆಯ ಪುಸ್ತಕದ ಬಿಡುಗಡೆ ದಿನಾಂಕದವರೆಗೆ ಖರೀದಿಸಬಹುದು.

ಇಲ್ಲಿ ಕೊಡಲಾಗಿರುವ ಪ್ರಕಟಣಾ-ಪೂರ್ವ ರಿಯಾಯಿತಿ ಕೂಪನಿನ ಹಿಂಭಾಗದ ಚಿತ್ರ ಇದರ ವಿವರಗಳನ್ನು ಕೊಡುತ್ತದೆ.

Donate Janashakthi Media

Leave a Reply

Your email address will not be published. Required fields are marked *