ನವದೆಹಲಿ: ರಾಜ್ಯಗಳಲ್ಲಿ ಕೇಂದ್ರ ಸರಕಾರವು ಜಿಎಸ್ಟಿ ಹಣವನ್ನು ಬಿಡುಗಡೆ ಮಾಡಿದ್ದು ಸಾಲದ ರೂಪದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ₹75,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಆದಾಯ ಕೊರತೆ ನೀಗಿಸಿಕೊಳ್ಳಲು ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಒಟ್ಟಾರೆಯಾಗಿ ಜಿಎಸ್ಟಿ ಹಣವಾಗಿ ಒಟ್ಟು ₹2.59 ಲಕ್ಷ ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಜಿಎಸ್ಟಿ ಪರಿಹಾರ ಹಣ ₹ 1 ಲಕ್ಷ ಕೋಟಿ ಹಾಗೂ ಸಾಲದ ರೂಪದಲ್ಲಿ ₹ 1.59 ಲಕ್ಷ ಕೋಟಿ ಹಣ ರಾಜ್ಯಗಳಿಗೆ ನೀಡಲಿದೆ. ಸಾಲದ ರೂಪದಲ್ಲಿ ಈಗ ಮೊದಲ ಕಂತಿನಂತೆ ₹75,000 ಕೋಟಿ ಹಣ ಸಾಲದ ರೂಪದಲ್ಲಿ ಬಿಡುಗಡೆ ಮಾಡಿದೆ.
ಇದನ್ನು ಓದಿ: ಜಿಎಸ್ಟಿ ಪರಿಹಾರ ಬದಲಿಗೆ ಕೇಂದ್ರದಿಂದ ಸಾಲ
ದೇಶದ ಪ್ರಮುಖ ತೆರಿಗೆ ವ್ಯಾಪ್ತಿಯು ಕೇಂದ್ರ ಸರಕಾರದ ಸುಪರ್ದಿಯಲ್ಲಿರುವುದರಿಂದ ದೊಡ್ಡ ಮೊತ್ತದ ಹಣ ಕೇಂದ್ರ ಸರಕಾರವೇ ರಾಜ್ಯಗಳಿಗೆ ನೀಡಬೇಕಿದೆ. ಆದರೆ, ಮೇ 28ರಂದು ನಡೆದ 43ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳ ಸಂಪನ್ಮೂಲಗಳ ಕ್ರೂಢೀಕರಣಕ್ಕಾಗಿ ₹1.59 ಲಕ್ಷ ಕೋಟಿ ಸಾಲ ಪಡೆದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲು ನಿರ್ಧರಿಸಿತ್ತು.
ಕೇಂದ್ರ ಸರ್ಕಾರ ಬಿಡುಗಡೆ ಸಾಲದ ರೂಪದ ₹ 75 ಸಾವಿರ ಕೋಟಿ ಹಣದಲ್ಲಿ ಕರ್ನಾಟಕಕ್ಕೆ ₹ 8542 ಕೋಟಿ ಮೊತ್ತ ಹಣಕಾಸು ಇಲಾಖೆಯಿಂದ ಬಿಡುಗಡೆಯಾಗಿದೆ. ಜಿಎಸ್ಟಿ ಪರಿಹಾರದ ಬದಲಾಗಿ ಸಾಲ ಸೌಲಭ್ಯದಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸು ಸಚಿವಾಲಯ ₹75 ಸಾವಿರ ಕೋಟಿ ಸಾಲ ಬಿಡುಗಡೆ ಮಾಡಿದೆ. ಸೆಸ್ ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಬಿಡುಗಡೆಯಾಗುವ ಸಾಮಾನ್ಯ ಜಿಎಸ್ಟಿ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ಪ್ರಕಟಿಸಿದೆ.
ಇದನ್ನು ಓದಿ: ಮೇ 28ಕ್ಕೆ 43ನೇ ಜಿಎಸ್ಟಿ ಕೌನ್ಸಿಲ್ ಸಭೆ ನಿಗದಿ – ನಿರ್ಮಲಾ ಸೀತಾರಾಮನ್
₹75,000 ಕೋಟಿ ಹಣವು ಕೇಂದ್ರ ಸರ್ಕಾರವು 5 ವರ್ಷದ ಸೆಕ್ಯೂರಿಟಿಯಾಗಿ ಸಾಲವನ್ನು ಪಡೆದಿದೆ. ಒಟ್ಟು ₹68,500 ಕೋಟಿ ಮತ್ತು 2 ವರ್ಷದ ಸೆಕ್ಯೂರಿಟಿಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ನೀಡಲಾಗಿದೆ.
ಎಲ್ಲಾ ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಹಾರ ಕೊರತೆಯ ಹಣವನ್ನು ನೀಗಿಸಿಕೊಳ್ಳಲು ಸಾಲ ಪಡೆಯುವ ಬಗ್ಗೆ ಒಪ್ಪಿಕೊಂಡಿವೆ. ಬಾಕಿ ಮೊತ್ತವನ್ನು 2021-22ರ ದ್ವಿತೀಯಾರ್ಧದಲ್ಲಿ ಸ್ಥಿರ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಜಿಎಸ್ಟಿ ಜಾರಿಯಾಗಿ ನಾಲ್ಕು ವರ್ಷ ಆಗಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಜಿಎಸ್ಟಿ ಪರಿಹಾರ ಕುರಿತು ಚರ್ಚೆ ನಡೆಯಲಿದೆ. ವಿಶೇಷ ಕಲಾಪದಲ್ಲಿ ಇದರ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.