ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಭಾವಿ ಜೆಡಿಎಸ್ನ ನಾಯಕ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೋಮುವಾರ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದಾರೆ. ಕೇವಲ ಕಾಣಿಸಿಕೊಂಡಿದ್ದು ಮಾತ್ರವಲ್ಲ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಆರ್ಎಸ್ಎಸ್ ನ ಕೇಂದ್ರ ಕಚೇರಿ ಕೇಶವ ಕುಂಜಕ್ಕೆ ಭೇಟಿ ನೀಡುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ.
ಹೊರಟ್ಟಿ ಅವರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎನ್ನೋದು ಸ್ಪಷ್ಟಗೊಂಡಿಲ್ಲ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿರೋದು ಮುಂದಿನ ದಿನಗಳಲ್ಲಿ ರಾಜಕೀಯ ವಲಸೆಗೆ ಏನಾದರೂ ಇದು ನಾಂದಿಯಾಗಲಿದೆಯೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ, ಜೆಡಿಎಸ್ ನಿಂದ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಸವರಾಜ ಹೊರಟ್ಟಿ ಸದ್ಯ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುದೀರ್ಘ ಕಾಲದಿಂದ ರಾಜಕೀಯ ಕ್ಷೇತ್ರದಲ್ಲಿರೋ ಹೊರಟ್ಟಿ ಅವರು ಹುಬ್ಬಳ್ಳಿಯಲ್ಲಿಯೇ ವಾಸಿಸುತ್ತಿದ್ದರೂ ಅಪ್ಪಿ – ತಪ್ಪಿಯೂ ಕೇಶವ ಕುಂಜ ಕಡೆ ಮುಖ ಮಾಡಿರಲಿಲ್ಲ. ಒಮ್ಮೆಯೂ ಅಲ್ಲಿಗೆ ಭೇಟಿ ನೀಡಿರಲಿಲ್ಲ. ಆದರೆ ಸೋಮವಾರ ಕೇಶವ ಕುಂಜದಲ್ಲಿ ದಿಢೀರ್ ಪ್ರತ್ಯಕ್ಷರಾಗಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಕೇವಲ ಬಿಜೆಪಿ ನಾಯಕರಲ್ಲದೆ ಆರ್ಎಸ್ಎಸ್ ನ ಕೆಲ ಮುಖಂಡರು ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವ ಪರಿಷತ್ ಸಭಾಪತಿಗಳ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಜೆಡಿಎಸ್ ಪಕ್ಷದಲ್ಲಿಯೇ ಇದ್ದರೂ ಹೊರಟ್ಟಿ ಅವರು, ಹಿರಿಯ ನಾಯಕರ ವರ್ತನೆಗೆ ಆಗಾಗ ಅಪಸ್ವರ ಎತ್ತುತ್ತಲೇ ಬಂದಿದ್ದಾರೆ. ಮತ್ತೊಂದೆಡೆ ಬೇರೆ ಪಕ್ಷಗಳ ಮುಖಂಡರ ಜೊತೆ ಉತ್ತಮ ಬಾಂಧವ್ಯವನ್ನೂ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೋಗೋ ಮುನ್ಸೂಚನೆ ನೀಡಿದ್ದಾರಾ ಅನ್ನೋ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ.
ಅಶ್ವತ್ಥ ನಾರಾಯಣ ಬಂದಿದ್ದರಿಂದ ಅವರೊಂದಿಗೆ ಹೋಗಿದ್ದುದಾಗಿ ಹೊರಟ್ಟಿ ಸಮಜಾಯಿಷಿ ನೀಡಿದ್ದಾರೆ. ಶಾಸಕ ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಆರ್ಎಸ್ಎಸ್ ಪ್ರಮುಖ ಶ್ರೀಧರ್ ನಾಡಿಗೇರ, ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು. ಡಿಸಿಎಂ ಅಶ್ವತ್ಥ ನಾರಾಯಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರೊಂದಿಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಹೊರಟ್ಟಿ ಭೇಟಿ ಕುಶಲೋಪರಿ ಮಾತುಗಳಿಗಷ್ಟೇ ಸೀಮಿತವಾಗಿತ್ತು, ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಬಿಜೆಪಿ ಮುಖಂಡರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಎಂದೂ ಕೇಶವ ಕುಂಜ ಕಡೆ ಮುಖ ಮಾಡದಿದ್ದ ಹೊರಟ್ಟಿ ಅಲ್ಲಿಗೆ ಭೇಟಿ ನೀಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರ ಜೊತೆ ಕುಳಿತಿರೋದು ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅಂದಹಾಗೆ ಇವರು ವಿಧಾನ ಪರಿಷತ್ ಸಭಾಪತಿಯಾಗಲು ಬಿಜೆಪಿಯೂ ಮುಖ್ಯ ಕಾರಣ ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ.
ಇದನ್ನೂ ಓದಿ : ಜೆಡಿಎಸ್ ಗೆ ಪರಿಷತ್ ಸಭಾಪತಿ ಸ್ಥಾನ ಬಿಟ್ಟುಕೊಟ್ಟ ಬಿಜೆಪಿ!?
ರಾಜಕೀಯ ನೆಲ ಬದ್ರಗೊಳಿಸಲು ಬಿಜೆಪಿ ಸೇರಬಹುದಾ? : ಬಸವರಾಜ ಹೊರಟ್ಟಿ ಮುಂಬೈ ಕರ್ನಾಟಕದ ಪ್ರಭಾವಿ ನಾಯಕ. ಇತ್ತೀಚಿನ ವರ್ಷಗಳಲ್ಲಿ ಈ ಬಾಗದಲ್ಲಿ ಜೆಡಿಎಸ್ ಪ್ರಭಾವ ಕುಗ್ಗತೊಡಗಿದೆ. ಹಾಗಾಗಿ ರಾಜಕೀಯ ನೆಲೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಿಜೆಪಿಗೆ ಹೋಗುವ ಸಾಧ್ಯತೆಗಳಿವೆ ಎಂಬ ಲೆಕ್ಕಾಚಾರಗಳಿವೆ. ಬಸವರಾಜ ಹೊರಟ್ಟಿಯ ಶಿಷ್ಯ, ಜೆಡಿಎಸ್ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಈಗಾಗಲೆ ಬಿಜೆಪಿಗೆ ಸೇರಿದ್ದಾರೆ. ಹೊರಟ್ಟಿಯವರು ರಾಜಣ್ಣಗೆ ಬಿಜೆಪಿ ಸೇರಲು ಸೂಚಿಸಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ. ರಾಜಣ್ಣ ಈ ಹಿಂದೆ ಮೂರು ಬಾರಿ ಜೆಡಿಎಸ್ ನಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಚಿವ ಜಗದೀಶ್ ಶೆಟ್ಟರ್ ವಿರುದ್ದ ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆಮಾಡಿದ್ದರು. ಈಗ ಇಷ್ಟರಲ್ಲೆ ಮಹಾನಗರ ಪಾಲಿಕೆ, ತಾಲ್ಲೂಕ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲಿದೆ. ಹಾಗಾಗಿ ತಮ್ಮ ಬಲವನ್ನು ಈ ಚುನಾವಣೆಗಳ ಮೂಲಕ ಹೆಚ್ಚಿಸಿಕೊಳ್ಳಲು ಹೊರಟ್ಟಿಯವರು ತಂತ್ರ ಹೂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಹೊರಟ್ಟಿಯವರ ಶಿಷ್ಯವೃಂದ ಈಗಾಗಲೆ ಬಿಜೆಪಿಯ ಪಡಸಾಲೆಯಲ್ಲಿ ಧ್ವಜ ಕಟ್ಟುತ್ತಿದ್ದಾರೆ. ಹೊರಟ್ಟಿಯವರು ಹೆಸರಿಗಷ್ಟೆ ಜೆಡಿಎಸ್ ನಲ್ಲಿದ್ದರೂ ದೇಹ ಮತ್ತು ಮೆದುಳು ಬಿಜೆಪಿ ವಿಚಾರಗಳಿಗೆ ಹತ್ತಿರವಾಗುತ್ತಿರುವುದು ನಿಜ ಎಂದು ಅವರ ಆಪ್ತವಲಯದಲ್ಲಿ ಕೇಳಿ ಬರುತ್ತಿದೆ.