ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರನ್ನು ಭೇಟಿ ಮಾಡದ ಸರಕಾರ: ಡಿ.ಕೆ. ಶಿವಕುಮಾರ್

ಬೆಂಗಳೂರು: ‘ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಇಡೀ ರಾಜ್ಯ ಸುತ್ತಿ ಜನರ ಸಂಕಷ್ಟ ಆಲಿಸಬೇಕು. ಇಡೀ ರಾಜ್ಯ ಆಗದಿದ್ದರೂ ಕನಿಷ್ಟ ಪಕ್ಷ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ಕಷ್ಟ ಕೇಳಿʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನು ನಡೆಸಿದ ಡಿ ಕೆ ಶಿವಕುಮಾರ್‌ ಅವರು  ‘ನಮ್ಮ ಧ್ವನಿ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ನಮ್ಮ ಜನರ ನೋವು ಅದಕ್ಕೆ ಕಾಣುತ್ತಿಲ್ಲ. ನಮಗೆ ಹಾಗೂ ನ್ಯಾಯಾಲಯಗಳಿಗೆ ಕಾಣುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯ ನಿರಂತರವಾಗಿ ಜನಪರ ಆದೇಶ ನೀಡುತ್ತಲೇʼ ಇದೆ ಎಂದು ವಿವರಿಸಿದರು.

ಇದನ್ನು ಓದಿ: ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ಎ ಮಂಜು : ರೆಡ್‌ ಸಿಗ್ನಲ್‌ ನೀಡಿದ ಸಿದ್ಧರಾಮಯ್ಯ

ನೆನ್ನೆಯೂ ಸಹ ಸುಪ್ರೀಂ ಕೋರ್ಟ್ ಕೋವಿಡ್‌ನಿಂದ ಮೃತರಾದ ಕುಟುಂಬದವರಿಗೆ ಪರಿಹಾರ ವಿಚಾರವಾಗಿ ಮಾರ್ಗಸೂಚಿ ಹೊರಡಿಸಲು ಆರು ವಾರಗಳ ಸಮಯಾವಕಾಶ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ವರದಿಗಳನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿ ಜನರ ಪರವಾಗಿ ನಿಂತಿದೆ. ಅದಕ್ಕಾಗಿ ರಾಜ್ಯದ ಜನರ ಪರವಾಗಿ ಮಾಧ್ಯಮಗಳಿಗೆ ಸಲ್ಲಿಸುತ್ತೇನೆ ಎಂದರು.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ದುರಂತದಲ್ಲಿ 36 ಜನ ಕೋವಿಡ್‌ ಸೋಂಕಿತರು ಸತ್ತಿದ್ದರೂ ಸರ್ಕಾರ 24 ಕುಟುಂಬಗಳಿಗೆ ಮಾತ್ರ ಪರಿಹಾರ ಕೊಟ್ಟಿದೆ. ಈ ಘಟನೆಗೆ ಇದುವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ನೀವು ತಪ್ಪು ಮಾಡಿಲ್ಲ ಅಂದಮೇಲೆ ನೀವ್ಯಾಕೆ ಜನರ ಬಳಿ ಹೋಗಿ ಅವರನ್ನು ಮಾತನಾಡಿಸುತ್ತಿಲ್ಲ. ಅವರ ಗೋಳು ಕೇಳದಿದ್ದ ಮೇಲೆ ಈ ಸರ್ಕಾರಕ್ಕೆ ಯಾಕಿರಬೇಕು? ಮುಖ್ಯಮಂತ್ರಿಗಳೇ ಹೋಗಬೇಕು ಅಂತಾ ಇಲ್ಲ, ಯಾರಾದರೂ ಮಂತ್ರಿ ಹೋಗಬಹುದಲ್ಲ. ಯಾಕೆ ಆ ಕೆಲಸ ಆಗಿಲ್ಲ? ಎಂದು ಸರಕಾರಕ್ಕೆ ಪ್ರಶ್ನೆ ಮಾಡಿದರು.

ನ್ಯಾಯಾಲಯವೇ ಈ ಸಾವುಗಳು ಆಕ್ಸಿಜನ್ ಕೊರತೆಯಿಂದ ಆಗಿವೆ ಎಂದ ಮೇಲೆ ಇವು ಸಹಜ ಸಾವೋ, ಕೊಲೆಯೋ ನೀವೇ ನಿರ್ಧರಿಸಿ. ಅಲ್ಲಿ ಆಕ್ಸಿಜನ್ ಕೊರತೆ ಇದೆ ಅಂತ ಅಧಿಕಾರಿಗಳಿಂದ ಮಂತ್ರಿಗಳವರೆಗೂ ಎಲ್ಲರಿಗೂ ಮೊದಲೇ ಗೊತ್ತಿತ್ತು. ಆದರೂ ಆಕ್ಸಿಜನ್ ಪೂರೈಸಲು ಕ್ರಮ ತೆಗೆದುಕೊಳ್ಳಲಿಲ್ಲ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸತ್ತವರಿಗೆ ಪರಿಹಾರ ನೀಡಬೇಕು ಅಂತಾ ಕೋರ್ಟ್ ಹಾಗೂ ನಾವು ಒತ್ತಾಯ ಮಾಡಿದ್ದೇವೆ. ನಾನು ಹಾಗೂ ನಮ್ಮ ನಾಯಕರು ಚಾಮರಾಜನಗರಕ್ಕೆ ಹೋಗಿ ಅವರಿಗೆ ತಲಾ 1 ಲಕ್ಷ ರುಪಾಯಿ ಪರಿಹಾರವನ್ನು ಕಾಂಗ್ರೆಸ್‌ ಪಕ್ಷದ ವತಿಯಿಂದ ಕೊಟ್ಟಿದ್ದೇವೆ. ಅಲ್ಲದೆ, ಸುಮೋಟೋ ಕೇಸ್ ದಾಖಲಿಸಿ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕೋವಿಡ್‌ ಸಾವಿನ ಬಗ್ಗೆಯೂ ಸರಕಾರದ ಮಟ್ಟದಲ್ಲಿ ಗೊಂದಲಗಳು ಇವೆ. ಸರ್ಕಾರದ  ಜಾಲತಾಣದಲ್ಲಿ ಜೂನ್ 13 ರವರೆಗೂ 3,27,985 ಜನ ಕೋವಿಡ್ ನಿಂದ ಸತ್ತಿದ್ದಾರೆ ಎಂದು ಇದ್ದರೆ, ಸರಕಾರ ಹೇಳುತ್ತಿರೋದು 30 ಸಾವಿರ ಮಾತ್ರ. ಹಾಗಾದರೆ ಉಳಿದವರಿಗೆ ಪರಿಹಾರ ನೀಡುವವರು ಯಾರು? ಪರಿಹಾರದಿಂದ ಅವರು ಬದುಕುವುದಿಲ್ಲ ಎನ್ನುವುದು ಬೇರೆ ಮಾತು. ಆದರೆ ನಿಮ್ಮ ಜತೆ ಸರಕಾರ ಇದೆ ಅಂತಾ ಧೈರ್ಯ ಹೇಳಬಹುದಲ್ಲವೇ? ಎಂದು ಡಿ ಕೆ ಶಿವಕುಮಾರ್‌ ಅವರು ಆರೋಪ ಮಾಡಿದರು.

ಇದನ್ನು ಓದಿ: ಜೀವಹಿಂಡುವ ಬೆಲೆಯೇರಿಕೆ

ಸರಕಾರ ಆರ್ಥಿಕ ಪ್ಯಾಕೇಜ್‌ ಬಗ್ಗೆ ಪ್ರಸ್ತಾಪಿಸಿದ ಡಿ ಕೆ ಶಿವಕುಮಾರ್‌ ಅವರು ʻʻನೀವು ಕಾರ್ಮಿಕರಿಗೆ 2 ಸಾವಿರ ಕೊಟ್ಟ ಮಾತ್ರಕ್ಕೆ ಅವರ ಜೀವನ ಸುಧಾರಿಸುತ್ತದೆಯಾ? ಅರ್ಹರಿಗೆ ಪರಿಹಾರ ತಲುಪಿದೆಯಾ? ರೈತರಿಗೆ ಹೆಕ್ಟೇರ್ ಗೆ 10 ಸಾವಿರ ಎಂದರೆ ಅರ್ಧ ಎಕರೆ, ಸಣ್ಣ ಜಮೀನು ಇರುವವರ ಪರಿಸ್ಥಿತಿ ಏನು? ಕೂಲಿ ಕಾರ್ಮಿಕ ಪರಿಹಾರ ಪಡೆಯಲು ಅಧಿಕಾರಿಯಿಂದ ಪ್ರಮಾಣ ಪತ್ರ ಬೇಕಂತೆ. ಅದನ್ನು ಪಡೆಯಲು ಕೂಲಿ ಕಾರ್ಮಿಕ ಲಂಚ ಬಲಿಯಾಗುತ್ತಾನೆ ಎಂದು ಆರೋಪಿಸಿದರು.

ಕೋವಿಡ್ ಸಂತ್ರಸ್ತರು, ರೈತರು, ಕಾರ್ಮಿಕರನ್ನು ಭೇಟಿ ಮಾಡಿ, ಅವರಿಗೆ ಕಷ್ಟ ಆಲಿಸಿ, ಪರಿಹಾರ ದೊರಕಿಸಿಕೊಡಲು ನೆರವಾಗುವಂತೆ ನಮ್ಮ ನಾಯಕರು, ಕಾರ್ಯಕರ್ತರಿಗೆ ಮನವಿ ಮಾಡಿದ್ದೇನೆ. ಕೋವಿಡ್ ಸಂತ್ರಸ್ತರ ಪರವಾಗಿ ನಾವು ಹೋರಾಟ ನಡೆಸಲು ಕಾಂಗ್ರೆಸ್‌ ಪಕ್ಷವು ಕರೆ ನೀಡಿದೆ. ವಿರೋಧ ಪಕ್ಷದ ಜವಾಬ್ದಾರಿ ಅದು. ಇದಕ್ಕಾಗಿ ನಾವು ಒಂದು ತಿಂಗಳ ಜನ ಸಂಪರ್ಕ ಅಭಿಯಾನ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಾವಿನ ಲೆಕ್ಕದಲ್ಲೂ ತಪ್ಪು ಮಾಹಿತಿ: ಈಶ್ವರ್ ಖಂಡ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು ‘ಸರ್ಕಾರ ಸಾವಿನಲ್ಲಿ ಸುಳ್ಳು ಲೆಕ್ಕ ಕೊಡುತ್ತಿದೆ. ಬೀದರ್ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ 557 ಜನ ಸತ್ತಿದ್ದಾರೆ. ಆ ಪಟ್ಟಿ ನನ್ನ ಬಳಿ ಇದೆ. ಆದರೆ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ 141 ಜನ ಸತ್ತಿದ್ದಾರೆ ಎಂದು ಸುಳ್ಳು ಲೆಕ್ಕ ಕೊಟ್ಟಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತವರು ಹೊರತುಪಡಿಸಿ, ಖಾಸಗಿ ಆಸ್ಪತ್ರೆ ಹಾಗೂ ಮನೆಯಲ್ಲಿ ಒಂದು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇದು ಕೇವಲ ಬೀದರ್ ಜಿಲ್ಲೆಯ ಲೆಕ್ಕ. ಇಡೀ ರಾಜ್ಯದ ಲೆಕ್ಕ ಪರಿಗಣಿಸಿದರೆ, ನಮ್ಮ ಅಧ್ಯಕ್ಷರು ಹೇಳಿದಂತೆ 3 ಲಕ್ಷಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದರು.

Donate Janashakthi Media

Leave a Reply

Your email address will not be published. Required fields are marked *