ಹಾನಗಲ್ ಉಪಚುನಾವಣೆ ಅಖಾಡಕ್ಕಿಳಿಯಲು ಸಜ್ಜಾದ ವಿಜಯೇಂದ್ರ..!?

ಬೆಂಗಳೂರು : ಬಿಜೆಪಿ ರಾಜ್ಯ  ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಮಾಜಿ ಸಚಿವ ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ತೆರವಾಗಿರುವ ಈ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರರಾಗಿರುವ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ತಮ್ಮ ತಂದೆಯ ಅಧಿಕಾರಾವಧಿಯಲ್ಲೇ ರಾಜಕೀಯ ಭವಿಷ್ಯ ಕಲ್ಪಿಸಿಕೊಳ್ಳಲು ವಿಜಯೇಂದ್ರ ಮುಂದಾಗಿದ್ದಾರೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.  ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೀರಶೈವ ಲಿಂಗಾಯತ ಯುವ ಬ್ರಿಗೇಡ್‍ನಲ್ಲಿ ವಿಜಯೇಂದ್ರ ಅವರು ಕಾರ್ಯಕರ್ತರು, ಮುಖಂಡರು ಮತ್ತು ಹಿತೈಷಿಗಳ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹಾನಗಲ್ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ನನ್ನ ಮೇಲೆ ಒತ್ತಡ ಹಾಕಿದ್ದಾರೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸ್ಪರ್ಧಿಸಬೇಕೆ, ಬೇಡವೆ ಎಂಬುದನ್ನು ತಿಳಿಸುವಂತೆ ಮನವಿ ಮಾಡಿದ್ದಾರೆ.  ಈ ಮೂಲಕ ಹಾನಗಲ್‍ಗೆ ಪರೋಕ್ಷವಾಗಿ ನಾನೇ ಅಭ್ಯರ್ಥಿ ಎಂಬ ಸುಳಿವು ನೀಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿರುವ ಈ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದೆ. ಅದರಲ್ಲೂ ಸಿಎಂ ಯಡಿಯೂರಪ್ಪ ಜಿಲ್ಲೆಯಲ್ಲಿ ತಮ್ಮದೇ ಆದ ಹಿಡಿತ ಸಾಧಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಬ್ಬರದ ನಡುವೆಯೂ ಏಳು ಕ್ಷೇತ್ರಗಳ ಪೈಕಿ ಹಾವೇರಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಮಲ ಅರಳಿತ್ತು. ನಂತರ ನಡೆದ ಹಿರೇಕೆರೂರು ಮತ್ತು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದ್ದು, ಈಗ ಇಡೀ ಜಿಲ್ಲೆಯೇ ಕೇಸರಿಮಯವಾಗಿದೆ.

ಇದನ್ನೂ ಓದಿ : ನಾಯಕತ್ವ ಬದಲಾವಣೆ : ಸಿಎಂ ವಿರೋಧಿಗಳನ್ನು ಒಗ್ಗೂಡಿಸುತ್ತಿದ್ದಾರಾ ಸಚಿವ ಯೋಗೇಶ್ವರ್ ?

ಈ ಹಿಂದೆ 2018ರಲ್ಲೇ ವಿಜಯೇಂದ್ರ ವರುಣಾದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಇತ್ತೀಚೆಗೆ ನಡೆದ ಬಸವ ಕಲ್ಯಾಣದಿಂದಲೂ ಸ್ಪರ್ಧಿಸಲಿದ್ದಾರೆಂಬ ವದಂತಿ ಇತ್ತು. ಈಗ ಹಾನಗಲ್‍ನಿಂದ ಅವರ ಹೆಸರು ಕೇಳಿಬಂದಿದೆ. ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಬಿಜೆಪಿಗಿರುವುದರಿಂದ ವಿಜಯೇಂದ್ರ ಸ್ಪರ್ಧೆಗೆ ಪಕ್ಷದೊಳಗೆ ಅಂತಹ ವಿರೋಧವೂ ವ್ಯಕ್ತವಾಗುವ ಸಾಧ್ಯತೆ ಕಡಿಮೆ. ಹಾವೇರಿಯಿಂದ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲಬಹುದೆಂಬುದು ಬಿಎಸ್‍ವೈ ಲೆಕ್ಕಾಚಾರವಾಗಿದೆ. ತಮ್ಮ ಅಧಿಕಾರದ ಸಂದರ್ಭದಲ್ಲೇ ಪುತ್ರನಿಗೆ ಗಟ್ಟಿ ನೆಲೆ ಒದಗಿಸಬೇಕೆಂಬ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಕೆಲಸ ಆರಂಭಿಸುವಂತೆಯೂ ವಿಜಯೇಂದ್ರಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಹಾನಗಲ್ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‍ನಿಂದ ಮಾಜಿ ಸಚಿವ ಮನೋಹರ್ ತಹಸೀಲ್ದಾರ್, ಕಾಂಗ್ರೆಸ್ ಯುವ ಮುಖಂಡ ಶ್ರೀನಿವಾಸ್ ಮಾನೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಅವರಿಗೆ ಪ್ರಬಲ ಸ್ಪರ್ಧೆ ನೀಡಲು ವಿಜಯೇಂದ್ರ ಸರಿಯಾದ ಅಭ್ಯರ್ಥಿ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ನಿರಂತರ ಸುದ್ದಿಗಳಿಗಾಗಿ : ನಮ್ಮ ವಾಟ್ಸಪ್‌ ಗುಂಪಿಗೆ ಸೇರಿ ಕೊಳ್ಳಿ

Donate Janashakthi Media

Leave a Reply

Your email address will not be published. Required fields are marked *