ಟಿ.ಎಲ್. ಕೃಷ್ಣೇಗೌಡ
ಕೋವಿಡ್ ಮೂರನೇ ಅಲೆ ಭಾರತಕ್ಕೆ ಅಪ್ಪಳಿಸಲು ಸಜ್ಜಾಗಿ ನಿಂತಿದೆ. ‘ಡೆಲ್ಟಾ+’ಹೆಸರಿನಲ್ಲಿ ರೂಪಾಂತರಗೊಂಡ ಕರೋನಾ ವೈರಸ್ ಹರಡಿಕೊಳ್ಳಲು ಹಾತೊರೆಯುತ್ತಿದೆ. ಕರೋನಾ ವೈರಸ್ ಹರಡದಂತೆ ಮತ್ತು ಮತ್ತಷ್ಟು ಅವತಾರಗಳನ್ನು ತಾಳಿ ಮಾರಕವಾಗದಂತೆ ತಡೆಯಲು ಲಭ್ಯವಿರುವ ಸಾಧನಗಳೆಂದರೆ ವಿವಿಧ ಕಂಪನಿಗಳ ತರಾವರಿ ಲಸಿಕೆಗಳು.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳುತ್ತಾರೆ ‘ಡೆಲ್ಟಾ+ ವೈರಸ್ ತುಂಬಾ ವೇಗವಾಗಿ ಹರಡುತ್ತದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಈಗಿರುವ ಲಸಿಕೆಗಳು ರೋಗ ಬರದಂತೆ ತಡೆಯದಿದ್ದರೂ ಪ್ರಾಣಕ್ಕೆ ಅಪಾಯವಿಲ್ಲದಂತೆ ಮಾಡುತ್ತವೆ. ಹಾಗಾಗಿ ಲಸಿಕೆ ನೀಡುವುದನ್ನು ವ್ಯಾಪಕಗೊಳಿಸಬೇಕು’ ಎಂದು. ಆದರೆ ಈ ಲಸಿಕೆಗಳು ಭಾರತದ, ಆಫ್ರಿಕಾದ, ಲ್ಯಾಟಿನ್ ಅಮೆರಿಕದ ಎಲ್ಲಾ ಜನರಿಗೂ ಲಭ್ಯವಾಗುವುದು ಯಾವಾಗ ಎನ್ನುವ ಪ್ರಶ್ನೆ ಮಾತ್ರ ಉತ್ತರವೇ ಹೊಳೆಯದ ಯಕ್ಷ ಪ್ರಶ್ನೆಯಾಗಿದೆ. ಲಸಿಕೆ ಕಾರ್ಯಕ್ರಮ ಆರಂಭವಾಗಿ ಆರು ತಿಂಗಳಾದರೂ ಭಾರತದಲ್ಲಿ ಇದುವರೆಗೆ ಶೇಕಡ5 ರಷ್ಟು ಜನರಿಗೆ ಮಾತ್ರ ಎರಡೂ ಡೋಸ್ ಲಸಿಕೆ ನೀಡಲಾಗಿದೆ.
ವಿವಿಧ ದೇಶಗಳ ಸರ್ಕಾರಗಳು ನೀಡಿರುವ ಅಂಕಿಅಂಶಗಳ ಪ್ರಕಾರ ಮೂವತ್ತು ಲಕ್ಷ ಜನರು ಕೋವಿಡ್ -19 ಕ್ಕೆ ಬಲಿಯಾಗಿದ್ದರೆ, ‘ದಿ ಎಕನಾಮಿಸ್ಟ್’ ಪತ್ರಿಕೆಯ ಪ್ರಕಾರ ಕೊರೊನಾಗೆ ಬಲಿಯಾದವರ ಸಂಖ್ಯೆ ಒಂದು ಕೋಟಿಗೂ ಹೆಚ್ಚು, ಭಾರತದಲ್ಲೂ ನಲವತ್ತು ಲಕ್ಷಕ್ಕೂ ಹೆಚ್ಚಿನ ಜನರು ಕೊರೊನಾಗೆ ಬಲಿಯಾಗಿದ್ದಾರೆ. ಹೀಗಿರುವಾಗ ಯಾವುದೇ ಒಂದು ನಾಗರಿಕ ವ್ಯವಸ್ಥೆಯ ಜವಾಬ್ದಾರಿ ತನ್ನ ಜನತೆಯ ಪ್ರಾಣ ಕಾಪಾಡಿಕೊಳ್ಳಲು ಸಮರೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿಯುವುದು. ಆದರೆ ಬೃಹತ್ ಕಾರ್ಪೊರೇಟ್ ಔಷಧ ಕಂಪನಿಗಳು ಮತ್ತು ಅವುಗಳ ಬೆನ್ನ ಹಿಂದೆ ನಿಂತಿರುವ ಶ್ರೀಮಂತ ದೇಶಗಳು “ಲಾಭವೆಂಬ ಮೀನು ಹಿಡಿಯಲು ಬಡ ದೇಶಗಳ ಮತ್ತು ತಮ್ಮದೇ ದೇಶದ ಬಡವರ ಜೀವವನ್ನು ಗಾಳಕ್ಕೆ ಸಿಕ್ಕಿಸಿಕೊಳ್ಳುವ ಎರೆಹುಳುವಿನಂತೆ” ಬಳಸಿಕೊಳ್ಳುತ್ತಿದ್ದಾರೆ.
ಇದನ್ನು ಓದಿ: ಕೋವಿಡ್-19: ಲಸಿಕೆಯೇ ಅಂತಿಮ ಅಸ್ತ್ರ
‘ಎಲ್ಲರಿಗೂ ಲಸಿಕೆ ನೀಡುವ ವರೆಗೆ ಯಾರೂ ಸುರಕ್ಷಿತ ಅಲ್ಲ’ ಎಂಬುದು ಗೊತ್ತಿದ್ದರೂ ಇದುವರೆಗೆ ಪೂರೈಕೆ ಆಗಿರುವ ಲಸಿಕೆಯಲ್ಲಿ ಶೇಕಡ 75 ರಷ್ಟನ್ನು ಅಮೆರಿಕಾ ಹಾಗೂ ಯೂರೋಪಿನ ದೇಶಗಳು ಸೇರಿದಂತೆ ಹತ್ತು ಶ್ರೀಮಂತ ದೇಶಗಳು ಚಾಚಿಕೊಂಡಿವೆ. ಶೇಕಡ 0.3 ರಷ್ಟು ಮಾತ್ರ ಕಡಿಮೆ ಆದಾಯದ ದೇಶಗಳಿಗೆ ಸಿಕ್ಕಿದ್ದರೆ, ಇಡೀಆಫ್ರಿಕಾ ಖಂಡದ ಜನರಿಗೆ ದಕ್ಕಿರುವ ಲಸಿಕೆ ಶೇಕಡ 01 ಮಾತ್ರ. ಮುಂದುವರಿದ ಬಂಡವಾಳಶಾಹಿ ದೇಶಗಳು ಈಗಾಗಲೇ ಉತ್ಪಾದನೆ ಆಗಿರುವ ಲಸಿಕೆಯಲ್ಲಿ ಬಹುತೇಕ ಭಾಗವನ್ನು ಕೊಂಡು ತಮ್ಮ ಉಗ್ರಾಣಗಳಲ್ಲಿ ತುಂಬಿಕೊಂಡಿವೆ ಮತ್ತು ಮುಂದೆ ಉತ್ಪಾದನೆಯಾಗುವ ಲಸಿಕೆಯನ್ನು ಕೂಡ ಮುಂಗಡವಾಗಿ ಕಾದಿರಿಸಿಕೊಂಡಿವೆ. ಉದಾಹರಣೆಗೆ ಕೇವಲ 68 ದಶಲಕ್ಷ ಜನಸಂಖ್ಯೆ ಹೊಂದಿರುವ ಬ್ರಿಟನ್ 500 ದಶಲಕ್ಷ ಡೋಸ್ ಲಸಿಕೆಯನ್ನು ಸಂಗ್ರಹಿಸಿ ಇಟ್ಟುಕೊಂಡಿದೆ. ಆ ದೇಶದ ಎಲ್ಲಾ ಜನಗಳಿಗೆ ಎರಡೂ ಡೋಸ್ ಲಸಿಕೆ ನೀಡಿದರೂ ಇಂಗ್ಲೆಂಡಿಗೆ ಬೇಕಿರುವುದು ಕೇವಲ 136 ದಶಲಕ್ಷ ಡೋಸ್ಗಳು. ಅಂದರೆ ಇನ್ನೂ 364 ದಶಲಕ್ಷ ಡೋಸ್ಗಳನ್ನು ತನ್ನ ಗುಡಾಣದಲ್ಲಿಟ್ಟುಕೊಂಡಿರುವುದು ಯಾವ ಕಾರಣಕ್ಕೆ ಎಂಬುದು ಸ್ಪಷ್ಟವಾಗಿಲ್ಲ. ಅದೇ ರೀತಿ ಅಮೆರಿಕ ಕೂಡ ಹತ್ತಾರು ದಶಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ಗುಡ್ಡೆ ಹಾಕಿಕೊಂಡು ಕುಳಿತಿದೆ. ಅಮೆರಿಕದ ಎಲ್ಲಾ ಜನರಿಗೆ ಲಸಿಕೆ ನೀಡುವ ವರೆಗೆ ಬೇರಾರಿಗೂ ಲಸಿಕೆ ಇಲ್ಲ ಎಂಬ ಅಮೆರಿಕದ ಧೋರಣೆ ಹಿಂದುಳಿದ ಆರ್ಥಿಕತೆಯ, ಬಡ ದೇಶಗಳಿಗೆ ಲಸಿಕೆ ರಪ್ತು ಮಾಡಲು ತಡೆಯುಂಟು ಮಾಡಿದೆ. ಇಂಗ್ಲೆಂಡಿನಲ್ಲಿ ಎರಡನೇ ಬಾರಿಗೆ ಲಸಿಕೆ ನೀಡುವ ಅಗತ್ಯಕ್ಕೆ ಬೇಕೇನೋ ಎಂದು ಭಾವಿಸಿದರೂ, ಮುಂದೆ ಉತ್ಪಾದನೆ ಆಗುವ ಲಸಿಕೆ ಅಥವಾ ರೂಪಾಂತರ ಹೊಂದಿದ ವೈರಾಣುವಿನ ಎದುರು ಈಗಿನ ಲಸಿಕೆಗಳು ಪರಿಣಾಮಕಾರಿಯೇ? ಎಂಬುದನ್ನು ಯೋಚಿಸಿದರೆ “ಬೀದಿಯಲ್ಲಿ ಜನರು ಹಸಿದು ಸಾಯುತ್ತಿರುವಾಗ ಬೆಳೆಯನ್ನೆಲ್ಲಾ ಕೊಯ್ಲು ಮಾಡಿ ಕಣಜ ತುಂಬಿಕೊಂಡ ಪಾಳೇಗಾರನಂತೆ” ಶ್ರೀಮಂತ ದೇಶಗಳು ವರ್ತಿಸುತ್ತಿವೆ. ಇದನ್ನು ನೋಡಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೋಸ್ “ಇದೊಂದು ಹಗರಣಕೋರ ಅಸಮಾನತೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ. ನವ ಉದಾರೀಕರಣದ ಕಾಳ ಸಂತೆಯಲ್ಲಿ ‘ಬಡವನಿಗೆ ಸಾವ ಕೊಡಬ್ಯಾಡೋ ಸುಡಲಿಕ್ಕೆ ಸೌದಿಲ್ಲ” ಎನ್ನುವ ವಿಷಾದಕರ ಸನ್ನಿವೇಶ ಸೃಷ್ಟಿಯಾಗಿದೆ. ಯೂರೋಪಿನ, ಬಿಳಿಯರ, ಶ್ರೀಮಂತರ ಜೀವ ಅಮೂಲ್ಯವಾದರೆ ಏಷ್ಯಾದ, ಆಫ್ರಿಕಾದ, ಲ್ಯಾಟಿನ್ ಅಮೆರಿಕ ಕರಿಯರ, ದಲಿತರ, ಬಡವರ ಜೀವ ಕಾಲ ಕಸವಾಗಿದೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ “ಶ್ರೀಮಂತ ದೇಶಗಳು ಮತ್ತು ಪ್ರದೇಶಗಳು, ಬಡ ಮತ್ತು ಕಡಿಮೆ ಆದಾಯದ ದೇಶಗಳಿಗಿಂತ 30 ಪಟ್ಟು ಹೆಚ್ಚಿನ ವೇಗದಲ್ಲಿ ಲಸಿಕೆ ಪಡೆದುಕೊಳ್ಳತ್ತಿವೆ. ಲಸಿಕೆ ನೀಡಿಕೆಯಲ್ಲಿನ ಈ ಕಂದರ ಅನ್ಯಾಯದ್ದು ಮಾತ್ರವಲ್ಲ ಯಾರಿಗೂ ಸುರಕ್ಷಿತ ಕೂಡ ಅಲ್ಲ” ಎಂದು ಹೇಳಿದ್ದಾರೆ.
ಲಸಿಕೆ ಕಾರ್ಯಕ್ರಮದಲ್ಲಿ ‘ವರ್ಣಬೇಧ’ನೀತಿ ಅನುಸರಿಸಲಾಗುತ್ತಿದೆ. ಇಂತಹ ಅಮಾನವೀಯ ಕೆಲಸಕ್ಕೆ ಕಾರಣ ಲಾಭಕೋರ ಬಲಾಢ್ಯ, ಕಾರ್ಪೊರೇಟ್ ಔಷಧ ಕಂಪನಿಗಳು ಮತ್ತು ಆ ಕಂಪನಿಗಳಿಗೆ ಹಿಮ್ಮೇಳ ನುಡಿಸುತ್ತಿರುವ ಅಮೆರಿಕ ನೇತೃತ್ವದ ಜಿ-7 ದೇಶಗಳು. ಆಕ್ಸೋಫಾಮ್ ವರದಿಯ ಪ್ರಕಾರ ಕೋವಿಡ್ ಲಸಿಕೆಗಳ ಮೇಲಿನ ಪೇಟೆಂಟ್ ನಿಯಂತ್ರಣ ತೆಗೆದರೆ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇರುವ ಜನರಿಗೆ ಲಸಿಕೆ ನೀಡಲು ಕೇವಲ 6.5 ಬಿಲಿಯನ್ ಡಾಲರ್ ಹಣ ಖರ್ಚು ಮಾಡಿದರೆ ಸಾಕು. ಒಂದು ವೇಳೆ ಈಗಿರುವ ಪೇಟೆಂಟ್ ನಿಯಮಗಳನ್ನು ಹಾಗೇ ಉಳಿಸಿಕೊಂಡರೆ ಇಷ್ಟೇ ಪ್ರಮಾಣದ ಲಸಿಕೆ ನೀಡಲು 80 ಬಿಲಿಯನ್ ಡಾಲರ್ ಹಣ ಖರ್ಚಾಗುತ್ತದೆ. ಅಂದರೆ ಪೇಟೆಂಟ್ ಕಾರಣದಿಂದ ಕಾರ್ಪೊರೇಟ್ ಔಷಧ ಕಂಪನಿಗಳಿಗೆ ಹೆಚ್ಚುವರಿಯಾಗಿ 73.5 ಬಿಲಿಯನ್ ಡಾಲರ್ ಲಾಭವಾಗುತ್ತದೆ. ಅಂದರೆ ಒಟ್ಟಾರೆ ಲಸಿಕೆ ವೆಚ್ಚದ ಶೇಕಡಾ 90 ರಷ್ಟು ಹಣ ಬಲಾಢ್ಯ ಔಷಧ ಕಂಪನಿಗಳ ಖಜಾನೆ ಸೇರುತ್ತದೆ. ಪೇಟೆಂಟ್ ಹಕ್ಕುಗಳನ್ನು ತಾತ್ಕಾಲಿಕವಾಗಿಯಾದರೂ ರದ್ದುಗೊಳಿಸಬೇಕಾಗಿರುವುದು ಕೇವಲ ಕೇವಲ ಬೆಲೆ ನಿಯಂತ್ರಣ ಸಾಧಿಸಲು ಮಾತ್ರವಲ್ಲದೆ ಉತ್ಪಾದನೆಗೆ ಇರುವ ಅಡೆತಡೆಗಳನ್ನು ನಿವಾರಿಸಿ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ಮಾಡಲು ಕೂಡಾ ಪೇಟೆಂಟ್ ನಿಯಂತ್ರಣಗಳನ್ನು ರದ್ದುಗೊಳಿಸಬೇಕಾಗಿದೆ.
ಭಾರತ ಮತ್ತು ಆಫ್ರಿಕಾದ ಒತ್ತಾಯದ ಮೇರೆಗೆ ತಾತ್ಕಾಲಿಕವಾಗಿ ಕೋವಿಡ್ ಲಸಿಕೆಗಳ ಮೇಲಿನ ಪೇಟೆಂಟ್ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಅಮೆರಿಕ ಒಪ್ಪಿದೆ. ಆದರೆ ಅಮೆರಿಕದ ಯೂರೋಪಿಯನ್ ಮಿತ್ರರು ಮತ್ತು ಜಗತ್ತಿನ ‘ಮಹಾ ದಾನಿ’ ಬಿಲ್ ಗೇಟ್ಸ್ ಇಂತಹ ಪ್ರಸ್ತಾಪಗಳನ್ನು ಬಲವಾಗಿ ವಿರೋಧಿಸಿದ್ದಾರೆ. ಕೋವಿಡ್ ಲಸಿಕೆಗಳ ಮೇಲಿನ ಭೌದ್ಧಿಕ ಆಸ್ತಿ ಹಕ್ಕುಗಳನ್ನು ಅಭಿವೃದ್ಧಿಶೀಲ ದೇಶಗಳೊಡನೆ ಹಂಚಿಕೊಳ್ಳುವ ಪ್ರಸ್ತಾಪವನ್ನು ಬಿಲ್ ಗೇಟ್ಸ್ ತಳ್ಳಿ ಹಾಕಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥೆಯ ಸ್ಥಾಪಕ ಮತ್ತು ಮಾಲೀಕ ‘ಮಹಾ ದಾನಿ’ ಬಿಲ್ ಗೇಟ್ಸ್ 25 ಏಪ್ರಿಲ್2021 ರಂದು ಬ್ರಿಟಿಷ್ ಮಾಧ್ಯಮ ಸ್ಕೈನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ “ಈ ವಿಷಯದಲ್ಲಿ ನಮ್ಮನ್ನು ಹಿಂದಡಿ ಇಡುವಂತೆ ಮಾಡುತ್ತಿರುವುದು, ಭೌದ್ಧಿಕ ಆಸ್ತಿ ಹಕ್ಕಲ್ಲ… ಮಾಂತ್ರಿಕವಾದ ರೀತಿಯಲ್ಲಿ ಸುರಕ್ಷಿತವಾದ ಲಸಿಕೆ ತಯಾರು ಮಾಡಲು ಕೆಲವು ನಿಯಂತ್ರಣ ಕ್ರಮಗಳನ್ನು ಹೊಂದಿರಲೇಬೇಕು” ಎಂದಿದ್ದಾರೆ. ಇನ್ನೂ ಮುಂದುವರಿದು ಆತ ‘ಜಗತ್ತಿನಲ್ಲಿ ಬೇಕಾದಷ್ಟು ಲಸಿಕೆ ಕಾರ್ಖಾನೆಗಳಿವೆ. ಆದರೆ ಲಸಿಕೆಗಳ ಸುರಕ್ಷತೆಯ ಬಗ್ಗೆ ಜನರು ತುಂಬಾ ಗಂಭೀರವಾಗಿ ಇದ್ದಾರೆ. ಜಾನ್ಸನ್ ಮತ್ತು ಜಾನ್ಸನ್ ಕಂಪನಿಯಿಂದ ಭಾರತದ ಯಾವುದೋ ಕಂಪನಿಗೆ ನಮ್ಮ ಲಸಿಕೆಯನ್ನು ಸುಕಾ ಸುಮ್ಮನೆ ವರ್ಗಾಯಿಸಲಾಗದು, ಏಕೆಂದರೆ ಲಸಿಕೆ ತುಂಬಾ ಅಮೂಲ್ಯವಾದುದು. ಇದು ಸಾಧ್ಯವಾಗಿರಿವುದು ನಮ್ಮ ಅನುದಾನ ಮತ್ತು ನೈಪುಣ್ಯತೆಯಿಂದ ಮಾತ್ರ’ ಎಂದು ಬಿಲ್ ಗೇಟ್ಸ್ ಹಮ್ಮಿನ ನಗೆ ಬೀರಿದ್ದಾರೆ. ಬಿಳಿ ತೊಗಲ ಈ ವ್ಯಾಪಾರಿಗಳು ಯಾವಾಗಲೂ ‘ಹೆಣ ಮಲಗಿಸಿಕೊಂಡು ಹಣ ಮಾಡಿಕೊಂಡಿದ್ದಾರೆ.’
ಬಿಲ್ ಗೇಟ್ಸ್ ಇಂತಹ ಮಾತುಗಳನ್ನು ಆಡುವ ಮೂಲಕ, ಅಮೆರಿಕಾ ಮತ್ತು ಯೂರೋಪಿನ ಉತ್ಪನ್ನಗಳೇ ಶ್ರೇಷ್ಠವೆಂದು ವ್ಯಸನ ವ್ಯಕ್ತಪಡಿಸಿದ್ದಾರೆ. ಭಾರತವೂ ಸೇರಿದಂತೆ ಮೂರನೇ ಜಗತ್ತಿನ ದೇಶಗಳ ಸಂಶೋಧನೆ ಹಾಗೂ ಉತ್ಪಾದನೆಯನ್ನು ಕಳಪೆ ಎಂದು ಹೀಗಳೆದಿದ್ದಾರೆ.
ಇತ್ತೀಚೆಗೆ ವಿಶ್ವದ ಶ್ರೀಮಂತ ದೇಶಗಳಾದ ಅಮೆರಿಕ, ಇಟಲಿ, ಇಂಗ್ಲೆಂಡ್, ಜಪಾನ್, ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ದೇಶಗಳ ಗುಂಪು ಜಿ-7 ಲಂಡನ್ನಿನಲ್ಲಿ ಸಭೆ ಸೇರಿತ್ತು. ಆ ಸಭೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 100 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ದಾನ ನೀಡುವುದಾಗಿ ಈ ದೇಶಗಳು ಘೋಷಣೆ ಮಾಡಿದವು. ಆ ಪೈಕಿ ಅಮೆರಿಕಾ 500 ದಶಲಕ್ಷ ಡೋಸ್, ಬ್ರಿಟನ್ 100 ದಶಲಕ್ಷ ಡೋಸ್ ಮತ್ತು ಬೇರೆ ದೇಶಗಳು ಉಳಿದ ಲಸಿಕೆ ದಾನ ಮಾಡುವುದಾಗಿ ಹೇಳಿದವು.
ಇದನ್ನು ಓದಿ: ಜಿ-7 ದೇಶಗಳ ಮೇಜಿನಿಂದ ಒಂದು ತುಣುಕು ರೊಟ್ಟಿ
100 ಕೋಟಿ ಡೋಸ್ಗಳು ಎಂಬುದು ದೊಡ್ಡ ಸಂಖ್ಯೆಯಂತೆ ಕಾಣಿಸಿದರೂ ಜಗತ್ತಿನ ಜನರ ಅಗತ್ಯಕ್ಕೆ ಏನೇನೂ ಸಾಲದು. ಜಗತ್ತಿನಲ್ಲಿ ಲಸಿಕೆ ಪಡೆಯಬೇಕಾದ 680 ಕೋಟಿ ಜನರಿದ್ದಾರೆ. ಅಂದರೆ ಕನಿಷ್ಠ 1360 ಕೋಟಿ ಡೋಸ್ ಲಸಿಕೆಗಳ ಅಗತ್ಯವಿದೆ. ಆದರೆ ಶ್ರೀಮಂತ ದೇಶಗಳು ಕೊಡುವ ದಾನದ ಲಸಿಕೆ ಅಗತ್ಯದ ಶೇಕಡಾ 7.4 ಮಾತ್ರ. ಉಳಿದ ಲಸಿಕೆಯನ್ನು ಎಲ್ಲಿಂದ ತರುವುದು ಎಂಬುದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಚಿಂತೆಯ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಶೀಲ ದೇಶಗಳು ಕನಿಷ್ಠ 1000 ಕೋಟಿ ಡೋಸ್ ಲಸಿಕೆಯಾದರೂ ಬೇಕು ಎಂದು ಹೇಳುತ್ತಿವೆ. ಈ ಬೇಡಿಕೆಯ ಪೈಕಿ ಶೇಕಡ 10 ರಷ್ಟನ್ನು ಮಾತ್ರ ಒದಗಿಸುವುದಾಗಿ ಜಿ-7 ದೇಶಗಳು ಹೇಳುತ್ತಿವೆ. ದಾನ ನೀಡುವುದಾಗಿ ಹೇಳಿರುವ ಲಸಿಕೆಯನ್ನು ಕೂಡ ಮುಂದಿನ ವರ್ಷದ ಮಧ್ಯಭಾಗದ ವರೆಗೆ ನೀಡುವುದಾಗಿ ಹೇಳಲಾಗುತ್ತಿದೆ. ಅಂದರೆ ಈಗ ಸಂಗ್ರಹಿಸಿ ಇಟ್ಟು ಕೊಂಡಿರುವ ಬೆಟ್ಟದಷ್ಟು ಲಸಿಕೆಗಳು ಏಷ್ಯಾದ, ಲ್ಯಾಟಿನ್ ಅಮೆರಿಕದ, ಆಫ್ರಿಕಾದ ಜನಗಳಿಗೆ ಸಿಗುವುದಿಲ್ಲ. ಇವರು ನೀಡುವ ಲಸಿಕೆಗಳು ಜನರಿಗೆ ತಲುಪುವಷ್ಟರಲ್ಲಿ ಬಡ ದೇಶಗಳ ಅದೆಷ್ಟು ಅಮೂಲ್ಯ ಜೀವಗಳ ಪ್ರಾಣ ಹರಣವಾಗುವುದೋ ಗೊತ್ತಿಲ್ಲ..
ಈಗಾಗಲೇ ಹೇಳಿರುವಂತೆ, ಲಸಿಕೆ ಅಗ್ಗವಾಗಿ ಲಭ್ಯವಾಗಲು ಮತ್ತು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ತಾತ್ಕಾಲಿಕವಾಗಿಯಾದರೂ ಲಸಿಕೆಗಳ ಮೇಲಿನ ಪೇಟೆಂಟ್ ಹಕ್ಕುಗಳನ್ನು ರದ್ದುಗೊಳಿಸಬೇಕು. ಆದರೆ ಈಗಷ್ಟೇ ಮುಗಿದ ಜಿ-7 ದೇಶಗಳ ಸಭೆಯಲ್ಲಿ ಈ ವಿಷಯ ಚರ್ಚೆಗೇ ಬಂದಿಲ್ಲ. ಭಾರತ ಮತ್ತು ಆಫ್ರಿಕಾದ ಪ್ರಸ್ತಾಪವನ್ನು ಕೇವಲ ಅಮೆರಿಕ ಮತ್ತು ಫ್ರಾನ್ಸ್ ಮಾತ್ರ ಸಮ್ಮತಿಸಿವೆ. ಆದರೆ ಸಭೆಯಲ್ಲಿ ಚರ್ಚಿಸಿ ಈ ವಿಷಯವನ್ನು ಇತ್ಯರ್ಥ ಪಡಿಸದೆ ಇರುವುದರಿಂದ ಪೇಟೆಂಟ್ ನಿಯಂತ್ರಣಗಳಿಂದ ಯಾವುದೇ ವಿನಾಯಿತಿ ಸಿಗುವುದಿಲ್ಲ. ಅಂದರೆ ಬಡ ದೇಶಗಳ ಜನರಿಗೆ ಬೇಕಾದ ಲಸಿಕೆ ಸಧ್ಯಕ್ಕೆ ಸಿಗುವುದಿಲ್ಲ.
ಇದನ್ನು ಓದಿ: ವ್ಯಾಕ್ಸಿನ್ ಎಂಬ ಉಸಿರು ನಿರಾಕರಿಸುತ್ತಿರುವ ಸರ್ಕಾರ!!
ಸಾರ್ವತ್ರಿಕವಾಗಿ ಲಸಿಕೆ ನೀಡಬೇಕೆಂದು ದೊಡ್ಡ ಗಂಟಲಿನಲ್ಲಿ ಮಾತನಾಡುವ ಬ್ರಿಟಿಷ್ ಪ್ರಧಾನಿ ಜಾನ್ಸನ್ ತಾತ್ಕಾಲಿಕವಾಗಿಯಾದರೂ ಪೇಟೆಂಟ್ ಹಕ್ಕುಗಳನ್ನು ರದ್ದುಗೊಳಿಸಲು ಸಮ್ಮತಿಸಲಿಲ್ಲ. ಇದರರ್ಥ ಶ್ರೀಮಂತ ದೇಶಗಳ ಕಾಳಜಿ ಎಂಬುದು ಕೇವಲ ಲೊಳಲೊಟ್ಟೆ. ಬಂಡವಾಳಶಾಹಿ ದೇಶಗಳ ಹಿತಾಸಕ್ತಿ ಏನಿದ್ದರೂ ಕೃತಕವಾಗಿ ಲಸಿಕೆ ಅಭಾವ ಸೃಷ್ಟಿಸಿ ಲಾಭವನ್ನು ಕೊಳ್ಳೆಹೊಡೆಯುವುದೇ ಆಗಿದಿಯೇ ಹೊರತು ಜನರ ಜೀವ, ಜೀವನದ ರಕ್ಷಣೆಯಲ್ಲ. ಪೇಟೆಂಟ್ ನಿಬಂಧನೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಅಮೆರಿಕ ಸಮ್ಮತಿಸಿರುವುದು ಸಮಾಧಾನ ತರುವ ವಿಷಯವಾದರೂ ಲಸಿಕೆಯನ್ನು ಉತ್ಪಾದಿಸಲು ಬೇಕಾದ ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳು ಅಮೆರಿಕಾ ಮತ್ತು ಯೂರೋಪ್ ದೇಶಗಳಿಂದಲೇ ಬರಬೇಕಾಗಿರುವುದರಿಂದ ಕೇವಲ ಪೇಟೆಂಟ್ ಸಂಬಂಧಿತ ವಿನಾಯಿತಿಗಳಿಂದ ಹೆಚ್ಚೇನೂ ಸಾಧ್ಯವಾಗುವುದಿಲ್ಲ. ಏಕೆಂದರೆ ಅಮೆರಿಕವು 1950 ರ ರಕ್ಷಣಾ ಉತ್ಪಾದನಾ ಕಾನೂನಿನಡಿ ಲಸಿಕೆ ತಯಾರಿಕೆಗೆ ಬೇಕಾದ ಯಾವುದೇ ರೀತಿಯ ಕಚ್ಚಾ ವಸ್ತು ಮತ್ತು ಉಪಕರಣಗಳನ್ನು ರಪ್ತು ಮಾಡುವುದನ್ನು ನಿಷೇಧಿಸಿದೆ. ಹಾಗಾಗಿ ಈ ಕಾನೂನು ಬದಲಾಗದೆ ಭಾರತವನ್ನೂ ಒಳಗೊಂಡಂತೆ ಬೇರೆ ಅಭಿವೃದ್ಧಿಶೀಲ ದೇಶಗಳಲ್ಲಿ ಲಸಿಕೆ ಉತ್ಪಾದನೆ ತೀವ್ರಗೊಳಿಸಲು ಸಾಧ್ಯವಾಗುವುದಿಲ್ಲ.
ಲಸಿಕೆ ಸಂಶೋಧನೆ ಮಾಡಿ ಉತ್ಪಾದನೆ ಮಾಡುತ್ತಿರುವ ಕಂಪನಿಗಳು ಕೂಡ ತಮ್ಮ ಕಿಸೆಯಿಂದ ಬಂಡವಾಳವನ್ನು ತಂದು ಸುರಿದಿಲ್ಲ. ಭಾರತದಲ್ಲಿ ಕೂಡ ಕೊವ್ಯಾಕ್ಸಿನ್ ಲಸಿಕೆ ಸಂಶೋಧನೆ ಮಾಡಲು ಭಾರತೀಯರ ತೆರಿಗೆ ಹಣದಿಂದ ಸಾವಿರಾರು ಕೋಟಿ ರೂಪಾಯಿ ನೀಡಲಾಗಿದೆ. ನಡೆದಿರುವ ಸಂಶೋಧನೆಯೂ ಸಹ ಸಾರ್ವಜನಿಕ ವಲಯದ ಐಸಿಎಂಆರ್ ನಂತಹ ಸಂಸ್ಥೆಗಳಲ್ಲಿ ನಡೆದಿದೆ. ಲಸಿಕೆ ಉತ್ಪಾದನೆಗೆ ಮೂಲಸೌಕರ್ಯ ಹೊಂದಿಸಿಕೊಳ್ಳಲು ಭಾರತ್ ಬಯೋಟೆಕ್ ಸಂಸ್ಥೆಗೆ 1500 ಕೋಟಿ ರೂಪಾಯಿ ಸಾರ್ವಜನಿಕ ತೆರಿಗೆ ಹಣ ನೀಡಲಾಗಿದೆ. ಆದರೂ ಈ ಸಂಸ್ಥೆ ತನ್ನ ಲಸಿಕೆಗೆ ಗರಿಷ್ಠ ದರ ನಿಗದಿ ಮಾಡಿಕೊಳ್ಳಲು ಭಾರತ ಸರ್ಕಾರ ಅವಕಾಶ ನೀಡಿದೆ. ಭಾರತ್ ಬಯೋಟೆಕ್ ಲಾಭದ ಪಸಲು ತೆಗೆಯುತ್ತಿದೆ.
ಅಮೆರಿಕದ ಮಾಡೆರ್ನಾ ಕಂಪನಿಯು ಕೋವಿಡ್ ಲಸಿಕೆ ಸಂಶೋಧನೆ ನಡೆಸಿ ಅಭಿವೃದ್ಧಿ ಪಡಿಸಲು ಅಮೆರಿಕ ಸರ್ಕಾರದಿಂದ 6 ಬಿಲಿಯನ್ ಡಾಲರ್ ಹಣ ಪಡೆದಿದೆ. ಜನರ ತೆರಿಗೆ ದುಡ್ಡನಲ್ಲಿ ಇಷ್ಟು ದೊಡ್ಡ ಮೊತ್ತದ ಸಹಾಯ ಪಡೆದ ಮಾಡೆರ್ನಾ ತನ್ನ ಲಸಿಕೆಯ ಪ್ರತಿ ಡೋಸ್ಗೆ 15 ಡಾಲರ್ ದರ ನಿಗದಿಪಡಿಸಿ ಅಮೆರಿಕಾ ಸರ್ಕಾರಕ್ಕೆ ಪೂರೈಸುತ್ತಿದೆ. ಅಮೆರಿಕದ ಜನರ ತೆರಿಗೆ ಹಣದಲ್ಲಿ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಮಾಡಿದ ಮಾಡೆರ್ನಾ ನೈತಿಕವಾಗಿ ಯಾವುದೇ ದರ ಪಡೆಯದೆ ಅಮೆರಿಕದ ಜನಗಳಿಗೆ ಲಸಿಕೆ ಪೂರೈಸಬೇಕು. ಆದರೆ ಮಾಡೆರ್ನಾ ಸಿಇಓ ‘ಬೇಡಿಕೆ ಆಧರಿಸಿ ಪ್ರತಿ ಡೋಸ್ಗೆ 25 ರಿಂದ 35 ಡಾಲರ್ ದರ ನಿಗದಿ ಮಾಡುತ್ತೇವೆ’ ಎನ್ನುವ ಮಾತುಗಳನ್ನಾಡಿದ್ದಾರೆ.
ಈ ಪ್ರಮಾಣದಲ್ಲಿ ಲಾಭವನ್ನು ಕೊಳ್ಳೆ ಹೊಡೆಯುತ್ತಿರುವುದರಿಂದ ಮಾಡೆರ್ನಾ ಕಂಪನಿಯ ಷೇರು ಬೆಲೆ ಕಳೆದ ಒಂದು ವರ್ಷದಲ್ಲಿ 6 ಪಟ್ಟು ಹೆಚ್ಚಳವಾಗಿದೆ. ಮಾಡೆರ್ನಾದ ಸಿಇಓ ಆಸ್ತಿಯಲ್ಲಿ 5.5 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ಇದು ಕೇವಲ ಮಾಡೆರ್ನಾದ ಕಥೆ ಮಾತ್ರವಲ್ಲ ಕೋವಿಡ್ ಲಸಿಕೆ ತಯಾರು ಮಾಡುವ ಎಲ್ಲಾ ಬೃಹತ್ ಔಷಧ ಕಂಪನಿಗಳ ಕಥೆಯೂ ಇದೇ ಆಗಿದೆ. ಅವರೀಗ ದುಡ್ಡಿನ ಬೆಳೆ ಬೆಳೆದು ಕಣಜ ತುಂಬಿಕೊಳ್ಳುತ್ತಿದ್ದಾರೆ.
ಈ ನಡವಳಿಕೆಗಳೆಲ್ಲಾ ನವ ಉದಾರೀಕರಣ ಕಾಲಘಟ್ಟದಲ್ಲಿ ಸರ್ವೆ ಸಾಮಾನ್ಯ. ನವ ಉದಾರವಾದಿಗಳು ಯಾವಾಗಲೂ ಹೇಳುವುದೇನೆಂದರೆ ‘ಬಿಕ್ಕಟ್ಟು ಆವರಿಸಿದಾಗಲೇ ಲಾಭ ಮಾಡಿಕೊಳ್ಳಬೇಕು, ಜನತೆಯ ಗಮನ ಬೇರೆಡೆ ಇರುವಾಗಲೇ ಜನ ವಿರೋಧಿ ನೀತಿಗಳನ್ನು ಜಾರಿಗೆ ತರಬೇಕು’ ಎಂದು. ಈಗಲೂ ಅದೇ ಆಗುತ್ತಿದೆ. ಜನತೆಯ ಜೀವವನ್ನು ಪಣಕ್ಕಿಟ್ಟು ಬೃಹತ್ ಔಷಧ ಕಂಪನಿಗಳು ವ್ಯಾಪಾರಕ್ಕಿಳಿದಿದ್ದಾರೆ. ನವ ಉದಾರವಾದಿ ಸರ್ಕಾರಗಳು ಆ ವಂಚಕ ಕಂಪನಿಗಳಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಿವೆ. ಅದು ಸಾಲದೆಂಬಂತೆ ಜನತೆಯ ಮೇಲೆ ನವ ನವೀನ ಹೊರೆಗಳನ್ನು ಹೇರುತ್ತಿದ್ದಾರೆ. ನವ ಉದಾರವಾದಕ್ಕೆ ಸಾವಿನ ಇಂಜೆಕ್ಷನ್ ನೀಡುವ, ಕೋವಿಡ್ ಲಸಿಕೆಯನ್ನು ಸಾರ್ವತ್ರಿಕವಾಗಿ ಪಡೆಯುವ ಹೋರಾಟಕ್ಕೆ ಜನ ಮುಂದಾಗಬೇಕಿದೆ.