ನವದೆಹಲಿ: ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆ ಕೇಂದ್ರದ ಮೇಲೆ ನಡೆದಿರುವ ಡ್ರೋಣ್ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಧಾಳಿಕೋರರು ಡ್ರೋಣ್‌ಗಳ ಮೂಲಕ ಗಡಿಯಾಚೆಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ, ಸ್ಫೋಟಕಗಳು, ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದವರು. ಇದೀಗ ಡ್ರೋಣ್ ಬಳಸಿ ಭಾರತೀಯ ವಾಯುಪಡೆ ಸ್ಟೇಷನ್ ಮೇಲೆ ಭಾನುವಾರದಂದು ದಾಳಿ ನಡೆಸಿದ್ದಾರೆ.
ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದರು. ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಕಟ್ಟಡದ ತಾಂತ್ರಿಕ ವಿಭಾಗದಲ್ಲಿನ ಮೇಲ್ಛಾವಣಿಗೆ ಹಾನಿಯಾಗಿದೆ. ಬೆಳಗಿನ ಜಾವ 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು.
ಪಾಕ್ ಸೇನೆ ಹಾಗೂ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕುಮ್ಮಕ್ಕಿನಿಂದ ಜಿಪಿಎಸ್ ಹೊಂದಿದ್ದ ಡ್ರೋಣ್ ಗಳನ್ನು ಉಗ್ರರು ಬಳಸಿ ಸ್ಫೋಟಕ ಕಳಿಸಿರುವ ಶಂಕೆಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಎನ್ಐಎಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
‘ಗಡಿಯುದ್ದಕ್ಕೂ ಶಸ್ತ್ರಸಹಿತವಾದ ಡ್ರೋನ್‌ಗಳನ್ನು ತಡೆಯಬಲ್ಲ, ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನ ನಮಗೆ ಇನ್ನೂ ಲಭ್ಯವಾಗಿಲ್ಲ. ಈವರೆಗೆ ಇಂಥ ಅನೇಕ ಡ್ರೋನ್‌ಗಳನ್ನು ತಡೆಯಲಾಗಿದ್ದರೂ ಅದು ಸಶಸ್ತ್ರಪಡೆಯ ಯೋಧರ ಸನ್ನದ್ಧತೆಯಿಂದ ಸಾಧ್ಯವಾಗಿದೆ’ ಎಂದು ಗಡಿಭದ್ರತಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.
ಡ್ರೋನ್‌ಗಳ ಮೂಲ ಗಡಿಯಲ್ಲಿ ಭಾರತದ ಯೋಧರು ಎಲ್ಲೆಲ್ಲಿ ಇದ್ದಾರೆ ಎಂದು ಗುರುತಿಸಿರುವ ಸಾಧ್ಯಗಳು ಇವೆ. ಅವು ನಮ್ಮ ಯೋಧರ ಕಣ್ಣಿಗೆ ಬಿದ್ದಿರುವುದು ತಿಳಿಯುತ್ತಿದ್ದಂತೆಯೇ ಪಾಕಿಸ್ತಾನದಿಂದ ರಿಮೋಟ್ ಮೂಲಕ ನಿಯಂತ್ರಿಸುತ್ತಿದ್ದವರು ಡ್ರೋಣ್‌ಗಳನ್ನು ಮರಳಿ ಕರೆಯಿಸಿಕೊಂಡಿದ್ದಾರೆ. ಭಯೋತ್ಪಾದಕರು ಅಥವಾ ಪಾಕಿಸ್ತಾನದ ಸೇನೆ ಅವುಗಳನ್ನು ನಿಯಂತ್ರಿಸಿರುವ ಸಾಧ್ಯತೆಯೂ ಇದೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ, ಭಾರತೀಯ ವಾಯುಸೇನೆಯ ಕಿರಿಯ ಅಧಿಕಾರಿಗಳು ನೀಡಿದ್ದ ಅರ್ಜಿಯಂತೆ ಎಫ್‌ಐಆರ್ ದಾಖಲಿಸಲಾಗಿದೆ. ಯುಎಪಿಎ ಕಾಯ್ದೆ ಅಡಿ ನಾಲ್ಕು ಸೆಕ್ಷನ್ (ಕಾನೂನುಬಾಹಿರ ಚಟುವಟಿಕೆಗಳು, ಭಯೋತ್ಪಾದಕ ಕೃತ್ಯ, ಸಂಚು ಮತ್ತು ತೀವ್ರ ಸ್ವರೂಪದ ದಂಡನೆ), ಐಪಿಸಿ ಅಡಿ ಒಂದು (ಕ್ರಿಮಿನಲ್ ಸಂಚು) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಅಡಿ ಎರಡು (ಜೀವ ಅಥವಾ ಆಸ್ತಿಪಾಸ್ತಿಗೆ ಆಪತ್ತು ತರುವಂಥ ಸ್ಫೋಟ, ಜೀವಕ್ಕೆ ಅಥವಾ ಆಸ್ತಿಪಾಸ್ತಿಗೆ ಹಾನಿ ತರುವ ಉದ್ದೇಶದಿಂದ ನಡೆಸಿರುವ ಸ್ಫೋಟ) ಸೆಕ್ಷನ್ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.