- ಸರ್ವೋಚ್ಛ ನ್ಯಾಯಾಲಯವು ಸಿಈಸಿ ವರದಿಯ ಆಧಾರದ ಮೇಲೆ ಕರ್ನಾಟಕದಲ್ಲಿ ಗಣಿಗಾರಿಕೆ ಪ್ರದೇಶದಲ್ಲಿ ‘ಗಣಿಗಾರಿಕೆ ಪರಿಣಾಮದ ವಲಯದಲ್ಲಿ ಸಮಗ್ರ ಪರಿಸರ ಯೋಜನೆ’ಯಲ್ಲಿ ಪರಿಸರ ಪುನಶ್ಚೇತನಕ್ಕೆ ಅಮೂಲ್ಯವಾದ ಶಿಫಾರಸ್ಸು ನೀಡಿದೆ. ಪರಿಸರದ ಪುನಶ್ಚೇತನಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಅಕ್ರಮದಲ್ಲಿ ತೊಡಗಿದ್ದ ಗಣಿಗಳಿಂದ ದಂಡದ ರೂಪದಲ್ಲಿ, ಪರಿಹಾರದ ರೂಪದಲ್ಲಿ, ವಶಪಡಿಸಿಕೊಂಡ ಅದಿರಿನ ಹರಾಜಿನಿಂದ ಬಂದ ಹಣ, ಗಣಿ ಕಂಪನಿಗಳಿಂದ ಪ್ರತಿ ಟನ್ ಅದಿರಿಗೆ ಇಷ್ಟು ಎಂದು ಶುಲ್ಕ ಮುಂತಾದ ರೀತಿಯಲ್ಲಿ ಸಂಪನ್ಮೂಲ ಸಂಗ್ರಹಿಸಲು ಸರ್ವೋಚ್ಛ ನ್ಯಾಯಾಲಯ ಶಿಫಾರಸ್ಸು ಮಾಡಿದೆ. ಇದರಂತೆ ಕರ್ನಾಟಕ ಸರ್ಕಾರವು ‘ಸ್ಪೆಶನ್ ಪರ್ಪಸ್ ವೆಹಿಕಲ್’ ರಚಿಸಿದೆ. ಇದರ ಅನುಷ್ಠಾನಕ್ಕೆ ‘ಕರ್ನಾಟಕ ಮೈನಿಂಗ್ ಎನ್‌ವರ‍್ನಮೆಂಟಲ್ ರೆಸ್ಟೋರೇಸನ್ ಕಾರ್ಪೋರೇಶನ್’ ಎಂಬ ನೋಂದಾಯಿತ ಸಂಸ್ಥೆಯನ್ನು 2013ರಲ್ಲಿ ಸ್ಥಾಪಿಸಿದೆ. ಇತ್ತೀಚಿಗಿನ ವರದಿ ಪ್ರಕಾರ ಈ ‘ಸ್ಪೆಶಲ್ ಪರ್ಪಸ್ ವೆಹಿಕಲ್’ ನಲ್ಲಿರುವ ಹಣ ರೂ. 16,058 ಕೋಟಿ. ಇದರ ಅನುಷ್ಠಾನದಲ್ಲಿ ಸಾಕಷ್ಟು ವಿಳಂಬವಾಗಿದೆ. ಪರಿಸರ ಪುನಶ್ಚೇತನ ಕಾರ್ಯಕ್ರಮಕ್ಕೆ 2014ರಲ್ಲಿಯೇ ಅನುಮೋದನೆ ದೊರೆತ್ತಿದ್ದರೂ ಇದರ ಕೆಲಸ 2021ರಲ್ಲಿಯೂ ಆರಂಭವಾಗಿಲ್ಲ. ಈ ಪುನಶ್ವೇತನ ಕಾರ್ಯಕ್ರಮದ ಅನುಷ್ಠಾನವು ಹೇಗೆ ನಡೆಯಬೇಕು ಎಂಬುದರ ಬಗ್ಗೆ ಕಳೆದ 6 ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಪರಿಸರ ಪುನಶ್ಚೇತನ ಕಾರ್ಯಕ್ರಮವು ಜನರ ಸಹಭಾಗಿತ್ವದಲ್ಲಿ ನಡೆಯುವಂತಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇದರಲ್ಲಿ ಗಣಿ ಬಾಧಿತ ಪ್ರದೇಶದಲ್ಲಿನ ಜನರ ಮೂಲ ಅಗತ್ಯಗಳಿಗೆ ಆದ್ಯತೆ ಇರಬೇಕು. ಈ ಕಾರ್ಯಯೋಜನೆಯ ಅನುಷ್ಠಾನದಲ್ಲಿ ಗಣಿ ಬಾಧಿತ ಪ್ರದೇಶದ ಗ್ರಾಮ ಪಂಚಾಯತಿ ಸದಸ್ಯರ ಮೇಲ್ವಿಚರಣಾ ಸಮಿತಿಗಳನ್ನು ರಚಿಸಬೇಕು – ಪ್ರೊ. ಟಿ.ಆರ್. ಚಂದ್ರಶೇಖರ್
ಪಾಟೀಲ್ ಪುಟ್ಟಪ್ಪನವರು ಬಳ್ಳಾರಿ ಜಿಲ್ಲೆ ಕುರಿತು ‘ಹಂಪಿ ಒಂದು ಪರಂಪರೆಯಾದರೆ ತುಂಗಭದ್ರಾ ಅಣೆಕಟ್ಟು ಒಂದು ಪ್ರಾರಬ್ಧ’ ಎಂದು ಹೇಳುತ್ತಿದ್ದರು. ಆದರೆ ಈ ನಾಣ್ಣುಡಿಯನ್ನು ಇಂದು ಬಳ್ಳಾರಿ ಜಿಲ್ಲೆಗೆ ‘ಹಂಪೆ ಒಂದು ಪರಂಪರೆಯಾದರೆ ಗಣಿಗಾರಿಕೆ ಒಂದು ಪ್ರಾರಬ್ಧ’ ಎಂಬುದಾಗಿ ಬದಲಾಯಿಸಬೇಕಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 2006 ರಿಂದ 2011ರವರೆಗೆ ನಡೆದ ಗಣಿ ಲೂಟಿಯ ವಿವರವನ್ನು ಕರ್ನಾಟಕ ಲೋಕಾಯುಕ್ತರ ವರದಿಗಳು (2008ರ ಮೊದಲನೆಯ ವರದಿ, 2012ರ ಎರಡನೆಯ ವರದಿ) ಬಹಿರಂಗ ಪಡಿಸಿವೆ. ಸರ್ವೋಚ್ಛ ನ್ಯಾಯಾಲಯದ ನಿದೇರ್ಶನದಲ್ಲಿ ಸಿ.ಈ.ಸಿ ನಡೆಸಿದ ತನಿಖೆಯಲ್ಲಿಯೂ ಇದರ ವಿವರಗಳಿವೆ. ಅಕ್ರಮ ಗಣಿಗಾರಿಕೆಯ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲೆ ಮಾಡಿ ಗಣಿ ಲೂಟಿಯು ಬಹಿರಂಗವಾಗುವುದಕ್ಕೆ ಕಾರಣಕರ್ತರಾದ ಎಸ್. ಆರ್. ಹಿರೇಮಠ್ ಅವರ ‘ಸಮಾಜ ಪರಿವರ್ತನ ಸಮುದಾಯ’ದಲ್ಲಿಯೂ ಇದರ ಬಗ್ಗೆ ದಾಖಲೆಗಳಿವೆ. ‘ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ ರೀಸರ್ಚ್ ಆಂಡ್ ಎಜುಕೇಶನ್’ ಸಂಸ್ಥೆಯು ಜಿಲ್ಲೆಯಲ್ಲಿ ನಡೆಸಿದ ಗಣಿಗಾರಿಕೆಯಿಂದ ಪರಿಸರದ ಮೇಲೆ ಉಂಟುಮಾಡಿರುವ ಪರಿಣಾಮದ ಮೌಲ್ಯಮಾಪನ ವರದಿಯಿದೆ. ಅಂತಾರಾಷ್ಟ್ರೀಯವಾಗಿ ‘ಹೂಮನ್ ರೈಟ್ಸ್ ವಾಚ್’ ಸಂಸ್ಥೆಯೂ ಇದರ ಬಗ್ಗೆ ಒಂದು ವರದಿಯನ್ನು ಪ್ರಕಟಿಸಿದೆ. ಗಣಿಗಾರಿಕೆಗೆ ಬಳ್ಳಾರಿಯು ಹೆಸರುವಾಸಿಯಾಗಿತ್ತು. ಆದರೆ ಇಂದು ಗಣಿಗಾರಿಕೆಯು ಬಳ್ಳಾರಿ ಚರಿತ್ರೆಯಲ್ಲಿ ಒಂದು ಕಳಂಕದ ಅಧ್ಯಾಯವಾಗಿದೆ. ಗಣಿ ಧಣಿಗಳು ಇದನ್ನು ‘ರಿಪಬ್ಲಿಕ್ ಆಫ್ ಬಳ್ಳಾರಿ’ಯನ್ನಾಗಿ ಮಾಡಿಬಿಟ್ಟರು.
ಈ ಅಕ್ರಮ ಗಣಿಗಾರಿಕೆ, ಪರಿಸರದ ಮೇಲಿನ ದುರಾಕ್ರಮಣ, ಕಾಯಿದೆಗಳ ಉಲ್ಲಂಘನೆ ಮುಂತಾದವುಗಳಿಗೆ ಗಣಿ ಧಣಿಗಳನ್ನು ಮಾತ್ರ ದೂರಿದರೆ ತಪ್ಪಾಗುತ್ತದೆ. ಏಕೆಂದರೆ ಅಕ್ರಮ ಗಣಿಗಾರಿಕೆಯು ಕರ್ನಾಟಕ ಸರ್ಕಾರದ ಬೆಂಬಲವಿಲ್ಲದೆ, ಸರ್ಕಾರಿ ಅಧಿಕಾರಿಗಳ ಶಾಮೀಲಿಲ್ಲದೆ ನಡೆದಿತ್ತು ಎಂದು ಭಾವಿಸಿವುದು ಮೂರ್ಖತನವಾದೀತು. ಉದಾ: ಅಕ್ರಮ ಗಣಿಗಾರಿಕೆಯ ಎಲ್ಲ ವಿವರಗಳನ್ನು ಕರ್ನಾಟಕ ಲೋಕಾಯುಕ್ತರು 2008ರಲ್ಲಿ ನೀಡಿದ ತನಿಖಾ ವರದಿಯಲ್ಲಿ ಬಹುರಂಗಪಡಿಸಿದರು. ಆದರೆ 2008 ರಿಂದ 2011ರವರೆಗೆ ಹೇಗೆ ಅಕ್ರಮ ಗಣಿಗಾರಿಕೆ ಅತ್ಯಧಿಕ ರೀತಿಯಲ್ಲಿ ನಡೆಯಿತು? ಸರ್ಕಾರವು ಅಕ್ರಮ ಗಣಿಗಾರಿಕೆ ಮೇಲೆ ಯಾವುದೇ ಕಟ್ಟುನಿಟ್ಟಿನ ಕ್ರಮಗಳನ್ನು 2008ರ ನಂತರ ತೆಗೆದುಕೊಂಡಿಲ್ಲ ಎಂದು, 2008ರ ನಂತರ ಅಕ್ರಮ ಗಣಿಗಾರಿಕೆ ಹೆಚ್ಚಾಗಿದೆ ಎಂದು ಕರ್ನಾಟಕ ಲೋಕಾಯುಕ್ತರು ತಮ್ಮ 2011ರ ಎರಡನೆಯ ವರದಿಯಲ್ಲಿ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ 2006 ರಿಂದ 2011ರ ಅವಧಿಯಲ್ಲಿ ನಡೆದ ಗಣಿ ಲೂಟಿಗೆ ಹೋಲಿಸಬಹುದಾದ ಮತ್ತೊಂದು ಅಕ್ರಮ ಭಾರತದಲ್ಲಿ ನಮಗೆ ದೊರೆಯುವುದಿಲ್ಲ ಎನ್ನಲಾಗಿದೆ.
ಚಕ್ರಾಧಿಪತ್ಯ ಕಟ್ಟಲು ಹೊರಟ ‘ರಿಪಬ್ಲಿಕ್ ಆಫ್ ಬಳ್ಳಾರಿ’ಯ ಅರಸರು ಇಂದು ಬಳ್ಳಾರಿ ಪ್ರವೇಶದ ಮೇಲೆ ನಿಷೇಧವನ್ನು ಎದುರಿಸುತ್ತಿದ್ದಾರೆ. ಸೆರೆಮನೆವಾಸ ಅನುಭವಿಸಿದರು. ರಿಪಬ್ಲಿಕ್ ಆಫ್ ಬಳ್ಳಾರಿ ಇಂದು ಭಣಗುಡುತ್ತಿದೆ. ಜಾಗನೂರ ಮಲ್ಲಿಕಾರ್ಜುನ ರೆಡ್ಡಿಯಂತಹ ಸಾಮಾಜಿಕ ಹೋರಾಟಗಾರ ಪರಿಶ್ರಮದಿಂದಾಗಿ, ಚಕ್ರವರ್ತಿಗಳು ವಿಮಾನ ನಿಲ್ದಾಣಕ್ಕೆ ವಶಪಡಿಸಿಕೊಂಡ 1213 ಎಕರೆ ಜಮೀನು ನ್ಯಾಯಾಲಯದ ಕ್ರಮದಿಂದಾಗಿ ರೈತರ ವಶಕ್ಕೆ ವಾಪಸ್ಸಾಗಿದೆ. ಸಾಮಾನ್ಯ ಸನ್ನಿವೇಶದಲ್ಲಿ ಗಣಿಗಾರಿಕೆಯಿಂದ ಏನನ್ನು ಸಂಪಾದಿಸಬಹುದಿತ್ತೋ, ಅದರ 50-100 ಪಟ್ಟು ಸಂಪತ್ತನ್ನು ಕೇವಲ ಮೂರು ವರ್ಷಗಳಲ್ಲಿ ಗಣಿ ಧಣಿಗಳು ಗುಡ್ಡೆ ಹಾಕಿಕೊಂಡರು. ಜಿಲ್ಲೆಯಲ್ಲಿ ಕಬ್ಬಿಣ ಅದಿರಿನ ಉತ್ಪಾದನಾ ವೆಚ್ಚ ಪ್ರತಿ ಟನ್ನಿಗೆ ರೂ. 150 ರಿಂದ 190ರಷ್ಟಿತ್ತು. ಆದರೆ ಕಬ್ಬಿಣ ಅದಿರಿನ ಬೆಲೆಯು 2001-2002 ರಲ್ಲಿ ಪ್ರತಿ ಟನ್ನಿಗೆ ರೂ. 184 ರಷ್ಟಿದ್ದುದು 2005-2006ರಲ್ಲಿ ರೂ.2,052 ರಷ್ಟಾಯಿತು. ಅಂದರೆ ಗಣಿ ಕಂಪನಿಗಳು ಎಷ್ಟು ಲಾಭ ಮಾಡಿಕೊಂಡಿರಬಹುದು ಎಂಬುದನ್ನು ಯಾರೂ ಊಹಿಸಿಕೊಳ್ಳಬಹುದು. ಲೋಕಾಯುಕ್ತರ ವರದಿಯ ಪ್ರಕಾರ 2006 ರಿಂದ 2010ರ ಅವಧಿಯಲ್ಲಿ ಕಬ್ಬಿಣ ಅದಿರಿನ ಅಕ್ರಮ ರಫ್ತುವಿನಿಂದ ರಾಜ್ಯ ಕಳೆದುಕೊಂಡ ಸಂಪತ್ತು ರೂ. 12,228 ಕೋಟಿ ಎಂದು ಅಂದಾಜು ಮಾಡಲಾಗಿದೆ. ಗಣಿ ಕಂಪನಿಗಳು ಗಣಿ ತ್ಯಾಜ್ಯವನ್ನು ಸುರಿಯಲು, ಅದಿರನ್ನು ಗುಡ್ಡೆ ಹಾಕಲು, ಗಣಿಗಳಿಗೆ ರಸ್ತೆ ನಿರ್ಮಿಸಲು – ಹೀಗೆ ಬೇರೆ ಬೇರೆ ಉದ್ದೇಶಗಳಿಗೆ ಒತ್ತುವರಿ-ಅತಿಕ್ರಮಣ ಮಾಡಿಕೊಂಡ ಜಮೀನು 2008ರಲ್ಲಿ 1,114.08 ಹೆಕ್ಟೇರುಗಳಾಗಿದ್ದರೆ, 2011ರಲ್ಲಿ ಇದು 1,723 ಹೆಕ್ಟೇರಿಗೇರಿದ್ದನ್ನು ಲೋಕಾಯುಕ್ತ ವರದಿ ಬಹಿರಂಗಪಡಿಸಿದೆ. ಲೋಕಾಯುಕ್ತದ ಅಧಿಕಾರಿಗಳು ನಡೆಸಿದ 166 ಗಣಿ ಗುತ್ತಿಗೆಗಳ ಸಮೀಕ್ಷೆಯಲ್ಲಿ 123 ಗಣಿ ಕಂಪನಿಗಳು (ಶೇ.74.09) ಅಕ್ರಮದಲ್ಲಿ ತೊಡಗಿದ್ದವು ಎಂಬುದನ್ನು ಬಹಿರಂಗವಾಗಿದೆ.
ಪರಿಸರಕ್ಕೆ ಸಂಬಂಧಿಸಿದ ಅಧ್ಯಯನಗಳು ದಾಖಲಿಸಿರುವಂತೆ ಗಣಿ ಪ್ರದೇಶದ ತಾಲ್ಲೂಕುಗಳಲ್ಲಿ ನೀರು ವಿಷಯುಕ್ತವಾಗಿದೆ, ಗಾಳಿ ವಿಷಪೂರಿತವಾಗಿದೆ, ಅದಿರಿನ ಸೂಕ್ಷ್ಮ (ಫೈನ್ಸ್) ಕಣಗಳ ಹುಡಿಯಿಂದ ಕೃಷಿ ಬೆಳೆಗಳು ನಾಶವಾಗಿವೆ, ಮರಗಿಡಗಳ ಎಲೆಗಳ ಮೇಲೆ ಅದಿರಿನ ಪುಡಿ ಕುಳಿತಿರುವುದರಿಂದ ಅವುಗಳ ಬೆಳವಣಿಗೆ ಕುಂಠಿತಗೊಂಡಿದೆ. ಭೂ ಮೇಲ್ಮೈ ತನ್ನ ರೂಪವನ್ನೇ ಕಳೆದುಕೊಂಡಿದೆ. ಗಣಿ ಪ್ರದೇಶದಲ್ಲಿ ಧ್ಯುತಿಸಂಶ್ಲೇಷಣ ಕ್ರಿಯೆಯೇ ನಡೆಯದಂತಾಗಿದೆ.
ಸಮಾಜ ಪರಿವರ್ತನ ಸಮುದಾಯದ ಪಾತ್ರ
ಈ ಎಲ್ಲ ಗಣಿ ಲೂಟಿ, ಪರಿಸರ ವಿನಾಶ, ಅಕ್ರಮ ಸಂಪತ್ತಿನ ಸಂಗ್ರಹ, ಚಕ್ರವರ್ತಿಗಳ ಅಟ್ಟಹಾಸ, ಅಧಿಕಾರಿಗಳ ನಿರ್ಲಕ್ಷ್ಯ ಮುಂತಾದವುಗಳೆಲ್ಲ ಬಹಿರಂಗವಾಗುವುದಕ್ಕೆ ಕಾರಣಕರ್ತರೆಂದರೆ ಸಮಾಜ ಪರಿವರ್ತನ ಸಮುದಾಯದ ಶ್ರೀ ಎಸ್. ಆರ್. ಹಿರೇಮಠ್. ಇವರು ವಿಸ್ತೃತ ಸಂಶೋಧನೆ ನಡೆಸಿ ಗಣಿ ಅಕ್ರಮಗಳ ದಾಖಲೆಗಳನ್ನು ಸಂಗ್ರಹಿಸಿ, ವೈಜ್ಞಾನಿಕವಾಗಿ 2009ರಲ್ಲಿ ಸವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ದಾಖಲಿಸಿದ ಪರಿಣಾಮವಾಗಿ ಅಕ್ರಮಗಳ ಮಹಾ ಆಸ್ಪೋಟ ಹೊರೆಗೆ ಬಂತು. ಸರ್ವೋಚ್ಛ ನ್ಯಾಯಾಲಯವು ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿಯ ಎದುರಿಗೆ ಎಸ್. ಆರ್. ಹಿರೇಮಠ್ ವಾದ ಮಂಡಿಸಿದರೆ, ಸರ್ವೋಚ್ಛ ನ್ಯಾಯಾಲಯದಲ್ಲಿ ಅವರನ್ನು ಪ್ರತಿನಿಧಿಸುತ್ತಿದ್ದ ಶ್ರೀ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು. ಈ ಎಲ್ಲ ಬೆಳವಣಿಗೆ ಪರಿಣಾಮವಾಗಿ ಅಂದಿನ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಯಿತು. ರಿಪಬ್ಲಿಕ್ ಆಫ್ ಬಳ್ಳಾರಿ ಚಕ್ರವರ್ತಿ ಜೈಲು ಸೇರುವಂತಾಯಿತು. ಗಣಿ ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ವೋಚ್ಛ ನ್ಯಾಯಾಲಯವು ಅಕ್ರಮಗಳಲ್ಲಿ ತೊಡಗಿದ್ದ ಗಣಿ ಕಂಪನಿಗಳ ಮೇಲೆ ಗಣಿಗಾರಿಕೆ ನಿಷೇಧ ಹೇರಿತು. ಅಕ್ರಮಗಳಿಗೆ ದಂಡವನ್ನು ವಿಧಿಸಿತು. ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರಿಗೆ ಶಿಕ್ಷೆಯಾಗಿದ್ದರೆ, ಗಣಿ ಅಕ್ರಮಗಳಿಗೆ ತಡೆ ಬಿದ್ದಿದ್ದರೆ ಅದರ ಕೀರ್ತಿ ಶ್ರೀ ಎಸ್.ಆರ್. ಹಿರೇಮಠ್ ಅವರಿಗೆ ಮತ್ತು ಅವರು ಸ್ಥಾಪಿಸಿರುವ ಸಮಾಜ ಪರಿವರ್ತನ ಸಮುದಾಯಕ್ಕೆ ಸಲ್ಲಬೇಕು.
ವಿನಾಶವಾದ ಗಣಿ ಪ್ರದೇಶದಲ್ಲಿನ ಪರಿಸರದ ಪುನಶ್ಚೇತನ
ಹೇಳಿಕೇಳಿ ಬಳ್ಳಾರಿ ಜಿಲ್ಲೆಯು ಆರ್ಥಿಕವಾಗಿ ಶ್ರೀಮಂತವಾದ ಸಾಮಾಜಿಕವಾಗಿ ಮತ್ತು ಮಾನವ ಅಭಿವೃದ್ಧಿಯಲ್ಲಿ ತೀವ್ರ ದುಸ್ಥಿತಿಯಲ್ಲಿರುವ ಜಿಲ್ಲೆಯಾಗಿದೆ. ಉದಾ. ತಲಾ ವರಮಾನದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ 2020-2021ರಲ್ಲಿ ಬಳ್ಳಾರಿ ಜಿಲ್ಲೆಯ ಸ್ಥಾನ 12. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇದರ ಸ್ಥಾನ 26(2012). ಅದೇ ರೀತಿಯಲ್ಲಿ ಸಾಕ್ಷರತೆಯಲ್ಲಿ ಜಿಲ್ಲೆಯ ಸ್ಥಾನ 24(2011). ಲಿಂಗಸಂಬಂಧಿ ಅಸಮಾನತೆ ಸೂಚ್ಯಂಕದಲ್ಲಿ ಇದರ ಸ್ಥಾನ 29. ಜನರ ಆರೋಗ್ಯ ಮತ್ತು ಶಿಕ್ಷಣದ ಸ್ಥಿತಿಗತಿಯು ಅತ್ಯಂತ ಹೀನಾಯವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಗಣಗಾರಿಕೆಯ ಬ್ರಹ್ಮರಾಕ್ಷಸ ಸ್ವರೂಪಿ ಆಸ್ಪೋಟವನ್ನು ನೋಡಿದಾಗ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿರುವುದು ಸ್ಪಷ್ಟವಾಗುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 (2019-2020)ರ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ 6 ರಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಅನಿಮಿಯ ಎದುರಿಸುತ್ತಿರುವ ಮಕ್ಕಳ ಪ್ರಮಾಣ ಶೇ. 67.5 ಮತ್ತು 15 ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯರಲ್ಲಿ ಅನಿಮಿಯ ಎದುರಿಸುತ್ತಿರುವ ಮಹಿಳೆಯರ ಪ್ರಮಾಣ 2015-16ರಲ್ಲಿ ಶೇ. 49.9 ರಷ್ಟಿದ್ದುದು 2019-2020ರಲ್ಲಿ ಇದು ಶೇ,. 58.10ಕ್ಕೇರಿದೆ.
ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯು ಪರಿಸರದ ಮೇಲೆ ಉಂಟು ಮಾಡಿರುವ ಪರಿಣಾಮಗಳ ಮೌಲ್ಯಮಾಪನವನ್ನು ಇಂಡಿಯನ್ ಕೌನ್ಸಿಲ್ ಫಾರ್ ಫಾರೆಸ್ಟ್ ರೀಸರ್ಚ್ ಆಂಡ್ ಎಜ್ಯುಕೇಶನ್ ನಡೆಸಿತು. ಇದರ ಪ್ರಕಾರ ಪರಿಸರಕ್ಕೆ ಸಂಬಂಧಿಸಿದ ಯಾವುದೇ ಸಂರಕ್ಷಣಾ ಮಾರ್ಗಸೂಚಿಗಳನ್ನಾಗಲಿ, ಮಾನದಂಡಗಳನ್ನಾಗಲಿ ಗಣಿಕಂಪನಿಗಳು ಅನುಸರಿಸಿಲ್ಲ. ಮೇಲ್ಮೈ ಮತ್ತು ಅಂತರ್ ಜಲದ ಗುಣಮಟ್ಟ ಕುಸಿದಿದೆ. ಸಸ್ಪೆಂಡೆಡ್ ಪಾರ್ಟಿಕಲ್ ಮ್ಯಾಟರ್ ಮತ್ತು ರೆಸ್ಪಿರೇಟರಿ ಪಾರ್ಟಿಕಲ್ ಮ್ಯಾಟರ್ ಅಪಾಯಕಾರಿ ಮಟ್ಟವನ್ನು ಮೀರಿ ಏರಿಕೆಯಾಗಿದೆ.
ಸಮಾಜ ಪರಿವರ್ತನ ಸಮುದಾಯದ ವಿನಂತಿ ಮೇರೆಗೆ ಹೈದರಾಬಾದ್‌ನ ಸೆರೆನಾ ಫೌಂಡೇಶನ್ ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ, ಗಣಿಗಾರಿಕೆಯಿಂದ ಸಂಡೂರು ತಾಲ್ಲೂಕಿನ ಕೃಷಿಯಲ್ಲಿ ಉಂಟಾದ ನಷ್ಟ ವಾರ್ಷಿಕ ರೂ 200 ಕೋಟಿ. ಅಸ್ತಮಾ ರೋಗದ ಪ್ರಮಾಣ ಮಕ್ಕಳಲ್ಲಿ ಶೇ 25 ರಷ್ಟಿದ್ದರೆ ಒಟ್ಟು ಜನಸಂಖ್ಯೆಯಲ್ಲಿ ಶೇ. 20. ಹೀಗೆ ಅನೇಕ ಸಂಸ್ಥೆಗಳು ನಡೆಸಿದ ಅಧ್ಯಯನಗಳಿಂದ ಗಣಿ ಕಂಪನಿಗಳು ಪರಿಸರ ಸಂರಕ್ಷಣೆಯ ಯಾವುದೇ ನಿಯಮವನ್ನು ಪಾಲಿಸಿಲ್ಲ, ಗಣಿ ಪ್ರದೇಶದಲ್ಲಿನ ಜನರ ಆರೋಗ್ಯ ಹದಗೆಟ್ಟಿದೆ, ಕೃಷಿಯು ಅತ್ಯಧಿಕ ಹಾನಿಯನ್ನು ಅನುಭವಿಸಿದೆ. ಸೆರೆನಾ ಅಧ್ಯಯನದ ಪ್ರಕಾರ ಸರಾಸರಿ ಪ್ರತಿ ಕುಟುಂಬಕ್ಕೆ ಉಂಟಾದ ನಷ್ಟ ವಾರ್ಷಿಕ ರೂ. 50,000.
ಪರಿಸರ ಪುನಶ್ವೇತನ ಮತ್ತು ಪುನರ್ವಸತಿ ಕಾರ್ಯಕ್ರಮ
ಸರ್ವೋಚ್ಛ ನ್ಯಾಯಾಲಯವು ಸಿಈಸಿ ವರದಿಯ ಆಧಾರದ ಮೇಲೆ ಕರ್ನಾಟಕದಲ್ಲಿ ಗಣಿಗಾರಿಕೆ ಪ್ರದೇಶದಲ್ಲಿ ‘ಕಾಂಪ್ರಹೆನ್ಸಿವ್ ಎನ್‌ವರ‍್ನಮೆಂಟಲ್ ಪ್ಲಾನ್ ಫಾರ್ ಮೈನಿಂಗ್ ಇಂಪ್ಯಾಕ್ಟ್ ಜೋನ್’ (ಗಣಿಗಾರಿಕೆ ಪರಿಣಾಮದ ವಲಯದಲ್ಲಿ ಸಮಗ್ರ ಪರಿಸರ ಯೋಜನೆ) ಯಲ್ಲಿ ಪರಿಸರ ಪುನಶ್ಚೇತನಕ್ಕೆ ಅಮೂಲ್ಯವಾದ ಶಿಫಾರಸ್ಸು ನೀಡಿದೆ. ಪರಿಸರದ ಪುನಶ್ಚೇತನಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಅಕ್ರಮದಲ್ಲಿ ತೊಡಗಿದ್ದ ಗಣಿಗಳಿಂದ ದಂಡದ ರೂಪದಲ್ಲಿ, ಪರಿಹಾರದ ರೂಪದಲ್ಲಿ, ವಶಪಡಿಸಿಕೊಂಡ ಅದಿರಿನ ಹರಾಜಿನಿಂದ ಬಂದ ಹಣ, ಗಣಿ ಕಂಪನಿಗಳಿಂದ ಪ್ರತಿ ಟನ್ ಅದಿರಿಗೆ ಇಷ್ಟು ಎಂದು ಶುಲ್ಕ ಮುಂತಾದ ರೀತಿಯಲ್ಲಿ ಸಂಪನ್ಮೂಲ ಸಂಗ್ರಹಿಸಲು ಸರ್ವೋಚ್ಛ ನ್ಯಾಯಾಲಯ ಶಿಫಾರಸ್ಸು ಮಾಡಿದೆ. ಇದರಂತೆ ಕರ್ನಾಟಕ ಸರ್ಕಾರವು ‘ಸ್ಪೆಶನ್ ಪರ್ಪಸ್ ವೆಹಿಕಲ್’ ರಚಿಸಿದೆ. ಇದರ ಅನುಷ್ಠಾನಕ್ಕೆ ‘ಕರ್ನಾಟಕ ಮೈನಿಂಗ್ ಎನ್‌ವರ‍್ನಮೆಂಟಲ್ ರೆಸ್ಟೋರೇಸನ್ ಕಾರ್ಪೋರೇಶನ್’ ಎಂಬ ನೊಂದಾಯಿತ ಸಂಸ್ಥೆಯನ್ನು 2013ರಲ್ಲಿ ಸ್ಥಾಪಿಸಿದೆ. ಇತ್ತೀಚಿಗಿನ ವರದಿ ಪ್ರಕಾರ ಈ ‘ಸ್ಪೆಶಲ್ ಪರ್ಪಸ್ ವೆಹಿಕಲ್’ ನಲ್ಲಿರುವ ಹಣ ರೂ. 16,058 ಕೋಟಿ. ಇದರ ಅನುಷ್ಠಾನದಲ್ಲಿ ಸಾಕಷ್ಟು ವಿಳಂಬವಾಗಿದೆ. ಪರಿಸರ ಪುನಶ್ಚೇತನ ಕಾರ್ಯಕ್ರಮಕ್ಕೆ 2014ರಲ್ಲಿಯೇ ಅನುಮೋದನೆ ದೊರೆತ್ತಿದ್ದರೂ ಇದರ ಕೆಲಸ 2021ರಲ್ಲಿಯೂ ಆರಂಭವಾಗಿಲ್ಲ.
ಈ ಪುನಶ್ವೇತನ ಕಾರ್ಯಕ್ರಮದ ಅನುಷ್ಠಾನವು ಹೇಗೆ ನಡೆಯಬೇಕು ಎಂಬುದರ ಬಗ್ಗೆ ಕಳೆದ 6 ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಇದರಲ್ಲಿ ಕಾಂಟ್ರಾಕ್ಟ್ ಗಿರಿಗೆ ಸಂಬಂಧಿಸಿದ ಕೆಲಸಗಳನ್ನು ಕ್ರಿಯಾಯೋಜನೆಯಲ್ಲಿ ಹೇಗೆ ಸೇರಿಸಬೇಕು, ಮೂಲಸೌಲಭ್ಯಗಳಿಗೆ ಹೇಗೆ ಆದ್ಯತೆ ನೀಡಬೇಕು, ಪ್ಲೈಒವರ್ ನಿರ್ಮಾಣಕ್ಕೆ ಕ್ರಿಯಾಯೋಜನೆಯಲ್ಲಿ ಅವಕಾಶ ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗೆಗಿನ ಯೋಚನೆಯಲ್ಲಿ ಅಧಿಕಾರಿಗಳು ಮತ್ತು ಸರ್ಕಾರ ತುಂಬಾ ಬ್ಯುಸಿಯಾಗಿರುವಂತೆ ಕಾಣುತ್ತಿದೆ.
ಈ ಪರಿಸರ ಪುನಶ್ಚೇತನ ಕಾರ್ಯಕ್ರಮದ ಅನುಷ್ಠಾನವು ಪಾರದರ್ಶಕವಾಗಿ ನಡೆಯಲು ಇದರ ಮೇಲ್ವಿಚಾರಣೆ ನಡೆಸಲು ಒರಿಸ್ಸಾದಲ್ಲಿ ಮಾಡಿರುವಂತೆ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ‘ಓವರ್‌ಸೈಟ್ ಅಥಾರಿಟಿ’ ನೇಮಿಸಬೇಕು ಎಂಬ ಒತ್ತಾಯ ಬಂದುದರಿಂದ ಕರ್ನಾಟಕ ಸರ್ಕಾರವು ಇಂತಹ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಈ ಪ್ರಕಿಯೆ ಇನ್ನೂ ಮುಗಿದಿಲ್ಲ.
ಪರಿಸರ ಪುನಶ್ಚೇತನ ಕಾರ್ಯಕ್ರಮವು ಜನರ ಸಹಭಾಗಿತ್ವದಲ್ಲಿ ನಡೆಯುವಂತಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇದರಲ್ಲಿ ಗಣಿ ಬಾಧಿತ ಪ್ರದೇಶದಲ್ಲಿನ ಜನರ ಮೂಲ ಅಗತ್ಯಗಳಾದ ಶಿಕ್ಷಣ(ಪ್ರಾಥಮಿಕ), ಆರೋಗ್ಯ, ಕುಡಿಯುವ ನೀರು, ಪೌಷ್ಟಿಕತೆ, ಮಕ್ಕಳ ಆರೋಗ್ಯ, ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಗಳಿಗೆ ಆದ್ಯತೆ ದೊರೆಯಬೇಕು. ರಸ್ತೆ ನಿರ್ಮಾಣ, ರೈಲು ಮಾರ್ಗಗಳ ನಿರ್ಮಾಣ, ಸೇತುವೆಗಳ ನಿರ್ಮಾಣ ಮುಂತಾದವಕ್ಕೆ ಸರ್ಕಾರವು ಸಾಮಾನ್ಯ ಬಜೆಟ್ಟಿನಲ್ಲಿ ಸಂಪನ್ಮೂಲ ಒದಗಿಸಬೇಕು, ‘ಸ್ಪೆಶಲ್ ಪರ್ಪಸ್ ವೆಹಿಕಲ್’ನ ಹಣವನ್ನು ಮೂಲಸೌಲಭ್ಯ ಕಾರ್ಯಕ್ರಮಗಳಿಗೆ ವಿನಿಯೋಗಿಸಬಾರದು. ಏಕೆಂದರೆ ಇದು ಸ್ಪೆಶಲ್ ಕಾರ್ಯಕ್ರಮವೇ ವಿನಾ ರೂಢಿಗತ ಕಾರ್ಯಕ್ರಮವಲ್ಲ.
ಈ ಕಾರ್ಯಯೋಜನೆಯ ಅನುಷ್ಠಾನದಲ್ಲಿ ಗಣಿ ಬಾಧಿತ ಪ್ರದೇಶದ ಗ್ರಾಮ ಪಂಚಾಯತಿ ಸದಸ್ಯರ ಮೇಲ್ವಿಚರಣಾ ಸಮಿತಿಗಳನ್ನು ರಚಿಸಬೇಕು. ಇದರಲ್ಲಿ ಎಮ್.ಎಲ್.ಎ ಮತ್ತು ಎಂ.ಪಿಗಳಿಗೆ ಮಾರ್ಗದರ್ಶನ ನೀಡುವ ಅಧಿಕಾರವಿರಬೇಕೇ ವಿನಾ ಬಜೆಟ್ ರೂಪಿಸುವ, ಹಣ ವಿನಿಯೋಗಿಸುವ ಅಥವಾ ಆದ್ಯತೆಯನ್ನು ನಿರ್ಧರಿಸುವ ಮತ್ತು ಹಣಕಾಸಿಗೆ ಸಂಬಂಧಿಸಿದ ಯಾವುದೇ ಜವಾಬ್ದಾರಿ ಅವರಿಗೆ ಇರಬಾರದು.
ಈ ದಿಶೆಯಲ್ಲಿ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿ ಬಾಧಿತ ಪ್ರದೇಶದ ಜನರು ಜಾಗೃತರಾಗಬೇಕು. ಈ ಕಾರ್ಯಕ್ರಮಕ್ಕೆ ರೂ. 16,000 ಕೋಟಿಗೆ ಮಿರಿದ ಬಜೆಟ್ಟಿದೆ ಎಂಬುದನ್ನು ಸರ್ಕಾರವು ಜನರಿಗೆ ಸರಿಯಾಗಿ ತಿಳಿಸುತ್ತಿಲ್ಲ. ಇದಕ್ಕೆ ವೈಜ್ಞಾನಿಕ ಪರಿಸರ-ಸ್ನೇಹಿ, ಜನಮುಖಿ ಸುಸ್ಥಿರಗತಿಯ ಕ್ರಿಯಾಯೋಜನೆಯನ್ನು ರೂಪಿಸಿಲ್ಲ. ಈ ಬಗ್ಗೆ ಗಣಿ ಬಾಧಿತ ಪ್ರದೇಶದ ಜನರಿಗೆ ಮಾಹಿತಿಯೇ ಇಲ್ಲ. ಜನರನ್ನು ಕತ್ತಲೆಯಲ್ಲಿಟ್ಟು ಕಾರ್ಯಕ್ರಮ ಅನುಷ್ಠಾನಗೊಳಿಸಬಾರದು.