ಕೊಡಗು : ಕೊವಿಡ್ ನಿಯಂತ್ರಿಸೋದಕ್ಕೆ ಸರ್ಕಾರವೇನೋ ಎರಡೆರಡು ಬಾರಿ ಲಾಕ್ ಡೌನ್ ಜಾರಿ ಮಾಡಿತ್ತು. ಇನ್ನು ಎರಡು ವರ್ಷಗಳಿಂದ ಶಾಲೆಗಳ ಬಾಗಿಲು ತೆರೆದಿಲ್ಲ. ಶಾಲೆ ಇಲ್ಲದ ಪರಿಣಾಮ ವಿದ್ಯಾರ್ಥಿಗಳು ಬಾಲಕಾರ್ಮಿಕರಾಗಿ ಮಾರ್ಪಾಡಾಗುತ್ತಿದ್ದಾರೆ.
ಕಳೆದ 3 ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ 6 ಬಾಲಕಾರ್ಮಿಕರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಇದು ಇಲಾಖೆ ಅಧಿಕಾರಿಗಳು ರೈಡ್ ಮಾಡಿದ ಬಳಿಕ ಬೆಳಕಿಗೆ ಬಂದಿರುವ ಪ್ರಕರಣಗಳು. ಇನ್ನು ಬೆಳಕಿಗೆ ಬಾರದಿರುವ ಪ್ರಕರಣಗಳು ಸಾಕಷ್ಟು ಇವೆ ಎನ್ನೋದು ಮಕ್ಕಳ ಸಹಾಯವಾಣಿ ಮತ್ತು ಮಕ್ಕಳ ರಕ್ಷಣಾ ಘಟಕಗಳ ಸಿಬ್ಬಂದಿ ಹೇಳುವ ಮಾತುಗಳು. ಮೊದಲ ಬಾರಿಗೆ ಲಾಕ್ ಡೌನ್ ಆದಾಗ ಅಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಬಾಲಕಾರ್ಮಿಕರಾಗಿರಲಿಲ್ಲ.
ಇದನ್ನೂ ಓದಿ : ಸಾರ್ಥಕತ ಸೇವೆ ಸಲ್ಲಿಸುತ್ತಿರುವ ವಿಕಲಾಂಗ ಮಹಿಳೆ : ಮಾಸಿಕ ಪಿಂಚಣಿ ಹಣದಲ್ಲಿ 50 ಜನರಿಗೆ ಆಹಾರದ ಕಿಟ್ ವಿತರಣೆ
ಆದರೆ ಎರಡನೇ ಲಾಕ್ ಡೌನ್ ಬಳಿಕ ಬಾಲ ಕಾರ್ಮಿಕರಾಗುವವರ ಸಂಖ್ಯೆ ಹೆಚ್ಚು ಎನ್ನೋದು ಬಾಲ ನ್ಯಾಯ ಮಂಡಳಿ ಸದಸ್ಯರ ಅಭಿಪ್ರಾಯ. ಬಹುತೇಕ ಸ್ಥಳೀಯ ವಿದ್ಯಾರ್ಥಿಗಳು ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆರ್ಥಿಕವಾಗಿ ತೀರ ಕೆಳಮಟ್ಟದಲ್ಲಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಹಣದ ಆಮಿಷ ತೋರಿಸಿ ಕಡಿಮೆ ಕೂಲಿಗೆ ತೋಟದ ಮಾಲೀಕರು ದುಡಿಸಿಕೊಳ್ಳುತ್ತಿದ್ದಾರೆ.
ಒಟ್ಟು ಕಳೆದ ಮೂರು ತಿಂಗಳಲ್ಲಿ ರಕ್ಷಣೆ ಮಾಡಿರುವ 6 ಬಾಲ ಕಾರ್ಮಿಕರ ಪೈಕಿ 5 ಬಾಲಕಾರ್ಮಿಕರು ಕಾಫಿ ತೋಟಗಳಲ್ಲಿಯೇ ದುಡಿಯುತ್ತಿದ್ದವರು, ಒಬ್ಬ ವಿದ್ಯಾರ್ಥಿ ಮನೆಯಲ್ಲಿ ದುಡಿಯುತ್ತಿದ್ದ. ರಕ್ಷಣೆ ಮಾಡಿರುವ ಮಕ್ಕಳನ್ನು ಸದ್ಯ ರಿಮ್ಯಾಂಡ್ ಹೋಂಗಳಲ್ಲಿ ಇರಿಸಲಾಗಿದೆ. ಆರು ಪ್ರಕರಣನ್ನು ದಾಖಲಿಸಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.