ಕೋಲಾರ: ಕೊರೊನಾ ಹೋಗಲಾಡಿಸಲು ಹಗಲುರಾತ್ರಿ ಎನ್ನದೇ ಕೆಲಸ ಮಾಡುವ ವಾರಿಯರ್ಸ್ ಗೆ ಆರ್ಥಿಕವಾಗಿ ಶಕ್ತಿ ತುಂಬುವ ಜೊತೆಗೆ ಧೈರ್ಯ ತುಂಬುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನಗರಸಭೆ ಉಪಾಧ್ಯಕ್ಷ ಎನ್ ಎಸ್ ಪ್ರವೀಣ್ ಗೌಡ ತಿಳಿಸಿದರು.
ಜಾತ್ಯತೀತ ಜನತಾದಳ ತಾಲ್ಲೂಕು ಘಟಕದಿಂದ ನಗರಸಭೆಯಲ್ಲಿ ನಗರಸಭೆಯ ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ 300 ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಬಡವರು ಮತ್ತು ರೈತರ ಕಷ್ಟದಲ್ಲಿ ಭಾಗಿಯಾಗಲು ಜೆಡಿಎಸ್ ವರಿಷ್ಠರ ಆದೇಶದಂತೆ ಪಕ್ಷ ದಿನನಿತ್ಯ ಕಷ್ಟದಲ್ಲಿ ಇರುವರನ್ನು ಗುರುತಿಸಿ ಪೋತ್ಸಾಹಿಸುವ ಕೆಲಸ ಮಾಡುತ್ತಾ ಇದ್ದೇವೆ ಎಂದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ ಚಿಕಿತ್ಸೆ ಮತ್ತು ಸ್ವಚ್ಚತೆಯೇ ಮನುಷ್ಯನಿಗೆ ಮುಖ್ಯವಾದದ್ದು ಪೌರಕಾರ್ಮಿಕರ ಕಠಿಣ ಪರಿಶ್ರಮದಿಂದ ನಗರವನ್ನು ಸ್ವಚ್ಛವಾಗಿರುವಂತೆ ಮಾಡುವ ವೃತಿ ಮತ್ತು ಕಾರ್ಯವೈಖರಿಯನ್ನು ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ ಮೂರನೇ ಅಲೆಯನ್ನು ಎದುರಿಸಲು ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಜೆಡಿಎಸ್ ಪಕ್ಷದಿಂದ ನಡೆಯುತ್ತಾ ಇದೆ ಎಂದರು.
ನಗರಸಭೆ ಅಧ್ಯಕ್ಷೆ ಶ್ವೇತಾಶಬರೀಶ್ ಮಾತನಾಡಿ ಕೊರೊನಾ ಎರಡನೇ ಅಲೆಯಿಂದ ಸಾಕಷ್ಟು ಪ್ರಮಾಣದಲ್ಲಿ ತೊಂದರೆಗಳನ್ನು ಅನುಭವಿಸಬೇಕಾಯಿತು ಇಂತಹ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗೆ ಶಕ್ತಿ ತುಂಬುವ ಜೊತೆಗೆ ಉತ್ಸಾಹ ನೀಡುವ ಮೂಲಕ ಜೆಡಿಎಸ್ ಕಷ್ಟದಲ್ಲಿ ಇರುವರಿಗೆ ನೆರವಾಗುವಂತೆ ರಾಜ್ಯದಾದ್ಯಂತ ಯಾವ ಪಕ್ಷವರು ಮಾಡದ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಾ ಇದೆ ಎಂದರು
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮೂರಂಡಹಳ್ಳಿ ಗೋಪಾಲಪ್ಪ, ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ರಾಕೇಶ್, ಮಂಜುನಾಥ್, ಸುರೇಶ್, ರಫಿ, ಹಿದಾಯಿತ್ ಉಲ್ಲಾ ಖಾನ್ ಮುಂತಾದವರು ಇದ್ದರು.