ರಾಯಚೂರು : ಬಡವ್ಯಾಪಾರಿಗಳು ಮಾರಾಟಕ್ಕೆ ಇಟ್ಟುಕೊಂಡಿದ್ದ ಸೊಪ್ಪು ತರಕಾರಿಗಳನ್ನು ಬೂಟುಕಾಲಿನಿಂದ ಒದ್ದು ದರ್ಪ ಮೆರೆದಿದ್ದ ರಾಯಚೂರಿನ ಸದರ ಬಜಾರ್ ಠಾಣೆ ಪಿಎಸ್ಐ ಅಝಮ್ ಎಂಬುವರನ್ನು ಅಮಾನತ್ತುಗೊಳಿಸಲಾಗಿದೆ. ಜವಾಬ್ದಾರಿಯುತ ಅಧಿಕಾರಿಯಾಗಿ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕಮ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ತುರ್ತು ಸೇವೆ ಬಿಟ್ಟು ಬೇರೆ ಯಾವುದೇ ಚಟುವಟಿಕೆಗೆ ಅನುಮತಿ ನೀಡಲಾಗಿಲ್ಲ. ಆದಾಗ್ಯೂ ನಗರದ ತರಕಾರಿ ಮಾರುಕಟ್ಟೆ, ಭಂಗಿಕುಂಟಾ, ಚಂದ್ರಮೌಳೇಶ್ವರ ವೃತ್ತದಿಂದ ಪಟೇಲ್ ರಸ್ತೆ ಮಾರ್ಗದಲ್ಲಿ ರೈತರು, ವರ್ತಕರು ತರಕಾರಿ ಮಾರಾಟ ಮಾಡುತ್ತಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಪಿಎಸ್ಐ ತರಕಾರಿಯನ್ನೆಲ್ಲ ಒದ್ದು ಚಲ್ಲಾಪಿಲ್ಲಿ ಮಾಡಿದ್ದಲ್ಲದೇ, ಅವರ ಮೇಲೆ ಲಾಠಿ ಬೀಸಿದ್ದರು.
ಪಿಎಸ್ಐ ಅಝಮ್ ದರ್ಪ ಮೆರೆದಿದ್ದ ವಿಡಿಯೋ ಪ್ರಕಟವಾದ ಹಿನ್ನೆಲೆಯಲ್ಲಿ, ಕರ್ಫ್ಯೂ ನೆಪದಲ್ಲಿ ಬಡ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸುವುದು ಎಷ್ಟು ಸಮಂಜಸ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.