ಕೊಡಗು : ಸಿಎಂ ಬದಲಾವಣೆ ವಿಚಾರ ಇನ್ನೂ ಕೂಡ ತಣ್ಣಗೆ ಆಗಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಸಮಾಧಾನ ಮಾಡಿದ್ರು ಅತೃಪ್ತಿಯ ಬೆಂಕಿ ಹೊಗೆಯಾಡುತ್ತಲೇ ಇದೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇಂದು ಕೂಡ ನಾನು ವ್ಯಕ್ತಿ ಪೂಜೆ ಮಾಡುವವನಲ್ಲ ಎನ್ನುವ ಮೂಲಕ ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗಬೇಕು ಎನ್ನೋ ಸಂದೇಶ ರವಾನೆ ಮಾಡಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಶಾಸಕ ನಾನು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ನಾನು ಪಕ್ಷದ ಪರವಾಗಿದ್ದೇನೆ, ಪಕ್ಷದ ವಿಚಾರವನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ಮಾತನಾಡಿದ್ದೇನೆ ಎನ್ನೋ ಮೂಲಕ ಶಾಸಕ ಅಪ್ಪಚ್ಚು ರಂಜನ್ ಅವರ ನಡೆ ಯಡಿಯೂರಪ್ಪ ವಿರುದ್ಧ ಎನ್ನೋದು ಸಾಬೀತಾಗಿದೆ.
ಪಕ್ಷ ಎಂದ ಮೇಲೆ ಜಗಳಗಳು ಇದ್ದದ್ದೇ. ಅದನ್ನು ಪಕ್ಷದ ಒಳಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಬಹಿರಂಗ ಚರ್ಚೆ ಮಾಡೋದಿಲ್ಲ ಅಂತ ಹೇಳಿದ್ದಾರೆ. ಇನ್ನು ಎಂಎಲ್ಸಿ ಹೆಚ್ ವಿಶ್ವನಾಥ್ ಅವರು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿದ ವಿಷಯಕ್ಕಾಗಲಿ, ಅವರ ರೇಣುಕಾಚಾರ್ಯ ಅವರು ಆಕ್ರೋಶ ವ್ಯಕ್ತಪಡಿಸಿದ ವಿಷಯಕ್ಕಾಗಲಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಮತ್ತು ಸಿಎಂ ಬದಲಾವಣೆ ವಿಚಾರದಲ್ಲಿ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ.