- 12 ರೈತ ಕುಟುಂಬಗಳಿಂದ 25 ಲಕ್ಷ ರೂ ವಸೂಲಿ ಮಾಡಿದ ಆರೋಪ.
- ಭೂ ದಾಖಲೆ ಮತ್ತು ಆರ್ಟಿಸಿ ಮಾಡಿಕೊಡುವುದಾಗಿ ಹಣ ಪಡೆದ ಆರೋಪ.
- ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಪ್ರತಿಭಟನೆ.
- ಆಕ್ರೋಶ ವ್ಯಕ್ತಪಡಿಸಿ ಆಲದ ಮರ ಹತ್ತಿದ ರೈತ ನಾಗರಾಜ್.
- ತಹಶೀಲ್ದಾರ್ ಕಚೇರಿಯ ಸಿಸಿಟಿವಿ ದೃಶ್ಯ ಪರಿಶೀಲನೆಗೆ ರೈತರ ಒತ್ತಾಯ.
ಶಿವಮೊಗ್ಗ: ಭೂ ದಾಖಲೆ ಬದಲಾವಣೆ ಮಾಡಿ ಆರ್ಟಿಸಿ (RTC) ನೀಡುವುದಾಗಿ 12 ರೈತ ಕುಟುಂಬಗಳಿಂದ ತಹಶೀಲ್ದಾರ್ 25 ಲಕ್ಷ ರೂ. ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಣ ನೀಡಿದರೂ ಕೆಲಸ ಮಾಡಿಕೊಡದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಆಲದ ಮರ ಹತ್ತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಡಯೋ ವೈರಲ್ ಆಗಿದೆ
ರೈತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ರೈತ ನಾಗರಾಜ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಆಲದ ಮರ ಹತ್ತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ತಾಲೂಕು ರಾಮೇನಕೊಪ್ಪ ಗ್ರಾಮದ 12 ರೈತ ಕುಟುಂಬಗಳು ಹಲವು ವರ್ಷಗಳಿಂದ ಸರ್ವೆ ನಂಬರ್ 17ರ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿವೆ. 1960ರಿಂದ ಈ ಜಮೀನನ್ನು ಸಾಗುವಳಿ ಮಾಡುತ್ತಿರುವ ಕುಟುಂಬಗಳು, ತಮಗೆ ಮೂಲತಃ ಮಂಜೂರಾಗಿರುವ ಭೂಮಿಯ ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಿವೆ. ಆದರೆ ಕಂದಾಯ ಅಧಿಕಾರಿಗಳು ದಾಖಲೆ ಬದಲಾವಣೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಭೂ ದಾಖಲೆ ಬದಲಾವಣೆ ಮಾಡಿಕೊಡಲು ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಹಣ ನೀಡಬೇಕೆಂದು ಹೇಳಿ, ಈಗ ವರ್ಗಾವಣೆಯಾಗಿರುವ ತಹಶೀಲ್ದಾರ್ ತಮ್ಮಿಂದ 25 ಲಕ್ಷರೂ. ವಸೂಲಿ ಮಾಡಿದ್ದಾರೆ ಎಂಬುದು ರೈತರ ಆರೋಪ. ಹಣ ನೀಡಿದರೂ ಜಮೀನಿನ ದಾಖಲೆಗಳನ್ನು ತಮ್ಮ ಹೆಸರಿಗೆ ಮಾಡಿಕೊಟ್ಟಿಲ್ಲ ಎಂದು ಅವರು ದೂರಿದ್ದಾರೆ.
ಪ್ರತಿಭಟನೆ ವೇಳೆ ರೈತ ನಾಗರಾಜ್ ಮರ ಹತ್ತಿದ್ದರಿಂದ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಅವರನ್ನು ಕೆಳಗಿಳಿಸಲು ಪ್ರಯತ್ನಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಪ್ರತಿಭಟನೆಯನ್ನು ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದ ಬಳಿಕ ರೈತರು ಹಿಂಪಡೆದರು.
ಇದನ್ನೂಓದಿ: ನವೆಂಬರ್ 16ರಿಂದ 18ರವರೆಗೆ ಬೆಂಗಳೂರು ಕೃಷಿ ಮೇಳ: ಬರ ನಿರ್ವಹಣೆಗೆ ಮೂರು ಹೊಸ ಬೆಳೆ ತಳಿಗಳ ಬಿಡುಗಡೆ
ತಹಶೀಲ್ದಾರ್ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಬೇಕು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಸಂಬಂಧ ಲೋಕಾಯುಕ್ತ ಮತ್ತು ಮುಖ್ಯಮಂತ್ರಿಗಳಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ನೋಡಿ: ಪತ್ರಿಕಾ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಸುರಕ್ಷಿತತೆ – ಆನ್ಲೈನ್ ಸಂವಾದ
ಪ್ರತಿಭಟನೆ ವೇಳೆ ಮಾತನಾಡಿದ ನಾಗರಾಜ್, ಸಚಿವರ ಕಚೇರಿಯಿಂದ ಕರೆ ಮಾಡಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು. ಆರ್ಥಿಕವಾಗಿ ದುರ್ಬಲವಾಗಿರುವ 12 ಕುಟುಂಬಗಳು ದಶಕಗಳಿಂದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಭೂ ಮಂಜೂರಾತಿಯ ಮೂಲ ಆದೇಶವೂ ತಮ್ಮ ಬಳಿ ಇದೆ. ಆದರೂ ದಾಖಲೆಗಳನ್ನು ವರ್ಗಾಯಿಸಿಲ್ಲ. ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ಹಣ ಸಂಗ್ರಹಿಸಿ, ಕೆಲಸ ಪೂರ್ಣಗೊಳಿಸದೆ ತಹಶೀಲ್ದಾರ್ ವರ್ಗಾವಣೆಗೊಂಡಿರುವುದು ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ ಎಂದರು.
