ಸರಕಾರದ ಹೊಸ ಮಾರ್ಗಸೂಚಿಯಂತೆ ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಕೋವಿಡ್‌ ಸೋಂಕು ನಿವಾರಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹೊಸದಾದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಈ ಪ್ರಕಾರವಾಗಿ ನಿರ್ಬಂಧ ಸಡಿಲಿಕೆಗೊಂಡಿರುವ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ.

ನೆನ್ನೆ ಸಂಜೆ ಮುಖ್ಯಮಂತ್ರಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ಕೆಲವು ತೀರ್ಮಾನದಂತೆ ಸರಕಾರ ಹೊಸದಾ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ಇದನ್ನು ಓದಿ: ರಾಜ್ಯದ 11 ಜಿಲ್ಲೆಗಳಲ್ಲಿ ಮಾತ್ರ ಲಾಕ್‌ಡೌನ್‌ ಮುಂದುವರಿಕೆ: ಸಿಎಂ ಯಡಿಯೂರಪ್ಪ

ಕೋವಿಡ್ ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಈಗಾಗಲೇ ಸರಕಾರ ಹೊರಡಿಸಿದ್ದ ನಿಯಮಗಳು ಜೂ.21ರವರೆಗೆ ಅನ್ವಯವಾಗಲಿದೆ. ಉಳಿದ ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆ ಮಾಡಿದ್ದು, ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಘೋಷಿಸಲಾಗಿದೆ. ಈ ಜಿಲ್ಲೆಗಳಿಗೆ ಅನ್ವಯವಾಗುವಂತೆ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.

ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ, ಹಾಸನ, ಬೆಂಗಳೂರು ಗ್ರಾಮಾಂತರ, ಕೊಡಗು, ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಅನ್ವಯವಾಗುವ ಮಾರ್ಗಸೂಚಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿದೆ.

ಹೊಸ ಮಾರ್ಗಸೂಚಿ ಪ್ರಕಾರ

► ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ
► ಮಧ್ಯಾಹ್ನ 2 ಗಂಟೆಯವರೆಗೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ
► ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ
► ಅನಾರೋಗ್ಯ ಪೀಡಿತ ರೋಗಿಗಳ ತುರ್ತು ಸಂಚಾರಕ್ಕೆ ಅವಕಾಶ.
► ಮೆಡಿಕಲ್ ಸಿಬ್ಬಂದಿಗೆ ಅವಕಾಶ
► ಸರಕು ಸಾಗಣೆ ಮತ್ತು ಆನ್ ಲೈನ್ ಸೇವೆಗಳಿಗೆ ಅವಕಾಶ
► ಅಂತರ್ಜಾಲ, ಟೆಲಿಕಾಂ ಸೇವೆ ಸಿಬ್ಬಂದಿ ಓಡಾಟಕ್ಕೆ ಅವಕಾಶ
► ಸಿಮೆಂಟ್, ಸ್ಟೀಲ್ ಅಂಗಡಿ ತೆರೆಯಲು ಅವಕಾಶ
► ಗಾರ್ಮೆಂಟ್ಸ್ ಗಳಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಅವಕಾಶ
► ಬಾರ್, ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ. ಮದ್ಯ ಮಳಿಗೆಗಳು ಮಧ್ಯಾಹ್ನ 2 ಗಂಟೆಯವರೆಗೆ ತೆರಯಬಹುದು.
► ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಸಲು ಅವಕಾಶ
► ಕೆಎಸ್ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್ ಸಂಚಾರಕ್ಕೆ ನಿರ್ಬಂಧ
► ನಿಗದಿಯಾದ ಮದುವೆಗಳಲ್ಲಿ 40 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ
► ಅಂತ್ಯಕ್ರಿಯೆಯಲ್ಲಿ 5 ಜನರಿಗೆ ಮಾತ್ರ ಅವಕಾಶ
► ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶ. ಟಿಕೆಟ್ ತೋರಿಸಿ ಪ್ರಯಾಣಿಸಬಹುದು.

ಕೃಷಿ ಇಲಾಖೆ ಮತ್ತು ಸಂಬಂಧಿತ ಕಛೇರಿಗಳು, ಲೋಕೋಪಯೋಗಿ ಇಲಾಖೆ, ವಸತಿ, ಸಹಕಾರ, ಕಂದಾಯ, ನಬಾರ್ಡ್‌ ಮತ್ತು ಕೇಂದ್ರ ಸರಕಾರದ ಕಚೇರಿಗಳು ಶೇಕಡಾ 50ರಷ್ಟು ಸಿಬ್ಬಂದಿಯನ್ನು ಕಾರ್ಯನಿರ್ವಹಿಸಬಹುದು.

ರಾತ್ರಿ ಕರ್ಫ್ಯೂ: ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಕಾರ್ಖಾನೆಗಳು ಕಾರ್ಯನಿರ್ವಹಿಸಬಹುದು. ಕೆಲಸಗಾರರು ಗುರುತಿನ ಚೀಟಿ ತೋರಿಸಿ ಸಂಚರಿಸಬೇಕು. ತುರ್ತು ಪರಿಸ್ಥಿತಿ ಹೊರತುಪಡಿಸಿ ಮತ್ತ್ಯಾರಿಗೂ ಸಂಚಾರಕ್ಕೆ ಅವಕಾಶವಿಲ್ಲ.

ವಾರಾಂತ್ಯ ಕರ್ಫ್ಯೂ: ಶುಕ್ರವಾರ ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ಸೇವೆ, ಹಾಲು, ತರಕಾರಿ, ಬೀದಿ ಬದಿ ವ್ಯಾಪಾರಸ್ಥರರು, ಮದ್ಯದಂಗಡಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *