ತೀವ್ರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಕೊರೋನ ಸೋಂಕಿತ ಗರ್ಭಿಣಿಯೋರ್ವಳಿಗೆ ಖಾಸಗಿ ವೈದ್ಯರು, ಆಸ್ಪತ್ರೆಗಳು ಕೂಟವಾಗಿ ಕಾರ್ಯಾಚರಿಸಿ ಚಿಕಿತ್ಸೆ ನಿರಾಕರಿಸಿದ ಪ್ರಕರಣದ ಪೊಲೀಸ್ ತನಿಖೆ ಮಾತ್ರ ಸಾಲದು. ವೈದ್ಯಕೀಯ ಚಿಕಿತ್ಸಗೆ ಸಂಬಂಧಿಸಿದ ಸೂಕ್ಷ್ಮ ಅಂಶಗಳನ್ನು ಹೊಂದಿರುವ ಈ ಪ್ರಕರಣದ ಕುರಿತು ಜಿಲ್ಲಾಡಳಿತ ಆರೋಗ್ಯ ಇಲಾಖೆಯ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಡಿವೈಎಫ್ಐ ಒತ್ತಾಯಿಸಿತ್ತು. ನಮ್ಮ ಅಭಿಪ್ರಾಯದಂತೆ ಜಿಲ್ಲಾಧಿಕಾರಿ ತನಿಖೆಗೆ ಸಮಿತಿ ರಚಿಸಿದ್ದಾರೆ. ಸರಿಯಾದ ತನಿಖೆ ನಡೆದು ಸತ್ಯ ಪಕ್ಷಪಾತವಿಲ್ಲದೆ ಬಹಿರಂಗಗೊಳ್ಳಲಿ
ಮುನೀರ್ ಕಾಟಿಪಳ್ಳ
ಕೊರೋನ ಎರಡನೇ ಅಲೆ ತಹಬಂದಿಗೆ ಬರುತ್ತಿರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಖಾಸಗಿ ಆಸ್ಪತ್ರೆಗಳು ಕೊರೋನ ಚಿಕಿತ್ಸೆಯ ಹೆಸರಿನಲ್ಲಿ ತಮ್ಮಲ್ಲಿ ದಾಖಲಾದ ರೋಗಿಗಳನ್ನು ಲೂಟಿ ಹೊಡೆಯುತ್ತಿರುವ, ಸರಕಾರದ ದರ ಮಾರ್ಗಸೂಚಿಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುತ್ತಿರುವ ಕುರಿತು ನಾವು ಮೊದಲ ಅಲೆಯ ಸಂದರ್ಭದಿಂದಲೂ ಧ್ವನಿ ಎತ್ತುತ್ತಲೇ ಬಂದಿದ್ದೆವು. “ಖಾಸಗಿ ಆಸ್ಪತ್ರೆಗಳ ನಿಯಂತ್ರಣ, ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ” ಆಗ್ರಹಿಸಿ ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಕಚೇರಿಗಳ ಮುಂಭಾಗ ಧರಣಿಯನ್ನೂ ನಡೆಸಿದ್ದೆವು.
ಇಷ್ಟಾದರೂ,ಖಾಸಗಿ ಆಸ್ಪತ್ರೆಗಳು ತಮ್ಮ ಚಾಳಿಯನ್ನು ಮುಂದುವರಿಸಿ ಎರಡನೇ ಅವಧಿಯ ಸಂದರ್ಭ ತಮ್ಮ ವಸೂಲಿಯನ್ನು ನಿರ್ಲಜ್ಜವಾಗಿ ಮುಂದುವರೆಸಿದವು. ಸೋಂಕಿತರ ಚಿಕಿತ್ಸೆಗೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಬಿಲ್ ಗಳನ್ನು ಮಾಡಿ ನಿರ್ದಯವಾಗಿ ತಮ್ಮ ಖಜಾನೆ ತುಂಬಿಕೊಂಡವು. ಈ ಬಾರಿಯೂ ಕೆಲವೊಂದು ಪ್ರಕರಣಗಳಲ್ಲಿ ನಾವು ನಿರ್ದಿಷ್ಟವಾಗಿ ಮಧ್ಯಪ್ರವೇಶ ಮಾಡಿದಾಗ ಈ ವಿಷಯ ಮತ್ತೆ ಚರ್ಚೆಯ ಮುನ್ನಲೆಗೆ ಬಂತು. ಹಲವು ಪ್ರಕರಣಗಳು ಬಹಿರಂಗಗೊಂಡವು. ಜನಾಭಿಪ್ರಾಯವೂ ರೂಪು ಗೊಳ್ಳ ತೊಡಗಿತು. ನಾವು ದೂರು ನೀಡಿದ ಅಂತಹ ಪ್ರಕರಣಗಳಲ್ಲಿ ಜಿಲ್ಲಾಡಳಿತ ಅಕ್ರಮವಾಗಿ ವಸೂಲಿ ಮಾಡಲ್ಪಟ್ಟ ಲಕ್ಷಗಳ ಲೆಕ್ಕದ ಮೊತ್ತವನ್ನು ವಾಪಾಸು ಕೊಡಿಸಿತು. ಹೆಚ್ಚುವರಿ ವಸೂಲಿ ಮಾಡಲ್ಪಟ್ಟ ಪ್ರಕರಣಗಳಲ್ಲಿ ಆರೋಗ್ಯ ಇಲಾಖೆಗೆ ದೂರು ಸಲ್ಲಿಸುವಂತೆ, ಅಂತಹ ದೂರುಗಳಲ್ಲಿ ನಿಯಮಬದ್ದವಲ್ಲದ ಹೆಚ್ಚುವರಿ ಮೊತ್ತವನ್ನು ವಾಪಾಸುಕೊಡಿಸುವುದಾಗಿ ಪ್ರಕಟನೆ ಹೊರಡಿಸಿತು.
ಆ ಸಂದರ್ಭ ಹೋರಾಟದ ಮುಂಚೂಣಿಯಲ್ಲಿದ್ದ ನಾವು “ದೂರುಗಳನ್ನು ಸಲ್ಲಿಸಿದರೆ ಅಕ್ರಮವಾಗಿ ಸುಲಿಗೆ ಮಾಡಲ್ಪಟ್ಟ ಮೊತ್ತವನ್ನು ವಾಪಾಸು ಕೊಡಿಸುವುದು ಒಳ್ಳೆಯದೇ, ಆದರೆ ಅದಷ್ಟೆ ಸಾಲದು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಬಿಲ್ ಗಳು ನೋಡಲ್ ಅಧಿಕಾರಿಗಳ ಪರಿಶೀಲನೆಗೆ ಒಳಪಟ್ಟ ನಂತರವಷ್ಟೆ ರೋಗಿಯ ಕಡೆಯವರಿಗೆ ತಲುಪಬೇಕು, ಹಾಗೆಯೇ ‘ಹೆಚ್ಚುವರಿ ಹಾಕಲ್ಪಟ್ಟ ಮೊತ್ತ ವಾಪಾಸು ಕೊಡಿಸಿದರಷ್ಟೆ ಸಾಲದು, ಅಂತಹ ಪ್ರಕರಣಗಳಲ್ಲಿ ಆಸ್ಪತ್ರೆಯ ಆಡಳಿತದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು’ ಪ್ರತಿಯೊಬ್ಬರಿಗೂ ಹೀಗೆ ದೂರು ಸಲ್ಲಿಸಲು ಸಾಧ್ಯವಾಗದು. ಕೊರೋನ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳು ನೀಡಿರುವ ಚಿಕಿತ್ಸೆ, ಪಡೆದಿರುವ ಬಿಲ್ ಗಳ ಕುರಿತು ಒಂದು ಸಮಗ್ರ ತನಿಖೆ ನಡೆಸಬೇಕು” ತನಿಖಾ ಸಮಿತಿಯಲ್ಲಿ ನಾಗರಿಕರ ಪ್ರತಿನಿಧಿಗಳಿಗೆ ಅವಕಾಶ ಇರಬೇಕು ಎಂದು ಒತ್ತಾಯಿಸಿದ್ದೆವು.
ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಖಾಸಗಿ ಆಸ್ಪತ್ರೆಗಳು ಕೊರೋನ ಚಿಕಿತ್ಸೆಗೆ ಪಡೆದಿರುವ ಬಿಲ್ ಗಳ ಪರಿಶೀಲನೆಗೆ ಅಡಿಟ್ ಸಮಿತಿಯನ್ನು ನೇಮಿಸಿದ್ದಾರೆ. (ಅವರಿಗೆ ದನ್ಯವಾದಗಳು) ಪ್ರಥಮ ಹಂತದಲ್ಲಿ ಆಯುಷ್ಮಾನ್, ವಿಮೆಗಳ ಮೂಲಕ ಪಾವತಿಯಾಗಿರುವ ಬಿಲ್ ಗಳ ಬದಲಿಗೆ ರೋಗಿಗಳು ನೇರವಾಗಿ ಪಾವತಿಸಿರುವ ಬಿಲ್ ಗಳನ್ನು ಅಡಿಟ್ ಸಮಿತಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇದು ಖಂಡಿತಾ ಸಾಲದು. ಒಂದು ವರ್ಷದ ಅವಧಿಯಲ್ಲಿ ಸುಮಾರು ಐವತ್ತು ಕೋಟಿ ರೂಪಾಯಿಯಷ್ಟು ದೊಡ್ಡ ಮೊತ್ತ ಸರಕಾರದ ಖಜಾನೆಯಿಂದ ಆಯುಷ್ಮಾನ್ ಯೋಜನೆಯಡಿ ಕೊರೋನಾ ಚಿಕಿತ್ಸಾ ಮೊತ್ತವೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗಳ ತಿಜೋರಿ ಸೇರಿದೆ. ಇದರಲ್ಲಿ ಅಕ್ರಮ ಲೆಕ್ಕದ ವಾಸನೆ ಸ್ವಲ್ಪ ದಟ್ಟವಾಗಿಯೇ ಮೂಗಿಗೆ ಬಡಿಯುತ್ತಿದೆ. ಇದು ಜನರ ತೆರಿಗೆಯ ದುಡ್ಡು (ವಿಮೆ ಯೋಜನೆಯಲ್ಲಿ ಆಗುವ ಲೂಟಿ ಊಹೆಗೆ ನಿಲುಕದ್ದು) ಆದುದರಿಂದ ಆಯುಷ್ಮಾನ್, ಇನ್ಸೂರೆನ್ಸ್ ಮೂಲಕ ಪಾವತಿಯಾದ ಬಿಲ್ ಗಳೂ ಆದ್ಯತೆಯಲ್ಲಿ ಪರಿಶೀಲನೆಗೆ ಒಳಗಾಗಬೇಕು.
ಇಷ್ಟಾದರೂ ಸತ್ಯ ಅನಾವರಣಗೊಳ್ಳುವುದು ಅಷ್ಟು ಸುಲಭ ಅಲ್ಲ. ಎಂಟು ಮೆಡಿಕಲ್ ಕಾಲೇಜು,ಹತ್ತಾರು ಕಾರ್ಪೊರೇಟ್ ದರ್ಜೆಯ ಆಸ್ಪತ್ರೆಗಳನ್ನು ಹೊಂದಿರುವ ಮಂಗಳೂರಿನ ಖಾಸಗಿ ಮೆಡಿಕಲ್ ಲಾಬಿಯ ಬೇರುಗಳು ನಾವು ಊಹಿಸಿದ್ದಕ್ಕಿಂತ ಜಾಸ್ತಿಯೇ ಆಳಕ್ಕೆ ಇಳಿದು ಕೊಂಡಿದೆ. ತುಳುನಾಡಿನ ಸರ್ವಪಕ್ಷಗಳಲ್ಲಿಯೂ ಅವರಿಗೆ ಹತ್ತಿರದ “ನೆಂಟ”ರಿದ್ದಾರೆ. ಬೇರುಗಳನ್ನು ಅಲ್ಲಾಡಿಸಲು ಯತ್ನಿಸುವ ಅಧಿಕಾರಿಗಳನ್ನು ಫುಟ್ ಬಾಲ್ ತರಹ ಒದ್ದು ಜಿಲ್ಲೆಯಿಂದ ಹೊರಗೆ ಅಟ್ಟುವುದು ಅವರಿಗೆ ಸಲೀಸಾದ. ಕೆಲಸ. ಜಿಲ್ಲಾಧಿಕಾರಿಗಳು ಕನಿಷ್ಟ ನಾಗರಿಕ ಪ್ರತಿನಿಧಿಗಳಿಗೂ ಪ್ರಾತಿನಿಧ್ಯ ಇರುವ (ಸರಕಾರದ ಅನುಮತಿ ಬೇಕಾಗಬಹುದು) ಒಂದು ಸಮಿತಿಯನ್ನು ರಚಿಸಿ ಕೊರೋನಾ ಚಿಕಿತ್ಸೆಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಿ ಒಂದು ವರದಿ ನೀಡುವಂತೆ ಕ್ರಮ ವಹಿಸಿದರೆ ಬೇರೇನಿಲ್ಲದಿದ್ದರೂ, ಕನಿಷ್ಟ ಖಾಸಗಿ ಆಸ್ಪತ್ರೆಗಳ ಲೂಟಿ ಕೋರತನದ ಕುರಿತು ಸಾಕ್ಷ್ಯಾಧಾರಗಳುಲ್ಲ ಒಂದು ಅಧಿಕೃತ ದಾಖಲೆಯಾದರು ಸೃಷ್ಟಿಯಾದಂತಾಗುತ್ತದೆ. ಅದರ ಹೊರತು ಆರೋಗ್ಯ ಇಲಾಖೆಯ ಸಾಮಾನ್ಯ ಅಧಿಕಾರಿಗಳು ಇರುವ ಈ ಆಡಿಟ್ ಸಮಿತಿಗೆ ಕೈ ಕಾಲು ಅಲ್ಲಾಡಿಸಲೂ ” ಸರ್ವಶಕ್ತ” ಮೆಡಿಕಲ್ ಮಾಫಿಯಾ ಅವಕಾಶ ನೀಡುವುದಿಲ್ಲ ಎಂಬುದು ಹಗಲಿನಷ್ಟೆ ಸತ್ಯ.
“ಗರ್ಭಿಣಿ ಆಸ್ಪತ್ರೆ ಅಲೆದಾಟ ಪ್ರಕರಣದ ತನಿಖೆಗೆ ಸಮಿತಿ”
ತೀವ್ರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಕೊರೋನ ಸೋಂಕಿತ ಗರ್ಭಿಣಿಯೋರ್ವಳಿಗೆ ಖಾಸಗಿ ವೈದ್ಯರು, ಆಸ್ಪತ್ರೆಗಳು ಕೂಟವಾಗಿ ಕಾರ್ಯಾಚರಿಸಿ ಚಿಕಿತ್ಸೆ ನಿರಾಕರಿಸಿದ ಪ್ರಕರಣದ ಪೊಲೀಸ್ ತನಿಖೆ ಮಾತ್ರ ಸಾಲದು. ವೈದ್ಯಕೀಯ ಚಿಕಿತ್ಸಗೆ ಸಂಬಂಧಿಸಿದ ಸೂಕ್ಷ್ಮ ಅಂಶಗಳನ್ನು ಹೊಂದಿರುವ ಈ ಪ್ರಕರಣದ ಕುರಿತು ಜಿಲ್ಲಾಡಳಿತ ಆರೋಗ್ಯ ಇಲಾಖೆಯ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಡಿವೈಎಫ್ಐ ಒತ್ತಾಯಿಸಿತ್ತು. ನಮ್ಮ ಅಭಿಪ್ರಾಯದಂತೆ ಜಿಲ್ಲಾಧಿಕಾರಿ ತನಿಖೆಗೆ ಸಮಿತಿ ರಚಿಸಿದ್ದಾರೆ. ಸರಿಯಾದ ತನಿಖೆ ನಡೆದು ಸತ್ಯ ಪಕ್ಷಪಾತವಿಲ್ಲದೆ ಬಹಿರಂಗಗೊಳ್ಳಲಿ ಎಂದು ಆಶಿಸುವೆ.
ಇದನ್ನೂ ಓದಿ : 10 ದಿನಕ್ಕೆ 5 ಲಕ್ಷ ರೂಪಾಯಿ ಬಿಲ್: ಕೊರೊನಾ ಸೋಂಕಿತರ ಸುಲಿಗೆ ಮಾಡುತ್ತಿರುವ ಮಂಗಳೂರು ಖಾಸಗಿ ಆಸ್ಪತ್ರೆ
ಖಾಸಗಿ ಆಸ್ಪತ್ರೆಗಳು ಎಂಬ ನಿರ್ದಯಿ ವ್ಯಾಪಾರಿಗಳ ಕೂಟ ತಮ್ಮ ವಿರುದ್ದ ಜನ ಇದೀಗ ತಿರುಗಿ ಬೀಳುತ್ತಿರುವುದು, ಜನಾಭಿಪ್ರಾಯ ಕ್ರೋಢೀಕರಣಗೊಳ್ಳುತ್ತಿರುವುದು ಕಂಡು ತಮ್ಮ ಸೂಪರ್ ಲಾಭದಾಯಕ ವ್ಯಾಪಾರದ ಹಿತಾಸಕ್ತಿಗಳ ರಕ್ಷಣೆಗಾಗಿ ಮತ್ತಷ್ಟು ನಿರ್ಲಜ್ಜವಾಗಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ದುಬಾರಿ ಬಿಲ್ ಗಳನ್ನು ಬಾಯಿಮುಚ್ಚಿ ಕಟ್ಟುತ್ತಿದ್ದ ರೋಗಿಗಳ ಸಂಬಂಧಿಗಳೆಂಬ ಗ್ರಾಹಕರು ದುಬಾರಿ ಬಿಲ್ ಗಳನ್ನು ಮುಂದಿಟ್ಟು ಚರ್ಚೆ,ವಾಗ್ವಾದ ನಡೆಸುವುದು, ಸಂಘಟನೆಗಳ,ಮಾಧ್ಯಮದ ಮೊರೆ ಹೋಗುವುದು, ಅಧಿಕಾರಿಗಳಿಗೆ ದೂರು ಸಲ್ಲಿಸುವುದು, “ಹೆಣವನ್ನು ನೀವೆ ಇಟ್ಟುಕೊಳ್ಳಿ” ಎಂಬಂತ ಪ್ರಬಲ ಪ್ರತಿರೋಧ ಒಡ್ಡುತ್ತಿರುವುದು ಆಸ್ಪತ್ರೆ ಲಾಬಿಯ ತಲೆ ಕೆಡುವಂತೆ ಮಾಡಿದೆ. ಕ್ರೌಡ್ ಫಂಡಿಂಗ್ ಮೂಲಕ ದುಬಾರಿ ಬಿಲ್ ಪಾವತಿಗೂ ಜನರ ನಕಾರಾತ್ಮಕ ಪ್ರತಿಕ್ರಿಯೆ ಜನ ಜಾಗೃತಿಯ ಭಾಗದಂತೆ ಕಂಡುಬರುತ್ತಿದೆ.
ಇದರಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳು ರೋಗಿಗಳಲ್ಲಿ ದುಬಾರಿ ಅಡ್ವಾನ್ಸ್ ಪಡೆದುಕೊಳ್ಳುವುದು, ಅಡ್ವಾನ್ಸ್ ನೀಡುವವರೆಗೂ ಗಂಭೀರಾವಸ್ಥೆಯ ರೋಗಿಗಳನ್ನು ಆಸ್ಪತ್ರೆಯ ಹೊರಗಡೆಯೇ ನಿಲ್ಲಿಸಿಕೊಳ್ಳುವ ಅತ್ಯಂತ ಕೊಳಕಾದ,ವೈದ್ಯಕೀಯ ಆದರ್ಶಕ್ಕೆ ತೀರಾ ತದ್ವಿರುದ್ದವಾದ ಮಾದರಿಯೊಂದು ಕೆಲ ದಿನಗಳಿಂದ ವರದಿಯಾಗುತ್ತಿದೆ. ಕೆಲವು ಪ್ರಕರಣಗಳು ನಮ್ಮ ಗಮನಕ್ಕೂ ಬಂದಿವೆ. ಇದು ಸಲ್ಲದು. ಜಿಲ್ಲಾಡಳಿತ ಇಂತಹ ಪ್ರವೃತ್ತಿಗೆ ತಕ್ಷಣ ಕಡಿವಾಣ ಹಾಕಬೇಕು. ವೈದ್ಯ ಲೋಕ ಈ ಎಲ್ಲಾ ಬೆಳವಣಿಗೆಗಳ ಕುರಿತು ಆತ್ಮಾವಲೋಕನ ನಡೆಸಬೇಕು. ಅತ್ಯಂತ ಗೌರವಾನ್ವಿತರಾದ ತಾವು ತಪ್ಪಿದ್ದೆಲ್ಲಿ ಎಂಬುದನ್ನು ಅವರೇ ಕಂಡುಕೊಳ್ಳಬೇಕು. ಆಗ ವಿಶ್ವಾಸದ ಹೊಸ ಬೆಳಕೊಂದು ಕಾಣಿಸಿಕೊಳ್ಳುತ್ತದೆ.