ನವದೆಹಲಿ : ರಾಷ್ಟ್ರೀಯ ಕನಿಷ್ಟ ಕೂಲಿಗಳನ್ನು ನಿಗದಿ ಮಾಡಲಿಕ್ಕಾಗಿ “ತಾಂತ್ರಿಕ ಅಂಶಗಳನ್ನು ಒದಗಿಸಲು ಮತ್ತು ಶಿಫಾರಸುಗಳನ್ನು ಮಾಡಲು ಒಂದು ಪರಿಣತರ ಗುಂಪನ್ನು ರಚಿಸಲಾಗಿದೆ” ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ಜೂನ್ 3ರಂದು ಒಂದು ಪತ್ರಿಕಾ ಹೇಳಿಕೆ ನೀಡಿದೆ. ಕನಿಷ್ಟ ಕೂಲಿಗಳನ್ನು ಹೆಚಿಸುವುದು ಈ ನೇಮಕದ ಉದ್ದೇಶ ಅಲ್ಲ, ಬದಲಾಗಿ ಈ ಇಡೀ ಪ್ರಕಿಯೆಯನ್ನು ವಿಳಂಬಗೊಳಿಸುವ ಪ್ರಯತ್ನವಿದು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಟೀಕಿಸಿದೆ.
ಈ ಪರಿಣತರ ಗುಂಪಿಗೆ ಮೂರು ವರ್ಷಗಳ ಕಾರ್ಯಾವಧಿಯನ್ನು ಕೊಟ್ಟಿರುವುದೇ ಇದನ್ನು ತೋರಿಸುತ್ತದೆ. ಕನಿಷ್ಟ ಕೂಲಿಗಳನ್ನು ಹೆಚ್ಚಿನ ಮಟ್ಟದಲ್ಲಿ ನಿಗದಿಪಡಿಸುವ ಕಾತುರ ಈ ಸರಕಾರಕ್ಕೆ ಇದೆ ಎಂಬುದರ ಪ್ರದರ್ಶನದ ಮರೆಯಲ್ಲಿ ಸರಕಾರದ ಆರಿಸಿದ ವ್ಯಕ್ತಿಗಳಿಗೆ ಸರಕಾರೀ ಸಮಿತಿಗಳಲ್ಲಿ ಮೂರು ವರ್ಷ ಸ್ಥಾನ ಕೊಡಲಿಕ್ಕಾಗಿ, ಅದರೊಂದಿಗೆ ಕನಿಷ್ಟ ಕೂಲಿ ನಿಗದಿ/ಪರಿಷ್ಕರನೆ ಪ್ರಶ್ನೆ ನೆನೆಗುದಿಯಲ್ಲಿ ಇಡಲು ಈ ಕ್ರಮ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ಕೇಂದ್ರ ಕಾರ್ಮಿಕ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಈಗಾಗಲೇ ಜನವರಿ 2018ರಲ್ಲಿ ಇದೇ ವಿಷಯದ ಮೇಲೆ ಇಂತಹ ಒಂದು ಪರಿಣಿತರ ಸಮಿತಿಯನ್ನು ಮೋದಿ ಸರಕಾರವೇ ನೇಮಿಸಿತ್ತು. ಅದು ಜನವರಿ 2019ರಲ್ಲಿ ಒಂದು ಭಾರೀ ಗಾತ್ರದ ವರದಿಯೊಂದಿಗೆ ತನ್ನ ಶಿಫಾರಸುಗಳನ್ನೂ ಸಲ್ಲಿಸಿದೆ. ಆದರೆ ಆ ವರದಿ ಮತ್ತು ಶಿಫಾರಸುಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ಈಗ ಇನ್ನೊಂದು ಪರಿಣತರ ಗುಂಪನ್ನು ನೇಮಿಸಲಾಗಿದೆ, ಅದೂ ಮೂರು ವರ್ಷಕ್ಕೆ. ಅಂದರೆ ಕನಿಷ್ಟ/ನೆಲಮಟ್ಟದ ಕೂಲಿಯ ನಿಗದಿ/ಪರಿಷ್ಕರಣೆಯನ್ನು ಅಂತಿಮಗೊಳಿಸಲು ಇನ್ನೂ ಕನಿಷ್ಟ ಮೂರು ವರ್ಷ ಕಾಯಬೇಕು ಎಂದು ಅರ್ಥವೇ ಎಂದು ತಪನ್ ಸೆನ್ ಪ್ರಶ್ನಿಸಿದ್ದಾರೆ.
ಕನಿಷ್ಟ ಕೂಲಿಗಳನ್ನು ನಿರ್ಧರಿಸಲು ಬೇಕಾಗುವ ಅಂಶಗಳನ್ನು, ಮಾಹಿತಿಗಳನ್ನು ಪಡೆಯಲಿಕ್ಕಾಗಿ ಈ ನೇಮಕ ಎಂದು ಸರಕಾರ ಹೇಳಿದೆ. ಸರಕಾರಕ್ಕೆ ಎಂತಹ ಮಾಹಿತಿಗಳು ಬೇಕಾಗಿವೆ? “ಕೂಲಿ ದರಗಳನ್ನು ನಿರ್ಧರಿಸಲು ಈ ಗುಂಪು ಸಂಬಳಗಳು ಮತ್ತು ಕೂಲಿಗಳನ್ನು ಕುರಿತಂತೆ ಅಂತರ್ರಾಷ್ಟ್ರೀಯವಾಗಿ ಅನುಸರಿಸುವ ಅತ್ಯುತ್ತಮ ಅಂಶಗಳನ್ನು ಪರಿಗಣನೆಗೆ ತಗೊಂಡು, ಕೂಲಿಗಳ ನಿಗದಿಗೆ ಒಂದು ವೈಜ್ಞಾನಿಕ ಮಾನದಂಡ ಮತ್ತು ವಿಧಾನವನ್ನು ವಿಕಾಸಗೊಳಿಸುತ್ತದೆ” ಎಂದು ಹೇಳಲಾಗಿದೆ.
ಆದರೆ ಈ ಎಲ್ಲ ಅಂಶಗಳನ್ನು ಈಗಾಗಲೇ ದೇಶದ ಕಾರ್ಮಿಕರು, ಮಾಲಕರು ಮತ್ತು ಸರಕಾರದ ಪ್ರತಿನಿಧಿಗಳನ್ನು ಉಳ್ಳ ಉನ್ನತ ಮಟ್ಟದ ತ್ರಿಪಕ್ಷೀಯ ವ್ಯವಸ್ಥೆಯಾದ ಭಾರತೀಯ ಕಾರ್ಮಿಕ ಸಮ್ಮೇಳನ(ಐ.ಎಲ್.ಸಿ.) ಒದಗಿಸಿದೆ. ಈ ಕುರಿತ ಸೂತ್ರವನ್ನು 15ನೇ ಐ.ಎಲ್.ಸಿ. ಮತ್ತು ರಪ್ತಕ್ಕೋಸ್ ಬ್ರೆಟ್ ಕೇಸಿನಲ್ಲಿ ಸುಪ್ರಿಂ ಕೋರ್ಟಿನ ಆದೇಶ ಈಗಾಗಲೆ ಒದಗಿಸಿದೆ. ಇದನ್ನು ಸರಕಾರವೂ ಒಪ್ಪಿಕೊಂಡಿದೆ.
ಇದಲ್ಲದೆ ವೇತನಗಳು ಮತ್ತು ಕೂಲಿಗಳನ್ನು ಕುರಿತ 2019ರ ಸಂಹಿತೆಗೆ ಇದೇ ಸರಕಾರ ತಯಾರಿಸಿದ ಕರಡು ನಿಯಮಾವಳಿಗಳಲ್ಲೂ ಈ ವೈಜ್ಞಾನಿಕ ಸೂತ್ರವನ್ನು ಅಳವಡಿಸಲಾಗಿದೆ. ಇದಕ್ಕೆ ಬೇಕಾದ ಅಂಕಿ-ಅಂಶಗಳೆಲ್ಲ ಸಾರ್ವಜನಿಕವಾಗಿ ಲಭ್ಯ ಇವೆ.
ಹೀಗಿರುವಾಗ ಮತ್ತೆ ಹೊಸದಾಗಿ ಈ ಪರಿಣತರ ಗುಂಪಿನ ಪ್ರಕ್ರಿಯೆಯನ್ನು ಆರಂಭಿಸುವ ಅಗತ್ಯವೇನೂ ಇರಲಿಲ್ಲ. ಕನಿಷ್ಟ ಕೂಲಿಗಳನ್ನು ಏರಿಸುವುದು ಕಾರ್ಮಿಕರ ಜೀವನೋಪಾಯಗಳಿಗೆ ಮಾತ್ರವಲ್ಲ, ಕುಸಿದಿರುವ ದೇಶದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೂ ಅತ್ಯಗತ್ಯ. ಆದರೆ ಈಗ ಮತ್ತೊಂದು ಪರಿಣತರ ಗುಂಪಿನ ನೇಮಕ ಕನಿಷ್ಟ ಕೂಲಿಗಳನ್ನು ಹೆಚ್ಚಿನ ಮಟ್ಟಕ್ಕೆ ಏರಿಸುವ ಕೆಲಸವನ್ನು, ವಿಳಂಬಗೊಳಿಸುತ್ತದೆ; ಇನ್ನೊಂದೆಡೆಯಲ್ಲಿ ತ್ರಿಪಕ್ಷೀಯ ವ್ಯವಸ್ಥೆಯನ್ನೂ ಬದಿಗೆ ತಳ್ಳುತ್ತದೆ. ಈ ಕ್ರಿಯೆಯಿಂದ ಲಾಭ ಈ ಪರಿಣತರ ಗುಂಪಿನ ಸದಸ್ಯರು ಮತ್ತು ಮಾಲಕರಿಗೆ ಮಾತ್ರ ಎಂದಿರುವ ಸಿಐಟಿಯು ಪ್ರಧಾನ ಕಾರ್ಯದರ್ಶಿಗಳ ಪತ್ರ ತಕ್ಷಣವೇ ನ್ಯಾಯ ಮತ್ತು ಯುಕ್ತತೆಯ ದೃಷ್ಟಿಯಿಂದ ಇನ್ನೊಂದು ಪರಿಣತರ ಸಮಿತಿಯ ನೇಮಕದ ಈ ಕಸರತ್ತನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದೆ.