ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ನೆನ್ನೆ ಘೋಷಿಸಿದ ಎರಡನೇ ಪರಿಹಾರದ ಪ್ಯಾಕೇಜ್ ಎಂಬುದು ಕೇವಲ “ನಾನು ಕೂಡಾ ಪರಿಹಾರ ಕೊಟ್ಟೆನೆಂದು” ಹೇಳಿಕೊಂಡು ಪ್ರಚಾರ ಪಡೆಯುವ ಹುನ್ನಾರವಾಗಿಯಷ್ಠೇ? ನಿಜವಾದ ಪರಿಹಾರವಾಗಿಲ್ಲ. ಇದು ಮತ್ತು ಹಿಂದೆ ಘೋಷಿಸಿದ ಪರಿಹಾರದ ಪ್ಯಾಕೇಜ್ ರಾಜ್ಯದ ಯಾರನ್ನು ರಕ್ಷಿಸದಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ), ರಾಜ್ಯ ಸಮಿತಿಯು ಖಂಡಿಸಿದೆ.
ಇದು ರಾಜ್ಯದ ಜನತೆಗೆ, ಅಗ್ಗದ ಪ್ರಚಾರ ಪಡೆಯುವ ಸರಕಾರದ ಜನ ವಿರೋಧಿ ನಿಲುಮೆಗಳನ್ನು ವಿರೋಧಿಸಲು ಹಾಗೂ ನಿಜ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿರೋಧಿಸಲು ಸಿಪಿಐ(ಎಂ) ಕರೆ ನೀಡುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಯು ಬಸವರಾಜ ಅವರು ತಿಳಿಸಿದ್ದಾರೆ.
ಇದನ್ನು ಓದಿ: ಕೇರಳ: ಕೋವಿಡ್ ಎರಡನೇ ಅಲೆ ಎದುರಿಸಲು ರೂ.20 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ
ಈ ಪ್ಯಾಕೇಜ್ನಲ್ಲಿ ಶಾಲಾ ಮಕ್ಕಳಿಗೆ ಎಂದಿನಂತೆ ನೀಡುವ ಹಾಲಿನ ಪೌಡರ್ ಮೊತ್ತ 100 ಕೋಟಿ ರೂ. ಸೇರಿಸಿ, ಕೋವಿಡ್ ಪ್ಯಾಕೇಜ್ ಎಂದೇಳಿ ರಾಜ್ಯದ ನಾಗರೀಕರನ್ನು ಮುಖ್ಯಮಂತ್ರಿಗಳು ಯಾಮಾರಿಸಿದ್ದಾರೆ.
ಒಟ್ಟು 323 ಕೋಟಿ ಪ್ಯಾಕೇಜ್ನಲ್ಲಿ 100 ಕೋಟಿ ಹಾಲಿನ ಪೌಡರ್ ಬಿಟ್ಟರೇ, ಸಣ್ಣ ಹಾಗೂ ಮಧ್ಯಮ ಗಾತ್ರದ ಮೂರು ಲಕ್ಷ ಕೈಗಾರಿಕೆಗಳ ವಿದ್ಯುತ್ ಬಿಲ್ ಸಹಾಯ 125 ಕೋಟಿ ರೂ. ಮತ್ತೊಂದು ದೊಡ್ಡ ಮೊತ್ತವಾಗಿದೆ. ಲಾಕ್ಡೌನ್ನಲ್ಲಿ ನಡೆಯದಿರುವ ಕೈಗಾರಿಕೆಗಳಿಗೆ ವಿದ್ಯುತ್ ಬಿಲ್ ಸಹಾಯವೆಂಬುದು ಎಂತಹ ಸಹಾಯವಾಗುವುದು? ಅದು ಕೂಡಾ ಕೇವಲ ಸರಾಸರಿ 4,100 ರೂ. ಮಾತ್ರವೇ ಆಗುತ್ತದೆ ಎಂದು ಪ್ರಕಟಣೆ ನೀಡಿದೆ ಸಿಪಿಐ(ಎಂ) ಪಕ್ಷ.
ಉಳಿದಂತೆ, ವಾರಿಯರ್ಸ್ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ನೀಡಿರುವ ಪ್ರೋತ್ಸಾಹ ಧನ ಎಂತಹದ್ದು? ಜೀವದ ತೊಂದರೆಯಿದ್ದರೂ ವಾರಿಯರ್ಗಳಾಗಿ ಕಾರ್ಯನಿರ್ವಹಿಸುವ ಮತ್ತು ಕೃಷಿ ರಂಗದ ಕನಿಷ್ಠ ವೇತನ 424 ರೂ. ಕೂಡಾ ವೇತನವಾಗಿ ಪಡೆಯದ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಘೋಷಿಸಿದ ನೆರವು ಕೇವಲ 2,000 ಮತ್ತು 3,000 ಮಾತ್ರವೇ?! ನಾಚಿಕೆಗೇಡು.
ಇದನ್ನು ಓದಿ: ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೇರಿದಂತೆ ಮೂವರು ಬಿಜೆಪಿ ಶಾಸಕರ ರಾಜೀನಾಮೆ ಪಡೆಯಿರಿ: ಸಿಪಿಐ(ಎಂ)
ನೊಂದಾಯಿಸಿಕೊಳ್ಳದ ಲಕ್ಷಾಂತರ ಮೀನುಗಾರರಿಗೆ ಪರಿಹಾರವೇ ಇಲ್ಲಾ! ನೊಂದಾಯಿಸಿಕೊಂಡವರಿಗೂ ಕೇವಲ 3,000 ರೂ. ಆಗಿದೆ. ಕೋಟ್ಯಾಂತರ ಕೃಷಿಕೂಲಿಕಾರರು ಬಡರೈತರು, ಕಾರ್ಮಿಕರು, ಗುತ್ತಿಗೆ ಆಧಾರದಲ್ಲಿ ದುಡಿಯುವವರು, ಕೆಲಸ ಕಳೆದುಕೊಂಡ ಅಕ್ಷರ ದಾಸೋಹ, ಹಾಸ್ಟೆಲ್ ಕೆಲಸಗಾರರು, ಸಾಮಾಜಿಕ ತಾರತಮ್ಯಕ್ಕೊಳಗಾದ ದಲಿತರು, ದೇವದಾಸಿ ಮಹಿಳೆಯರು, ಮಸಣ ಕಾರ್ಮಿಕರು ಹಾಗೂ ಮಂಗಳ ವಾದ್ಯ ಕಲಾವಿದರು, ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರು, ಮಹಿಳೆಯರು, ಆದಿವಾಸಿಗಳು ಹಾಗೂ ಅಸಹಾಯಕ ವೃದ್ದರು, ನಿರುದ್ಯೋಗಿ ಯುವಜನರು, ವಿದ್ಯಾರ್ಥಿಗಳು, ಅಂಗವಿಕಲರು, ಸಾಮಾಜಿಕ ಪಿಂಚಣಿ ಪಡೆಯುವ ಇತರರನ್ನು ಮತ್ತು ಅಲೆಮಾರಿಗಳನ್ನು ಕಣ್ಣೆತ್ತಿ ನೋಡಲು ಕೂಡಾ ಸರಕಾರ ತಯಾರಾಗಿಲ್ಲ.
ಇಂತಹ ಪ್ರಚಾರದ ಗೀಳನ್ನು ಹಾಗೂ ಜನತೆಯನ್ನು ಯಾಮಾರಿಸುವ ಹುನ್ನಾರಗಳನ್ನು ಬಿಟ್ಟು ನಿಜ ಪರಿಹಾರ ಘೋಷಿಸುವಂತೆ ಸಿಪಿಐ(ಎಂ) ರಾಜ್ಯ ಸರಕಾರವನ್ನು ಒತ್ತಾಯಿಸಿದೆ.