ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಸಮರದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ, ಇಂಧನ ಇಲಾಖೆ ನೌಕರರು ಪ್ರೋತ್ಸಾಹಧನದ ಕೊರತೆ ಹಾಗಿ ಉದ್ಯೋಗ ಭದ್ರತೆಯ ಸಮಸ್ಯೆ ಎದುರಿಸುತ್ತಿದ್ದು, ಆ ಸಮಸ್ಯೆಯನ್ನು ನಿವಾರಿಸುವಂತೆ ಕರ್ನಾಟಕ ರಾಜ್ಯ ಆರೋಗ್ಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ (ಕೆಎಸ್ಎಚ್ಸಿಒಇಎ) ಸದಸ್ಯರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ತಮ್ಮ ಸಮಸ್ಯೆಗಳನ್ನು ಈಡೇರಿಸುವಂತೆ ಕೋರಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಸಮರದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ತಮಗೆ ಕೋವಿಡ್ ಪ್ರೋತ್ಸಾಹ ಧನದ ಕೊರತೆ, ವೈದ್ಯಕೀಯ ವೆಚ್ಚ ಮರುಪಾವತಿ, ಉದ್ಯೋಗ ಭದ್ರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪತ್ರದ ಮೂಲಕ ಪ್ರಧಾನಿ ನರೇಂದ್ರಮೋದಿ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಕ್ಲಿನಿಕಲ್ ಕೇಡರ್ಗಳಿಗೆ ಕೋವಿಡ್-ರಿಸ್ಕ್ ಪ್ರೋತ್ಸಾಹಕಗಳನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ ಈ ಹಿಂದೆ ಒಪ್ಪಿಕೊಂಡಿತ್ತು. ಆದರೆ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಉದ್ಯೋಗಿಗಳನ್ನು ಈ ಸೌಲಭ್ಯಗಳಿಂದ ಹೊರಗಿಡಲಾಗಿದೆ ಎಂದು ಕೆಎಸ್ಎಚ್ಸಿಒಇಎ ಪತ್ರದಲ್ಲಿ ಉಲ್ಲೇಖಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ, ನಿಯಮಿತ ಆರೋಗ್ಯ ಇಲಾಖೆಯ ಸಿಬ್ಬಂದಿಗಳಂತೆ ನಾವೂ ಸಹ ಕೋವಿಡ್-19 ಸಾಂಕ್ರಾಮಿಕದಲ್ಲಿ ಕೋವಿಡ್ ಆರೈಕೆ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರವು ಕೋವಿಡ್ ವೈದ್ಯಕೀಯ ವೆಚ್ಚವನ್ನು ಸಾಮಾನ್ಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾತ್ರ ಮರುಪಾವತಿ ಮಾಡುವುದಾಗಿ ಘೋಷಿಸಿದೆ ಎಂದು ಹೇಳಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಅಂತೆಯೇ ರಾಜ್ಯದ ವಿಶೇಷ ಕೋವಿಡ್ ಪ್ರೋತ್ಸಾಹ ನೀಡಿಕೆ ಪಟ್ಟಿಗಳಲ್ಲಿ ಗ್ರೂಪ್ ಡಿ ಸಿಬ್ಬಂದಿ, ಸಲಹೆಗಾರರು, ಆಂಬ್ಯುಲೆನ್ಸ್ ಚಾಲಕರು ಇಲ್ಲ. ಅವರು ಗುತ್ತಿಗೆ ಸಿಬ್ಬಂದಿಗಳಾಗಿರುವುದರಿಂದ ಅವರಿಗೆ ಉದ್ಯೋಗ ಭದ್ರತೆ ಇಲ್ಲದಿರುವುದರಿಂದ, ಅವರೂ ಸಹ 60 ವರ್ಷ ತುಂಬುವವರೆಗೆ ಉದ್ಯೋಗದಲ್ಲಿರಬೇಕು ಎಂದು ಸಂಘದ ಸದಸ್ಯರು ಹೇಳಿದ್ದಾರೆ. ಹೀಗಾಗಿ ಅವರಿಗೂ ಸಾಮಾನ್ಯ ಸರ್ಕಾರಿ ಆರೋಗ್ಯ ಸಿಬ್ಬಂದಿಯಂತೆ ಶೇ.25 ರಷ್ಟು ವೇತನ ಹೆಚ್ಚಳ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ.
ಈ ವಿಷಯದ ಕುರಿತು ನೇರ ರಾಜ್ಯ ಸರ್ಕಾರಕ್ಕೆ ಪ್ರಮುಖ ವಿಷಯಗಳ ಬಗ್ಗೆ ಅಗತ್ಯ ಕ್ರಮ ವಹಿಸಲು ಆಗ್ರಹಿಸುತ್ತೇವೆ, ಹೆಚ್ಚಿನ ಸಂದರ್ಭಗಳಲ್ಲಿ ಕೇಂದ್ರೀಯ ಆರೋಗ್ಯ ಸಚಿವಾಲಯವು ‘ಆರೋಗ್ಯವು ರಾಜ್ಯ ವಿಷಯ’ ಎಂದು ಉಲ್ಲೇಖಿಸಿ ಕೈಚೆಲ್ಲಿದೆ ಎಂಬುದು ತಮ್ಮ ಗಮನಕ್ಕೆ ತರುತ್ತಿದ್ದೇವೆ ಮತ್ತು ಈ 30,000 ಸಾವಿರಕ್ಕೂ ಹೆಚ್ಚು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ದೀರ್ಘಕಾಲದ ಬೇಡಿಕೆಗಳನ್ನು ಪರಿಹರಿಸಿ ಎಂದು ಎಲ್ಲಾ ನೌಕರರ ಪರವಾಗಿ ಮತ್ತೊಮ್ಮೆ ಆಗ್ರಹಿಸುತ್ತೇವೆ ಎಂದು ವಿಶ್ವರಾಧ್ಯ ಎಚ್. ಯಾಮೋಜಿ ಆಗ್ರಹಿಸಿದ್ದಾರೆ.