ಲಕ್ಷದ್ವೀಪ : ಅರಬ್ಬೀ ಸಾಗರದಲ್ಲಿ ಇರುವ ಲಕ್ಷದ್ವೀಪಲ್ಲಿ ಕಳೆದ ಡಿಸೆಂಬರಿನಲ್ಲಿ ಈ ಹಿಂದೆ ಗುಜರಾತಿನಲ್ಲಿ ಗೃಹಮಂತ್ರಿಗಳಾಗಿದ್ದ ಪ್ರಫುಲ್ ಖೋಡ ಪಟೇಲ್ ಅವರನ್ನು ‘ಆಡಳಿತಗಾರ’ (ಅಡ್ಮಿನಿಸ್ಟ್ರೇಟರ್) ಹುದ್ದೆಗೆ ನೇಮಿಸಿದ ನಂತರ ಅವರು ಕೈಗೊಂಡಿರುವ ಕ್ರಮಗಳಿಗೆ ವಿರೋಧ ವ್ಯಾಪಕಗೊಳ್ಳುತ್ತಿದೆ. ಕಳೆದ ವಾರ ಸಿಪಿಐ(ಎಂ) ಸಂಸತ್ ಸದಸ್ಯರುಗಳು ಈ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಬರೆದು ಈ ಆಡಳಿಗಾರರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಈಗ ದ್ವೀಪದ ಬಿಜೆಪಿ ಮುಖಂಡರೂ ಪ್ರತಿಭಟಿಸಲಾರಮಬಿಸಿದ್ದಾರೆ. ಕಳೆದ ಎರಡು ದಿನಗಳಲ್ಲೇ 8 ಪ್ರಮುಖ ಬಿಜೆಪಿ ಯುವಮೋರ್ಚಾ ಮುಖಂಡರು ರಾಜೀನಾಮೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಆಡಳಿತಗಾರ ಅಲ್ಲಿ ಸರ್ವಾಧಿಕಾರಶಾಹೀ ಆಳ್ವಿಕೆಯನ್ನು ಹೇರಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಖಂಡಿಸಿದೆ ಮತ್ತು ಈತನ ಆಶಯಗಳು ಪ್ರಶ್ನಾರ್ಹ ಮತ್ತು ಕ್ರಮಗಳು ಅನಗತ್ಯವಾದವುಗಳು ಎಂದು ವರ್ಣಿಸುತ್ತ ಇಡೀ ದೇಶದ ಜನಗಳು ಲಕ್ಷದ್ವೀಪದ ಜನಗಳಿಗೆ ಬೆಂಬಲವಾಗಿ ನಿಲ್ಲಬೇಕು, ಈ ಪ್ರಜಾಪ್ರಭುತ್ವ-ವಿರೋಧಿ ಸರ್ವಾಧಿಕಾರಶಾಹೀ ಕ್ರಮಗಳನ್ನು ಸೋಲಿಸಬೇಕು ಎಂದು ಕರೆ ನೀಡಿದೆ.
ಪ್ರಫುಲ್ಲ ಪಟೇಲ್ ಮನಬಂದಂತೆ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ, ಈ ಕೇಂದ್ರಾಡಳಿತ ಪ್ರದೇಶದಲ್ಲಿ ಬಹುಕಾಲದಿಂದ ಇರುವ ಕಾಯ್ದೆಗಳನ್ನು ಯಾವುದೇ ಸಮಾಲೋಚನೆ ನಡೆಸದೆ ಬದಲಿಸುತ್ತಿದ್ದಾರೆ. ಅವರು ತರ ಬಯಸುವ ಬದಲಾವಣೆಗಳನ್ನು ನೋಡಿದರೆ, ಅದರ ಹಿಂದೆ ಸಂಘ ಪರಿವಾರದ ಒಂದು ದೊಡ್ಡ ದುಷ್ಟ ಅಜೆಂಡಾವೇ ಇದ್ದಂತೆ ಕಾಣುತ್ತಿದೆ ಎಂದು ಎಐಕೆಎಸ್ ಹೇಳಿದೆ.
ಇಲ್ಲಿಯ ನಿವಾಸಿಗಳಲ್ಲಿ 96% ಕ್ಕಿಂತಲೂ ಹೆಚ್ಚು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಆಡಳಿತಗಾರ ದೇಶದ ಸಂವಿಧಾನಕ್ಕೆ, ಮತ್ತು ಜಾತ್ಯತೀತ ಹಂದರಕ್ಕೆ ವಿರುದ್ಧವಾಗಿರುವ ಕ್ರಮಗಳನ್ನು ತರುತ್ತಿದ್ದಾರೆ ಎಂದಿರುವ ಎಐಕೆಎಸ್ ಈತನನ್ನು ತಕ್ಷಣವೇ ವಜಾಮಾಡಿ ಹಿಂದಕ್ಕೆ ಕರೆಸಿಕೊಳ್ಳಬೇಕು, ಆತ ತಂದ ಬದಲಾವಣೆಗಳನ್ನು ರದ್ದು ಮಾಡಿ ಅವುಗಳ ಮೂಲಸ್ವರೂಪಕ್ಕೆ ತರಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ : ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 3ಲಕ್ಷ ರೂ ಪರಿಹಾರ. ಉಚಿತ ಶಿಕ್ಷಣ
ಈ ಆಡಳಿತಗಾರನ ಕ್ರಮಗಳ ವಿರುದ್ದ ಈ ದ್ವೀಪಸಮೂಹಗಳ ಜನರಲ್ಲಿ ಅಸಮಾಧಾನ ತೀವ್ರವಾಗಿ ಬೆಳೆಯುತ್ತಿದೆ. ಇದು ಇಸ್ಲಾಮ್ವಾದಿಗಳು ಮಾಡುತ್ತಿರುವ ಅಪಪ್ರಚಾರ, ಅವರು ಪ್ರತಿಭಟನೆಗಳನ್ನು ಉದ್ದೇಕಿಸುತ್ತಿದ್ದಾರೆ ಎಂದು ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ ಸುಳ್ಳು ಹರಡಿಸುತ್ತಿರುವುದು ಈ ಕ್ರಮಗಳ ಹಿಂದಿರುವ ಕೋಮುವಾದಿ ಫ್ಯಾಸಿಸ್ಟ್ ಪಿತೂರಿಯನ್ನು, ಮತ್ತು ಪ್ರಜಾಸತ್ತಾತ್ಮಕ ಪ್ರತಿಭಟನೆಗಳ ಬಗ್ಗೆ ಕೋಮುವಾದಿಗಳ ಫ್ಯಾಸಿಸ್ಟ್ ಅಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಎಐಕೆಎಸ್ ಅಭಿಪ್ರಾಯ ಪಟ್ಟಿದೆ.
ಈ ದ್ವೀಪ ಸಮೂಹದ ನಿವಾಸಿಗಳಲ್ಲಿ ಈ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನದ ಬಗ್ಗೆ ಮೇ 23ರಂದು ರಾಜ್ಯಸಭೆಯಲ್ಲಿ ಸಿಪಿಐ(ಎಂ) ಗುಂಪಿನ ಮುಖಂಡರಾದ ಎಳಮಾರಂ ಕರೀಮ್ ರಾಷ್ಟ್ರಪತಿಗಳಿಗೆ ಒಂದು ವಿವರವಾದ ಪತ್ರ ಬರೆದು ಈತನನ್ನು ತಕ್ಷಣವೇ ಹಿಂದಕ್ಕೆ ಕರೆಸಿಕೊಳ್ಳಬೇಕು ಮತ್ತು ಆತನ ಆಳ್ವಿಕೆಯಲ್ಲಿ ತಂದಿರುವ ಕ್ರಮಗಳ ಮರುವಿಮರ್ಶೆ ನಡೆಸಿ ಎಲ್ಲ ಆದೇಶಗಳನ್ನು ಮತ್ತು ಸುಧಾರಣೆ ಕ್ರಮಗಳನ್ನು ಹಿಂದಕ್ಕೆ ಪಡೆಯಬೇಕೆಂದು ಕೋರಿದ್ದಾರೆ.
ಮೇ 24ರಂದು ಅಲಪ್ಪುಳಾದ ಲೋಕಸಭಾ ಸದಸ್ಯ ಎ.ಎಂ. ಅರೀಫ್ಫ್ ರವರು ಕೂಡ ರಾಷ್ಟಪತಿಗಳಿಗೆ ಪತ್ರ ಬರೆದು ತಕ್ಷಣವೇ ಈ ಆಡಳಿತಗಾರನ ಸೇವೆಗಳನ್ನು ಕೊನೆಗೊಳಿಸಿ, ಆತ ಕೈಗೊಂಡಿರುವ ಎಲ್ಲ ಆಡಳಿತ ಕ್ರಮಗಳ ಮರುವಿಮರ್ಶೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಫುಲ್ ಪಟೇಲ್ ಡಿಸೆಂಬರ್ 5ರಂದು ಆಡಳಿಗಾರನಾಗಿ ಆಧಿಕಾರ ವಹಿಸಿಕೊಂಡ ಕೂಡಲೆ ಕೊವಿಡ್ ಮಹಾಸೋಂಕಿನ ಹರಡಿಕೆಯನ್ನು ತಡೆಯಲು ಅದುವರೆಗೆ ಜಾರಿಯಲ್ಲಿದ್ದ ‘ಮಾದರಿ ಕಾರ್ಯನಿರ್ವಹಣಾ ವಿಧಾನ’(ಎಸ್ಒಪಿ)ವನ್ನು ಏಕಪಕ್ಷೀಯವಾಗಿ ಬದಲಿಸಿದರು. ಈ ರೀತಿ ಅಯೋಜಿತವಾಗಿ ಮತ್ತು ಅವೈಜ್ಞಾನಿಕವಾಗಿ ಎಸ್ಒಪಿಯನ್ನು ಬದಲಿಸಿದ್ದರಿಂದಾಗಿ 2020ರಲ್ಲಿ ಒಂದೇ ಒಂದು ಕೊವಿಡ್ ಸೋಂಕಿನ ಪ್ರಕರಣವಿದ್ದಿರದಿದ್ದ ಈ ದ್ವೀಪಸಮೂಹದಲ್ಲಿ ಈಗ ಕೊವಿಡ್ ಪ್ರಕರಣಗಳು ತೀವ್ರವಾಗಿ ಏರುವಂತಾಗಿದೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ ಎಂಬುದನ್ನು ಕರೀಂ ಅವರು ತಮ್ಮ ಪತ್ರದಲ್ಲಿ ರಾಷ್ಟಪತಿಗಳ ಗಮನಕ್ಕೆ ತಂದಿದ್ದಾರೆ. ಮೇ 25 ರ ವೇಳೆಗೆ ಸೋಂಕಿತರ ಸಂಖ್ಯೆ 7000 ದಾಟಿದೆ, ಮೇ25-26ರಲ್ಲಿಯೇ ಸಾವುಗಳ ಸಂಖ್ಯೆ 264 ಆಗಿದೆ ಎಂದು ವರದಿಯಾಗಿದೆ.
ಈ ಆಡಳಿತಗಾರ ಕೊಟ್ಟಿರುವ ಆದೇಶಗಳನ್ನು ಪರಿಶೀಲಿಸಿದರೆ ಇಲ್ಲಿನ ಜನಗಳ ಪಾರಂಪರಿಕ ಜೀವನಶೈಲಿಯನ್ನು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ನಾಶಪಡಿಸುವ ಉದ್ದೇಶದಿಂದಲೇ ಅವನ್ನು ರೂಪಿಸಿದಂತೆ ಕಾಣುತ್ತದೆ ಎಂದು ಕರೀಂ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
“ಪ್ರಾಣಿಗಳ ಸಂಗೋಪನೆಯ ಹಸರಿನಲ್ಲಿ ನೀಡಿರುವ ಆದೇಶದ ಅಡಿಯಲ್ಲಿ ಬೀಫ್ ಉತ್ಪನ್ನಗಳ ಖರೀದಿ, ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿರುವುದು ಈ ದ್ವೀಪಸಮೂಹಗಳ ಬಹುಪಾಲು ಜನಗಳ ಜೀವನೋಪಾಯವನ್ನೇ ಕಸಿದುಕೊಂಡಿದೆ.
ಈ ಆಡಳಿತಗಾರ ಹೊರಡಿಸುತ್ತಿರುವ ಆದೇಶಗಳಿಂದಾಗಿ, ಪ್ರತಿದಿನ ಈ ಕೇಂದ್ರಾಡಳಿತ ಪ್ರದೇಶದ ವಿವಿಧ ಇಲಾಖೆಗಳ ನೂರಾರು ಕ್ಯಾಶುವಲ್ ಮತ್ತು ಗುತ್ತಿಗೆ ಕೆಲಸಗಾರರು ಕೆಲಸ ಕಳಕೊಳ್ಳುತ್ತಿದ್ದಾರೆ. ಸುಮಾರು 38 ಅಂಗನವಾಡಿಗಳನ್ನು ಮುಚ್ಚಲಾಗಿದೆ. ಪ್ರವಾಸೋದ್ಯಮ ಇಲಾಖೆಯ 190 ನೌಕರರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ. ಶಾಲಾ ಮಧ್ಯಾಹ್ನದಊಟ ಸಿದ್ಧಪಡಿಸುವವರು ಮತ್ತು ಕ್ರೀಡಾ ಅಧ್ಯಾಪಕರ ಸೇವೆಗಳನ್ನು ವಜಾ ಮಾಡಲಾಗಿದೆ. ಹಲವರನ್ನು ಪಶುಕಲ್ಯಾಣ ಮತ್ತು ಕೃಷಿ ಇಲಾಖೆಗಳಿಂದ ಹೊರದಬ್ಬಲಾಗಿದೆ.
ಗೋಮಾಂಸವನ್ನು ನಿಷೇಧಿಸಿದ ಈ ಆಡಳಿತಗಾರ ಇನ್ನೊಂದೆಡೆಯಲ್ಲಿ ಈ ದ್ವೀಪಸಮೂಹದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಮದ್ಯಪಾನದ ಮೇಲೆ ಇದ್ದ ನಿರ್ಬಂಧಗಳನ್ನು ತೆಗೆಯಬೇಡಿ ಎಂದು ಇಲ್ಲಿಯ ಜನ ಮತ್ತೆ-ಮತ್ತೆ ಕೇಳಿಕೊಂಡರೂ ಕಿವಿಗೆ ಹಾಕಿಕೊಳ್ಳದೆ ತೆಗೆಯುವ ಆದೇಶಗಳನ್ನು ಹೊರಡಿಸಿದ್ದಾರೆ. ಇದು ಕೂಡ ಇಲ್ಲಿರುವ ಸಾಮಾಜಿಕ ಸಾಮರಸ್ಯವನ್ನು ಕೆಡಿಸಲು ಮತ್ತು ಜನಗಳ ಧಾರ್ಮಿಕ ನಂಬಿಕೆಗಳನ್ನು ಘಾಸಿ ಗೊಳಿಸುವುದಕ್ಕಾಗಿಯೇ ಎಂದು ಜನಗಳು ಭಾವಿಸುತ್ತಿದ್ದಾರೆ.
ಮೀನುಗಾರಿಕೆ ಇಲ್ಲಿಯ ಒಂದು ಪ್ರಮುಖ ಜೀವನಾಧಾರ. ಈ ಹೊಸ ಆಡಳಿತಗಾರ ಮೀನುಗಾರರು ತಮ್ಮ ಬಲೆಗಳು ಮತ್ತು ಇತರ ಮೀನುಗಾರಿಕಾ ಸಾಧನಗಳು ಮತ್ತು ಉಪಕರಣಗಳನ್ನು ಇಟ್ಟುಕೊಂಡಿದ್ದ ಷೆಡ್ಡುಗಳನ್ನು ಕೋಸ್ಟ್ ಗಾರ್ಡ್(ಕರಾವಳಿ ಕಾವಲು) ಕಾಯ್ದೆಯ ಜಾರಿಯ ಹೆಸರಲ್ಲಿ ಮುನ್ನೆಚ್ಚರಿಕೆ ನೀಡದೆಯೇ ಏಕಾಏಕೀ ಧ್ವಂಸಗೊಳಿಸಿದ್ದಾರೆ. ಈ ಹಿಂದೆ ಮೀನುಗಾರರಿಗೆ ಮಾತ್ರ ಈ ಕಾಯ್ದೆಯ ಅಡಿಯಲ್ಲಿ ವಿನಾಯ್ತಿ ನೀಡಿದ್ದರಿಂದ ಅವರುಗಳು ಈ ಷೆಡ್ಡುಗಳನ್ನು ನಿರ್ಮಿಸಿಕೊಂಡಿದ್ದರು.
ಈ ಆಡಳಿಗಾರನ ಇನ್ನೊಂದು ಸರ್ವಾಧಿಕಾರಶಾಹಿ ಕ್ರಮವೆಂದರೆ, ಈ ದ್ವೀಪವಾಸಿಗಳು ದಶಕಗಳಿಂದ ಸಾಗಾಟಕ್ಕೆ ಅವಲಂಬಿಸಿದ್ದ ಕೇರಳದ ಬೇಪುರ್ ಬಂದರನ್ನು ಅವಲಂಬಿಸಬಾರದು, ಇನ್ನು ಮುಂದೆ ಈ ದ್ವೀಪವಾಸಿಗಳು ಮಂಗಳೂರನ್ನೇ ಅವಲಂಬಿಸಬೇಕು ಎಂದು ಹುಕುಂ ಹೊರಡಿಸಿದ್ದಾರೆ. ಇದು ಕೇರಳದೊಂದಿಗೆ ಈ ದ್ವೀಪವಾಸಿಗಳು ಭಾಷೆ, ಹೆಚ್ಚಿನ ಶಿಕ್ಷಣ ಮತ್ತು ಆರೋಗ್ಯಸೇವೆಗಳಿಂದಾಗಿ ಹೊಂದಿರುವ ಸಂಬಂಧಗಳನ್ನು ಕಡಿದು ಹಾಕಲಿಕ್ಕಾಗಿಯೇ ಎಂಬ ಭಾವನೆ ಉಂಟಾಗಿದ್ದರೆ ಆಶ್ಚರ್ಯವಿಲ್ಲ.
ಈ ಆದೇಶಗಳೇ ಅಲ್ಲದೆ, ಈ ಆಡಳಿತಗಾರ ತಂದಿರುವ ‘ಲಕ್ಷದ್ವೀಪ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿಬಂಧನೆಗಳು(ಟಿಸಿಪಿಆರ್), 2021’ ವಿವಿಧ ‘ಅಭಿವೃದ್ಧಿ’ ಯೋಜನೆಗಳ ಹೆಸರಿನಲ್ಲಿ ಮನಬಂದಂತೆ ಭೂಸ್ವಾಧೀನಕ್ಕೆ ಮತ್ತು ಈ ಪರಿಸರ ಸೂಕ್ಷ್ಮ ಪ್ರದೇಶವನ್ನು ಹಾಳುಗೆಡವುದಕ್ಕೆ ದಾರಿ ಮಾಡಿಕೊಡಬಹುದು; ‘ಲಕ್ಷದ್ವೀಪ ಸಮಾಜ-ವಿರೋಧಿ ಚಟುವಟಿಕೆಗಳ ತಡೆ ನಿಬಂಧನೆಗಳು-2021’ ಎಂಬುದು ಕೂಡ ವಾಸ್ತವವಾಗಿ ಈ ಆಡಳಿತ ಕ್ರಮಗಳಿಗೆ ವಿರೋಧವನ್ನು ಹತ್ತಿಕ್ಕುವುದಕ್ಕಾಗಿಯೇ ತಂದಿರುವಂತದ್ದು ಎಂಬ ಆತಂಕವೂ ಜನರನ್ನು ಆವರಿಸಿದೆ. ಏಕೆಂದರೆ ಇಲ್ಲಿ ಅಪರಾಧ ದರ ದೇಶದಲ್ಲಿಯೇ ಅತೀ ಕಡಿಮೆ ಮತ್ತು ದೇಶದ ಬೇರೆಡೆಗಳಲ್ಲಿ ಜೈಲುಗಳು ತುಂಬಿದ್ದರೆ, ಇಲ್ಲಿ ಜೈಲುಗಳು ಖಾಲಿಯಾಗಿವೆ. ಇದರ ಜೊತೆಗೆ ಈ ಆಡಳಿತಗಾರ ತಂದಿರುವ ಇನ್ನೊಂದು ಕ್ರಮವೆಂದರೆ ‘ಲಕ್ಷದ್ವೀಪ ಪಂಚಾಯತು ನಿಬಂಧನೆ. ಇದರ ಅಡಿಯಲ್ಲಿ ಇಬ್ಬರು ಮಕ್ಕಳಿಗಿಂತ ಹೆಚ್ಚಿದ್ದರೆ ಅಂತವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇದು ಒಂದು ಸಂವಿಧಾನ-ಬಾಹಿರ ಕ್ರಮ ಎಂಬುದನ್ನು ಈಗಾಗಲೇ ದೇಶದ ಇತರ ಭಾಗಗಳಲ್ಲಿ ಇದನ್ನು ತರಲು ಪ್ರಯತ್ನಿಸಿದಾಗ ಪ್ರಜಾಪ್ರಭುತ್ವವಾದಿ ಶಕ್ತಿಗಳು ಮನಗಾಣಿಸಿದ್ದಾರೆ.
ಒಟ್ಟಿನಲ್ಲಿ, ಎಐಕೆಎಸ್ ಹೇಳಿರುವಂತೆ ಈ ಆಡಳಿತಗಾರನ ಆಶಯಗಳು ಪ್ರಶ್ನಾರ್ಹ ಮತ್ತು ಕ್ರಮಗಳು ಅನಗತ್ಯವಾದವುಗಳು.
ಇದನ್ನೂ ಓದಿ : ನಿಮ್ಮ ಅಕ್ಕಪಕ್ಕದಲ್ಲಿನ ಕೋವಿಡ್ ಪ್ರಕರಣಗಳನ್ನು ಸುಲಭವಾಗಿ ತಿಳಿಯಬಹುದು! ಹೇಗೆ ?
ಮೇಲೆ ಹೇಳಿದಂತೆ ಸಿಪಿಐ(ಎಂ) ಸಂಸತ್ ಸದಸ್ಯರುಗಳು ಈತನನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ರಾಷ್ಟçಪತಿಗಳಿಗೆ ಪತ್ರ ಬರೆದಿದ್ದಾರೆ. ಈ ಕ್ಷೇತ್ರದ ಸಂಸತ್ ಸದಸ್ಯ ಎನ್ಸಿಪಿಯ ಮಹಮ್ಮದ್ ಫೈಝಲ್ ಈ ಕ್ರಮಗಳನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯ ಲಕ್ಷದ್ವೀಪ ಘಟಕದ ಕಾರ್ಯದರ್ಶಿ ಹೆಚ್.ಕೆ .ಮಹಮ್ಮದ್ ಖಾಸಿಂ ಕೂಡ ಈ ಕ್ರಮಗಳನ್ನು ವಿರೋಧಿಸಿದ್ದಾರೆ, ಬಿಜೆಪಿಯ 8 ಯುವ ಮುಖಂಡರು ರಾಜೀನಾಮೆ ಕೊಟ್ಟಿದ್ದಾರೆ, ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂಬ ಸುದ್ದಿಯೂ ಬಂದಿದೆ.