ತಿರುವನಂತಪುರ: ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಶಾಸಕರಾದ ಎಂ.ಬಿ.ರಾಜೇಶ್ ಅವರು ಕೇರಳ ವಿಧಾನಸಭೆ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೇರಳದ 140 ಸದಸ್ಯ ಬಲದ ವಿಧಾನಸಭೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ 99 ಸ್ಥಾನ ಹಾಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 41 ಸ್ಥಾನಗಳನ್ನು ಪಡೆದುಕೊಂಡಿತ್ತು.
ಇದನ್ನು ಓದಿ: ಪಂಚರಾಜ್ಯ ಚುನಾವಣೆ : ಕೇರಳದಲ್ಲಿ ಎಲ್‌ಡಿಎಫ್ ಮತ್ತೆ ಅಧಿಕಾರಕ್ಕೆ ಬರಲು ಕಾರಣವೇನು?
ನೂತನ ಸಭಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿತ್ತು. ಆಡಳಿತರೂಢ ಎಡರಂಗ ಮೈತ್ರಿಕೂಟದಿಂದ 96 ಮತಗಳು ರಾಜೇಶ್ ಅವರಿಗೆ ಲಭಿಸಿದವು. ಯುಡಿಎಫ್‌ನಿಂದ ಸ್ಪರ್ಧಿಸಿದ್ದ ಪಿ.ವಿ.ವಿಷ್ಣುನಾಥ ಅವರಿಗೆ 40 ಮತಗಳು ಲಭಿಸಿತು.
ಮತದಾನದ ವೇಳೆ ಶಾಸಕರಾದ ಕೆ.ಬಾಬು, ಎಂ.ವಿನ್ಸೆಂಟ್ ಮತ್ತು ವಿ.ಅಬ್ದುರಹಿಮನ್ ಅನಾರೋಗ್ಯದ ಕಾರಣದಿಂದ ಗೈರಾಗಿದ್ದರು. ಶಾಸಕ ಕನ್ನಮಂಗಲಮ್ ಹಂಗಾಮಿ ಸಭಾಧ್ಯಕ್ಷರ ಸ್ಥಾನದಲ್ಲಿ ಇದ್ದ ಕಾರಣ ಮತದಾನದಿಂದ ದೂರ ಉಳಿದಿದ್ದರು.
ಎಂ ಬಿ ರಾಜೇಶ್ ಅವರು ಶೋರನೂರ್ ಬಳಿಯ ಚಲವರ ಮೂಲದವರಾಗಿದ್ದು ಕೇರಳ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾಗಿದ್ದಾರೆ. ಒಟ್ಟಪ್ಪಲಂ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ.
ಇದನ್ನು ಓದಿ: ಕೇರಳ ಎಲ್‌ಡಿಎಫ್ ಸರಕಾರದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ
ಪಾಲಕ್ಕಾಡ್ ಜಿಲ್ಲೆಯ ತ್ರಿಥಾಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಬಿ ರಾಜೇಶ್ ಅವರು ರಾಜ್ಯ ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ. ಈ ಮೊದಲು 2009 ರಿಂದ 2019ರವರೆಗೆ 10 ವರ್ಷ ಸಂಸತ್ ಸದಸ್ಯರಾಗಿದ್ದರು. ಸಿಪಿಐ (ಎಂ) ರಾಜ್ಯ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ನೂತನ ವಿಧಾನಸಭಾಧ್ಯಕ್ಷರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಭಕೋರಿದ್ದಾರೆ. ʻʻ15ನೇ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿರುವ ಎಂ ಬಿ ರಾಜೇಶ್ ಅವರಿಗೆ ಶುಭಾಶಯಗಳು. ಅವರ ಉಪಸ್ಥಿತಿಯಲ್ಲಿ ಸದನದ ಒಳಗೆ ಪ್ರಜಾಪ್ರಭುತ್ವ ರೀತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಆಶಿಸುತ್ತೇನೆ. ಸರಕಾರದ ಪರಿವಾಗಿ ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.