ಕಳೆದ ಅರ್ಧ ಶತಮಾನದಲ್ಲೇ ಅತ್ಯಂತ ದೊಡ್ಡ ಮಾನವೀಯ ಬಿಕ್ಕಟ್ಟನ್ನು ದೇಶವು ಎದುರಿಸುತ್ತಿದ್ದರೂ ಸಹ, ಸಾಂಕ್ರಾಮಿಕದ ದುಷ್ಪರಿಣಾಮಗಳನ್ನು ಎದುರಿಸಲು ತಕ್ಕನಾದ ಪ್ಯಾಕೇಜ್ ಅನ್ನು ಒದಗಿಸದ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು.
ಈಗಲಾದರೂ ಸರಕಾರ ತುರ್ತಾಗಿ ಮಾಡಬೇಕಾಗಿರುವುದು ಏನೆಂದರೆ, ಬದುಕುವ ಹಕ್ಕಿಗೆ ಆದ್ಯತೆ ನೀಡುವ ಹಲವಾರು ಕ್ರಮಗಳನ್ನು ಹಂತ ಹಂತವಾಗಿ ಕೈಕೊಳ್ಳುವುದು. ಆದ್ಯತೆಯ ಮೇಲೆ ಕೈಗೊಳ್ಳಬೇಕಾದ ಈ ಕ್ರಮಗಳು ಇಂದು ಆರ್ಥಿಕ ಚೇತರಿಕೆಯನ್ನು ಪ್ರಾರಂಭಿಸುವ ಖಚಿತ ಕಾರ್ಯವಿಧಾನವೂ ಹೌದು, ಮಾರ್ಗವೂ ಹೌದು.
ಭಾರತವು ಸಂವಿಧಾನದಲ್ಲಿರುವ ‘ಬದುಕುವ ಹಕ್ಕು’ ಎಂಬ ಪದಕ್ಕೆ ಮತ್ತು ಸಮಾನತೆ ಮತ್ತು ಸೋದರತ್ವದ ಪ್ರತಿಜ್ಞೆಗಳಿಗೆ ಸತ್ವ ಮತ್ತು ಅರ್ಥವನ್ನು ನೀಡುವ ದೂರ ಸರಿಯಬಾರದು ಎನ್ನುತ್ತಾರೆ. ಮಾನವ ಹಕ್ಕುಗಳ ಹೋರಾಟಗಾರರಾದ ಹರ್ಷಮಂದೆರ್, ಅರ್ಥಶಾಸ್ತ್ರಜ್ಞರಾದ ಪ್ರೊ. ಜಯತಿ ಘೋಷ್ ಮತ್ತು ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್ (ಮೂಲ ಲೇಖನ ಕೃಪೆ: ದಿ ಹಿಂದು, ಮೇ 18)
ಕೊರೊನಾ ಸಾಂಕ್ರಾಮಿಕದಿಂದಾಗಿ ಉದ್ಭವಿಸಿರುವ ಆರೋಗ್ಯ ತುರ್ತುಪರಿಸ್ಥಿತಿ, ಬೃಹತ್ ಪ್ರಮಾಣದ ಉದ್ಯೋಗಗಳ ನಷ್ಟ, ದುಡಿಮೆಗೆ ಸಿಗುವ ಆದಾಯದ ಏಕಾಏಕಿ ಕುಸಿತ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮತ್ತು ಹಸಿವಿನಿಂದ ನರಳುತ್ತಿರುವ ಜನರ ಸಂಖ್ಯೆಯ ಅತೀವ ಹೆಚ್ಚಳ ಮುಂತಾದ ಅನೇಕ ಬಿಕ್ಕಟ್ಟುಗಳ ಪರಿಣಾಮವಾಗಿ ಭಾರತದ ಬಹುಪಾಲು ಜನರು ಇಂದು ತತ್ತರಿಸಿ ಹೋಗಿದ್ದಾರೆ.
ಅನೇಕ ವೈಫಲ್ಯಗಳು
ಎಲ್ಲಾ ವಲಸೆ ಕಾರ್ಮಿಕರಿಗೂ, ಅವರು ಗುರುತಿನ ದಾಖಲೆ ಹೊಂದಿರದಿದ್ದರೂ ಸಹ, ಉಚಿತ ಪಡಿತರವನ್ನು ಒದಗಿಸುವಂತೆ ಮತ್ತು ಸಮುದಾಯ-ಅಡುಗೆ ವ್ಯವಸ್ಥೆಗಳನ್ನು ಆರಂಭಿಸಿ ದಿನಕ್ಕೆ ಎರಡು ಬಾರಿ ಉಚಿತ ಊಟ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಮೇ 13 ರಂದು ಕೇಂದ್ರ ಸರ್ಕಾರ ಮತ್ತು ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಹಸಿವಿನ ಬಿಕ್ಕಟ್ಟು ದೇಶದಲ್ಲಿದೆ ಎಂಬುದನ್ನು 2020ರ ಮಾರ್ಚ್ನಲ್ಲಿ ಘೋಷಿಸಿದ್ದ ರಾಷ್ಟ್ರವ್ಯಾಪಿ ಲಾಕ್ಡೌನ್ ನಂತರ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ ಸರ್ಕಾರಗಳು ತುರ್ತು ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಆದೇಶಿಸಿರುವ ತೀರ್ಪು ಮಹತ್ವಪೂರ್ಣವಾಗಿದೆ.
ಇದನ್ನು ಓದಿ: ಮೋದಿ ಸರ್ಕಾರವು ಕತ್ತಲೆಯಲ್ಲಿ ತಡಕಾಡುತ್ತಿರುವಾಗ ನ್ಯಾಯಾಲಯಗಳು ಕೋವಿಡ್ ಬಿಕ್ಕಟ್ಟಿನಲ್ಲಿ ನೆರವು ನೀಡುತ್ತಿವೆ
ಆದರೂ, ಮೂರು ಕಾರಣಗಳಿಂದಾಗಿ ಪಥ-ಪ್ರವರ್ತಕನಾಗುವ ಒಂದು ಅವಕಾಶವನ್ನು ಸುಪ್ರೀಂ ಕೋರ್ಟ್ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದೆ: ಉಚಿತ ಪಡಿತರ ಮತ್ತು ಉಚಿತ ಊಟದ ಸೌಲಭ್ಯವನ್ನು ಅದು ಇಡೀ ದೇಶಕ್ಕೆ ವಿಸ್ತರಿಸಲಿಲ್ಲ; ಊಟ ಮತ್ತು ಪಡಿತರದ ಜೊತೆಗೆ ಸ್ವಲ್ಪ ನಗದು ಹಣವೂ ದೊರಕುವಂತೆ ಈ ಸೌಲಭ್ಯವನ್ನು ವಿಸ್ತರಿಸಲಿಲ್ಲ; ಮತ್ತು, ಈ ಸೌಲಭ್ಯವು ಒಂದು ಹಕ್ಕು ಎಂದು ಪರಿಗಣನೆಯಾಗುವುದರ ಬದಲು ಸರ್ಕಾರದ ಧಾರಾಳದ ಕೊಡುಗೆ ಎಂದು ಪರಿಗಣಿಸಲಾಗಿದೆ. ಜೀವಿಸುವ ಹಕ್ಕಿನೊಂದಿಗೆ ಸಂಬಂಧ ಹೊಂದಿರುವುದರಿಂದ ಮತ್ತು ಜೀವಿಸುವ ಹಕ್ಕಿನಿಂದ ಉದ್ಭವವಾಗುವ ಜೀವನೋಪಾಯದ ಹಕ್ಕು ಕೂಡ ಸಾರ್ವತ್ರಿಕವೇ ಎಂಬುದನ್ನು ತೀರ್ಪಿಗೆ ಆಧಾರವಾಗಿ ಗುರುತಿಸಿದ್ದರೆ, ಈ ಮೂರೂ ಲೋಪಗಳನ್ನು ನಿವಾರಿಸಬಹುದಿತ್ತು.
ನಾಚಿಕೆಗೇಡಿ ಲಸಿಕೆ ನೀತಿ
ತನ್ನ ಲಸಿಕೆ ನೀತಿಯ ಮೂಲಕ ಬದುಕುವ ಹಕ್ಕಿನ ಅತ್ಯಂತ ನಾಚಿಕೆಗೇಡಿನ ಉಲ್ಲಂಘನೆಯನ್ನು ಸರ್ಕಾರ ಮಾಡುತ್ತಿದೆ. ಇಂದಿನ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಬದುಕುಳಿಯಬೇಕು ಎಂದಾದರೆ, ಕೋವಿಡ್-19 ವಿರುದ್ಧ ಲಸಿಕೆ ಹಾಕಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವಿಸುವ ಹಕ್ಕನ್ನು ಗೌರವಿಸುವುದು ಮತ್ತು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿರುವುದರಿಂದ, ಲಸಿಕೆ ಪಡೆಯುವವರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ, ಸರ್ಕಾರವು ಎಲ್ಲರಿಗೂ ಸಮಾನವಾಗಿ ಲಸಿಕೆ ಲಭ್ಯವಾಗುವಂತೆ ಮಾಡಲೇಬೇಕು. ಲಸಿಕೆ ಉಚಿತವಾಗಿ ಲಭ್ಯವಿದ್ದರೆ ಮಾತ್ರ ಈ ಕಾರ್ಯವನ್ನು ಸಾಧಿಸಬಹುದು. ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ಅತಿ ಹೆಚ್ಚು ಖಾಸಗೀಕರಣಗೊಳಿಸಿರುವ ಅಮೇರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ, ಲಸಿಕೆಗಳನ್ನು ಎಲ್ಲರಿಗೂ ಉಚಿತವಾಗಿ ಒದಗಿಸಲಾಗಿದೆ. ಆದರೆ, ಭಾರತದಲ್ಲಿ 18-45 ವರ್ಷ ವಯಸ್ಸಿನವರು ದುಬಾರಿ ಶುಲ್ಕ ತೆತ್ತು ಲಸಿಕೆಗಳನ್ನು ಖಾಸಗಿ ನರ್ಸಿಂಗ್ ಹೋಂಗಳ ಮೂಲಕ ಪಡೆಯುವಂತೆ ಮಾಡಲಾಗಿದೆ. ಸಾಂಕ್ರಾಮಿಕ ರೋಗವನ್ನು ನಿಗ್ರಹಿಸುವಲ್ಲಿ ಇದೊಂದು ಅಸಹ್ಯದ ಕ್ರಮವೂ ಮತ್ತು ಪ್ರತಿಕೂಲ ತಂತ್ರವೂ ಆಗುತ್ತದೆ.
ಕೇಂದ್ರ ಸರ್ಕಾರವು ಹೊಂದಿರುವ ಲೈಸೆನ್ಸ್ ಕಡ್ಡಾಯ ಅಧಿಕಾರವನ್ನು ಬಳಸಿಕೊಂಡು, ಅನೇಕ ಔಷಧ ತಯಾರಕ ಕಂಪೆನಿಗಳ ಸಹಯೋಗದೊಂದಿಗೆ ಉತ್ಪಾದನೆಯನ್ನು ಹೆಚ್ಚಿಸಿ ಸಾಕಷ್ಟು ಲಸಿಕೆಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲಿಲ್ಲ. ಇಂತಿಷ್ಟು ಸಮಯದಲ್ಲಿ ಇಂತಿಷ್ಟು ಲಸಿಕೆಗಳನ್ನು ಒದಗಿಸಬೇಕೆಂಬ ಕೋರಿಕೆಯನ್ನು ಲಸಿಕೆ ತಯಾರಿಕರಿಗೆ ಸಲ್ಲಿಸಲಿಲ್ಲ. ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ಒದಗಿಸುವ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ನರ್ಸಿಂಗ್ ಹೋಂಗಳು ಕೊಳ್ಳುವ ಲಸಿಕೆಗಳಿಗೆ ಬೇರೆ ಬೇರೆ ದರ ನಿಗದಿಪಡಿಸಿದ್ದರಿಂದಾಗಿ, ರಾಜ್ಯಗಳು ತಮ್ಮ ತಮ್ಮೊಳಗೆ ಮತ್ತು ಖಾಸಗಿ ನರ್ಸಿಂಗ್ ಹೋಂಗಳೊಂದಿಗೆ ಸ್ಪರ್ಧೆಗೆ ಇಳಿದು ಕಿತ್ತಾಡುವಂತೆ ಮಾಡಲಾಗಿದೆ. ಈ ರೀತಿಯಲ್ಲಿ ನಿಗದಿಪಡಿಸಿರುವ ಬೆಲೆಗಳು ಭಾರತ್ ಬಯೋಟೆಕ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಹಣ ಕೀಳುವ ಅವಕಾಶವನ್ನು ಕಲ್ಪಿಸಿವೆ. ಭಾರತ ಸರ್ಕಾರದ ಇಂತಹ ಅನೇಕ ಘೋರ ವೈಫಲ್ಯಗಳ ಪರಿಣಾಮವನ್ನು ನಾವೀಗ ನೋಡುತ್ತಿದ್ದೇವೆ.
ಇದನ್ನು ಓದಿ: ಕೋವಿಡ್ ದಾಳಿಯ ನಡುವೆ ಗ್ರಹಿಸಬೇಕಾದ ಕೆಲವು ನೀತಿಗಳು
ಉಲ್ಬಣಗೊಂಡ ಸೋಂಕಿನಿಂದ ಆಗಲೋ ಈಗಲೋ ಎನ್ನುವ ಹಂತ ತಲುಪಿದಾಗಲೂ ಜನರ ಜೀವ ಉಳಿಸಲು ಸಾಕಷ್ಟು ಶ್ರಮ ವಹಿಸದ ಸರ್ಕಾರದ ಮನಃಸ್ಥಿತಿಯನ್ನು, ಎರಡನೇ ಅಲೆ ಅಪ್ಪಳಿಸಿರುವ ಈ ಸಮಯದಲ್ಲಿ ಜನರಿಗೆ ಜೀವನೋಪಾಯವೇ ಮಂಗಮಾಯವಾಗುತ್ತಿರುವಾಗ ನಾವು ಕಾಣುತ್ತಿರುವ ಅದರ ನಿರ್ದಯತೆ ಮಾತ್ರ ಸರಿಗಟ್ಟಬಲ್ಲದು. ಕನಿಷ್ಠ 90% ಕಾರ್ಮಿಕರು ಅನೌಪಚಾರಿಕ ವಲಯದಲ್ಲಿದ್ದಾರೆ. ಉದ್ಯೋಗ ಸಂಬಂಧಿತವಾಗಿ ಅವರಿಗೆ ಕಾನೂನಿನ ರಕ್ಷೆಯೇ ಇಲ್ಲ. ಸಾಮಾಜಿಕ ರಕ್ಷಣೆಯೂ ಇಲ್ಲ. ಹಿಂದಿನ ವರ್ಷದ ಲಾಕ್ಡೌನ್ ಉಂಟುಮಾಡಿದ ಆರ್ಥಿಕ ಸಂಕಷ್ಟಗಳಿಗೆ ತಕ್ಕ ಪರಿಹಾರವನ್ನು ನಿರಾಕರಿಸಲಾಗಿದೆ. ಅನೌಪಚಾರಿಕ ವಲಯದ ಉದ್ಯೋಗಗಳನ್ನೇ ಅವಲಂಬಿಸಿರುವ ಸುಮಾರು ಒಂದು ನೂರು ಕೋಟಿ ಜನರ ಜೀವನವು ದುಃಸ್ಥಿತಿಗೆ ಒಳಗಾಗಿರುವ ಸಮಸ್ಯೆಯ ಬಗ್ಗೆ ಸಮಾಜ ದನಿ ಎತ್ತುತ್ತಿಲ್ಲ. ನಮ್ಮ ರಾಷ್ಟ್ರ ಮಟ್ಟದ ನೀತಿ ನಿರೂಪಕರು ಅಸಂಘಟಿತ ವಲಯವನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಅವರ ಈ ನಿಷ್ಕ್ರಿಯತೆಯು, ಹೇಳಲಾಗದ ಯಾತನೆಯನ್ನು ಅನುಭವಿಸುತ್ತಿರುವ ಜನರಿಗೆ ಮಾತ್ರವಲ್ಲ, ದೇಶದ ಭವಿಷ್ಯ ಮತ್ತು ಅದು ಅನುಸರಿಸುತ್ತಿರುವ ಆರ್ಥಿಕ ಬೆಳವಣಿಗೆಯ ದಿಕ್ಪಥದ ಮೇಲೆ ಭೀಕರ ಮತ್ತು ದೀರ್ಘಕಾಲೀನ ಪರಿಣಾಮ ಬೀರಲಿದೆ.
ಕೆಲವು ಸ್ವಯಂ ಸೇವಾ ಸಂಸ್ಥೆಗಳು ಒಟ್ಟಾಗಿ ಸೇರಿ, ಹಸಿವಿನ ಅಗಾಧತೆಯ ಬಗ್ಗೆ (‘ಹಂಗರ್ ವಾಚ್’) ಇತ್ತೀಚೆಗೆ ನಡೆಸಿದ ಒಂದು ಅಧ್ಯಯನದ ವರದಿಯ ಪ್ರಕಾರ, ಹಿಂದಿನ ವರ್ಷದ ಲಾಕ್ಡೌನ್ ತೆರವುಗೊಳಿಸಿದ ಎರಡು ತಿಂಗಳ ನಂತರ, ಮೂರರಲ್ಲಿ ಎರಡು ಕುಟುಂಬಗಳು ಲಾಕ್ಡೌನ್ಗೆ ಮೊದಲು ಉಣ್ಣುತ್ತಿದ್ದಕ್ಕಿಂತಲೂ ಕಡಿಮೆ ಉಣ್ಣುತ್ತಿವೆ ಮತ್ತು ಅವರು ಸೇವಿಸಿದ ಆಹಾರವು ಕಡಿಮೆ ಆರೋಗ್ಯಕರವಾಗಿತ್ತು. ಸಮೀಕ್ಷೆ ನಡೆಸಿದ ಕುಟುಂಬಗಳ ಪೈಕಿ ನಾಲ್ಕರಲ್ಲಿ ಒಂದರ ಆದಾಯವು ಅರ್ಧದಷ್ಟು ಕುಸಿದಿದೆ. ಗ್ರಾಮೀಣಕ್ಕೆ ಹೋಲಿಸಿದರೆ ನಗರ ಭಾರತದಲ್ಲಿ ಹಸಿದವರ ಸಂಖ್ಯೆ ಹೆಚ್ಚಾಗಿದೆ. ಮುಂದಾಲೋಚನೆ ಇಲ್ಲದೆ ಘೋಷಿಸಿದ ಇತ್ತೀಚಿನ ಲಾಕ್ಡೌನ್ಗಳು, ಜನ ಜೀವನವನ್ನು ಹಳಿಗೆ ತರುವ ಪ್ರಯತ್ನಗಳನ್ನು ನಿಷ್ಫಲಗೊಳಿಸುತ್ತವೆ.
ಒಂದು ಗಮನಾರ್ಹ ಪ್ಯಾಕೇಜ್
ಕಳೆದ ಅರ್ಧ ಶತಮಾನದಲ್ಲೇ ಅತ್ಯಂತ ದೊಡ್ಡ ಮಾನವೀಯ ಬಿಕ್ಕಟ್ಟನ್ನು ದೇಶವು ಎದುರಿಸುತ್ತಿದ್ದರೂ ಸಹ, ಸಾಂಕ್ರಾಮಿಕದ ದುಷ್ಪರಿಣಾಮಗಳನ್ನು ಎದುರಿಸಲು ತಕ್ಕನಾದ ಪ್ಯಾಕೇಜ್ಅನ್ನು ಒದಗಿಸದ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಕೈ ಬಿಗಿ ಹಿಡಿದ ಹಣಕಾಸು ನೀತಿಯನ್ನು ಅನುಸರಿಸುವ ದೇಶವಾಗಿ ಉಳಿದ ಭಾರತದಲ್ಲಿ, ಕೋವಿಡ್-19 ಜಾಢ್ಯ ಶುರುವಾದ ಏಪ್ರಿಲ್ 2020 ರಿಂದ ಫೆಬ್ರವರಿ 2021ರ ವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರದ ನೈಜ ಖರ್ಚು-ವೆಚ್ಚಗಳು ಜಿಡಿಪಿಯ ಶೇ.2.1ರಷ್ಟು ಮಾತ್ರ ಏರಿಕೆಯಾಗಿವೆ. ಈ ಅಂಶವು, ಮೊದಲ ಅಲೆಯಿಂದಲೇ ಹೆಚ್ಚು ಜರ್ಜರಿತವಾಗಿದ್ದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆಯು ಕಳಪೆಯಾಗಿಯೇ ಏಕೆ ಉಳಿದಿದೆ ಎಂಬುದನ್ನು ವಿವರಿಸುತ್ತದೆ. ಈ ದೇಶಗಳ ಪೈಕಿ ಹೆಚ್ಚಿನವು ಒದಗಿಸಿದ ಹಣಕಾಸಿನ ಬೃಹತ್ ಪ್ಯಾಕೇಜ್ಗಳು ಜನರ ಆದಾಯ ಕೊರೆಯಾಗದಂತೆ ನೋಡಿಕೊಂಡು ತಮ್ಮ ಅರ್ಥವ್ಯವಸ್ಥೆಯನ್ನು ಸುಧಾರಿಸಿಕೊಂಡವು.
ಇದನ್ನು ಓದಿ: ಪಾಠ ಕಲಿಯಲು ನಿರಾಕರಿಸುವ ಈ ಸರ್ಕಾರ ಜನತೆಯ ಮತ್ತು ದೇಶದ ದುರಂತ
ಮೂಲಸೌಕರ್ಯ ಯೋಜನೆಗಳ ಉಳಿಕೆ ಕೆಲಸವನ್ನು ಪೂರ್ಣಗೊಳಿಸಲು ಸರ್ಕಾರ ಹಣ ಖರ್ಚುಮಾಡುವುದು ಅರ್ಥವ್ಯವಸ್ಥೆಯ ಚೇತರಿಕೆಗೆ ಒಂದು ಸಾಧನವೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಕ್ರಮಕ್ಕೆ ಬದಲಾಗಿ ಅದೇ ಹಣವನ್ನು ದುಡಿಯುವ ಲಕ್ಷ ಲಕ್ಷ ಮಂದಿ ಬಡವರಿಗೆ ನಗದು ವರ್ಗಾವಣೆ ಮಾಡಿದ್ದರೆ, ಜನರ ಹಸಿವು ಇಂಗುತ್ತಿತ್ತು, ಉದ್ಯೋಗ ಕಳೆದುಕೊಂಡವರಿಗೆ ಸ್ವಲ್ಪ ಸಮಾಧಾನ ಸಿಗುತ್ತಿತ್ತು ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನವೂ ಸಿಗುತ್ತಿತ್ತು. ಹೇಗೆಂದರೆ, ಈ ಎಲ್ಲ ನಗದು ವರ್ಗಾವಣೆಯ ಹಣವೂ ಸರಳ, ದೇಶೀಯವಾಗಿ ಉತ್ಪಾದಿಸಿದ ಸರಕುಗಳನ್ನು ಕೊಳ್ಳಲು ಖರ್ಚಾಗುತ್ತಿತ್ತು. ಹಾಗಾಗಿ, ಇಂತಹ ಸಾರ್ವಜನಿಕ ವೆಚ್ಚದ ‘ಗುಣಕ’ ಪರಿಣಾಮಗಳು ಮೂಲಸೌಕರ್ಯ ಯೋಜನೆಗಳಿಗೆ ಖರ್ಚು ಮಾಡಿದ್ದಕ್ಕಿಂತಲೂ ಹೆಚ್ಚಾಗಿರುತ್ತಿತ್ತು.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಉಚಿತ ಪಡಿತರ ಮತ್ತು ಊಟ ಒದಗಿಸುವ ಕ್ರಮಗಳು ಪ್ರಯೋಜನಕಾರಿಯಾಗಿವೆ, ನಿಜ. ಆದರೆ, ಈ ಕ್ರಮಗಳು ಅರ್ಥವ್ಯವಸ್ಥೆಯ ಮೇಲೆ ಬೀರುವ ವಿಸ್ತರಣಾ ಪರಿಣಾಮವು ನಗಣ್ಯ, ಏಕೆಂದರೆ, ಪಡಿತರ ಮತ್ತು ಊಟ ಒದಗಿಸಲು ಅಗತ್ಯವಿರುವ ಸರಕುಗಳಲ್ಲಿ ಹೆಚ್ಚಿನವು ಈಗಾಗಲೇ ಸಂಗ್ರಹದಲ್ಲಿರುವ ಆಹಾರ ಧಾನ್ಯಗಳ ದಾಸ್ತಾನುಗಳ ಪ್ರಮಾಣವನ್ನು ಇಳಿಸುತ್ತವೆ, ಅಷ್ಟೇ. ಹೀಗಾಗಿ, ಸಂಕಷ್ಟದಲ್ಲಿರುವ ಜನರಿಗೆ ಪರಿಹಾರವನ್ನು ಒದಗಿಸುವ ಅಗತ್ಯ ಮತ್ತು ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಅಗತ್ಯ, ಈ ಎರಡೂ ಅನಿವಾರ್ಯತೆಗಳನ್ನು ಪೂರೈಸಿಕೊಳ್ಳುವ ಮಾರ್ಗವೆಂದರೆ, ಜನರಿಗೆ ಉಚಿತ ಊಟ ಮತ್ತು ಪಡಿತರದ ಜೊತೆಗೆ, ಪ್ರತಿ ಕುಟುಂಬಕ್ಕೂ ತಿಂಗಳಿಗೆ ರೂ.7,000 (ಕನಿಷ್ಠ ವೇತನದ ಸರಿ ಸುಮಾರು) ನಗದು ವರ್ಗಾವಣೆಯನ್ನು ಮಾಡುವ ಕ್ರಮವೇ.
ಪ್ರಭುತ್ವವು ತುರ್ತಾಗಿ ಮಾಡಬೇಕಾಗಿರುವುದು ಏನೆಂದರೆ, ಬದುಕುವ ಹಕ್ಕಿಗೆ ಆದ್ಯತೆ ನೀಡುವ ಹಲವಾರು ಕ್ರಮಗಳನ್ನು ಹಂತ ಹಂತವಾಗಿ ಕೈಕೊಳ್ಳುವುದು. ಆದ್ಯತೆಯ ಮೇಲೆ ಕೈಗೊಳ್ಳಬೇಕಾದ ಈ ಕ್ರಮಗಳು ಇಂದು ಆರ್ಥಿಕ ಚೇತರಿಕೆಯನ್ನು ಪ್ರಾರಂಭಿಸುವ ಖಚಿತ ಕಾರ್ಯವಿಧಾನವೂ ಹೌದು, ಮಾರ್ಗವೂ ಹೌದು.
ಕೋವಿಡ್-19 ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಿ, ಸಂಗ್ರಹಣೆಯನ್ನು ಕೇಂದ್ರೀಕೃತಗೊಳಿಸಿ ಜನರ ಸೋಂಕು ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಎಲ್ಲರಿಗೂ ಉಚಿತವಾಗಿ ಒದಗಿಸುವಂತೆ ಲಸಿಕೆಗಳನ್ನು ರಾಜ್ಯಗಳಿಗೆ ವಿತರಿಸುವುದು; ಮುಂದಿನ ಆರು ತಿಂಗಳವರೆಗೆ ಅಗತ್ಯವಿರುವ ಎಲ್ಲರಿಗೂ ತಿಂಗಳಿಗೆ 5 ಕೆಜಿಯಂತೆ ಆಹಾರ ಧಾನ್ಯಗಳನ್ನು ಉಚಿತವಾಗಿ ಹಂಚುವುದು; ಖಾಯಂ ಉದ್ಯೋಗವಿಲ್ಲದ ಪ್ರತಿ ಕುಟುಂಬಕ್ಕೂ ಕನಿಷ್ಠ ಮೂರು ತಿಂಗಳವರೆಗೆ ತಿಂಗಳಿಗೆ ರೂ.7,000 ನಗದು ವರ್ಗಾವಣೆ; ಸಮಗ್ರ ಶಿಶು ಅಭಿವೃದ್ಧಿ ಸೇವೆಗಳಿಗೆ ಸಂಪನ್ಮೂಲಗಳನ್ನು ಹೆಚ್ಚಿಸಿ ಈ ಕಾರ್ಯಕ್ರಮಗಳ ಪುನರುಜ್ಜೀವನಗೊಳಿಸಿ ವಿಸ್ತರಿಸುವುದು; ಕೆಲಸ ಒದಗಿಸುವ ದಿನಗಳ ಸಂಖ್ಯೆಯ ಮೇಲೆ ಅಥವಾ ಪ್ರತಿ ಕುಟುಂಬದ ಫಲಾನುಭವಿಗಳ ಸಂಖ್ಯೆಯ ಮೇಲೆ ಯಾವುದೇ ಮಿತಿ ಹೇರದೆ, ಉದ್ಯೋಗ ಖಾತ್ರಿ ಯೋಜನೆಯನ್ನು ಬೇಡಿಕೆಗೆ ಅನುಗುಣವಾಗಿ ಜಾರಿಗೊಳಿಸುವುದು; ವಿದ್ಯಾವಂತ ನಿರುದ್ಯೋಗಿಗಳಿಗೂ ಪ್ರಯೋಜನ ದೊರೆಯುವಂತಾಗಲು ಉದ್ಯೋಗ ಖಾತ್ರಿಯೋಜನೆಯನ್ನು ನಗರಗಳಿಗೂ ವಿಸ್ತರಿಸುವುದು.
ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಹಣ ಎಲ್ಲಿದೆ? ಎಂದು ಕೇಳಬಹುದು. ಗಣನೀಯ ಪ್ರಮಾಣದ ನಿರುದ್ಯೋಗ, ಬಳಕೆಯಾಗದ ಉತ್ಪಾದನಾ ಸಾಮರ್ಥ್ಯ ಮತ್ತು ಬಳಸದ ಆಹಾರ ಧಾನ್ಯಗಳ ದಾಸ್ತಾನು (ಪ್ರಸ್ತುತ ಸುಮಾರು 80 ದಶಲಕ್ಷ ಟನ್ಗಳು) ಹೊಂದಿರುವ ಅರ್ಥವ್ಯವಸ್ಥೆಯಲ್ಲಿ, ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಲು ಯಾರೊಬ್ಬರ ಬಳಕೆಯನ್ನೂ ಮೊಟಕುಗೊಳಿಸುವ ಅಗತ್ಯವಿಲ್ಲ. ವಿತ್ತೀಯ ಕೊರತೆಯು ಅನಪೇಕ್ಷಿತವಾಗಿ ಸಂಪತ್ತಿನ ಅಸಮಾನತೆಗಳನ್ನು ವಿಸ್ತರಿಸುತ್ತದೆ ಮತ್ತು ಜಾಗತಿಕವಾಗಿ ಹರಿದಾಡುವ ಹಣಕಾಸು ಬಂಡವಾಳವನ್ನು ಗಾಬರಿಗೊಳಿಸುತ್ತದೆ ಎಂಬುದರ ಹೊರತಾಗಿ, ವಿತ್ತೀಯ ಕೊರತೆಯನ್ನು ವಿಸ್ತರಿಸಿಕೊಳ್ಳುವುದರಿಂದ ಯಾವ ಹಾನಿಯೂ ಇಲ್ಲ.
ಈ ಎರಡೂ ಸಾಧ್ಯತೆಗಳನ್ನು ತಡೆಗಟ್ಟಲು, ಸಂಪತ್ತಿನ ತೆರಿಗೆಯನ್ನು ಜಾರಿಗೊಳಿಸುವುದು ಒಂದು ಸರಳ ಕ್ರಮವಾಗುತ್ತದೆ. ಲಾಭದ ಮೇಲೆ ಹೆಚ್ಚು ತೆರಿಗೆ ಹಾಕಿದರೂ ಸಾಕೇ ಸಾಕು. ಈ ಎರಡೂ ಕ್ರಮಗಳು ಒಟ್ಟಾಗಿ ಸಂಗ್ರಹಿಸಬಹುದಾದ ತೆರಿಗೆಗಳು, ಜಿಡಿಪಿಯ 3.5% ಗಿಂತಲೂ ಅಧಿಕವಲ್ಲ. ಈ 3.5% ತೆರಿಗೆಗಳಲ್ಲಿ ಸುಮಾರು 1% ಹಣವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ತೆರಿಗೆ ಆದಾಯವಾಗಿ ಹಿಂತಿರುಗುತ್ತದೆ. ಹಾಗಾಗಿ, ಜಿಡಿಪಿಯ ಶೇ.2.5ರಷ್ಟು ಹೊಸ ಹೆಚ್ಚುವರಿ ತೆರಿಗೆ ಆದಾಯದ ಅಗತ್ಯವಿರುತ್ತದೆ. ಈ ಮೊತ್ತವನ್ನು ಪಡೆದುಕೊಳ್ಳಲು ಆದಾಯ ಗಳಿಕೆ ಪಟ್ಟಿಯ ಮೇಲ್ತುದಿಯ 1% ಕುಟುಂಬಗಳ ಮೇಲೆ ಕೇವಲ 1.5% ಸಂಪತ್ತಿನ ತೆರಿಗೆಯನ್ನು ವಿಧಿಸಿದರೆ ಸಾಕೇ ಸಾಕು.
ಈ ಅಂಕಿ ಅಂಶಗಳು ಕೇವಲ ಉದಾಹರಣೆಯಷ್ಟೇ. ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಮತ್ತು ಅಮೇರಿಕಾದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರುಗಳು ಹೆಚ್ಚು ಹೆಚ್ಚು ಆಮೂಲಾಗ್ರ ಸುಧಾರಣಾ ಕ್ರಮಗಳನ್ನು ಪರಿಗಣಿಸುತ್ತಿರುವಾಗ, ಭಾರತವು ‘ಬದುಕಿನ ಹಕ್ಕು’ ಎಂಬ ಪದಕ್ಕೆ ಸತ್ವ ಮತ್ತು ಅರ್ಥವನ್ನು ನೀಡುವ ಮತ್ತು ಸಂವಿಧಾನದ ಸಮಾನತೆ ಮತ್ತು ಭ್ರಾತೃತ್ವದ ಪ್ರತಿಜ್ಞೆಗಳಿಂದ ದೂರ ಸರಿಯಬಾರದು.