ಬೆಂಗಳೂರು: ಮುಂಬರಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಕೊರೊನಾದಿಂದ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಮತ್ತು ಸೋಂಕಿತರ ಪ್ರಾಣರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ತಡೆಯೊಡ್ಡಿರುವ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಇಂದು ತಿಳಿಸಿದರು.
ಇದನ್ನು ಓದಿ: ರಾಜ್ಯದಲ್ಲಿ 70, ದೇಶದಲ್ಲಿ ಸಾವಿರ ವೈದ್ಯರು ಕೋವಿಡ್ ಗೆ ಬಲಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ವಿವರಣೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ @DKShivakumar, ವಿಪಕ್ಷ ನಾಯಕ @siddaramaiah, ರಾಜ್ಯಸಭೆ ವಿಪಕ್ಷ ನಾಯಕ @kharge, ಕೇಂದ್ರದ ಮಾಜಿ ಸಚಿವ @INCKHMuniyappa ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. pic.twitter.com/zhOtQcjj1a
— Karnataka Congress (@INCKarnataka) May 21, 2021
ಕೋವಿಡ್ ನಿಂದಾಗಿ ರಾಜ್ಯದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಆಕ್ಸಿಜನ್, ಹಾಸಿಗೆ, ವೆಂಟಿಲೇಟರ್ ಸಿಗದೆ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳಿಂದ ತಾವು ಮಾಹಿತಿ ಪಡೆಯುವ ಉದ್ದೇಶವೇ ಹೊರತು ಇದು ಜಿಲ್ಲಾಧಿಕಾರಿಗಳ ಸಭೆ ಅಥವಾ ಪ್ರಗತಿ ಪರಿಶೀಲನೆ ಸಭೆ ಅಲ್ಲ. ಆದರೆ ಮಾಹಿತಿ ಸಂಗ್ರಹಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಎನ್ನುವುದು ಸಾಂವಿಧಾನಿಕ ಹುದ್ದೆ. ಮಾಹಿತಿ ಸಂಗ್ರಹಿಸಲು ಅನುಮತಿ ನಿರಾಕರಿಸಿರುವುದು ಹಕ್ಕುಚ್ಯುತಿ ಆಗುತ್ತದೆ. ಹಾಗಾಗಿ ವಿಧಾನ ಮಂಡಲದ ಮುಂಬರುವ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲು ಉದ್ದೇಶಿಸಿದ್ದೇನೆ ಎಂದು ತಿಳಿಸಿದರು.
ಇದನ್ನು ಓದಿ: ಕೋವಿಡ್ ಪ್ರಕರಣ ಇಳಿಮುಖ : ಅಸಲಿ ಕಾರಣವೇನು? ರಾಜ್ಯದಲ್ಲಿ 82% ಮಂದಿ ಲಸಿಕೆಗಾಗಿ ಕಾಯುತ್ತಿದ್ದಾರೆ
ಕೊರೊನಾ ಪರಿಸ್ಥಿತಿಯ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೊಡಿ ಎಂದು ಈ ವರೆಗೆ ಹನ್ನೆರಡು ಪತ್ರಗಳನ್ನು ಬರೆದಿರುವೆ. ಅದಕ್ಕೆ ಸರ್ಕಾರದಿಂದ ಉತ್ತರ ಬಂದಿಲ್ಲ. ಮುಖ್ಯಮಂತ್ರಿಗಳಿಗೆ ಉತ್ತರಿಸುವ ಸೌಜನ್ಯವೇ ಇಲ್ಲವಾಗಿದೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರವು ಜನತೆಗೆ ದ್ರೋಹವೆಸಗುತ್ತಿದೆ. ಅತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಪ್ರತಿಪಕ್ಷಗಳ ಯಾವುದೇ ಪತ್ರಕ್ಕೂ ಉತ್ತರ ನೀಡುತ್ತಿಲ್ಲ. ಅದೇ ನಿಲುವನ್ನೂ ಯಡಿಯೂರಪ್ಪ ಸಹ ಅನುಸರಿಸುತ್ತಿದ್ದಾರೆ. ಈ ಸರ್ಕಾರದ ವೈಫಲ್ಯದಿಂದ ಸಾವಿರಾರು ಜನ ಸಾಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
2009ರ ಸಂದರ್ಭದಲ್ಲೂ ಸರಕಾರ ಇದೇ ನಿಲುವು ಅನುಸರಿಸಿತ್ತು. ಸರ್ಕಾರದ ಲೋಪಗಳು ಹೊರ ಬರುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಅನುಮತಿ ನಿರಾಕರಿಸಿದ್ದಾರೆ. ಸತ್ಯ ಹೇಳಿದರೆ ಕೇಸು ದಾಖಲಿಸುವ, ಬಂಧಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಹೆದರಬಾರದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ ಸುಮಾರು 24 ಸಾವಿರ ಮಂದಿ ನಿಧನರಾಗಿದ್ದಾರೆ ಎಂದು ಸರ್ಕಾರ ತೋರಿಸುತ್ತಿದೆ. ಆದರೆ ನನ್ನ ಪ್ರಕಾರ, ಕೋವಿಡ್ ಎರಡನೇ ಅಲೆ ಬಂದ ಮೇಲೆ 10 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಇನ್ನು ಹಳ್ಳಿಗಳಲ್ಲಿ ಸೋಂಕಿತರು, ಐಸೊಲೇಷನ್ ನಲ್ಲಿರುವವರು ಎಷ್ಟಿದ್ದಾರೆಂದು, ಎಷ್ಟು ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಸರಿಯಾಗಿ ಅಂಕಿಅಂಶಗಳು ಲಭ್ಯವಾಗುತ್ತಿಲ್ಲ. ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿರುವ ಯಡಿಯೂರಪ್ಪ ಸರ್ಕಾರ ಜನರಿಗೆ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರವು ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ರಾಜ್ಯಗಳಿಗೆ ನೀಡುವ ಪರಿಹಾರದ ವಿಚಾರದಲ್ಲಿಯೂ ಕೇಂದ್ರ ಸರ್ಕಾರ ತಾರತಮ್ಯ ಧೊರಣೆ ಅನುಸರಿಸುತ್ತಿದೆ. ಗುಜರಾತ್ ಗೆ ಒಂದು ಸಾವಿರ ಕೋಟಿ ರೂ.ಗಳ ಪರಿಹಾರ ಘೋಷಣೆ ಮಾಡಿರುವ ಪ್ರಧಾನಿಯವರು ಚಂಡಮಾರುತದಿಂದ ತತ್ತರಿಸಿರುವ ಕರ್ನಾಟಕಕ್ಕೆ ನಯಾಪೈಸೆ ಕೊಟ್ಟಿಲ್ಲ. ನಮ್ಮ ರಾಜ್ಯಕ್ಕೆ ಏಕೆ ಮಲತಾಯಿ ಧೋರಣೆ? ಎಂದು ಪ್ರಶ್ನಿಸಿದರು.
ಕೋವಿಡ್ ಲಸಿಕೆ ನೀಡುವುದಕ್ಕೆ ವಿಚಾರವಾಗಿ ನಾವು ವಿರೋಧ ವ್ಯಕ್ತಪಡಿಸಲಿಲ್ಲ. ಎಲ್ಲರಿಗೂ ಲಸಿಕೆ ನೀಡಬೇಕೆಂಬುದೇ ನಮ್ಮ ನಿಲುವು. ಎಲ್ಲರಿಗೂ ಲಸಿಕೆ ಸಿಗಲೇಬೇಕು. ಅದಕ್ಕಾಗಿ ಅಭಿಯಾನ ನಡೆಸಬೇಕು ಎಂದು ಈಗಲೂ ಒತ್ತಾಯ ಮಾಡುತ್ತೇವೆ. ಆದರೆ, ಲಸಿಕೆಯೇ ಇಲ್ಲದಿರುವಾಗ ಲಸಿಕೆ ಅಭಿಯಾನ ಆರಂಭಿಸಿದ್ದು ಯಾರು ಎಂದು ಪ್ರಶ್ನೆ ಮಾಡಿದರು.