ಕೋವಿಡ್ ನಿರ್ವಹಣೆಯಲ್ಲಿ ಎಡವಿದ ಸರ್ಕಾರ: ಪರಿಹಾರ ಘೋಷಿಸಲು ಸಿಪಿಐ(ಎಂ) ಒತ್ತಾಯ

ಗಜೇಂದ್ರಗಡ: ಕೋವಿಡ್  ಎರಡನೇ ಅಲೆಯಿಂದ ಆರ್ಥಿಕ ಮುಗ್ಗಟ್ಟು ಆವರಿಸಿದೆ. ಇಂತಹ ವಿಪತ್ತಿನ ಕುರಿತು ತಜ್ಞರು ಮುನ್ನೆಚ್ಚರಿಕೆ ನೀಡಿದ್ದರೂ ಕೂಡ ಕೊನೆ ಘಳಿಗೆಯವರೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲದಿರುವುದು ಅತ್ಯಂತ ವಿಷಾದನೀಯ ಇಂದಿನ ಈ ಎಲ್ಲ ಬೆಳೆವಣಿಗೆ ಸರ್ಕಾರವೇ ಹೊಣೆಯಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ-ಸಿಪಿಐ(ಎಂ) ಪಕ್ಷದ ಮುಖಂಡ ಎಮ್.ಎಸ್.ಹಡಪದ ಆರೋಪಿಸಿದರು.

ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಸಿಪಿಐ(ಎಂ) ಪಕ್ಷವು ಒತ್ತಾಯಿಸಿ ಮನವಿ ಸಲ್ಲಿಸಿದರು.

ಎಮ್‌ ಎಸ್‌ ಹಡಪದ ಅವರು ಮಾತನಾಡಿ ಐಸಿಯು ಮತ್ತು ವೆಂಟಿಲೇಟರ್‌ಗಳ ಕೊರತೆಯಿಂದ ರಾಜ್ಯದಾದ್ಯಂತ ನೂರಾರು ರೋಗಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ದೊರಕುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ನೋಡಲ್ ಕಚೇರಿಯಿಂದ ಕಳುಹಿಸಿದಾಗಲೂ ದಾಖಲಿಸಲು ನಿರಾಕರಿಸಿದ ಘಟನೆಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ ರೋಗಿಗಳಿಗೆ ತಾರತಮ್ಯದ ಕಳಪೆ ಸೇವೆ ನೀಡುವ ಪ್ರಕರಣಗಳು ನಡೆಯುತ್ತಿವೆ. ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಲಭ್ಯವಿದೆ ಎಂಬ ಪಾರದರ್ಶಕ ಮಾಹಿತಿ ಸಾರ್ವಜನಿಕರಿಗೆ ದೊರಕದೆ ರೋಗಿಗಳ ಜೊತೆಗೆ ಅಲೆದಾಡುವ ಪರಿಸ್ಥಿತಿ ಬಂದಿದೆ ಎಂದರು.

ಸಿಪಿಐ(ಎಂ)  ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮಾರುತಿ ಚಿಟಗಿ ಮಾತನಾಡಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಪ್ರವೇಶ ನಿರಾಕರಿಸಲ್ಪಟ್ಟ ರೋಗಿಗಳು ಆಂಬ್ಯುಲೆನ್ಸ್‌ಗಳೊಳಗೆ, ಬೀದಿಗಳಲ್ಲಿ ಮತ್ತು ಆಸ್ಪತ್ರೆಗಳ ಮುಂದೆ ಸಾವನ್ನಪ್ಪುತ್ತಿದ್ದಾರೆ. ಲಭ್ಯವಿರುವ ಹಾಸಿಗೆಗಳನ್ನು ಅಗತ್ಯಕ್ಕೆ ತಕ್ಕಂತೆ ವಿತರಿಸುವ ಕೇಂದ್ರೀಕೃತ ವ್ಯವಸ್ಥೆಯೂ ಇಲ್ಲ. ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಬಡವರು ಸಾಧ್ಯವಾಗದೆ ಜೀವ ಬಿಡುತ್ತಿದ್ದಾರೆ. ಸಾವಿರಾರು ವಲಸೆ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ, ಅತಂತ್ರವಾಗಿದೆ. ಇನ್ನೊಂದೆಡೆ ಕೊರತೆ ಸೃಷ್ಟಿಯಾಗುತ್ತಿದ್ದಂತೆ ಜೀವರಕ್ಷಕ ಔಷಧಿಗಳ ಬೆಲೆಯೂ ಗಗನಕ್ಕೇರುತ್ತಿದೆ, ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ, ಬೆಂಗಳೂರಿನಲ್ಲಿ ಆಸ್ಪತ್ರೆಗಳಲ್ಲಿ ಅಧಿಕಾರಿಗಳು ಶಾಮೀಲಾಗಿ ಕೋವಿಡ್ ಬೆಡ್‌ಗಳ ಬುಕ್ಕಿಂಗ್‌ನಲ್ಲಿ ಅವ್ಯವಹಾರ ನಡೆಸಿರುವ ವರದಿಯಾಗಿರುವುದು ಅಘಾತಕಾರಿ ಸಂಗತಿಯಾಗಿದೆ. ರಾಜ್ಯದ ಜನರ ಪರಿಸ್ಥಿತಿ ಶೋಚನೀಯವಾಗಿದೆ. ಬಡಜನರ ಬಗೆಗಿನ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಜನತೆ ತೀವ್ರ ಅತೃಪ್ತರಾಗಿದ್ದಾರೆ ಎಂದರು.

ಆಹಾರ ಧಾನ್ಯಗಳ ಉಚಿತ ಪೂರೈಕೆಯೊಂದಿಗೆ ತಿಂಗಳ ಹಣವನ್ನೂ ಒದಗಿಸಬೇಕು. ನಮ್ಮಲ್ಲಿ ಬಹಳ ಹೆಚ್ಚಿನ ಮಟ್ಟಿಗೆ ಬಡ ಜನರು ಪೌಷ್ಟಿಕಾಂಶದಿಂದ ಬಳಲುತ್ತಿರುವ ಇಂದಿನ ವಾಸ್ತವದ ಹಿನ್ನೆಲೆಯಲ್ಲಿ ಇದು ಬಹಳ ಹೆಚ್ಚು ಅಗತ್ಯವಾಗಿದೆ.
ಇದನ್ನು ಎದುರಿಸಲು, ಜನರು ಮತ್ತು ಜೀವನೋಪಾಯಗಳನ್ನು ರಕ್ಷಿಸಲು ರಾಜ್ಯ ಸರಕಾರ ಸಮರೋಪಾದಿ ಕೈಗೊಳ್ಳಬೇಕೆಂದು ಎಡಪಕ್ಷಗಳು ಆಗ್ರಹಿಸುತ್ತವೆ ಎಂದರು.

ಈ ವೇಳೆ ಮೆಹಬೂಬ್ ಹವಾಲ್ದಾರ್, ಫಯಾಜ್ ತೋಟದ, ಫೀರು ರಾಠೋಡ, ಅಲ್ಲಾಭಕ್ಷಿ ಮುಚ್ಚಾಲಿ ಸೇರಿದಂತೆ ಸಿಪಿಐ(ಎಂ) ಪಕ್ಷದ ಸದಸ್ಯರು ಉಪಸ್ಥಿತರಿದ್ದರು.

ವರದಿ: ದಾವಲ ಸಾಬ್ ತಾಳಿಕೋಟಿ, ಗದಗ

Donate Janashakthi Media

Leave a Reply

Your email address will not be published. Required fields are marked *