ತಿರುವನಂತಪುರ : ಕೋವಿಡ್ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿರುವ ರಾಜ್ಯ ಕೇರಳ. ಸೋಂಕಿನ ಹತೋಟಿಗೆ ಯಶಸ್ವಿಯಾಗಿ ಕಾರ್ಯಚಾರಣೆ ನಡೆಸಿರುವ ಕೇರಳ ಸರ್ಕಾರ ಇದೀಗ ಬಳಕೆಯಾಗದಿರುವ 1 ಲಕ್ಷದಷ್ಟು ರೆಮಿಡಿಸಿವರ್ ಔಷಧಿಯನ್ನು ಕೇಂದ್ರಕ್ಕೆ ವಾಪಸ್ಸು ನೀಡಿದೆ. ರಾಜ್ಯದಲ್ಲಿ ಅಗತ್ಯವಾಗಿರುವಷ್ಟು ಔಷಧ ಇರುವ ಹಿನ್ನಲೆ ಇವುಗಳನ್ನು ವಾಪಸ್ಸು ಮರಳಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಸೋಂಕಿತರ ಚಿಕಿತ್ಸೆಯಲ್ಲಿ ರೆಮಿಡಿಸಿವರ್ ಔಷಧ ಬಳಕೆಯಾಗುತ್ತಿದ್ದು, ಇದರ ಕೊರತೆ ಕಂಡು ಬಂದಿತು. 5. 300. 000 ಬಾಟಲ್ ಔಷಧಗಳನ್ನು ಹಂಚಿಕೆ ಮಾಡಲಾಗಿತ್ತು. ಕೋವಿಡ್ ನಿರ್ವಹಣೆ ವಿಚಾರದಲ್ಲಿ ಈಗಾಗಲೇ ದೇಶಕ್ಕೆ ಕೇರಳ ಮಾಡೆಲ್ ಹೊರ ಹೊಮ್ಮಿದೆ. ಕೋವಿಡ್ ಸಂಕಷ್ಟದಲ್ಲಿರುವವರಿಗೆ ವಿಶೇಷ ಪ್ಯಾಕೇಜ್, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಏಕ ರೂಪದ ದರ ವಿಧಿಸುವ ಮೂಲಕ ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ದೇಶದೆಲ್ಲೆಡೆ ಲಸಿಕೆ ಕೊರತೆ ಕೂಗು ಕೇಳಿ ಬಂದಿರುವ ಹೊತ್ತಿನಲ್ಲಿ ಕೇರಳ ರಾಜ್ಯ ಒಂದು ಹನಿ ಲಸಿಕೆ ವ್ಯರ್ಥ ಮಾಡದೇ ಲಸಿಕೆಯನ್ನು ವಿತರಿಸಿ ಮಾದರಿಯಾಗಿ ಕಂಡಿದೆ.
ಒಬ್ಬರಿಗೆ ಲಸಿಕೆ ನೀಡಿದ ನಂತರ ಉಳಿಯುವ, ವ್ಯರ್ಥವಾಗಬಹುದಾದ ಲಸಿಕೆಯನ್ನು ಬಳಸಿಕೊಂಡು ನಾವು 74,26,164 ಡೋಸ್ ಲಸಿಕೆ ನೀಡಿದ್ದೇವೆ. ನಮ್ಮ ಆರೋಗ್ಯ ಕಾರ್ಯಕರ್ತರು, ದಾದಿಯರು ಈ ನಿಟ್ಟಿನಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮೂಲಕ ತಿಳಿಸಿದ್ದರು.