ತಿರುವನಂತಪುರಂ: ಹಿರಿಯ ಕಮ್ಯೂನಿಸ್ಟ್ ನಾಯಕಿ ಕೆ.ಆರ್. ಗೌರಿ ಅಮ್ಮ ಅವರು ಇಂದು ನಿಧನರಾಗಿದ್ದಾರೆ. ಸುಧೀರ್ಘವಾಗಿ ಕಮ್ಯೂನಿಸ್ಟ್ ಪಕ್ಷ ಅದರಲ್ಲೂ ಸಿಪಿಐ(ಎಂ) ಪಕ್ಷದೊಂದಿಗೆ ಸಕ್ರಿಯವಾಗಿ ಜನ ಚಳುವಳಿಯೊಂದಿಗೆ ಬೆರೆತ ಗೌರಿ ಅಮ್ಮ ನಿಧನಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕೇರಳ ರಾಜ್ಯ ಕಾರ್ಯದರ್ಶಿ ಎ ವಿಜಯರಾಘವನ್ ಅವರು ಸಂತಾಪ ಸಂದೇಶವನ್ನು ನೀಡಿದ್ದಾರೆ.
ಎ ವಿಜಯರಾಘವನ್ ಅವರ ಸಂದೇಶ
ಕೆ ಆರ್ ಗೌರಿ ಅಮ್ಮ ಅವರು ಆಧುನಿಕ ಕೇರಳದ ಸೃಷ್ಟಿಕರ್ತರಲ್ಲಿ ಒಬ್ಬರು. ಕೇರಳದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಕ್ರಾಂತಿಕಾರಿ ವಿಚಾರಗಳು ಮತ್ತು ಚಳುವಳಿಯನ್ನು ತೀವ್ರವಾಗಿ ರೂಪಿಸಿದ ನಾಯಕರಲ್ಲಿ ಗೌರಿಯಮ್ಮ ಸಹ ಒಬ್ಬರು.
ಕೆ.ಆರ್.ಗೌರಿಯಮ್ಮ ಅವರು ವಕೀಲರಾಗಿ ಅಭ್ಯಾಸ ಮಾಡುವಾಗ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದರು. ಅತ್ಯುತ್ತಮ ಭಾಷಣಕಾರ ಮತ್ತು ಸಂಘಟಕ ಕಾಮ್ರೇಡ್ ಪಿ ಕೃಷ್ಣಪಿಳ್ಳೈ ಅವರು ಕಮ್ಯೂನಿಸ್ಟ್ ಪಕ್ಷದ ಸದಸ್ಯತ್ವ ನೀಡಿದರು.
ಇ ಎಂ ಎಸ್ ನಂಬೂದರಿಪಾಡ್, ಎ ಕೆ ಗೋಪಾಲನ್, ಇ.ಕೆ.ನಾಯನಾರ್ ಮತ್ತು ವಿ ಎಸ್ ಅಚ್ಯುನಂದನ್ ನಂತಹ ನಾಯಕರೊಂದಿಗೆ ಗೌರಿಯಮ್ಮ ಕೂಡ ಕಮ್ಯೂನಿಸ್ಟ್ ಪಕ್ಷವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವಿದ್ಯಾರ್ಥಿ ಚಳವಳಿಯ ಮೂಲಕ ಟ್ರೇಡ್ ಯೂನಿಯನ್ ಆಂದೋಲನ ಮತ್ತು ಕಮ್ಯುನಿಸ್ಟ್ ಚಳವಳಿಗೆ ಬಂದ ಗೌರಿಯಮ್ಮ ಇಲ್ಲದೆ ಆಧುನಿಕ ಕೇರಳದ ಇತಿಹಾಸ ಅಪೂರ್ಣವಾಗಿರುತ್ತದೆ.
1957 ರಲ್ಲಿ ಮೊದಲ ಇಎಂಎಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಗೌರಿಯಮ್ಮ, ಭೂ ಸುಧಾರಣಾ ಕಾಯ್ದೆಯ ಕ್ರಾಂತಿಕಾರಿ ಶಾಸನ ರಚನೆಗೆ ಕಾರಣಕರ್ತರಾಗಿದ್ದರು. ಗೌರಿಯಮ್ಮ ಸಚಿವರಾಗಿದ್ದ ಅವಧಿಯಲ್ಲಿ ಪ್ರಮುಖ ಕಾನೂನುಗಳಾದ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಮಹಿಳಾ ಆಯೋಗ ಕಾಯ್ದೆಯನ್ನು ಸಹ ಅಂಗೀಕರಿಸಲಾಯಿತು.
ಮಹಿಳೆಯರು ಸಾರ್ವಜನಿಕ ವಲಯಕ್ಕೆ ಪ್ರವೇಶಿಸಲು ಹಿಂಜರಿಯುತ್ತಿದ್ದ ಸಮಯದಲ್ಲಿ ಎಲ್ಲಾ ರೀತಿಯ ತಾರತಮ್ಯ ಮತ್ತು ಮಾನಸಿಕ ಕಿರುಕುಳಗಳನ್ನು ಜಯಿಸಿ ಮುಂಚೂಣಿಯಲ್ಲಿ ಜನ ಹೋರಾಟದೊಂದಿಗೆ ತೊಡಗಿಸಿಕೊಂಡರು.
ಕ್ರೂರ ಪೊಲೀಸ್ ದೌರ್ಜನ್ಯಕ್ಕೂ ಒಳಗಾಗಿದ್ದ ಗೌರಿಯಮ್ಮ, ದೃಢ ನಿಶ್ಚಯ ಮತ್ತು ಇಚ್ಚಾಶಕ್ತಿಯಿಂದಲೇ ಜನತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಗೌರಿಯಮ್ಮ ಆಧುನಿಕ ಕೇರಳದ ದಣಿವರಿಯದ ಧ್ರವತಾರೆ. ಅವರು ಜನರು ಮತ್ತು ದೇಶಕ್ಕಾಗಿ ಜೀವಮಾನವಿಡೀ ದಣಿವರಿಯಿಲ್ಲದೆ ಕೆಲಸ ಮಾಡಿದ್ದಾರೆ.
ಕಾಮ್ರೇಡ್ ಗೌರಿಯಮ್ಮನ ನಿಧನದಿಂದ ನೋವು ಮತ್ತು ದುಃಖದಲ್ಲಿರುವ ಎಲ್ಲರೊಂದಿಗೆ ನಾನು ಸಂತಾಪ ಸೂಚಿಸುತ್ತೇನೆ.