ಶಾಸಕ ಸತೀಶ್ ರೆಡ್ಡಿ ಬಂಧಿಸಿ ವಿಚಾರಣೆ ನಡೆಸಲು ಎಎಪಿ ಆಗ್ರಹ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ತಂಡ ಕೊರೋನಾ ರೋಗಿಗಳ ಬೆಡ್ ಬ್ಲಾಕಿಂಗ್ ಅಕ್ರಮ ದಂಧೆಯನ್ನು ಬಯಲಿಗೆಳೆದಿರುವ ಬಗ್ಗೆ ದಿಢೀರ್‌ ಎಂದು ಕಾರ್ಯಚರಣೆ ನಡೆಸಿ ವೈಭವ ಮೆರೆದರು. ಆದರೆ ಈ ಅಕ್ರಮ ದಂಧೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದ ಬೊಮ್ಮನಹಳ್ಳಿ ಬಿ ಜೆ ಪಿ ಶಾಸಕ ಸತೀಶ್ ರೆಡ್ಡಿ ಅವರ ಹೆಸರೇ ಪ್ರಮುಖವಾಗಿ ಕೇಳಿ ಬರುತ್ತಿದೆ.

ಇದನ್ನು ಓದಿ: ಬಿಬಿಎಂಪಿ ಬೆಡ್‌ ಹಗರಣ : ಹಗರಣದ ಹಿಂದಿರುವವರು ಯಾರು?

ಆದರೆ ಇಂದು ಮಾಧ್ಯಮಗಳಲ್ಲಿ ಶಾಸಕ ಸತೀಶ್ ರೆಡ್ಡಿ ನೇರ ಪಾತ್ರವಿರುವುದು ಬಯಲಾಗುತ್ತಿದೆ. ಈ ಬಗ್ಗೆ ಸಂಸದರು ಜನತೆಗೆ ಏನೆಂದು ಉತ್ತರ ಹೇಳುತ್ತಾರೆ ? ಶಾಸಕ ಸತೀಶ್ ರೆಡ್ಡಿ ಹಾಗೂ ಇನ್ನಿತರ ಕೊಲೆ ಪಾತಕಿಗಳನ್ನು ಪೊಲೀಸ್ ಇಲಾಖೆ ಈ ಕೂಡಲೇ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ನಗರ ಉಪಾಧ್ಯಕ್ಷ ಬಿ. ಟಿ. ನಾಗಣ್ಣ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಎಲ್ಲಾ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್‌ ಸಹಾಯವಾಣಿ ಕೇಂದ್ರಗಳಲ್ಲಿ ಬಿಜೆಪಿಯ ಪ್ರಮುಖರು ಮತ್ತು  ಮಂತ್ರಿಗಳು, ಶಾಸಕರ ಕೈವಾಡವಿದೆ. ಎಲ್ಲರೂ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಪಾಲ್ಗೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ನಾಗಣ್ಣ ಆರೋಪಿಸಿದರು.

ಇದನ್ನು ಓದಿ: ದುಡ್ಡು ಕೊಟ್ಟರೆ ಹಾಸಿಗೆ: ದಂಧೆಯ ರುವಾರಿ ಸತೀಶ್‌ ರೆಡ್ಡಿ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

ಪ್ರಭಾವಿಗಳನ್ನು ರಕ್ಷಿಸಲು ಹೋಗಿ ಸಂಸದರು ಸಣ್ಣ ದರ್ಜೆಯ ಅಧಿಕಾರಿಗಳು, ಗುತ್ತಿಗೆ ನೌಕರರ ಮೇಲೆ ಗುರಿಯಾಗಿಸಿದ್ದಾರೆ. ಇದರಿಂದ ಇಡೀ ಪ್ರಕರಣ ದಿಕ್ಕು ತಪ್ಪುವ ಸಾಧ್ಯತೆಗಳಿವೆ. ಆದರೂ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ಪ್ರಭಾವಿಗಳ ಹೆಸರುಗಳೇ ಈಗ ಬಹಿರಂಗಗೊಳ್ಳುತ್ತಿವೆ ಎಂದು ನಾಗಣ್ಣ ಹೇಳಿದರು.

ಶಾಸಕ ಸತೀಶ್ ರೆಡ್ಡಿ ಬಂಧಿಸಬೇಕೆಂದು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಮ್ ಆದ್ಮಿ ಪಕ್ಷ ದೂರು ಸಲ್ಲಿಸಿದೆ. ತನಿಖೆ ಕೈಗೊಳ್ಳಲು ಹಾಲಿ ಉಚ್ಚನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಎಎಪಿ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಎಎಪಿ ಪಕ್ಷದ ನಾಗಣ್ಣ ಹಾಗೂ ಪಕ್ಷದ ಮಹಿಳಾ ಮುಖಂಡರಾದ ಉಷಾ ಮೋಹನ್ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *