ಮೈಸೂರು: ಸಾಲ ತೀರಿಸುವಂತೆ ಒತ್ತಡ ಹೇರುತ್ತಿರುವ ಫೈನಾನ್ಸ್ ಹೆಸರು ಬರೆದು ನೇಣು ಹಾಕಿಕೊಳ್ತೀವಿ ಎಂದು ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆದ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಸಾಲ ತೀರಿಸಲು 3 ತಿಂಗಳು ಕಾಲಾವಕಾಶ ನೀಡುವಂತೆ ಮಹಿಳೆಯರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡಿನ ಮೈಕ್ರೋ ಫೈನಾನ್ಸ್ ದೇವನೂರು ಗ್ರಾಮದ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಸಾಲ ನೀಡಿತ್ತು. ಆದರೆ ಸಂಕಷ್ಟದ ಸ್ಥಿತಿಯಲ್ಲಿ ಸಾಲ ಮರುಪಾವತಿ ಮಾಡುವಂತೆ ಮೈಕ್ರೋ ಫೈನಾನ್ಸ್ ಕಿರುಕುಳ ನೀಡುತ್ತಿದೆ ಎಂದು ಮಹಿಳೆಯರು ಆರೋಪ ಮಾಡುತ್ತಿದ್ದಾರೆ.
ಬೆಳ್ಳಂಬೆಳಗ್ಗೆ ಹಣ ಪಾವತಿಸುವಂತೆ ಮನೆಯ ಬಾಗಿಲಿಗೆ ಬಂದು ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ನಿಲ್ಲುತ್ತಿದ್ದಾರೆ. ಕೊರೊನಾ ಲಾಕ್ಡೌನ್ ಹಿನ್ನೆಲೆ ನಮ್ಮನ್ನು ಯಾರೂ ಕೂಲಿಗೆ ಕರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಣವನ್ನು ಹೇಗೆ ಕಟ್ಟುವುದು ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಸಮಯ ಕೇಳಿದರು ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ. ಹೀಗೆ ಕಿರುಕುಳ ನೀಡಿದರೆ ನಾವು ಸಾಯುತ್ತೇವೆ ಎಂದು ಹೇಳುತ್ತಿರುವ ಮಹಿಳೆಯರು, ಖಾಸಗಿ ಫೈನಾನ್ಸ್ ಸಿಬ್ಬಂದಿಗಳ ವಿರುದ್ಧ ತಹಶೀಲ್ದಾರ್ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂತಹದ್ದೆ ಘಟನೆ ನಡೆಯುತ್ತಿವೆ. ಮೈಕ್ರೋ ಫೈನಾನ್ಸ್, ಹಾಗು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಹಣ ಕಟ್ಟುವಂತೆ ಪೀಡಿಸುತ್ತಿವೆ. ಹೋಮ್ ಕ್ರೆಡಿಟ್, ಇಎಮ್ಐ ನೀಡಿರುವ ಕೆಲ ಕಂಪನಿಗಳು ಹಣ ಪಾವತಿ ಮಾಡದೆ ಇದಲ್ಲಿ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳುತ್ತಿದ್ದಾರೆ. ಇದರಿಂದಾಗಿ ಆತಂಕಕ್ಕೊಳಗಾಗಿ ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೂಡಲೆ ಸರಕಾರ ಐದಾರು ತಿಂಗಳವರೆಗೂ ಮೈಕ್ರೋ ಫೈನಾನ್ಸ್ ಹಾಗೂ ಇತರ ಸಾಲ ಕಂಪನಿಗಳಿಗೆ ಸಾಲವಸೂಲು ಮಾಡದಂತೆ ಎಚ್ಚರಿಕೆಯನ್ನು ನೀಡಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಗಟನೆಯ ದೇವಿಯವರು ಎಚ್ಚರಿಸಿದ್ದಾರೆ.