ಬಳ್ಳಾರಿ : ಭಾರೀ ಜಿದ್ದಾ ಜಿದ್ದಿನಿಂದ ಕೂಡಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟಬಹುಮತ ಪಡೆದಿದ್ದು,ಬಿಜೆಪಿಗೆ ಮುಖಭಂಗವಾಗಿದೆ. ಒಟ್ಟು 39 ವಾರ್ಡ್ಗಳ ಪೈಕಿ ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 20 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಭಾರೀ ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿ ಕೇವಲ 14 ವಾರ್ಡ್ಗಳಲ್ಲಿ ಗೆಲುವು ಕಂಡಿದೆ. ಕಾಂಗ್ರೆಸ್ ನಿಂದ ಬಂಡಾಯಗೊಂಡಿದ ಸ್ಪರ್ಧಿಸಿದ್ದ 05 ಅಭ್ಯರ್ಥಿಗಳು ವಿಜಯದ ಪಾತಾಕಿ ಹಾರಿಸಿದ್ದಾರೆ.
ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯನ್ನು ಸಚಿವ ಶ್ರೀರಾಮುಲು ಮತ್ತು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಪ್ರತಿಷ್ಡೆಯಾಗಿ ತೆಗೆದುಕೊಂಡಿದ್ದರು. ಈ ಇಬ್ಬರೂ ಕೋವಿಡ್ ಸಂದರ್ಭದಲ್ಲೂ ಭರ್ಜರಿಪ್ರಚಾರ ನಡೆಸಿದ್ದರು.ಆದರೆ, ಫಲಿತಾಂಶದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದು ಸ್ವತಃ ರಾಮುಲು ಮತ್ತು ರೆಡ್ಡಿ ಸಹೋದರರಿಗೆ ಮುಖಭಂಗ ಎಂದೇ ವ್ಯಾಖ್ಯಾನಿಸಲಾಗಿದೆ.
ರಾಮುಲು ಹಾಗೂ ಸೋಮಶೇಖರ ರೆಡ್ಡಿಗೆ ಸಡ್ಡು ಹೊಡೆಯುವಂತೆ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ತೆರೆಮರೆಯಲ್ಲೇ ಕುಳಿತು ಕಾರ್ಯತಂತ್ರ ರೂಪಿಸಿದ್ದರು. ಇದೀಗ ಪಾಲಿಕೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿರುವುದು ಭವಿಷ್ಯದಲ್ಲಿ ನಾಗೇಂದ್ರ ಬಳ್ಳಾರಿಯಲ್ಲಿ ಪ್ರಬಲರಾಗುವ ಮುನ್ಸೂಚನೆ ಫಲಿತಾಂಶದಿಂದ ಸಿಕ್ಕಿದೆ. ಇನ್ನೂ ರಾಮುಲು ಮತ್ತು ರೆಡ್ಡಿ ಸಹೋದರರಿ ಆಟ ಮುಗಿಯಿತು ಎಂದು ಸಾರ್ವಜನಿಕರು ಗುಸು ಗುಸು ಮಾತನಾಡುತ್ತಿದ್ದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಶುಕ್ರವಾರ ಮಧ್ಯಾಹ್ನದವರೆಗೂ ನಡೆದ ಮತ ಎಣಿಕೆಯ ಉದ್ದಕ್ಕೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿ ಗಮನ ಸೆಳೆದರು. 39 ವಾರ್ಡ್ಗಳ ಪೈಕಿ 21 ವಾರ್ಡ್ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. 13 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಶಾಸಕ ಪುತ್ರನ ಸೋಲು: 18ನೇ ವಾರ್ಡ್ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ ಪುತ್ರ ಜಿ.ಶ್ರವಣಕುಮಾರ್ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ,ನಂದೀಶ್ ಎದುರು ಕೇವಲ 133 ಮತಗಳ ಅಂತರದಿಂದ ಸೋತರು. ಶಾಸಕ ರೆಡ್ಡಿ ಈ ಚುನಾವಣೆಯನ್ನು ತಮ್ಮ ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿ ಹಗಲು–ರಾತ್ರಿ ನಿರಂತರ ಪ್ರಚಾರ ನಡೆಸಿದ್ದರು. ಇದು ಸೋಮಶೇಖರ್ ರೆಡ್ಡಿಗಾದ ದೊಡ್ಡ ಮುಖಭಂಗವಾಗಿದೆ.
ಕಾಂಗ್ರೆಸ್ ಟಿಕೆಟ್ ದೊರಕದೆ ಪಕ್ಷೇತರರಾಗಿ ಸ್ಪರ್ಧಿಸಿದ್ದ 3ನೇ ವಾರ್ಡಿನ ಎಂ.ಪ್ರಭಂಜನ್ಕುಮಾರ್, 15ನೇ ವಾರ್ಡಿನ ನೂರ್ ಮಹ್ಮದ್, 17ನೇ ವಾರ್ಡಿನ ಕವಿತಾ ಕೆ.ಹೊನ್ನಪ್ಪ, 32ನೇ ವಾರ್ಡಿನ ಮಂಜುಳಾ, 35ನೇ ವಾರ್ಡಿನ ವಿ.ಶ್ರೀನಿವಾಸಲು ಅತ್ಯಧಿಕ ಮತಗಳಿಂದ ಗೆದ್ದಿದ್ದಾರೆ. ಈ ವಾರ್ಡ್ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತೀವ್ರ ಹಿನ್ನಡೆ ಕಂಡಿದ್ದಾರೆ.