ನಿರ್ದಯಿ………….. ನಿಷ್ಕರುಣಿ!

ನಿತ್ಯಾನಂದಸ್ವಾಮಿ

ಗಂಡನಿಗೆ ಕೂಲಿ ಇಲ್ಲದೆ ಊಟಕ್ಕೆ ತೊಂದರೆ ಉಂಟಾಗಿ, ಮಹಿಳೆಯೊಬ್ಬಳು ತನ್ನ ಮೂರೂವರೆ ವರ್ಷದ ಗಂಡು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಹೃದಯವಿದ್ರಾವಕ ಘಟನೆಯೊಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೆಳಚಲವಾಡಿ ಗ್ರಾಮದಿಂದ ವರದಿಯಾಗಿದೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ನೊಂದ ಈ ತಾಯಿ ಹಾಗು ಮಗುವಿಗೆ ಆಶ್ರಯ ನೀಡಿ ಮಾನವೀಯತೆಯನ್ನು ಮೆರೆದಿದೆ. ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಗೆ ತುತ್ತಾದ ಇಂತಹ ಅಸಂಖ್ಯಾತ ಬಡವರು ಬೀದಿಪಾಲಾಗಿ ಒಪ್ಪತ್ತಿನ ಊಟಕ್ಕೂ ಪರದಾಡಿದ್ದರು.

ರಾಜ್ಯದಲ್ಲಿ ಅಂದು ಅಧಿಕಾರದಲ್ಲಿದ್ದ ಅದೇ ನಿರ್ದಯಿ, ನಿರಂಕುಶಶಾಹಿ ಸರ್ಕಾರ ಅಧಿಕಾರದಲ್ಲಿದೆ. ಆದರೆ ಅದು ಪಾಠ ಮಾತ್ರ ಕಲಿಯಲಿಲ್ಲ. ಕೋವಿಡ್ ಎರಡನೇ ಅಲೆ ಹೆಚ್ಚು ಭೀಕರವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ, ಕಲ್ಲುಗಳಾದರೂ ಕರಗಬಹುದು. ಮುಖ್ಯಮಂತ್ರಿ ಯಡಿಯೂರಪ್ಪರವರ ಕಲ್ಲು ಹೃದಯ ಮಾತ್ರ ಕರಗಲಾರದು ಎಂದು ಅವರೇ ಸಾಬೀತು ಪಡಿಸುತ್ತಿದ್ದಾರೆ.

ಯಡಿಯೂರಪ್ಪರವರಿಗೆ ತಾವು ಚೆನ್ನಾಗಿ ಇರಬೇಕು. ಅವರ ಮಕ್ಕಳು, ಮೊಮ್ಮಕ್ಕಳು ಚೆನ್ನಾಗಿರಬೇಕು. ಅದಕ್ಕಾಗಿ ಅವರು ಅಧಿಕಾರದಲ್ಲಿ ಇರಬೇಕು. ಮತ್ತೆ ಮತ್ತೆ ತಾನೇ ಅಧಿಕಾರಕ್ಕೆ ಬರಬೇಕು. ಗುಂಡ್ಲುಪೇಟೆಯ ಅವಕಾಶವಂಚಿತ ಜನರು ನ್ಯಾಯಕ್ಕಾಗಿ ಎದ್ದು ನಿಲ್ಲುವುದು ಯಾವಾಗ? ಆ ನತದೃಷ್ಟ ಮಹಿಳೆಯ ಗಂಡನಿಗೆ ಯಾವುದೇ ಕೆಟ್ಟ ಅಭ್ಯಾಸ ಇದ್ದಂತಿಲ್ಲ. ಗ್ರಾಮದ ಸುತ್ತಮುತ್ತ ಎಲ್ಲೂ ಕೂಲಿ ಸಿಗುತ್ತಿಲ್ಲ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಆತನಿಗೆ ಯಾವುದೇ ಮಾಹಿತಿ ಇಲ್ಲ. ಉದ್ಯೋಗ ಇಲ್ಲದೆ ಮನೆಗೆ ಬೇಕಾಗುವ ಕನಿಷ್ಠ ದಿನಸಿ ತರಲಾಗುವುದಿಲ್ಲ. ಹಸಿವು ತಾಳಲಾಗುತ್ತಿಲ್ಲ. ಎಲ್ಲಾದರೂ ಕೆಲಸ ಹುಡುಕಿ ತನ್ನ ಹೆಂಡತಿ ಮತ್ತು ಮಗುವನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಆತ ಹೇಳುವಾಗ ಕೇಳುಗರ ಕಣ್ಣು ತೇವಗೊಳ್ಳುತ್ತವೆ. ಮಗುವಿಗೆ ಹಾಲು ಖರೀದಿಸಲೂ ಹಣವಿಲ್ಲ. ಅತ್ತೆ ಮಾವನಿಗೆ ವಯಸ್ಸಾಗಿದೆ ಎಂದು ಕಣ್ಣೀರಿಡುತ್ತಾಳೆ ಆ ತಾಯಿ. ಈಗ ಎರಡನೇ ಅಲೆ ಆರ್ಭಟಿಸುವ ಲಕ್ಷಣಗಳು ಕಾಣುತ್ತಿವೆ. ಇನ್ನೊಂದು ಸುತ್ತಿನ ಕರ್ಪ್ಯೂ, ಲಾಕ್‌ಡೌನ್‌ಗಳ ಹಾವಳಿ ಆರಂಭವಾಗುತ್ತಿದೆ. ಜನರ ಮೇಲೆ ದೌರ್ಜನ್ಯವೆಸಗಿ ಕೋವಿಡ್ ಸೋಂಕನ್ನು ತಡೆಯುವ ನಾಟಕ ಮಾಡುವುದು ಈ ಸರ್ಕಾರದ ಪರಿ ಆಗಿದೆ.

ಕೋವಿಡ್ ಸೋಂಕು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ರಾಜ್ಯಗಳಲ್ಲಿ ಆಕ್ಸಿಜನ್ ಮತ್ತು ಹಾಸಿಗೆಗಳಿಗಾಗಿ ರೋಗಿಗಳ ಹಾಹಾಕಾರ, ನಿತ್ಯ ಎರಡು ಸಾವಿರ ದಾಟುತ್ತಿರುವ ಸಾವಿನ ಸಂಖ್ಯೆಯನ್ನು ಗಮನಿಸಿರುವ ನ್ಯಾಯಾಲಯ ದೇಶದಲ್ಲಿ `ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಯಾವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಬದಲಾಗಿ ಜನರನ್ನು ದುರ್ಬಲಗೊಳಿಸುತ್ತದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸುವ ಬದಲಾಗಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೆ ವಿತರಿಸಲಾಗುತ್ತಿದ್ದ ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಿದೆ.

ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಈ ಹಿಂದೆ 5 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ ವಿತರಿಸಲಾಗುತಿತ್ತು. ಈಗ ಈ ತಿಂಗಳಿಂದ 2 ಕೆ.ಜಿ. ಅಕ್ಕಿ, 3 ಕೆ.ಜಿ. ರಾಗಿ ಮತ್ತು 2 ಕೆ.ಜಿ. ಗೋಧಿ ನೀಡಲಾಗುತ್ತಿದೆ. ಹೀಗೆ ಪಡಿತರ ಅಕ್ಕಿ ಪ್ರಮಾಣವನ್ನು ಕಡಿತಮಾಡಿ ರಾಜ್ಯ ಬಿಜೆಪಿ ಸರ್ಕಾರ ಬಡವರ ವಿರೋಧಿ ನಿರ್ಣಯವನ್ನು ಕೈಗೊಂಡಿದೆ.

ಬಡವರು, ಕೃಷಿ ಕೂಲಿಕಾರರು ಮತ್ತು ವಿಶೇಷವಾಗಿ ಮಹಿಳೆಯರು ಅಪೌಷ್ಠಿಕತೆಯಿಂದಾಗಿ ನರಳುತ್ತಿರುತ್ತಾರೆ. ಅವರಿಗೆ ಒಳ್ಳೆಯ ಆಹಾರ ದೊರೆಯದಂತಾಗಿ ಅವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗದೆ ಕೋವಿಡ್ ಅಂತಹ ಸೋಂಕಿಗೆ ಅವರು ಬಹುಬೇಗ ತುತ್ತಾಗುತ್ತಾರೆ. ಕೋವಿಡ್ ಸಾಂಕ್ರಾಮಿಕಕ್ಕೆ ಬಲಿಯಾಗಿ ಪ್ರತಿದಿನ ಗಣನೀಯ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಸರ್ಕಾರ ತನ್ನ ನಿರ್ದಯಿ, ನಿರಂಕುಶಶಾಹಿ ಧೋರಣೆಯನ್ನು ಬದಲಾಯಿಸಬೇಕು. ಎಲ್ಲ ಕೃಷಿ ಕೂಲಿಕಾರ ಹಾಗೂ ಇತರ ಗ್ರಾಮೀಣ ಕೆಲಸಗಾರರಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ ಹಾಗೂ ಗೋಧಿಯನ್ನು ಉಚಿತವಾಗಿ ವಿತರಣೆ ಮಾಡಬೇಕು. ಎಲ್ಲ ಬಡವರಿಗೆ ಉಚಿತ ಲಸಿಕೆ ಹಾಗೂ ಅಗತ್ಯ ಔಷಧಿಗಳನ್ನು ನೀಡಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಬಡ ಕುಟುಂಬಗಳಿಗೆ ತಿಂಗಳಿಗೆ ರೂ. 7,500/- ದರದಲ್ಲಿ ಆರ್ಥಿಕ ನೆರವು ನೀಡಬೇಕು. ಇವು ಬಡಜನಗಳ ನ್ಯಾಯಬದ್ಧ ಹಕ್ಕೊತ್ತಾಯಗಳು.

ಈ ಹಕ್ಕೊತ್ತಾಯಗಳಿಗೆ ಕೃಷಿ ಕೂಲಿಕಾರರು ದೇಶಾದ್ಯಂತ ಎಪ್ರಿಲ್ 30ರಂದು ಪ್ರತಿಭಟನಾ ದಿನವನ್ನು ಆಚರಿಸಲಿದ್ದು ಇತರ ಎಲ್ಲ ಸಾಮೂಹಿಕ ಸಂಘಟನೆಗಳು ಸೌಹಾರ್ದ ಬೆಂಬಲ ನೀಡಬೇಕೆಂದು ಮನವಿ ಮಾಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *