ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟದ ಹಾದಿಯಲ್ಲಿ ಪಯಣಿಸಿದ ನೂರಾರು ಸ್ವಾಭಿಮಾನಿ ಕಾರ್ಯಕರ್ತರ ನಡುವೆ ಸಜ್ಜನಿಕೆ, ಸರಳತೆ ಮತ್ತು ಸ್ನೇಹಜೀವಿಯಾಗಿ ತಮ್ಮ ಅಂತಿಮ ದಿನಗಳವರೆಗೂ ಗುರುತಿಸಿಕೊಂಡಿದ್ದ ಚಂದ್ರಶೇಖರ ಸ್ವಾಮಿ ಇನ್ನಿಲ್ಲ… ಎಂಬ ಸುದ್ದಿಯು ಅತ್ಯಂತ ನೋವು ಸಂಕಟಗಳಿಗೆ ಕಾರಣವಾಗಿರುವುದು ಸುಳ್ಳಲ್ಲ. ತಮ್ಮ ಬದುಕಿನುದ್ದಕ್ಕೂ ದಲಿತ, ಬಂಡಾಯ ಮತ್ತು ಪ್ರಗತಿಪರ ಚಳುವಳಿಗಳೊಂದಿಗೆ ಗುರುತಿಸಿಕೊಂಡಿದ್ದ ಅಪರೂಪದ ಸ್ನೇಹಜೀವಿಯಾದ ಸ್ವಾಮಿ, ಬೆಂಗಳೂರಿನ ಶ್ರೀರಾಮಪುರದ ದಯಾನಂದನಗರದಲ್ಲಿ ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಜೀವಿಸಿದರೂ ದಲಿತಪರ ಹೋರಾಟದಲ್ಲಿ ಅವರ ಚಿಂತನೆ, ಹೋರಾಟದ ಬದ್ದತೆ ಮತ್ತು ಇಚ್ಚಾಸಕ್ತಿ ಮಾದರಿಯಾಗಿತ್ತು. ಎಂ.ಎಸ್.ಐ.ಎಲ್. ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರೂ ಹಗಲಿರುಳೂ ದಲಿತ ಹೋರಾಟಗಳತ್ತಲೇ ತಮ್ಮ ಒಲವು ಮೂಡಿಸಿಕೊಂಡೇ ಮುನ್ನಡೆದಿದ್ದರು.
ಚಂದ್ರಶೇಖರ ಸ್ವಾಮಿ ಅವರು 2021ರ ಏಪ್ರಿಲ್ 16ರಂದು ನಿಧನರಾದರು.
ಇದನ್ನು ಓದಿ: ರಾಜ್ಯ ರಸ್ತೆ ಸಾರಿಗೆ ನೌಕರರ ಚರಿತ್ರಾರ್ಹ ಮುಷ್ಕರಕ್ಕೆ ಜನಬೆಂಬಲ ಹರಿದು ಬರಲಿ
ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳ ಹಿರಿಯ, ಕಿರಿಯ ಸಂಗಾತಿಗಳೊಂದಿಗೆ ಆತ್ಮೀಯತೆ ಹೊಂದಿದ್ದ ಅವರು ರಾಜ್ಯದ ಯಾವುದೇ ಮೂಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆಗಳ ಸುದ್ದಿ ತಿಳಿಯುತ್ತಲೇ ಅದರ ವಿರುದ್ದ ದನಿ ಎತ್ತಲು ಎಲ್ಲರಿಗಿಂತ ಮೊದಲು ಮಾನಸಿಕ ಸಿದ್ದತೆ ಮಾಡಿಕೊಂಡು ಚಳುವಳಿಯ ಎಲ್ಲ ಗೆಳೆಯರಿಗೆ ದೂರವಾಣಿ ಕರೆ ಮಾಡಿ ವಿಷಯ ಹಂಚಿಕೊಳ್ಳುತ್ತಿದ್ದರಲ್ಲದೆ ಅದಕ್ಕೊಂದು ಹೋರಾಟದ ರೂಪ ನೀಡಲು ಪ್ರೇರೆಪಿಸುತ್ತಿದ್ದರು. ಕಂಬಾಲಪಲ್ಲಿ ದುರಂತವಿರಲಿ, ಬೆಂಡಗೇರಿ ಮಲ ತಿನ್ನಿಸಿದ ಪ್ರಕರಣವಿರಲಿ, ದಲಿತ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ, ಸಾಮಾಜಿಕ ಬಹಿಷ್ಕಾರ ಪ್ರಕರಣಗಳಿರಲಿ ಅದರ ಆಳ ಹೊಕ್ಕು ವಾಸ್ತವತೆಯನ್ನು ಅವಲೋಕಿಸುವವರೆಗೂ ಅವರಿಗೆ ಸಮಾಧಾನವಾಗುತ್ತಿರಲಿಲ್ಲ.
ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರುಗಳಾದ ಪ್ರೊ|| ಬಿ.ಕೃಷ್ಣಪ್ಪ, ಗುರೂಜಿ ಓ.ಶ್ರೀಧರನ್, ಎನ್.ಗಿರಿಯಪ್ಪ, ಕೆ.ಬಿ.ಸಿದ್ದಯ್ಯ ಮುಂತಾದವರ ಬಗ್ಗೆ ಬಹಳ ಪ್ರೀತಿ ಅಭಿಮಾನ ಹೊಂದಿದ್ದ ಅವರು ಚಂದ್ರಪ್ರಸಾದ್ ತ್ಯಾಗಿ, ಎನ್.ಶಿವಣ್ಣ, ಎಂ.ಜಯಣ್ಣ, ಎಂ.ಡಿ.ಗಂಗಯ್ಯ, ರಂಗಸ್ವಾಮಿ ಬೆಲ್ಲದಮಡು ಮುಂತಾದ ದಿಟ್ಟ ಹೋರಾಟಗಾರರ ಅಗಲಿಕೆಯಿಂದ ದಲಿತ ಚಳುವಳಿಗೆ ಹಿನ್ನಡೆಯಾಗಿದೆ ಎಂದು ಬಹಳವಾಗಿ ನೊಂದಿದ್ದರು. ದಲಿತ ಹೋರಾಟಕ್ಕೆ ಸೈದ್ದಾಂತಿಕ ಬದ್ದತೆ ಇರಬೇಕೆಂದು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಅವರು ಪ್ರೊ|| ಬಿ.ಕೃಷ್ಣಪ್ಪರವರಿಗೆ ಬಹಳ ಹತ್ತಿರದ ಶಿಷ್ಯೋತ್ತಮರಲ್ಲಿ ಒಬ್ಬರಾಗಿದ್ದು ಬಿ.ಕೃಷ್ಣಪ್ಪರವರು ಬೆಂಗಳೂರಿಗೆ ಬಂದಾಗ ಅವರಿಗೆ ನನ್ನನ್ನು ಪರಿಚಯಿಸಿ ನಿರಂತರ ಸಂಪರ್ಕದಲ್ಲಿದ್ದು ಸಂಘಟನೆಯ ಚಟುವಟಿಕೆಗಳ ಬಗ್ಗೆ ಸದಾ ಚರ್ಚೆಯಲ್ಲಿ ತೊಡಗುತ್ತಿದ್ದದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಮಾತ್ರವಲ್ಲ ಗಾಂಧಿನಗರದ ಇಂದ್ರ ಮಹಲ್ನಲ್ಲಿದ್ದ ಗುರೂಜಿ ಓ.ಶ್ರೀಧರನ್ ರವರ ಕೊಠಡಿಗೂ ಆಗಿಂದಾಗ್ಗೆ ಭೇಟಿ ಇತ್ತು ಸಂಘಟನೆಯ ಬಗ್ಗೆ ಆಳವಾಗಿ ಚರ್ಚಿಸುತ್ತಿದ್ದದ್ದು ಅವರಲ್ಲಿದ್ದ ಸಂಘಟನೆಯ ಬಗೆಗಿನ ಕಾಳಜಿಯನ್ನು ಎತ್ತಿತೋರಿಸುತ್ತಿತ್ತು.
ಇದನ್ನು ಓದಿ: ಕೊರೊನಾ ಹೆಚ್ಚಳಕ್ಕೆ ಮೋದಿ ಕಾರಣ: ರಾಜೀನಾಮೆ ನೀಡಿ
ಚಂದ್ರಶೇಖರ ಸ್ವಾಮಿಯವರು ದ.ಸಂ.ಸ. ಮುಖಂಡರುಗಳೊಂದಿಗೆ ಬೆಂಗಳೂರು ಅಷ್ಟೇ ಏಕೆ ರಾಜ್ಯದ ಮೂಲೆಮೂಲೆಗೂ ತೆರಳಿ ಸಂಘಟನೆಯ ಬೆಳವಣಿಗೆಗೆ ದುಡಿದದ್ದನ್ನು ಅಂದು ಅಸ್ತಿತ್ವದಲ್ಲಿದ್ದ ಬೆತ್ತಲೆಸೇವೆ, ದೇವದಾಸಿ ಪದ್ದತಿ, ಜೀತಪದ್ದತಿ, ಅಸ್ಪೃಶ್ಯತಾಚರಣೆ ಮುಂತಾದ ಪಿಡುಗುಗಳ ವಿರುದ್ದ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನ್ನು ಅವರ ಸಮಕಾಲೀನರು ನೆನಪು ಮಾಡಿಕೊಳ್ಳುತ್ತಾ ಬಂದಿದ್ದಾರೆ. ಸರ್ಕಾರಿ ಜಮೀನುಗಳಲ್ಲಿ ಭೂಮಿ ಹಂಚಿಕೆ, ನಿರ್ವಸಿತ ಬಡಜನರಿಗೆ ನಿವೇಶನ, ಹಕ್ಕುಪತ್ರ, ನಾಗರೀಕ ಸೌಲಭ್ಯಗಳು ದೊರಕಿಸಿಕೊಡುವಂತೆ ನಡೆದ ಹೋರಾಟಗಳಲ್ಲಿ, ಅವರ ಪರಿಶ್ರಮ ಮತ್ತು ಬದ್ದತೆ ಇದ್ದದ್ದನ್ನು ಯಾರೂ ಅಲ್ಲಗಳೆಯುವಂತಿರಲಿಲ್ಲ.
ಬಂಡಾಯ ಸಾಹಿತ್ಯ ಸಂಘಟನೆ, ಸಮುದಾಯ ಮತ್ತು ಜನಪರ ಸಂಘಟನೆಗಳು ಹಾಗೂ ಎಡ ಪ್ರಜಾಸತ್ತಾತ್ಮಕ ಸಂಘಟನೆಗಳ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಚಿಂತನಗೋಷ್ಠಿಗಳು, ರಂಗಭೂಮಿ ನಾಟಕಗಳತ್ತ ವಿಶೇಷ ಆಸಕ್ತಿ ವಹಿಸಿದ್ದ ಅವರು ಆ ಸಂಘಟನೆಗಳು ಆಯೋಜಿಸುತ್ತಿದ್ದ ಬಹುಪಾಲು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿಷಯಾಸಕ್ತರಾಗಿದ್ದರು. ಅಲ್ಲದೆ ಪ್ರಗತಿಪರ ವಿಚಾರಧಾರೆಗಳನ್ನು ಪ್ರತಿಪಾದಿಸುವ ವಾರ್ತಾ ಪತ್ರಿಕೆಗಳಿಗೆ ಚಂದಾದಾರರಾಗಿ ತಮ್ಮ ಮನೆಗೇ ತರಿಸಿಕೊಳ್ಳುತ್ತಿದ್ದ ಅವರು ಇಂತಹ ಸಾಹಿತ್ಯ ಕೃತಿಗಳನ್ನು ಕೊಂಡು ಓದುವ ಮೂಲಕವೂ ತಾವೊಬ್ಬ ‘ಪುಸ್ತಕಪ್ರೇಮಿ’ ಎಂಬುದನ್ನೂ ಸಾಬೀತುಪಡಿಸಿದ್ದರು.
ಇದನ್ನು ಓದಿ: ಮೇ 1 ರಿಂದ ಎಲ್ಲ ವಯಸ್ಕರಿಗೆ ಲಸಿಕೆಯ ಕಾರ್ಯಕ್ರಮ ಎಂದರೆ ಲಸಿಕೆಗಳ ಬೆಲೆ ಹೆಚ್ಚಿಸುವ, ರಾಜ್ಯಗಳ ಹೊರೆ ಹೆಚ್ಚಿಸುವ ಕ್ರಮವಷ್ಟೇ?
ಎಪ್ಪತ್ತರ ದಶಕದಿಂದಲೂ ದಲಿತ ಚಳುವಳಿಯ ಎಲ್ಲ ಏಳು ಬೀಳುಗಳನ್ನು ಕಂಡಿದ್ದ ಅವರು ಸಂಘಟನೆಗಳ ಛಿದ್ರೀಕರಣಕ್ಕೆ ವಿಷಾದಿಸುತ್ತಾ ತಮ್ಮ ಮನದಾಳದ ನೋವನ್ನು ಆಗಿಂದಾಗ್ಗೆ ಹೊರ ಹಾಕುತ್ತಿದ್ದರು. ಗ್ರಾಮಶಾಖೆ, ಹೋಬಳಿ ಶಾಖೆ, ತಾಲ್ಲೂಕು ಶಾಖೆ ಮತ್ತು ಜಿಲ್ಲಾ ಶಾಖೆಗಳ ರಚನೆ, ಅವುಗಳ ಕಾರ್ಯವ್ಯಾಪ್ತಿ ಮತ್ತು ಹೊಣೆಗಾರಿಕೆಗಳ ಬಗ್ಗೆ ಕಾರ್ಯಕರ್ತರಿಗೆ ಮನದಟ್ಟು ಮಾಡಿಕೊಡುತ್ತಿದ್ದ ಅವರು ಕಾರ್ಯಕರ್ತರ ಅಧ್ಯಯನ ಶಿಬಿರ, ಪ್ರತಿಭಟನಾ ಹೋರಾಟ, ಅಂಬೇಡ್ಕರ್ ಜಯಂತಿ, ಕಾಲ್ನಡಿಗೆ ಜಾಥಾ ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಹಾಗೂ ದಲಿತ ಕಾಲೋನಿಗಳ ಕುಂದು ಕೊರತೆಗಳ ನಿವಾರಣೆಗೆ ಅತ್ಯಂತ ಪ್ರಾಮಾಣಿಕತೆಯಿಂದ ಮುತುವರ್ಜಿ ವಹಿಸುತ್ತಿದ್ದದ್ದು ನಿಜಕ್ಕೂ ಅನುಕರಣನೀಯ.
ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಬಡ್ತಿ ಮೀಸಲಾತಿ ಸಂಬಂಧದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ದಸಂಸ ಹಾಗೂ ದಲಿತ ನೌಕರರ ಒಕ್ಕೂಟದ ಮುಖಂಡರಾಗಿ ಹಗಲಿರುಳೂ ಶ್ರಮಿಸಿದ್ದು ನಿಜಕ್ಕೂ ಅಭಿನಂದನೀಯ ಸಂಗತಿ. ಶ್ರೀರಾಮಪುರದಲ್ಲಿ ಅವರೊಂದಿಗಿನ ಒಡನಾಡಿ ಗೋಪಾಲಕೃಷ್ಣ ಅರಳಹಳ್ಳಿಯವರ ಜೊತೆಗೂಡಿ ‘ನಿರಂತರ’ ಎಂಬ ಪ್ರಗತಿಪರ ಚಿಂತನೆಯ ವೇದಿಕೆಯೊಂದನ್ನು ಹುಟ್ಟು ಹಾಕಿ ಅನೇಕ ವರ್ಷಗಳ ಕಾಲ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸಿದ್ದನ್ನು ಮರೆಯಲಾಗದು. ಸುಮಾರು ಮೂರುವರೆ ದಶಕಗಳ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರ ಪ್ರಾಮಾಣಿಕ ಕಾಳಜಿಯನ್ನು ಗುರುತಿಸಿ “ಶ್ರೀರಾಮಪುರ ರತ್ನ” ಎಂಬ ಬಿರುದನ್ನಿತ್ತು ಸನ್ಮಾನಿಸಿ ಗೌರವಿಸಿದ್ದು ಅರ್ಥಪೂರ್ಣವೆನಿಸಿತ್ತು.
ಇದನ್ನು ಓದಿ: ಪರ್ವ ಕಾಲದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್
ತಮ್ಮ ವೈಯಕ್ತಿಕ ಬದುಕಿಗಿಂತಲೂ ಸಮುದಾಯದ ಹಿತಕ್ಕೆ ಚಿಂತಿಸಿದ, ಶ್ರಮಿಸಿದ ಚಂದ್ರಶೇಖರ ಸ್ವಾಮಿ ನಿಜಕ್ಕೂ ಮಾತೃ ಹೃದಯದ ವ್ಯಕ್ತಿತ್ವ ಹೊಂದಿದ್ದನ್ನು ಯಾರೂ ಅಲ್ಲಗಳೆಯಲಾರರು. ಅಷ್ಟರಮಟ್ಟಿಗೆ ಸಂಘಟನೆಯ ಕಾರ್ಯಕರ್ತರಿಗೆ ಕೈಲಾದ ನೆರವು ನೀಡುತ್ತಾ ಚಳುವಳಿಯ ಹಾದಿಗೆ ತಮ್ಮ ಮಿತಿಯಲ್ಲಿ ಬೆಳಕಾಗಿದ್ದ ಅವರು ಕೆಲವೊಮ್ಮೆ ದಲಿತ ಕಲಾಮಂಡಳಿಯ ಹೋರಾಟದ ಹಾಡುಗಳ ಗಾಯಕರೊಂದಿಗೆ ತಮ್ಮದನಿಯನ್ನೂ ಸಹ ಸೇರಿಸುತ್ತಿದ್ದರು.
ಜಾತಿ ವಿನಾಶ, ಕೋಮು ಸಾಮರಸ್ಯ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ದಲಿತ್ ಶೋಷಣ ಮುಕ್ತಿ ಮಂಚ್ನ ಸಂಯೋಚಿತ ದಲಿತ ಹಕ್ಕುಗಳ ಸಮಿತಿ(ಡಿ.ಹೆಚ್.ಎಸ್.) ಸಂಘಟನೆಯ ಬಗ್ಗೆ ಅಪಾರ ಒಲವು ಮೂಡಿಸಿಕೊಂಡಿದ್ದ ಅವರು ಆ ಸಂಘಟನೆಯ ಕಾರ್ಯಕ್ರಮಗಳು, ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಸಮುದಾಯದ ಬಗೆಗಿನ ಡಿಹೆಚ್ಎಸ್ ಕಾಳಜಿಯನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದರು.
ಹೀಗೆ, ಸಮುದಾಯದ ಹಿತಚಿಂತನೆಯ ಮೂಲಕ ದಲಿತ ಹೋರಾಟಗಳಿಗೆ ಪ್ರೇರಕಶಕ್ತಿಯಾಗಿದ್ದ ಚಂದ್ರಶೇಖರ ಸ್ವಾಮಿಯವರು ಇಷ್ಟು ಬೇಗ ನಮ್ಮಿಂದ ದೂರವಾಗಬಾರದಿತ್ತು. ಅವರ ಅಗಲಿಕೆ ಅತ್ಯಂತ ನೋವಿನ ಸಂಗತಿ ಮಾತ್ರವಲ್ಲ, ದಲಿತ ಹೋರಾಟಕ್ಕೆ ಅಪಾರ ನಷ್ಟ ಉಂಟು ಮಾಡಿದೆ. ಅವರಿಗೆ ನಮ್ಮೆಲ್ಲ ಹೋರಾಟಗಾರ ಸಂಗಾತಿಗಳ ಪರವಾಗಿ ಭಾವಪೂರ್ಣ ಅಂತಿಮ ನಮನಗಳು.
ಗೌಡಗೆರೆ ಮಾಯುಶ್ರೀ