ಬೆಂಗಳೂರು: ದೇಶದಲ್ಲಿ ಕೊರೋನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಏರಿಕೆಯಾದ ಬೆನ್ನಲ್ಲೇ, ಚಿಕಿತ್ಸೆಗೆ ಬಳಸುವ ರೆಮ್‌ಡೆಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಭರ್ಜರಿ ಏರಿಕೆ ಕಂಡಿದೆ.
ರೆಮ್‌ಡೆಸಿವಿರ್ ಔಷಧಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವೊಂದು ಸೋಮವಾರ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಖಾಸಗಿ ಕೊವಿಡ್ ಆಸ್ಪತ್ರೆ ಮೇಲೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ದಿಢೀರ್ ದಾಳಿ ನಡೆಸಿ ಈ ಜಾಲ ಬಯಲು ಮಾಡಿದ್ದಾರೆ. ದಾಳಿಯ ವೇಳೆ ಖಾಸಗಿ ಮೆಡಿಕಲ್ ಶಾಪ್ನಲ್ಲಿ ಅಕ್ರಮವಾಗಿ ರೆಮ್ಡಿಸಿವರ್ ಮಾರುತ್ತಿದ್ದ ವಿಷಯ ಬಯಲಿಗೆ ಬಂದಿತ್ತು.
ಸೋಂಕಿತರಿಗೆ ಮಾತ್ರವೇ ನೀಡಬೇಕು ಎಂಬ ನಿಯಮವಿರುವ ಈ ಔಷಧಿಯನ್ನು ಹೊಸಕೋಟೆ ನಗರದ ಎಂವಿಜೆ ಮೆಡಿಕಲ್ ಕಾಲೇಜಿನ ಖಾಸಗಿ ಪಾರ್ಮಸಿಯಲ್ಲಿ ಸೊಂಕಿತರಿಗೆ ಹೊರತುಪಡಿಸಿ ಖಾಸಗಿಯವರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಕೋವಿಡ್ ಸೊಂಕಿತರ ಹೆಸರಲ್ಲಿ ತರಿಸಿಕೊಂಡು ಖಾಸಗಿಯವರಿಗೆ ಮಾರಲಾಗುತ್ತಿತ್ತು.
ಈ ಸಂಬಂಧ ಪಾರ್ಮಸಿ ನೌಕರನ ವಿರುದ್ದ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ದಗುಂಟೆ ಪಾಳ್ಯ : ಕೊರೊನಾ ಸೋಂಕಿನ ಚಿಕಿತ್ಸೆಗೆ ಬಳಕೆ ಮಾಡಲಾಗುವ ರೆಮ್‍ಡಿಸಿವಿರ್ ಔಷಧಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಸಿದ್ದಾರೆ.
ತಪಾಸಣೆ ವೇಳೆ ಸುದ್ದಗುಂಟೆ ಪಾಳ್ಯದ ಗುರುಶ್ರೀ ಮೆಡಿಕಲ್ಸ್‍ನ ರಾಜೇಶ್ ಮತ್ತು ಶಕೀಬ್, ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಹಿಲ್ ಅವರುಗಳನ್ನು ಬಂಸಲಾಗಿದೆ. ಈ ಆರೋಪಿಗಳು ರೆಮ್‍ಡಿಸಿವಿರ್ ಔಷಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಎಂಆರ್‍ಪಿ ದರವನ್ನು ಮೀರಿ ಪ್ರತಿ ಬಾಟಲ್‍ಗೆ 10,500 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು: ನಕಲಿ ರೆಮ್‌ಡೆಸಿವಿರ್ ಔಷಧ ಮಾರಾಟ ಜಾಲವೊಂದು ಸೋಮವಾರ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಸ್‌ಎಸ್ ಆಸ್ಪತ್ರೆಯ ಸ್ಟಾಫ್‌ನರ್ಸ್ ಗಿರೀಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 800ರಿಂದ 900 ಬಾಟಲ್ ನಕಲಿ ರೆಮ್‌ಡೆಸಿವಿರ್ ಬಗ್ಗೆ ದಾಖಲೆಗಳು ಪತ್ತೆಯಾಗಿವೆ. ಆರೋಪಿಯಿಂದ ₹2.82 ಲಕ್ಷ ವಶಕ್ಕೆ ಪಡೆದುಕೊಳ್ಳಲಾಗಿದೆ. ಆಯಂಟಿಬಯೋಟಿಕ್ ಪೌಡರ್ ಬಳಸುತ್ತಿದ್ದ ಆರೋಪಿ ಕೇವಲ ₹100 ಖರ್ಚು ಮಾಡಿ ನಕಲಿ ಔಷಧಿಯ ದ್ರಾವಣ ಸಿದ್ಧಪಡಿಸಿ, ₹4000ಕ್ಕೆ ಮಾರಾಟ ಮಾಡುತ್ತಿದ್ದ ಎಂದು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ
ಕೆಲ ಮೆಡಿಕಲ್ ಪ್ರತಿನಿಧಿಗಳ ಸಂಪರ್ಕ ಹೊಂದಿದ್ದ ಆರೋಪಿಯು ಸಾರ್ವಜನಿಕರು ಹಾಗೂ ಆಸ್ಪತ್ರೆಗೂ ಸರಬರಾಜು ಮಾಡುತ್ತಿದ್ದ. ಪ್ರಕರಣ ಸಂಬಂಧವ ಶಿವಪ್ಪ, ಮಂಗಳ, ಮಂಜುನಾಥ್, ಪ್ರಶಾಂತ್ ಎನ್ನುವವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆರೋಪಿಗಳಿಂದ ನಕಲಿ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಳಸಂತೆ ಮಾರಾಟದ ಬಗ್ಗೆ ತನಿಖೆ ಮಾಡುವಾಗ ನಕಲಿ ಜಾಲ ಪತ್ತೆಯಾಗಿದೆ ಎಂದು ಡಾ.ಚಂದ್ರಗುಪ್ತ ಹೇಳಿದ್ದಾರೆ.
ಇಂದೋರ್ನಲ್ಲಿ ₹ 70 ಸಾವಿರಕ್ಕೆ ರೆಮ್‌ಡೆಸಿವಿರ್ ಮಾರಾಟ : ಮಧ್ಯಪ್ರದೇಶದ ಇಂದೋರ್ನಲ್ಲಿ ₹ 70 ಸಾವಿರಕ್ಕೆ ರೆಮ್‌ಡೆಸಿವಿರ್ ಲಸಿಕೆ ಮಾರಾಟ ಮಾಡಲಾಗುತ್ತಿದೆ. ಔಷಧಿಗೆ ಬೇಡಿಕೆ ಹೆಚ್ಚಾಗಿದ್ದು ಗಮನಿಸಿದ್ದ ದುಷ್ಕರ್ಮಿಗಳು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕೊರೊನಾ ಸೋಂಕು ನಿರೋಧಕ ಲಸಿಕೆಯನ್ನೂ ನರ್ಸ್ ಒಬ್ಬರು ಮಾರಾಟ ಮಾಡಿದ್ದು ಪತ್ತೆಯಾಗಿತ್ತು. ನರ್ಸ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.