ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊರೊನಾ ಲಸಿಕೆಯ ಹೆಗ್ಗಳಿಕೆ ಬೇಕು ಎಂದಾದರೆ, ಕೊರೊನಾದಿಂದ ಉಂಟಾಗುತ್ತಿರುವ ಸಾವಿನ ಹೊಣೆಯನ್ನೂ ಅವರು ಹೊರಬೇಕು ಎಂದು ಮಹಾರಾಷ್ಟ್ರ ಸಚಿವ, ಎನ್ಸಿಪಿ ಮುಖಂಡ ನವಾಬ್ ಮಲ್ಲಿಕ್ ಹೇಳಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ದೇಶದಲ್ಲಿ ದಿನೇದಿನೆ ಕೊರೊನಾ ಸೋಂಕಿತರು, ಕೊರೊನಾದಿಂದ ಸಾಯುವವರ ಸಂಖ್ಯೆ ಏರುತ್ತಿದೆ. ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದ್ದರೂ ಕೊರೊನಾ ಪ್ರಸರಣ ತಗ್ಗುತ್ತಿಲ್ಲ. ಇದೇ ಕಾರಣವನ್ನಿಟ್ಟುಕೊಂಡು ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ನವಾಬ್ ಮಲಿಕ್, ದೇಶದಲ್ಲಿ ಇಂದು ನಿರ್ಮಿತವಾಗಿರುವ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದಿದ್ದಾರೆ.
'Like vaccine document, COVID death certificates should have Modi's photo too': Maharashtra Minister Nawab Malik.https://t.co/iymrGeWZWc
— TIMES NOW (@TimesNow) April 17, 2021
ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಸರ್ಟಿಫಿಕೇಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಹಾಕಲಾಗುತ್ತಿದೆ. ಹಾಗೇ ಕೊರೊನಾದಿಂದ ಮೃತಪಟ್ಟವರಿಗೆ ನೀಡುವ ಮರಣ ಪ್ರಮಾಣಪತ್ರ (ಡೆತ್ ಸರ್ಟಿಫಿಕೇಟ್)ದಲ್ಲೂ ಪ್ರಧಾನಿ ಫೋಟೋ ಇರಬೇಕು. ಲಸಿಕೆಯ ಹೆಗ್ಗಳಿಕೆ ಅವರಿಗೆ ಬೇಕು ಎಂದಾದ ಮೇಲೆ, ಕೊರೊನಾದಿಂದ ಆಗುತ್ತಿರುವ ಸಾವಿಗೂ ಮೋದಿಯವರೇ ಹೊಣೆ. ಹಾಗಾಗಿ ಮರಣ ಪ್ರಮಾಣ ಪತ್ರದಲ್ಲಿ ನರೇಂದ್ರ ಮೋದಿಯವರ ಫೋಟೋ ಇರಲಿ ಎಂದು ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಿದೆ. ಮರಣ ಪ್ರಮಾಣವೂ ಅಧಿಕವಾಗಿದೆ. ಚಿತಾಗಾರಗಳಲ್ಲಿ ಶವಗಳು ತುಂಬಿರುವ ವಿಡಿಯೋಗಳು ಸಿಕ್ಕಾಪಟೆ ವೈರಲ್ ಆಗುತ್ತಿವೆ. ಕೊರೊನಾ ತಪಾಸಣೆ, ಚಿಕಿತ್ಸೆಗಾಗಿ ಜನರು ಸಾಲುಗಟ್ಟಿ ನಿಲ್ಲುವಂತಾಗಿದೆ. ಇಷ್ಟೆಲ್ಲ ಆದರೂ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಇದೆಲ್ಲದರ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ನವಾಬ್ ಮಲ್ಲಿಕ್ ಹೇಳಿದ್ದಾರೆ.