ಬಸವ ಕಲ್ಯಾಣ ಉಪಚುನಾವಣೆ: ಹಣ ಹಂಚುತ್ತಿದ್ದ ವ್ಯಕ್ತಿಯನ್ನು ಥಳಿಸಿದ ಗ್ರಾಮಸ್ಥರು

ಹಣ ಹಂಚುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಬಸವಕಲ್ಯಾಣ: ಬಸವಕಲ್ಯಾಣ ತಾಲ್ಲೂಕಿನ ತ್ರಿಪುರಾಂತ ಗ್ರಾಮದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬ ಮತದಾರರಿಗೆ ಹಣ ಹಂಚಲು ಬಂದಾಗ ಗ್ರಾಮಸ್ಥರು ಆತನನ್ನು ಹಿಡಿದು ಚಪ್ಪಲಿಯಿಂದ ಹೊಡೆದ ಘಟನೆ ಜರುಗಿದೆ.

ರಾಜಕೀಯ ಪಕ್ಷಗಳೇ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ. ನಮ್ಮಲ್ಲಿ ಹಣ ಇಲ್ಲವೆ? ನಿಮ್ಮ ಹಣ ನಮಗೆ ಏಕೆ ಕೊಡುತ್ತಿದ್ದೀರಿ ಎನ್ನುತ ವ್ಯಕ್ತಿಯ ಕೈಯಲ್ಲಿದ್ದ ನೋಟುಗಳನ್ನು ಕಿತ್ತುಕೊಂಡು ಗಾಳಿಯಲ್ಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ಬಿಜೆಪಿ ಪಕ್ಷದ ಕಾರ್ಯಕರ್ತ, ಹೊರ ಜಿಲ್ಲೆಯಿಂದ ಬಂದಿರುವ ವ್ಯಕ್ತಿ ಇರಬಹುದು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.

ಚುನಾವಣಾ ವೀಕ್ಷಕರಿಗೆ ಮೊಬೈಲ್‌ ಕರೆ ಮಾಡಿ ಮಾಹಿತಿ ನೀಡಿದ ನಂತರ ಫ್ಲಯಿಂಗ್‌ ಸ್ಕ್ವಾಡ್‌ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು.

ಗ್ರಾಮಸ್ಥರು ಹಣ ಹಂಚಿಕೆ ಹಾಗೂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ವಿಡಿಯೊ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಣ ಹಂಚಿಕೆ ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ಪ್ರಮುಖ ರಾಜಕೀಯ ಪಕ್ಷಗಳು ಪರಸ್ಪರರ ಮೇಲೆ ಆರೋಪ ಮಾಡುತ್ತಿರುವುದು ತಿಳಿದು ಬಂದಿದೆ.

‘ಫ್ಲಾಯಿಂಗ್‌ ಸ್ಕ್ವಾಡ್‌ ಗ್ರಾಮಕ್ಕೆ ತೆರಳಿ ಮಾಹಿತಿ ಪಡೆದಿದೆ. ಯಾವ ಪಕ್ಷದವರು ಹಣ ಹಂಚುತ್ತಿದ್ದರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ವಿಚಾರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *